
ಚಿತ್ರ: ಹ್ಯಾಪಿ ನ್ಯೂಯಿಯರ್
ತಾರಾಗಣ: ಬಿ.ಸಿ.ಪಾಟೀಲ್, ಸಾಯಿಕುಮಾರ್, ವಿಜಯರಾಘವೇಂದ್ರ, ದಿಗಂತ್, ಧನಂಜಯ್, ಶ್ರುತಿ ಹರಿಹರನ್, ಸೃಷ್ಟಿಪಾಟೀಲ್, ರಾಜಶ್ರೀ ಪೊನ್ನಪ್ಪ
ನಿರ್ದೇಶನ: ಪನ್ನಗಭರಣ
ನಿರ್ಮಾಣ: ವನಜಾ ಪಾಟೀಲ್
ಸಂಗೀತ: ರಘುದೀಕ್ಷಿತ್
ಛಾಯಾಗ್ರಹಣ: ಶ್ರೀಶ ಕುದುವಳ್ಳಿ
ರೇಟಿಂಗ್: ***
ಮಹಾನಗರದ ಕತೆ. ಪುರುಸೊತ್ತಿಲ್ಲದವರ ಕತೆ. ಒತ್ತಡಕ್ಕೆ ಸಿಕ್ಕಿಹಾಕಿಕೊಂಡವರ ಕತೆ. ಕೊಚ್ಚಿ ಕೊಲ್ಲುವ ರೌಡಿಯ ಕತೆ, ಮಕ್ಕಳಾಗದವರ ಕತೆ, ಲಂಪಟರ ಕತೆ, ವಿದೇಶದಲ್ಲಿ ಸುಮ್ಮನೆ ಎದುರಾದವರ ಕತೆ, ಅವರ ಪ್ರೇಮದ, ವಿರಹದ, ಸೇರಿಯೂ ಸೇರಲಾರದ ಕತೆ.
ಆಮೇಲೆ..
ಹೊಸ ವರುಷ ಅವರ ಕಷ್ಟಗಳನ್ನೆಲ್ಲ ಅಳಿಸಿಹಾಕುತ್ತದೆಂದು ನಾವು ನಂಬುತ್ತೇವೆ. ಹೊಸ ವರುಷವನ್ನು ಸಂಭ್ರಮಿಸುತ್ತೇವೆ. ಇದ್ದಕ್ಕಿದ್ದಂತೆ ಎಲ್ಲರ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ. ನಡೆಯೋದಿಲ್ಲ ಅಂದುಕೊಂಡದ್ದು ನಡೆಯುತ್ತದೆ. ಒಂದಾದವರು ದೂರಾಗಿ ಮತ್ತೆಂದಾದರೂ ಒಂದಾಗುತ್ತೇವೆಂದು ಕಾಯುತ್ತಾ ಕೂರುತ್ತಾರೆ. ಮತ್ತೆ ರೇಡಿಯೋ ಎಫೆಮ್ ಶುರುವಾಗುತ್ತದೆ. ಮತ್ತೆ ಬೆಂಗಳೂರು ಎಂಬ ಮಹಾನಗರ ತನ್ನ ನಿತ್ಯಕಾಯಕದಲ್ಲಿ ನಿರತವಾಗುತ್ತದೆ.
ಪನ್ನಗ ಭರಣ ನಿರ್ದೇಶನದ ಮೊದಲ ಚಿತ್ರ ‘ಹ್ಯಾಪಿ ನ್ಯೂ ಇಯರ್' ಹಲವು ಕಾರಣಗಳಿಂದ ಗಮನ ಸೆಳೆಯುತ್ತದೆ. ಅವರು ಏಕಕಾಲಕ್ಕೆ ಐದು ಕತೆಗಳನ್ನು ಹೇಳಲು ಹೊರಡುತ್ತಾರೆ. ನಾಲ್ಕೈದು ಕತೆಗಳನ್ನು ಹೇಳಲು ಹೊರಟು, ಕೊನೆಗೆ ಅವೆಲ್ಲವೂ ಒಂದೇ ಬಿಂದುವಿನಲ್ಲಿ ಸೇರುವಂಥ ಅನೇಕ ಚಿತ್ರಗಳು ಬಂದಿವೆ. ಇದು ಅಂಥ ಪ್ರಯತ್ನ ಅಲ್ಲ. ಇಲ್ಲಿ ಐದೂ ಕತೆಗಳು ಮಹಾನಗರದಲ್ಲಿ ನಡೆಯುತ್ತವೆ ಅನ್ನುವುದನ್ನು ಬಿಟ್ಟರೆ ಕತೆಗಳ ನಡುವೆ ಮತ್ಯಾವ ಸಂಬಂಧವೂ ಇಲ್ಲ.
ಆದರೆ ಕತೆ ಕಟ್ಟುವ ಹೊತ್ತಿಗೆ, ಪನ್ನಗ ಭರಣ, ರೂಪಿಸಿಕೊಂಡಿರುವ ತಂತ್ರ ಕತೆಗೆ ಅಷ್ಟೇನೂ ನೆರವಾಗಿಲ್ಲ.
ಐದು ಕತೆಗಳ ಒಂದು ಸಂಕಲನವನ್ನು ತೆಗೆದುಕೊಂಡು, ಅದರ ಪುಟಗಳನ್ನು ಅದಲು ಬದಲು ಮಾಡಿದಂತೆ ಇಡೀ ಚಿತ್ರ ಕಣ್ಮುಂದೆ ತೆರೆದುಕೊಳ್ಳುತ್ತದೆ. ಒಂದು ಕತೆ ಶುರುವಾಗಿ, ಅದರ ಬೆನ್ನಿಗೇ ಮತ್ತೊಂದು ಕತೆ ಆರಂಭಗೊಂಡು, ಅಲ್ಲಿಂದ ಮೂರನೇ ಕತೆಗೆ ತೆರಳಿ, ಮತ್ತೆ ನಾಲ್ಕನೇ ಕತೆಗೆ ಬಂದು, ಐದನೇ ಕತೆಯನ್ನು ಕಣ್ತುಂಬಿಕೊಳ್ಳುವ ಹೊತ್ತಿಗೆ, ಮೊದಲ ಕತೆಯ ಕೊನೆ ಮರೆತುಹೋಗಿರುತ್ತದೆ. ಹೀಗೆ ದೃಶ್ಯಗಳನ್ನು ಕತ್ತರಿಸಿ ಜೋಡಿಸಿ, ನಮ್ಮ ಗ್ರಹಿಕೆಯ ಸಾತತ್ಯವನ್ನು ಮುರಿಯುತ್ತಲೇ ಹೋಗುವ ನಿರ್ದೇಶಕರು, ಕೊನೆಯ ತನಕವೂ ಅಂಥದ್ದೇ ಕೆಲಸವನ್ನು ಮಾಡುತ್ತಲೇ ಹೋಗುತ್ತಾರೆ.
ಇಂಥ ಕತೆಯ ಬಹುದೊಡ್ಡ ಸಮಸ್ಯೆಯೆಂದರೆ, ಐದು ಕತೆಗಳಲ್ಲಿ ಒಂದೊಂದೇ ಕತೆಯ ಅಂತ್ಯವನ್ನು ಅವರು ಹೇಳುತ್ತಾ ಬರಬೇಕಾಗಿರುವುದು. ಐದೂ ಕತೆಗಳಿಗೆ ಒಂದೇ ಕ್ಲೈಮ್ಯಾಕ್ಸ್ ಇದ್ದರೆ ಕತೆಯ ಕತೆಯೇ ಬೇರೆ ಆಗುತ್ತಿತ್ತು. ಹಾಗಾಗದೇ ಮೊದಲು ಹರ್ಷ ಮತ್ತು ವಿಸ್ಮಯ ಎಂಬ ನಿರುದ್ದಿಶ್ಯ ಜೋಡಿಯ ಕತೆ, ನಂತರ ವೆಂಕಿ ಮತ್ತು ವರಲಕ್ಷ್ಮಿ ಎಂಬ ದಂಪತಿಗಳ ಕತೆ, ಆಮೇಲೆ ಕೌರವ ಎಂಬ ರೌಡಿಯ ಕತೆ, ನಂತರ ಡ್ಯಾನಿ ಎಂಬ ನಿರೂಪಕನ ಕತೆ, ಆಮೇಲೆ ಪೊಲೀಸ್ ಕಾನ್‌ಸ್ಟೇಬಲ್ ಕುಟುಂಬದ ಕತೆ- ಹೀಗೆ ಪ್ರತಿಯೊಂದು ಕತೆಯೂ ಕೊನೆಯಾಗುತ್ತಾ ಹೋಗುತ್ತದೆ.
ಪನ್ನಗ ಭರಣ ಹೇಳಹೊರಟಿರುವ ಸಂದಿಗ್ಧ ಅರ್ಥಪೂರ್ಣವಾಗಿದೆ. ಅದು ಎಲ್ಲ ಮಹಾನಗರಗಳ ಸಮಸ್ಯೆಯೂ ಹೌದು. ಆದರೆ ಅವೆಲ್ಲವೂ ತೀರಾ ಸಾಮಾನ್ಯವಾದ ಸಂಗತಿಗಳು. ಹೆಂಡತಿ ಮಕ್ಕಳ ಜೊತೆ ಸಮಯ ಕಳೆಯಲಾರದ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬನ ಸಂಕಟದ ಚಿತ್ರ ಇದೆ. ಈ ಸಮಸ್ಯೆಯ ಮೂಲ ಇಷ್ಟೇ: ಆತನ ಪುಟ್ಟಮಗಳು ಹೊಸ ವರ್ಷದಂದು ಬಡಾವಣೆಯಲ್ಲಿ ಡಾನ್ಸ್ ಮಾಡುತ್ತಾಳೆ. ಅದನ್ನು ನೋಡಲು ಆತನಿಗೆ ಸಾಧ್ಯ ಆಗೋದಿಲ್ಲ. ಮತ್ತೊಂದು ಕುಟುಂಬದಲ್ಲಿ ಗಂಡ ಕೊಂಚ ಪರನಾರಿ ಪ್ರಿಯ. ಕೌರವ ಎಂಬ ರೌಡಿ ಫಾರಿನ್ ಹುಡುಗಿಯೊಬ್ಬಳ ಪ್ರೀತಿಯಲ್ಲಿ ಇದ್ದಕ್ಕಿದ್ದಂತೆ ಬೀಳುತ್ತಾನೆ. ಪಟ್ಟಾಯದಲ್ಲಿ ಭೇಟಿ ಆಗುವ ಹುಡುಗ ಹುಡುಗಿ ಕುಡಿತದ ಮಧ್ಯೆ ಜಗಳ ಆಡ್ಕೋತಾರೆ. ಅವರು ಪ್ರೇಮಿಗಳೂ ಅಲ್ಲ, ದಂಪತಿಯೂ ಅಲ್ಲದೇ ಇರುವುದರಿಂದ ಆ ಜಗಳಕ್ಕೆ ಸಕಾರಣವೇ ಇಲ್ಲ. ಇನ್ನು ಆಸ್ಪತ್ರೆಯಲ್ಲಿ ಮಲಗಿರುವ ಪ್ರೇಯಸಿ, ರೇಡಿಯೋ ಜಾಕಿ ಆಗಿರುವ ಪ್ರಿಯಕರ, ಆಕೆಗೆ ಆಸ್ಪತ್ರೆಯಿಂದ ಹೊರಗೆ ಹೋಗುವ ಆಸೆ, ಅದು ಹೊಸ ವರ್ಷದಂದು ಈಡೇರಬೇಕಾಗಿದೆ. ಹೀಗೆ ಸಣ್ಣ ಸಣ್ಣ ಘಟನೆಗಳು ಚಿತ್ರದ ತುಂಬ ಇವೆಯೇ ಹೊರತು, ತೀವ್ರವಾಗಿ ಏನೂ ನಡೆಯುವುದಿಲ್ಲ. ಆರಂಭದಲ್ಲಿ ಬಂದು ಹೋಗುವ ರಘು ಮುಖರ್ಜಿ ಹಾಡು, ಕೊನೆಯಲ್ಲಿ ಟೈಟಲ್ ಕಾರ್ಡು ಜೊತೆಗೆ ಬರುವ ಹಾಡು- ಎರಡೂ ಚಿತ್ರದಿಂದ ಹೊರಗೇ ಉಳಿಯುತ್ತವೆ.
ಇಂಥ ಚಿತ್ರದ ನಡುವೆ ಕ್ಲೀಷೆಯಾದ ಹಾಸ್ಯಪ್ರಸಂಗಗಳು ಬಂದು ಹೋಗುತ್ತವೆ. ಮಧ್ಯವಯಸ್ಕನ ಪೋಲೀತನ, ದ್ವಂದ್ವಾರ್ಥ ಹೊಮ್ಮಿಸುವ ಸಂಭಾಷಣೆಗಳಿವೆ. ಬಿಸಿ ಪಾಟೀಲರು ಕೌರವ ಇಮೇಜನ್ನು ಉಳಿಸಿಕೊಳ್ಳಲು ಯತ್ನಿಸಿದ್ದಾರೆ. ಧನಂಜಯ್ ಪರ್ಫೆಕ್ಟ್ ರೇಡಿಯೋ ಜಾಕಿ, ದಿಗಂತ್‌ಗೆ ಉದ್ಯೋಗವಿಲ್ಲ, ಶ್ರುತಿ ಹರಿಹರನ್‌ಗೆ ಅವಕಾಶವಿಲ್ಲ, ಸೃಷ್ಟಿಪಾಟೀಲ್ ಮೊದಲ ಚಿತ್ರವಾ ದರೂ ತನ್ಮಯರಾಗಿ ನಟಿಸಿದ್ದಾರೆ. ಸುಧಾರಾಣಿ ಮತ್ತು ಸಾಯಿಕುಮಾರ್ ಪಾತ್ರ ಮಜ್ಜಿಗೆ ಹುಳಿ, ಬೋಂಡಾದಷ್ಟೇ ಹಳೆಯ ರೆಸಿಪಿ. ಲವಲವಿಕೆಯ ನಟನೆಯಿಂದ ರಾಜಶ್ರೀ ಪೊನ್ನಪ್ಪ ಬೆಚ್ಚಿಬೀಳಿಸುತ್ತಾರೆ. ನಿಮ್ಮನ್ನು ಬಂದು ಹೋಗುವ ಸಣ್ಣ ದೃಶ್ಯದಲ್ಲಿ ತಬಲಾ ನಾಣಿ ನಾನಾ ಕಾರಣಗಳಿಂದ ನಗಿಸುತ್ತಾರೆ.
ಛಾಯಾಗ್ರಹಣ ಮತ್ತು ಸಂಗೀತ ಎರಡೂ ಹಿತ. ಚಿತ್ರಕ್ಕೆ ವೇಗವಿದೆ, ಆವೇಗ ಇಲ್ಲ.
-ಜೋಗಿ, ಕನ್ನಡಪ್ರಭ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.