ಹೊಸ ದಾಖಲೆ ಬರೆದ 'ಹನುಮಾನ್ ಅಂಶ್'... ಭಾರತದಲ್ಲೇ 300 ಕೋಟಿ ರೂ. ಗಳಿಸಿದ ಲೋ ಬಜೆಟ್ ಸಿನಿಮಾ!

Published : Sep 27, 2026, 02:53 PM IST
Hanuman Ansh Day 51 Collection

ಸಾರಾಂಶ

ಚಿತ್ರಮಂದಿರಕ್ಕೆ ಬಂದ ಆರಂಭಿಕ ದಿನಗಳಲ್ಲಿ ದೊಡ್ಡ ಮಟ್ಟದ ಸದ್ದು ಮಾಡದಿದ್ದರೂ, ನಿಧಾನವಾಗಿ ಪ್ರೇಕ್ಷಕರ ಮನ ಗೆದ್ದ ‘ಹನುಮಾನ್ ಅಂಶ್’ ಇದೀಗ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಟ ಮುಂದುವರಿಸಿದೆ. ಪ್ರೇಕ್ಷಕರ ಬಾಯಿಮಾತಿನ ಪ್ರಚಾರವೇ ಈ ಸಿನಿಮಾದ ದೊಡ್ಡ ಶಕ್ತಿ!

Hanuman Ansh Box Office Collection, 300 Crore Rupees-ಬಾಕ್ಸ್‌ ಆಫೀಸ್‌ನಲ್ಲಿ ರೂ. 300 ಕೋಟಿ ಗಳಿಸಿದ ಹನುಮಾನ್ ಅಂಶ್.

ಬಾಕ್ಸ್ ಆಫೀಸ್‌ನಲ್ಲಿ ನೂರಾರು ಕೋಟಿ ರೂಪಾಯಿ ಸುರಿದು ನಿರ್ಮಿಸುವ ಬಿಗ್ ಬಜೆಟ್ ಸಿನಿಮಾಗಳೇ ಕೆಲವೊಮ್ಮೆ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯಲು ಪರದಾಡುತ್ತಿವೆ. ಇಂತಹ ಸಮಯದಲ್ಲಿ ಕೇವಲ ₹2 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ ಬರೋಬ್ಬರಿ 50 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡು ದಾಖಲೆ ಬರೆಯುವುದು ಎಂದರೆ ನಿಜಕ್ಕೂ ವಿಶೇಷವೇ ಸರಿ. ಈಗ ಇಂತಹ ಅಪರೂಪದ ಗೆಲುವಿನ ಕಥೆಯನ್ನು ಬರೆದಿರುವ ಸಿನಿಮಾ ‘ಹನುಮಾನ್ ಅಂಶ್’.

ಚಿತ್ರಮಂದಿರಕ್ಕೆ ಬಂದ ಆರಂಭಿಕ ದಿನಗಳಲ್ಲಿ ದೊಡ್ಡ ಮಟ್ಟದ ಸದ್ದು ಮಾಡದಿದ್ದರೂ, ನಿಧಾನವಾಗಿ ಪ್ರೇಕ್ಷಕರ ಮನ ಗೆದ್ದ ‘ಹನುಮಾನ್ ಅಂಶ್’ ಇದೀಗ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಟ ಮುಂದುವರಿಸಿದೆ. ಪ್ರೇಕ್ಷಕರ ಬಾಯಿಮಾತಿನ ಪ್ರಚಾರವೇ ಈ ಸಿನಿಮಾದ ದೊಡ್ಡ ಶಕ್ತಿಯಾಗಿ ಪರಿಣಮಿಸಿದ್ದು, ದಿನದಿಂದ ದಿನಕ್ಕೆ ಚಿತ್ರದ ಗಳಿಕೆ ಏರಿಕೆಯಾಗುತ್ತಾ ಬಂದಿದೆ.

ಸೆಪ್ಟೆಂಬರ್ 26ರಂದು ‘ಹನುಮಾನ್ ಅಂಶ್’ ಸಿನಿಮಾ ಥಿಯೇಟರ್‌ನಲ್ಲಿ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಅಚ್ಚರಿ ಎಂದರೆ, 51ನೇ ದಿನವೂ ಚಿತ್ರದ ಕಲೆಕ್ಷನ್‌ನಲ್ಲಿ ಯಾವುದೇ ದೊಡ್ಡ ಕುಸಿತ ಕಾಣಿಸಿಕೊಂಡಿಲ್ಲ. ಸ್ಯಾಕ್ನಿಲ್ಕ್ ವರದಿ ಪ್ರಕಾರ, 51ನೇ ದಿನ ಚಿತ್ರವು ₹6.26 ಕೋಟಿ ಗಳಿಸಿದೆ ಎನ್ನಲಾಗಿದ್ದು, ಇದರೊಂದಿಗೆ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾದ ಒಟ್ಟು ಗಳಿಕೆ ₹297.79 ಕೋಟಿಗೆ ತಲುಪಿದೆ. ಹೀಗಾಗಿ ಸಿನಿಮಾ ₹300 ಕೋಟಿ ಕ್ಲಬ್‌ಗೆ ಕಾಲಿಡುವ ಹಂತದಲ್ಲಿದೆ ಎಂಬುದು ಸಿನಿಪ್ರಿಯರ ಗಮನ ಸೆಳೆದಿದೆ.

ಮೊದಲ ದಿನ ಕೇವಲ ₹10 ಲಕ್ಷ!

ಈ ಸಿನಿಮಾದ ಯಶಸ್ಸಿನ ಹಿಂದೆ ಇರುವ ಮತ್ತೊಂದು ಅಚ್ಚರಿಯ ಸಂಗತಿ ಎಂದರೆ ಇದರ ಆರಂಭಿಕ ಕಲೆಕ್ಷನ್. ಬಿಡುಗಡೆಯಾದ ಮೊದಲ ದಿನ ‘ಹನುಮಾನ್ ಅಂಶ್’ ಗಳಿಸಿದ್ದು ಕೇವಲ ₹10 ಲಕ್ಷ ಎನ್ನಲಾಗಿದೆ. ಮೊದಲ ಎರಡು ವಾರಗಳಲ್ಲಿ ಸಿನಿಮಾದ ಒಟ್ಟು ಗಳಿಕೆ ಸುಮಾರು ₹1.50 ಕೋಟಿಯಷ್ಟೇ ಆಗಿತ್ತು. ಹೀಗಾಗಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ದಿನ ಉಳಿಯುವುದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು.

ಆದರೆ ಮೂರನೇ ವಾರದಿಂದ ಕಥೆಯೇ ಬದಲಾಯಿತು. ಸಿನಿಮಾವನ್ನು ನೋಡಿದ ಪ್ರೇಕ್ಷಕರೇ ಮತ್ತೊಬ್ಬರಿಗೆ ಚಿತ್ರದ ಬಗ್ಗೆ ಹೇಳತೊಡಗಿದರು. ಬಾಯಿಮಾತಿನ ಪ್ರಚಾರದಿಂದ ಥಿಯೇಟರ್‌ಗಳಿಗೆ ಜನರ ಸಂಖ್ಯೆ ಹೆಚ್ಚಾಯಿತು. ನಾಲ್ಕನೇ ವಾರದ ಬಳಿಕ ಚಿತ್ರವು ಪ್ರತಿ ವಾರ ₹60 ಕೋಟಿಗೂ ಅಧಿಕ ನೆಟ್ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. 46ನೇ ದಿನವಾದ ಸೋಮವಾರವೂ ಸಿನಿಮಾ ₹4 ಕೋಟಿ ಗಳಿಸಿರುವುದು ಅದರ ಸ್ಥಿರತೆಯನ್ನು ತೋರಿಸಿದೆ.

ಇದೀಗ ಈ ವರ್ಷದ ಭಾರತದಲ್ಲಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯಲ್ಲೂ ‘ಹನುಮಾನ್ ಅಂಶ್’ ಗಮನ ಸೆಳೆದಿದೆ. ‘ಧುರಂಧರ್ 2’, ‘ಬಾರ್ಡರ್ 2’ ಹಾಗೂ ‘ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾಗಳ ನಂತರ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳಲ್ಲಿ ಇದು ನಾಲ್ಕನೇ ಸ್ಥಾನದಲ್ಲಿದೆ ಎಂದು ವರದಿ ಹೇಳುತ್ತದೆ.

ನೀಮ್ ಕರೋಲಿ ಬಾಬಾ ಜೀವನದ ಕಥೆ

‘ಹನುಮಾನ್ ಅಂಶ್’ ಕೇವಲ ಬಾಕ್ಸ್ ಆಫೀಸ್ ಅಂಕಿ-ಅಂಶಗಳಿಂದ ಮಾತ್ರ ಸುದ್ದಿಯಾಗಿಲ್ಲ. ಚಿತ್ರದ ಕಥೆಯೂ ಪ್ರೇಕ್ಷಕರ ಗಮನ ಸೆಳೆದಿದೆ. ವಿಶಾಲ್ ಚತುರ್ವೇದಿ ನಿರ್ದೇಶನದ ಈ ಸಿನಿಮಾ ಪ್ರಸಿದ್ಧ ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿದೆ.

ತಾಯಿಯನ್ನು ಕಳೆದುಕೊಂಡ ಬಳಿಕ ಲಕ್ಷ್ಮೀನಾರಾಯಣ ಎಂಬ ಯುವಕನ ಜೀವನದಲ್ಲಿ ನಡೆಯುವ ಬದಲಾವಣೆಗಳು ಆತನನ್ನು ಆಧ್ಯಾತ್ಮಿಕ ಹಾದಿಯತ್ತ ಕರೆದೊಯ್ಯುತ್ತವೆ. ಮುಂದೆ ಇದೇ ವ್ಯಕ್ತಿ ನೀಮ್ ಕರೋಲಿ ಬಾಬಾ ಆಗಿ ರೂಪುಗೊಳ್ಳುವ ಪಯಣವನ್ನು ಸಿನಿಮಾ ತೆರೆ ಮೇಲೆ ಕಟ್ಟಿಕೊಡುತ್ತದೆ.

ನೀಮ್ ಕರೋಲಿ ಬಾಬಾ ಪಾತ್ರದಲ್ಲಿ ಶೋಭಿನವ್ ಸತ್ಯಾ ಅಭಿನಯಿಸಿದ್ದು, ವಿಹಾನ್ ಶೇಡ್ಗೆ, ಚಂದನ್ ಕೆ. ಆನಂದ್, ಪೂರ್ಣಿಮಾ ತಿವಾರಿ, ಅನಿಲ್ ರಸ್ತೋಗಿ, ಗುಲ್ಶನ್ ಪಾಂಡೆ ಹಾಗೂ ಭಗವಾನ್‌ದಾಸ್ ಪಟೇಲ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ, ಭರ್ಜರಿ ಪ್ರಚಾರ, ನೂರಾರು ಕೋಟಿ ಬಜೆಟ್ ಮತ್ತು ಸ್ಟಾರ್ ನಟರಿಗಿಂತಲೂ ಕೆಲವೊಮ್ಮೆ ಪ್ರೇಕ್ಷಕರ ಬಾಯಿಮಾತೇ ಸಿನಿಮಾದ ನಿಜವಾದ ಶಕ್ತಿಯಾಗಬಹುದು ಎಂಬುದನ್ನು ‘ಹನುಮಾನ್ ಅಂಶ್’ ಸಾಬೀತುಪಡಿಸಿದಂತಾಗಿದೆ. ₹2 ಕೋಟಿಯ ಸಣ್ಣ ಬಜೆಟ್‌ನಿಂದ ಆರಂಭವಾದ ಈ ಸಿನಿಮಾ ₹300 ಕೋಟಿಯ ಗಡಿಯತ್ತ ಸಾಗುತ್ತಿರುವುದು ಚಿತ್ರರಂಗದಲ್ಲೇ ಕುತೂಹಲ ಮೂಡಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss 13: ಕಿಚ್ಚನ ಚಪ್ಪಾಳೆ ಈ ಬಾರಿ ಫ್ರೀಯಲ್ಲ, ಜೊತೆಗೆ ಸಿಗತ್ತೆ ಒಂದು ಲಕ್ಷ ರೂ! ಮೊದಲು ಪಡೆದಾಕೆ ಇವರೇ
ಟ್ರೆಂಡ್ ಆಯ್ತು ಸಾಯಿ ಪಲ್ಲವಿ ಲುಕ್.. ಕೊನೆಗೂ ಉದ್ದ ಕೂದಲಿಗೆ ಕತ್ತರಿ ಹಾಕಿದ್ರಾ? ಕೈಯಲ್ಲಿರೋ ಟ್ಯಾಟೂ ಯಾರದ್ದು?