
ಬೆಂಗಳೂರು: ಕನ್ನಡ ಚಿತ್ರರಂಗದ ದಂತಕತೆಗಳಾದ ಡಾ.ರಾಜ್‌ಕುಮಾರ್ ಮತ್ತು ಡಾ.ವಿಷ್ಣುವರ್ಧನ್ ನಡುವಿನ ಸಂಬಂಧದ ಬಗ್ಗೆ ಜನಸಾಮಾನ್ಯರಲ್ಲಿ, ದಶಕಗಳಿಂದಲೂ ನೂರಾರು ಕಥೆಗಳು, ಮಾತುಗಳು ಕೇಳಿಬರುತ್ತಲೇ ಇರುತ್ತವೆ. ಆದರೆ.. ಆ ಇಬ್ಬರು ದಂತಕಥೆಗಳ ಒಡನಾಟವನ್ನು ತೀರಾ ಹತ್ತಿರದಿಂದ ಕಂಡಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್.. ಆ ಎಲ್ಲಾ ಗಾಸಿಪ್‌ಗಳಿಗೆ ಅತ್ಯಂತ ಸರಳವಾಗಿ ಮತ್ತು ನೇರವಾಗಿ ಮಾತನ್ನಾಡಿದ್ದಾರೆ.
ಬೆಂಗಳೂರಿನಲ್ಲಿ ಡಾ.ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಿತು. ಈ ವೇಳೆ ಭಾವುಕರಾಗಿ ಮಾತನಾಡಿದ ಶಿವಣ್ಣ.. ಯಾರು ಏನೇ ಮಾತನಾಡಿಕೊಳ್ಳಲಿ, ಅಪ್ಪಾಜಿ ಮತ್ತು ವಿಷ್ಣು ಸರ್ ನಡುವಿನ ಸಂಬಂಧವೇ ಬೇರೆ.. ಎನ್ನುತ್ತಾ ಹಲವು ಅಚ್ಚರಿಯ ಹಾಗೂ ಆಪ್ತ ಸತ್ಯಗಳನ್ನು ಬಿಚ್ಚಿಟ್ಟರು.
ಅಪ್ಪಾಜಿ ಮತ್ತು ವಿಷ್ಣು ಅಂಕಲ್ ನಡುವೆ ಗಾಢವಾದ ಪ್ರೀತಿ, ಗೌರವ ಇತ್ತು. ಇದು ನಮಗೆ ಮಾತ್ರ ಗೊತ್ತು. ಅವರಿಬ್ಬರನ್ನು ಹತ್ತಿರದಿಂದ ಕಂಡವರಿಗೆ ಮಾತ್ರ ಗೊತ್ತಿರೋ ಸತ್ಯ ಎಂದರು. ಕನ್ನಡದ ಅತ್ಯಂತ ಹ್ಯಾಂಡ್‌ಸಮ್ ನಟ ವಿಷ್ಣು ಎಂದರೆ ಅಪ್ಪಾಜಿಗೆ ಅಷ್ಟೇ ಇಷ್ಟವಿತ್ತು. ನಮ್ಮ ನಡುವಿನ ಪ್ರೀತಿಯನ್ನು ನಾವು ಜಗತ್ತಿನ ಬೇರೆ ಯಾರಿಗೋ ಪ್ರೂವ್ ಮಾಡಬೇಕಾದ ಅಗತ್ಯವೇ ಇಲ್ಲ ಎಂದು ಶಿವಣ್ಣ ಸ್ಪಷ್ಟಪಡಿಸಿದರು.
ವಿಷ್ಣು ದಾದಾ ಜೊತೆಗಿನ ಬಾಲ್ಯದ ಕ್ಷಣಗಳನ್ನು ನೆನೆದ ಶಿವಣ್ಣ.. ನಾನು ಚಿಕ್ಕ ಹುಡುಗನಿದ್ದಾಗ ಭೂತಯ್ಯನ ಮಗ ಅಯ್ಯು ಚಿತ್ರದ ಶತದಿನೋತ್ಸವಕ್ಕೆ ವಿಷ್ಣು ಅಂಕಲ್ ಕೈಹಿಡಿದುಕೊಂಡೇ ಹೋಗಿದ್ದೆ. ಆ ಪ್ರೀತಿ ಎಂದಿಗೂ ಕಡಿಮೆ ಆಗಿರಲಿಲ್ಲ. ನನ್ನ ಮೊದಲ ಸಿನಿಮಾ ಆನಂದ್ ರಿಲೀಸ್ ಆಗುವಾಗ ಅವರು ನನಗೆ ಪ್ರೀತಿಯಿಂದ ಒಂದು ವಾಚ್ ಉಡುಗೊರೆ ನೀಡಿದ್ದರು. ಈ ವಾಚ್ ಯಾವತ್ತೂ ನಿನ್ನನ್ನು ವಾಚ್ ಮಾಡ್ತಿರುತ್ತೆ (ಕಾಯ್ತಿರುತ್ತೆ)' ಎಂದು ಹರಸಿದ್ದರು. ಅವರ ಆ ಮಾತುಗಳನ್ನು ನಾನೆಂದಿಗೂ ಮರೆಯಲ್ಲ ಎಂದು ಭಾವುಕರಾದರು.
ಒಮ್ಮೆ ವಿಷ್ಣುವರ್ಧನ್ ಅವರಿಗೆ ಸರ್ಪ್ರೈಸ್ ನೀಡಲೆಂದು ಫೋನ್ ಮಾಡದೆ ನೇರವಾಗಿ ಅವರ ಮನೆಗೆ ಹೋಗಿದ್ದ ಅಪರೂಪದ ಕ್ಷಣವನ್ನೂ ಶಿವಣ್ಣ ಹಂಚಿಕೊಂಡರು. ವಿಷ್ಣು ಅಂಕಲ್ ಇವತ್ತು ನಮ್ಮ ಜೊತೆ ಇಲ್ಲ ಎಂದು ನಾನು ಅಂದುಕೊಳ್ಳಲ್ಲ. ಅವರು ಎಲ್ಲೋ ಒಂದು ಕಡೆ ನಮ್ಮನ್ನು ನೋಡುತ್ತಾ ನಮ್ಮೊಂದಿಗೇ ಇದ್ದಾರೆ. ಇವತ್ತು ನಮಗೆ ಅವರಂತಹ ನಟನ ಅಗತ್ಯ ತುಂಬಾನೇ ಇದೆ ಎಂದು ಹೇಳಿದ ಶಿವಣ್ಣ, ದಾದಾ ನೆನಪಿನಲ್ಲಿ ಹಾಡೊಂದನ್ನು ಹಾಡಿ ಇಡೀ ಸಭಾಂಗಣವನ್ನು ಭಾವುಕ ಲೋಕಕ್ಕೆ ಕೊಂಡೊಯ್ದರು. ವಿಷ್ಣು ಸರ್ ಕಾರ್ಯಕ್ರಮಕ್ಕೆ ಅಭಿಮಾನಿಗಳು ಕರೆದಾಗಲೆಲ್ಲ ನಾನು ಬಂದಿದ್ದೇನೆ, ಮುಂದೆಯೂ ಬರುತ್ತಲೇ ಇರುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ, ಹಿರಿಯ ನಟ ಶ್ರೀನಾಥ್ ಸೇರಿದಂತೆ ಸ್ಯಾಂಡಲ್‌ವುಡ್‌ನ ತಾರಾಗಣವೇ ನೆರೆದಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.