
ಕೇವಲ 6-7 ರೂಪಾಯಿಗೆ ಮೆಹೆಂದಿ ಹಾಕುವ ಮೂಲಕ ವೃತ್ತಿ ಆರಂಭಿಸಿದ ವೀಣಾ ನಾಗ್ಡಾ, ಇಂದು ಬಾಲಿವುಡ್‌ನ ಅತ್ಯಂತ ಬೇಡಿಕೆಯ ಮೆಹೆಂದಿ ಆರ್ಟಿಸ್ಟ್. ನಟಿ ಪೂನಂ ಧಿಲ್ಲೋನ್ ಅವರ ಒಂದು ಹೊಗಳಿಕೆ ತಮ್ಮ ಬದುಕನ್ನೇ ಹೇಗೆ ಬದಲಿಸಿತು ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಸ್ಟಾರ್‌ಗಳ ಫೇವರಿಟ್ ಆಗಿದ್ದು ಹೇಗೆ ಎಂಬುದನ್ನು ಅವರೇ ವಿವರಿಸಿದ್ದಾರೆ.
ಕೆಲವೊಮ್ಮೆ ಜೀವನದ ದಿಕ್ಕನ್ನೇ ಬದಲಿಸಲು ಒಂದೇ ಒಂದು ಹೊಗಳಿಕೆ ಸಾಕು. ಬಾಲಿವುಡ್‌ನ ಖ್ಯಾತ ಮೆಹೆಂದಿ ಕಲಾವಿದೆ ವೀಣಾ ನಾಗ್ಡಾ ಅವರ ಕಥೆಯೂ ಇದೇ ರೀತಿ ಇದೆ. ಕೇವಲ 6-7 ರೂಪಾಯಿಗೆ ಮೆಹೆಂದಿ ಹಾಕುತ್ತಿದ್ದ ವೀಣಾ, ಇಂದು ಬಾಲಿವುಡ್‌ನ ಟಾಪ್ ಮೆಹೆಂದಿ ಆರ್ಟಿಸ್ಟ್‌ಗಳಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗೆ 'ತುಮ್ ಹೋ ನಾ – ಘರ್ ಕಿ ಸೂಪರ್‌ಸ್ಟಾರ್' ಎಂಬ ಟಿವಿ ಶೋನಲ್ಲಿ ಅವರು ತಮ್ಮ ಹೋರಾಟದ ಹಾದಿ ಮತ್ತು ಯಶಸ್ಸಿನ ಹಿಂದಿನ ಕಥೆಯನ್ನು ಹಂಚಿಕೊಂಡಿದ್ದಾರೆ.
ಅಕ್ಕನೇ ನನ್ನ ಬದುಕು ಬದಲಿಸಿದ್ದು
ಈ ಶೋನಲ್ಲಿ ವೀಣಾ ನಾಗ್ಡಾ ತಮ್ಮ ಯಶಸ್ಸಿನ ಸಂಪೂರ್ಣ ಶ್ರೇಯವನ್ನು ತನ್ನ ಅಕ್ಕನಿಗೆ ನೀಡಿದ್ದಾರೆ. ಆರಂಭದಲ್ಲಿ ಅವರು ಕಸೂತಿ (Embroidery) ಕೆಲಸ ಮಾಡುತ್ತಿದ್ದರು. ಆದರೆ, ಅವರ ಅಕ್ಕ ಅದೇ ಕೌಶಲ್ಯವನ್ನು ಮೆಹೆಂದಿ ಡಿಸೈನ್‌ನಲ್ಲಿ ಬಳಸುವಂತೆ ಸಲಹೆ ನೀಡಿದರು. ಈ ನಿರ್ಧಾರವೇ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು.
ಪೂನಂ ಧಿಲ್ಲೋನ್ ಹೊಗಳಿಕೆ ಆತ್ಮವಿಶ್ವಾಸ ಹೆಚ್ಚಿಸಿತು
ವೀಣಾ ಅವರು ವೃತ್ತಿಪರವಾಗಿ ಮೆಹೆಂದಿ ಹಾಕಲು ಶುರುಮಾಡಿದ ಆರಂಭದಲ್ಲೇ ನಟಿ ಪೂನಂ ಧಿಲ್ಲೋನ್ ಅವರ ಬಳಿ ಬಂದಿದ್ದರು. ಆ ಸಮಯದಲ್ಲಿ ವೀಣಾ ಅವರ ಮನೆಯಲ್ಲಿ ಟಿವಿ ಕೂಡ ಇರಲಿಲ್ಲ, ಪಕ್ಕದ ಮನೆಯವರಿಂದ ಪೇಪರ್ ತರಿಸಿ ಓದುತ್ತಿದ್ದರು. "ನಾನು ಪೂನಂ ಧಿಲ್ಲೋನ್ ಅವರ ಒಂದು ಕೈಗೆ ಮೆಹೆಂದಿ ಹಾಕಿದ್ದೆ. ನನ್ನ ಡಿಸೈನ್ ನೋಡಿ ಅವರು ಮನಸಾರೆ ಹೊಗಳಿದರು. ಆ ಮಾತುಗಳು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದವು. ಅಂದೇ ನಾನು ಮೆಹೆಂದಿಯನ್ನೇ ನನ್ನ ವೃತ್ತಿಯನ್ನಾಗಿ ಮಾಡಿಕೊಳ್ಳಬೇಕೆಂದು ನಿರ್ಧರಿಸಿದೆ" ಎಂದು ವೀಣಾ ಆ ದಿನಗಳನ್ನು ನೆನಪಿಸಿಕೊಂಡರು.
6 ರೂಪಾಯಿಯಿಂದ ಬಾಲಿವುಡ್ 'ಮೆಹೆಂದಿ ಕ್ವೀನ್' ಆದ ಜರ್ನಿ
ಆರಂಭದ ದಿನಗಳಲ್ಲಿ ತಾನು ಕೇವಲ 6-7 ರೂಪಾಯಿ ಶುಲ್ಕ ಪಡೆಯುತ್ತಿದ್ದೆ ಎಂದು ವೀಣಾ ಹೇಳಿದರು. ಆಗ ತನ್ನ ಮೆಹೆಂದಿ ಅಷ್ಟು ಚೆನ್ನಾಗಿರಲಿಲ್ಲ ಎಂದು ಅವರಿಗೇ ಅನಿಸುತ್ತಿತ್ತಂತೆ. ಆದರೆ ಪೂನಂ ಧಿಲ್ಲೋನ್ ಅವರ ಮೆಚ್ಚುಗೆ ಅವರಿಗೆ ದೊಡ್ಡ ಆತ್ಮವಿಶ್ವಾಸ ನೀಡಿತು. ನಿಧಾನವಾಗಿ ಅವರ ಕೆಲಸದ ಬಗ್ಗೆ ಜನ ಮಾತನಾಡಲು ಶುರುಮಾಡಿದರು, ಆರ್ಡರ್‌ಗಳು ಹೆಚ್ಚಾದವು. ಒಂದು ಮದುವೆಯಲ್ಲಿ ಅವರು ಹಾಕಿದ್ದ ಸೂಕ್ಷ್ಮ ಮೆಹೆಂದಿ ವಿನ್ಯಾಸವನ್ನು ನೋಡಿ, ಸಿನಿಮಾ ಕುಟುಂಬಗಳ ಕಾರ್ಯಕ್ರಮಗಳಿಗೆ ಅವರನ್ನು ಕರೆಯಲಾಯಿತು. ಇಲ್ಲಿಂದಲೇ ಬಾಲಿವುಡ್‌ನಲ್ಲಿ ಅವರ ಹೆಸರು ಜನಪ್ರಿಯವಾಗತೊಡಗಿತು.
ದೀಪಿಕಾ ಪಡುಕೋಣೆ ಮದುವೆಗೂ ಇವರದ್ದೇ ಮೆಹೆಂದಿ
ವೀಣಾ ನಾಗ್ಡಾ ಅವರು ಕರಿಷ್ಮಾ ಕಪೂರ್, ಕರೀನಾ ಕಪೂರ್, ಶಿಲ್ಪಾ ಶೆಟ್ಟಿ ಸೇರಿದಂತೆ ಅನೇಕ ದೊಡ್ಡ ಸ್ಟಾರ್‌ಗಳಿಗೆ ಮೆಹೆಂದಿ ಹಾಕಿದ್ದಾರೆ. ದೀಪಿಕಾ ಪಡುಕೋಣೆ ಅವರ ಮದುವೆಗಾಗಿ ತಾನು ಇಟಲಿಯ ಲೇಕ್ ಕೋಮೋಗೆ ಹೋಗಿದ್ದೆ ಎಂದು ಅವರು ಬಹಿರಂಗಪಡಿಸಿದರು. ಅಷ್ಟೇ ಅಲ್ಲ, ಕಪೂರ್ ಕುಟುಂಬದೊಂದಿಗೆ ಅವರ ಸಂಬಂಧ ಮೂರು ದಶಕಗಳಿಗಿಂತಲೂ ಹಳೆಯದು. ಇಂದಿಗೂ ಸುನೀತಾ ಕಪೂರ್ ಅವರು ಕರ್ವಾ ಚೌತ್ ಹಬ್ಬಕ್ಕೆ ವೀಣಾ ಅವರಿಂದಲೇ ಮೆಹೆಂದಿ ಹಾಕಿಸಿಕೊಳ್ಳುತ್ತಾರೆ.
ಶೋನ ನಿರೂಪಕ ರಾಜೀವ್ ಖಂಡೇಲ್ವಾಲ್ ಅವರು ವೀಣಾ ಅವರ ಪಯಣವನ್ನು ಕಠಿಣ ಪರಿಶ್ರಮ, ತಾಳ್ಮೆ ಮತ್ತು ಕುಟುಂಬದ ಬೆಂಬಲಕ್ಕೆ ಅತ್ಯುತ್ತಮ ಉದಾಹರಣೆ ಎಂದು ಬಣ್ಣಿಸಿದರು. ಒಂದು ಸಾಮಾನ್ಯ ಆರಂಭದಿಂದ ಬಾಲಿವುಡ್‌ನ ಅತ್ಯಂತ ನಂಬಿಕಸ್ಥ ಮೆಹೆಂದಿ ಕಲಾವಿದೆಯಾಗಿ ಬೆಳೆದ ಅವರ ಜೀವನ, ಪ್ರತಿಭೆ ಮತ್ತು ನಿರಂತರ ಪ್ರಯತ್ನದಿಂದ ಯಾರಾದರೂ ತಮ್ಮ ಅದೃಷ್ಟವನ್ನು ಬದಲಿಸಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.