’ಪ್ಯಾರ್ ಕಿಯಾ ತೋ ಡರ್ ನ ಕ್ಯಾ’ ನಟಿ ಮಧುಬಾಲಾಗೆ ಗೂಗಲ್ ಡೂಡಲ್ ಗೌರವ

Published : Feb 14, 2019, 12:04 PM ISTUpdated : Feb 14, 2019, 03:43 PM IST
’ಪ್ಯಾರ್ ಕಿಯಾ ತೋ ಡರ್ ನ ಕ್ಯಾ’ ನಟಿ ಮಧುಬಾಲಾಗೆ ಗೂಗಲ್ ಡೂಡಲ್ ಗೌರವ

ಸಾರಾಂಶ

ಹಿಂದಿ ಚಿತ್ರರಂಗ ಕಂಡ ಅದ್ಭುತ ನಟಿ, ಎಂದೂ ಮಾಸದ ಸ್ಥಿಗ್ನ ಸೌಂದರ್ಯದ ಪ್ರತಿಮೆ ಮಧುಬಾಲಾ. ಇಂದು ಅವರ 86 ನೇ ಹುಟ್ಟುಹಬ್ಬ. ಗೂಗಲ್ ಡೂಡಲ್ ಇವತ್ತು ಮಧುಬಾಲಾರನ್ನು ಏಕೆ ಸ್ಮರಿಸಿಕೊಂಡಿದೆ? ನಿಮಗೆ ಅರ್ಥವಾಗುತ್ತದೆ!!

ಮುಂಬೈ (ಫೆ.14):  ’ಪ್ಯಾರ್ ಕಿ ಯಾ ತೋ ಡರ್ ನಾ ಕ್ಯಾ’ ಹಾಡನ್ನು ನಾವೆಲ್ಲಾ ಕೇಳಿದ್ದೇವೆ. ಇದು ಪ್ರೇಮಿಗಳ ಪಾಲಿಗೆ ರಾಷ್ಟ್ರಗೀತೆ ಇದ್ದಂತೆ. ಈ ಹಾಡಿನಲ್ಲಿ ನಟಿಸಿದ ನಟಿ ಮಧುಬಾಲಾರನ್ನು ಇಂದು ನೆನೆಸಿಕೊಳ್ಳದಿದ್ದರೆ ಹೇಗೆ? ಹಿಂದಿ ಚಿತ್ರರಂಗ ಕಂಡ ಅದ್ಭುತ ನಟಿ, ಎಂದೂ ಮಾಸದ ಸ್ಥಿಗ್ನ ಸೌಂದರ್ಯದ ಪ್ರತಿಮೆ ಮಧುಬಾಲಾ. ಇಂದು ಅವರ 86 ನೇ ಹುಟ್ಟುಹಬ್ಬ. ಗೂಗಲ್ ಡೂಡಲ್ ಮಧುಬಾಲಾರನ್ನು ಸ್ಮರಿಸಿಕೊಂಡಿದೆ. 

ಮಧುಬಾಲಾರ ಮೂಲ ಹೆಸರು ಮುಮ್ತಾಜ್ ಜೆಹಾನ್ ಬೇಗಂ ದೆಹ್ಲವಿ. ಮನೆಯಲ್ಲಿ ಬಡತನ, ಸಂಸಾರದ ಜವಾಬ್ದಾರಿ, ತಂಗಿಯಂದಿರ ಹೊಣೆ ಹೀಗೆ ಚಿಕ್ಕ ವಯಸ್ಸಿನಲ್ಲಿಯೇ ಸಂಸಾರದ ನೊಗ ಹೊತ್ತುಕೊಂಡರು. ಹಾಗಾಗಿ ಅನಿವಾರ್ಯವಾಗಿ ಸಿನಿಮಾ ರಂಗಕ್ಕೆ ಬರುವಂತಾಯಿತು. ಅನಿವಾರ್ಯವಾಗಿ ಬಂದರೂ ಮುಂದೆ ಸ್ಟಾರ್ ನಟಿಯಾಗಿ ಬೆಳೆದಿದ್ದು ಮಾತ್ರ ಸಾಧನೆ.

  

1942 ರಲ್ಲಿ ಬಸಂತ್ ಚಿತ್ರದ ಮೂಲಕ ಮಧುಬಾಲಾ ಬಾಲ ಕಲಾವಿದೆಯಾಗಿ ಸಿನಿಮಾ ರಂಗಕ್ಕೆ ಪ್ರವೇಶಿಸಿದರು. ತಮ್ಮ 14 ನೇ ವಯಸ್ಸಿಗೆ ನೀಲ್ ಕಮಲ್ ಎನ್ನುವ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಅಲ್ಲಿಂದ ಅವರ ಹೆಸರು ಮಧುಬಾಲಾ ಎಂದು ಬದಲಾಗುತ್ತದೆ. ಹೆಸರು ಮಾತ್ರ ಬದಲಾಗುವುದಿಲ್ಲ. ಅವರ ಸ್ಟಾರ್ ಕೂಡಾ ಬದಲಾಗುತ್ತದೆ.ಅಲ್ಲಿಂದ ಮುಂದೆ ಮಾಡಿದ ಸಿನಿಮಾಗಳೆಲ್ಲವೂ ಇತಿಹಾಸವನ್ನೇ ಸೃಷ್ಟಿಸುತ್ತದೆ. ಇಲ್ಲಿಂದ ಇವರ ಸಿನಿ ಪಯಣ ಶುರುವಾಗಿದ್ದು ಬಳಿಕ ಹಿಂತಿರುಗಿ ನೋಡಲೇ ಇಲ್ಲ. ಹಿಂದಿ ಚಿತ್ರರಂಗದ ಅನಭಿಶಕ್ತ ರಾಣಿಯಾಗಿ ಮೆರೆದರು.

ಬರ್ ಸಾತ್ ಕಿ ರಾತ್, ಮೊಘಲ್ ಏ ಅಜಂ, ಚಲ್ತಿ ಕಾ ನಾಮ್ ಗಾಡಿ, ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಮನೋಜ್ಞ ಅಭಿನಯ, ಜೇನಿನಲ್ಲಿ ಅದ್ದಿ ತೆಗೆದಂತ ಸೌಂದರ್ಯ, ಅದ್ಭುತ ನೃತ್ಯ ಹೀಗೆ ತಮ್ಮದೇ ಆದ ಛಾಪು ಮೂಡಿಸಿದ್ದರು. ಸೌಂದರ್ಯಕ್ಕೆ ಇನ್ನೊಂದು ಪ್ರತಿಮೆಯಂತಿದ್ದರು. ತಮ್ಮ ಮನಮೋಹಕ ಸೌಂದರ್ಯದ ಮೂಲಕ ಲಕ್ಷಾಂತರ ಜನರ ಹೃದಯ ಕದ್ದ ನಟಿ. 

ಆಗಿನ ಕಾಲದ ಸ್ಟಾರ್ ನಟ ದಿಲೀಪ್ ಕುಮಾರ್ ಜೊತೆ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ ಅದ್ಯಾಕೋ ಕೈಗೂಡಲಿಲ್ಲ. ಈ ಪ್ರೀತಿಗೆ ಮಧುಬಾಲಾ ತಂದೆ ಅಡ್ಡಿಪಡಿಸುತ್ತಾರೆ. ಕೊನೆಗೆ ಗಾಯಕ ಕಿಶೋರ್ ಕುಮಾರ್ ಜೊತೆ ಲವ್ವಲ್ಲಿ ಬಿದ್ದು ಮದುವೆಯನ್ನೂ ಆಗುತ್ತಾರೆ. ಆ ಮದುವೆಯೂ ಮಧುಬಾಲಾಗೆ ಸುಖ ಕೊಡಲಿಲ್ಲ.

ಕಿಶೋರ್ ಕುಮಾರ್ ಅದ್ಭುತ ಗಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಇವರ ಹಾಡಿನ ಮೋಡಿಗೆ ಮಾರು ಹೋಗದವರೇ ಇಲ್ಲ. ಆ ಕಾಲದಲ್ಲಿ ಎಲ್ಲರ ಬಾಯಲ್ಲಿ ಇವರದ್ದೇ ಹಾಡು. ಆ ಧ್ವನಿಗೆ ಮಧುಬಾಲಾ ಕೂಡಾ ಬಿದ್ದು ಹೋಗಿದ್ದರು. ಆದರೆ ಹೊರ ಜಗತ್ತಿಗೆ ಕಂಡ ಹಾಗೆ ಕಿಶೋರ್ ಕುಮಾರ್ ಇರಲಿಲ್ಲ. ಮಧುಬಾಲಾರನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲ. ಮದುವೆಯೆಂಬ ಅಧ್ಬುತವಾದ ಕನಸು, ಆಸೆ, ಆಕಾಂಕ್ಷೆ ಅವರ ಪಾಲಿಗೆ ಮರೀಚಿಕೆಯಾಗಿಯೇ ಉಳಿಯಿತು. ಜಗತ್ತಿಗೆ ಪ್ರೇಮ ಪಾಠ ಹೇಳಿದರು. ಪ್ರೇಮಿಗಳಿಗೆ ಪ್ರೀತಿಯ ಹುಚ್ಚೆಬ್ಬಿಸಿದರು. ಆದರೆ ಕೊನೆಗೆ ಇವರಿಗೇ ಆ ಪ್ರೀತಿ ಸಿಗದೇ ಹೋದರು.  

ತೆರೆ ಮೇಲೆ ಕಲರ್ ಫುಲ್ ಆಗಿ ಮಿಂಚಿದ ಮಧುಬಾಲಾ ವೈಯಕ್ತಿಕ ಜೀವನ ಮಾತ್ರ ಕೊನೆವರೆಗೂ ಕಪ್ಪು- ಬಿಳುಪಾಗೇ ಉಳಿದಿದ್ದು ವಿಧಿಯಾಟ. ಕೊನೆಗೆ 36 ನೇ ವಯಸ್ಸಿಗೆ ಇಹಲೋಕದ ಪಯಣ ಮುಗಿಸಿದರು ಎಂಬಲ್ಲಿಗೆ ಮಧುಬಾಲಾ ಎಂಬ ದಂತಕತೆಯ ಅಧ್ಯಾಯ ಮುಗಿಯಿತು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

The Devil Movie Review: ದರ್ಶನ್‌ ತೂಗುದೀಪ 'ಡೆವಿಲ್‌' ಹೇಗಿದೆ? ಡೆವಿಲ್‌ನಲ್ಲೂ ಗಿಲ್ಲಿ ನಟನ ಭರ್ಜರಿ ಕಾಮಿಡಿ
ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!