ರೋನಿಕಾ ಸಿಂಗ್ ಜೊತೆ ‘ಗಿಮಿಕ್’ ಮಾಡಿದ ಗಣೇಶ್!

By Web DeskFirst Published Aug 16, 2019, 9:27 AM IST
Highlights

ಗಣೇಶ್‌ ಗಿಮಿಕ್‌ ಮಾಡುತ್ತಿದ್ದಾರೆ. ನಾಗಣ್ಣ ನಿರ್ದೇಶನದಲ್ಲಿ ಇದೇ ಮೊದಲು ಅವರು ನಟಿಸಿರುವ ‘ಗಿಮಿಕ್‌’ ಚಿತ್ರ ಬಿಡುಗಡೆ ಆಗಿದೆ. ‘99’ ಬಂದು ಹೋದ ನಂತರವೀಗ ಗಣೇಶ್‌ ‘ಗಿಮಿಕ್‌’ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಗಣೇಶ್‌ ಸಿನಿಜರ್ನಿಯಲ್ಲಿ ಇದೊಂದು ವಿಶೇಷವಾದ ಸಿನಿಮಾ. ಅದಕ್ಕೆ ಹಲವು ಕಾರಣಗಳಿವೆ. ಆ ವಿಶೇಷತೆಗಳ ಕುರಿತು ಗಣೇಶ್‌ ಜತೆಗೆ ಮಾತುಕತೆ.

ಗಿಮಿಕ್‌ ಚಿತ್ರದ ವಿಶೇಷತೆಗಳೇನು?

ಇದು ನಾನು ಅಭಿನಯಿಸಿದ ಮೊದಲ ಹಾರರ್‌ ಚಿತ್ರ. ಹಾಗೆಯೇ ಹಿರಿಯ ನಿರ್ದೇಶಕ ನಾಗಣ್ಣ ಜತೆಗೂ ಮೊದಲ ಸಿನಿಮಾ. ಹಾರರ್‌ ಅಂದಾಕ್ಷಣ ವಿಕಾರವಾದ ದೆವ್ವ, ಮಾಯಾವಿಯ ಗೆಜ್ಜೆ ಸಪ್ಪಳ, ವಿಚಿತ್ರವಾದ ಸೌಂಡು, ಕೊಲೆ-ಸುಲಿಗೆ ಜತೆಗೆ ರಕ್ತಪಾತ... ಇತ್ಯಾದಿ. ಇದು ನಾವೆಲ್ಲ ಈತನಕ ನೋಡಿದ ಹಾರರ್‌ ಸಿನಿಮಾಗಳ ಬಗೆ. ಆದರೆ ಈ ಸಿನಿಮಾ ತುಂಬಾ ವಿಭಿನ್ನ. ಹಾರರ್‌ ಜತೆಗೆ ಕಾಮಿಡಿ, ಥ್ರಿಲ್ಲರ್‌ ಇದರ ವಿಶೇಷ. ಅದು ಹೇಗೆ ಅನ್ನೋದು ಸಿನಿಮಾದ ಕುತೂಹಲದ ಅಂಶ.

ಹಾರರ್‌ ಸಿನಿಮಾ ಮಾಡ್ಬೇಕು ಅಂತ ಈಗ ಅನಿಸಿದ್ದೇಕೆ?

ಕಲಾವಿದನಾಗಿ ಎಲ್ಲಾ ರೀತಿಯ ಪಾತ್ರಗಳಿಗೆ ಬಣ್ಣ ಹಚ್ಚಬೇಕು ಎನ್ನುವುದು ನನ್ನ ಸೂತ್ರ. ಆದ್ರೆ ಆರಂಭದಿಂದ ಸಿಕ್ಕ ಸಿನಿಮಾಗಳ ಕತೆ ಹಾಗೂ ಪಾತ್ರಗಳೇ ಬೇರೆ. ಅದು ಪ್ರೇಕ್ಷಕರಿಗೂ ಇಷ್ಟವಾಯಿತು. ಹಾಗಾಗಿ ಒಂದಷ್ಟುಪಯಣ ಹಾಗೆಯೇ ಸಾಗಿದ್ದು ನಿಮಗೂ ಗೊತ್ತು. ಆದ್ರೆ ಈಗ ಪ್ರೇಕ್ಷಕರಿಗೂ ಪ್ರಯೋಗಗಳು ಬೇಕಾಗಿದೆ. ಡಿಫೆರೆಂಟ್‌ ಗೆಟಪ್‌, ಡಿಫೆರೆಂಟ್‌ ಸಿನಿಮಾ ಅವರಿಗೂ ಇಷ್ಟವಾಗುತ್ತಿವೆ. ಹಾಗಾಗಿ ಹಾರರ್‌ ಸಿನಿಮಾದಲ್ಲಿ ಅಭಿನಯಿಸುವ ಆಸೆ ಇದೆ ಅಂತ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದೆ. ಜತೆಗೆ ನನ್ನ ಮಗಳು ಕೂಡ ಪಪ್ಪಾ ದೆವ್ವದ ಸಿನಿಮಾ ಮಾಡು ಅಂತಿದ್ಲು. ಅದೇ ಹೊತ್ತಿಗೆ ನಾಗಣ್ಣ ಸರ್‌ ಈ ಕತೆ ಹೇಳಿದ್ರು. ಎಲ್ಲಾವೂ ಕೂಡಿ ಬಂದ ಹಾಗಾಯಿತು.

ಹಾರರ್‌ ಸಿನಿಮಾದಲ್ಲೂ ಕಾಮಿಡಿ, ಥ್ರಿಲ್ಲರ್‌ ಹೇಗೆ?

ಅದಕ್ಕೆ ಕಾರಣ ನನ್ನ ಪಾತ್ರ. ಇಲ್ಲಿ ಎರಡು ದ್ವೆವಗಳಿವೆ. ಒಂದು ಒರಿಜಿನಲ್‌ ದೆವ್ವ, ಮತ್ತೊಂದು ಡೂಪ್ಲಿಕೇಟ್‌ ದೆವ್ವ. ಇವುಗಳ ನಡುವೆ ನಾನು. ಇಲ್ಲಿ ನಂಗೊಂದು ಉದ್ದೇಶ ಇರುತ್ತೆ. ಆ ಉದ್ದೇಶಕ್ಕಾಗಿ ಅವರೆಡು ದೆವ್ವಗಳನ್ನು ಯಾಮಾರಿಸಿ, ಗಿಮಿಕ್‌ ಮಾಡಿ ರಂಜಿಸುತ್ತಾ ಹೋಗುತ್ತೇನೆ. ಅವುಗಳಿಗೆ ನಾನು ಮುಖಾ ಮುಖಿ ಆಗುವಾಗ ಸಂದರ್ಭವೇ ಅದ್ಭುತವಾಗಿರುತ್ತೆ. ತೆರೆ ಮೇಲೆ ದೆವ್ವಗಳು ಬರುವಾಗ ಸಿನಿಮಾ ಪಕ್ಕಾ ಹಾರರ್‌ ಎನಿಸುತ್ತೆ. ಅವುಗಳಿಗೆ ನಾನು ಗಿಮಿಕ್‌ ಮಾಡುತ್ತಾ ಹೋಗುವಾಗ ಸಿನಿಮಾ ಕಾಮಿಡಿ ಮತ್ತು ಥ್ರಿಲ್ಲರ್‌ ಆಗಿ ರಂಜಿಸುತ್ತದೆ. ಇಡೀ ಸಿನಿಮಾದ ಕತೆಯೇ ಸೊಗಸಾಗಿದೆ.

ತಂದೆ ತೀರಿಕೊಂಡಿದ್ದು ತಿಳಿದರೂ ಗಿಮಿಕ್‌ ಶೂಟಿಂಗ್‌ ಮುಗಿಸಿಕೊಟ್ಟ ಗಣೇಶ್‌

ಹಾರರ್‌ ಸಿನಿಮಾದ ಚಿತ್ರೀಕರಣದ ಅನುಭವ ಹೇಗಿತ್ತು?

ಬೆಂಗಳೂರು ಮತ್ತು ಶ್ರೀಲಂಕಾದಲ್ಲಿ ಚಿತ್ರೀಕರಣ ಆಗಿದೆ. ಎರಡು ಕಡೆಗಳಲ್ಲೂ ಒಳಾಂಗಣ ಚಿತ್ರೀಕರಣ. ಬೆಂಗಳೂರಿನ ಯಲಹಂಕದ ಒಂದು ಬಂಗಲೆಯಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಿತು. ಅಲ್ಲಿಂದ ನಾವು ಶ್ರೀಲಂಕಾ ಹೋದೆವು. ಅದೊಂದು ಬೃಹತ್‌ ಬಂಗಲೆ. ನೂರಾರು ವರ್ಷ ಹಳೆಯ ಬಂಗಲೆ. ಸಾಮಾನ್ಯವಾಗಿ ಹಗಲು ಹೊತ್ತಿನಲ್ಲೇ ಅಲ್ಲಿರುವುದು ಕಷ್ಟ. ಅಂತಹದರಲ್ಲಿ 20 ರಿಂದ 25 ದಿನ ಪೂರ್ತಿ ರಾತ್ರಿಯಲ್ಲೇ ಚಿತ್ರೀಕರಣ ಮಾಡಿದೆವು. ಜತೆಗೆ ಹಾರರ್‌ ಸಿನಿಮಾ. ಆ ಅನುಭವವೇ ರೋಚಕವಾಗಿತ್ತು. ಕರೆಂಟ್‌ ತೆಗೆದರೆ ಭಯ ಆಗುತ್ತಿತ್ತು. ಒಂದು ಸೀನ್‌ನಲ್ಲಿ ರವಿಶಂಕರ್‌ಗೌಡ ಬಿಚ್ಚಿಬಿದ್ದಿದ್ದರು. ಆದರೂ ಚಿತ್ರ ತೆರೆ ಮೇಲೆ ಅದ್ಭುತವಾಗಿ ಬಂದಿದೆ.

ತಂದೆಯ ನಿಧನ ಸುದ್ದಿ ಗೊತ್ತಿದ್ದರೂ, ಚಿತ್ರೀಕರಣ ಮುಗಿಸಿಕೊಟ್ಟು ಬಂದಿದ್ದು ಇದೇ ಸಿನಿಮಾಕ್ಕೆ ಅಲ್ವಾ..?

ಹೌದು, ಅದೊಂದು ಮರೆಯಲಾಗದ ಕ್ಷಣ. ಕಲಾವಿದನ ಕಷ್ಟಹೇಗಿರುತ್ತೆ ಅಂತ ನನಗೆ ಗೊತ್ತಾಗಿದ್ದು ಅಂದೇ. ಅವತ್ತು ಆಗಸ್ಟ್‌ 27, ಮಧ್ಯಾಹ್ನ 3.30. ಮೊದಲ ಹಂತದ ಚಿತ್ರೀಕರಣದಲ್ಲಿದ್ದೆವು. ಆಗಲೇ ನಾಲ್ಕೈದು ದಿವಸ ಶೂಟಿಂಗ್‌ ಆಗಿತ್ತು. ಇನ್ನೇನು ಕೊನೆಯ ದಿನದ ಶೂಟಿಂಗ್‌. ಮಧ್ಯಾಹ್ನ ಊಟದ ಬ್ರೇಕ್‌ ಮುಗಿದು, ಮತ್ತೆ ಶೂಟಿಂಗ್‌ ಶುರುವಾಯಿತು. ತಂದೆ ನಿಧನರಾದರೆಂದು ಸುದ್ದಿ ಬಂತು. ನಿರ್ದೇಶಕರಿಗೆ ಹೇಳಲಿಲ್ಲ. ಯಾಕಂದ್ರೆ ನಿರ್ಮಾಪಕರು ಆ ಮನೆಗೆ ಬಾಡಿಗೆಗೆ ಪಡೆದಿದ್ದರು. ನಮ್ಮನ್ನೇ ನಂಬಿದ ಅವರಿಗೆ ನಷ್ಟವಾಗಬಾರದೆಂದು ಶೂಟಿಂಗ್‌ ಮುಗಿಸಿಕೊಟ್ಟು ಬಂದೆ. ಅದೂ ಕೂಡ ಕಾಮಿಡಿ ಸೀನ್‌. ನುಂಗಲಾರದ ತುಪ್ಪ. ಕಷ್ಟದಲ್ಲೂ ಅಭಿನಯಿಸಿ ಬಂದೆ.

ಗಣೇಶ್‌ ಸಿನಿಮಾ ಈಗೀಗ ಹೆಚ್ಚು ಪ್ರಚಾರ ಇಲ್ಲದೆ ರಿಲೀಸ್‌ ಆಗುತ್ತಿರುವುದೇಕೆ ?

ನಾನೊಬ್ಬ ನಟ. ನಟ ಅಂತ ಒಂದು ಸಿನಿಮಾ ಒಪ್ಪಿಕೊಂಡಾಗ ನನ್ನ ಪಾಲಿನ ಕೆಲಸದಲ್ಲಿ ಯಾವತ್ತೂ ಕಮ್ಮಿ ಮಾಡುವ ಸ್ವಭಾವ ನಂದಲ್ಲ. ನಟನೆಯಿಂದ ಹಿಡಿದು ಅದರ ಪ್ರಮೋಷನ್‌ ಕೆಲಸದಲ್ಲೂ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುತ್ತೇನೆ. ಅದರಲ್ಲಿ ಗಿಮಿಕ್‌ ಕೂಡ ಒಂದು. ನಿರ್ಮಾಪಕರು, ನಿರ್ದೇಶಕರು ಕೇಳಿಕೊಂಡಂತೆ ಚಿತ್ರದ ಪ್ರಮೋಷನ್‌ಗೂ ಪ್ರಾಮಾಣಿಕವಾಗಿ ಬಂದಿದ್ದೇನೆ. ಅವರು ಕೂಡ ಆದಷ್ಟುಪ್ರಚಾರ ಮಾಡಿದ್ದಾರೆ. ಇದರಾಚೆ ಇನ್ನೇನು ಮಾಡಬೇಕೋ ಅದು ಚಿತ್ರತಂಡದ ಕೆಲಸ. ಇದರಾಚೆ ನಾನು ತೆಲೆಕೆಡಿಸಿಕೊಂಡರೆ ಸರಿ ಹೋಗುವುದಿಲ್ಲ.

’ಗೀತಾ’ ಚಿತ್ರಕ್ಕೆ ಡಬ್ಬಿಂಗ್ ಮಾಡಿದ ಗೋಲ್ಡನ್ ಪುತ್ರ

ಆಶ್ಚರ್ಯಕರ ರೀತಿಯಲ್ಲಿ ಮತ್ತೆ ಗಾಳಿಪಟ ಹಾರಿಸುವುದಕ್ಕೆ ರೆಡಿ ಆಗಿದ್ದು ಹೇಗೆ?

ಅಚ್ಚರಿ ಅಂತೇನೂ ಇಲ್ಲ. ಭಟ್ಟರು ಮೊದಲು ಮಾಡಿಕೊಂಡ ಪ್ಲಾನ್‌ ಬೇರೆ ಇತ್ತು. ಆದ್ರೆ ಅವರು ಸ್ಕ್ರೀಫ್ಟ್‌ ಬರೆಯುವುದಕ್ಕೆ ಕುಳಿತಾಗ ನಿನ್ನನ್ನು ಬಿಟ್ಟು ಏನು ಬರೆಯೋದಿಕ್ಕೆ ಆಗ್ತಿಲ್ಲ ಅಂದ್ರು. ಆಯ್ತು ಅಂದೆ. ಯಾಕಂದ್ರೆ, ಏನು ಇಲ್ಲದ ದಿನಗಳಲ್ಲಿ ಮಾಡಿದ ಸಿನಿಮಾ ಗಾಳಿಪಟ. ಆ ದಿನ ಮರೆಯೋದಿಕ್ಕೆ ಆಗುವುದಿಲ್ಲ. ಭಟ್ಟರಿಗೂ ಆ ಗುಂಗು ಇತ್ತು. ಹಾಗಾಗಿಯೇ ಅವರು ಗಣಪ ನೀನೇ ಅಭಿನಯಿಸಿದ್ರೆ ಚೆನ್ನಾಗಿರುತ್ತೆ ಅಂದ್ರು. ಆ ನಿಟ್ಟಿನಲ್ಲಿ ಚರ್ಚೆಗೆ ಕುಳಿತಾಗ ಮೊದಲು ಭಟ್ಟರು ಆಯ್ಕೆ ಮಾಡಿಕೊಂಡ ಕಲಾವಿದರ ಬಗ್ಗೆ ಮಾತುಕತೆ ನಡೆಯಿತು. ಅವರಿಗಾಗಿ ಬೇರೆ ಸಿನಿಮಾ ಮಾಡುತ್ತಿದ್ದೇನೆ. ನೀವು ಇದರಲ್ಲಿ ಇರಿ ಅಂದ್ರು. ಹಾಗಾಗಿ ‘ಗಾಳಿಪಟ 2’ ಒಪ್ಪಿಕೊಂಡೆ.

ಗೀತಾ ಚಿತ್ರವೀಗ ಯಾವ ಹಂತದಲ್ಲಿ, ತೆರೆಗೆ ಯಾವಾಗ?

ಸದ್ಯಕ್ಕೆ ಡಬ್ಬಿಂಗ್‌ ಮುಗಿದಿದೆ. ಇನ್ನೊಂದಿಷ್ಟುಪೋಸ್ಟ್‌ ಪ್ರೊಡಕ್ಷನ್‌ ಕೆಲಸ ನಡೆದಿದೆ. ಇದೊಂದು ವಿಶೇಷವಾದ ಸಿನಿಮಾ. ಕತೆಗೆ ಗೋಕಾಕ ಚಳುವಳಿಯ ಲಿಂಕ್‌ ಇದೆ. 80 ರಲ್ಲಿನ ಒಂದು ಕ್ರಾಂತಿ ಚಳುವಳಿಯ ಕತೆ ಚಿತ್ರದಲ್ಲಿದೆ. ಈ ಸಿನಿಮಾದ ಮೇಲೆ ನನಗೆ ದೊಡ್ಡ ಭರವಸೆ ಇದೆ.

ಸಿನಿಮಾ ನಿರ್ಮಾಣದ ಪ್ರಯತ್ನಗಳು ಇಲ್ಲಿಗೆ ಬಂದವು?

ಆ ಪ್ರಕ್ರಿಯೆಗಳು ನಡೆಯುತ್ತಲೇ ಇವೆ. ಒಳ್ಳೆಯ ಕತೆಗಳು ಸಿಕ್ಕರೆ ಸಿನಿಮಾ ಮಾಡುವ ಆಲೋಚನೆಯಲ್ಲಿದ್ದೇನೆ. ಕಮರ್ಷಿಯಲ್‌ ಸಿನಿಮಾ ಎನ್ನುವುದಕ್ಕಿಂತ ಆಪ್‌ಬೀಟ್‌ ಶೈಲಿಯ ಸಿನಿಮಾ ಮಾಡುವ ಚಿಂತನೆಗಳು ಇವೆ. ಆದ್ರೆ ಕತೆಗಳು ನನ್ನಲ್ಲಿ ಭರವಸೆ ಹುಟ್ಟಿಸಬೇಕು. ಈ ಟ್ರೆಂಡ್‌ಗೆ ಪೂರಕವಾಗಿರಬೇಕು.

click me!