
ಗೋವಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ದೈವದ ಅನುಕರಣೆ ಮಾಡಿದ್ದು ದೊಡ್ಡ ವಿವಾದ ಸೃಷ್ಟಿಸಿತ್ತು. ವಿವಾದದ ಬಳಿಕ ರಣವೀರ್ ದೈವ ಭಕ್ತರ ಕ್ಷಮೆ ಯಾಚಿಸಿದ್ರು. ಆದ್ರೆ ಈಗ ಇದೇ ವಿಚಾರವಾಗಿ ಬೆಂಗಳೂರಿನಲ್ಲಿ ರಣವೀರ್ ಮೇಲೆ ಎಫ್.ಐ.ಆರ್ ದಾಖಲಾಗಿದೆ.
ಯೆಸ್ ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಪತಿ, ನಟ ರಣವೀರ್ ಸಿಂಗ್ ಮೇಲೆ ಬೆಂಗಳೂರಿನಲ್ಲಿ ಎಫ್. ಐ ಆರ್. ದಾಖಲಾಗಿದೆ. ಹೆಂಡತಿಯ ಊರಿನಲ್ಲಿ ರಣವೀರ್ ಮೇಲೆ ಕೇಸ್ ದಾಖಲಾಗಿದೆ. ಅಷ್ಟಕ್ಕೂ ಈ ಎಫ್.ಐ.ಆರ್ ಆಗೋದಕ್ಕೆ ಕಾರಣ , ಖುದ್ದು ರಣವೀರ್ ಹುಚ್ಚಾಟ.
ಹೌದು ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಗೋವಾದಲ್ಲಿ ಅಂತರಾಷ್ಟ್ರೀಯ ಚಿತ್ರೋತ್ಸವ ನಡೆದಿತ್ತು. ಅಲ್ಲಿ ರಿಷಬ್ ಶೆಟ್ಟಿ ಕೂಡ ಭಾಗಿಯಾಗಿದ್ರು. ವೇದಿಕೆಗೆ ಬಂದ ರಣವೀರ್ ರಿಷಬ್‌ನ ನೋಡ್ತಾನೇ ದೈವದ ರೀತಿ ಆ್ಯಕ್ಟ್ ಮಾಡಿದ್ರು. ಆಗಲೇ ರಿಷಬ್ ಹಾಗೆಲ್ಲಾ ಮಾಡಬಾರದು ಅಂತ ಸನ್ನೆ ಮಾಡಿದ್ರು. ಆದ್ರೆ ವೇದಿಕೆ ಮೇಲೆ ಹೋಗಿ, ರಿಷಬ್ ಬಗ್ಗೆ ಮಾತನಾಡ್ತಾ ಮತ್ತೆ ರಣವೀರ್ ದೈವದಂತೆ ನಟನೆ ಮಾಡಿದ್ರು. ಕೆಟ್ಟದಾಗಿ ಮುಖಭಾವ ಪ್ರದರ್ಶಿಸಿದ್ರು. ಅಷ್ಟೇ ಅಲ್ಲ ದೈವವನ್ನ ದೆವ್ವ ಅಂದುಬಿಟ್ಟಿದ್ರು.
ರಣವೀರ್ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿರಲಿಲ್ಲ. ರಿಷಬ್‌ನ ಹೊಗಳವ ಭರದಿಂದ ಅತಿ ಉತ್ಸಾಹದಿಂದ ಇಂಥಾ ಅಚಾತುರ್ಯ ಮಾಡಿದ್ರು. ಇದರ ವಿರುದ್ದ ದೈವಾರಾಧಕರು ಗರಂ ಆಗಿಬಿಟ್ಟಿದ್ರು. ತನ್ನ ವಿರುದ್ದ ತೀವ್ರವಾದ ಆಕ್ರೋಶ ವ್ಯಕ್ತವಾಗಿರೋದು ಗೊತ್ತಾದೊಡನೆ ರಣವೀರ್ ಕ್ಷಮೆ ಯಾಚಿಸಿದ್ರು. ತಾನು ಗೊತ್ತಿರದೇ ಈ ರೀತಿ ದೈವದ ಅನುಕರಣೆ ಮಾಡಿದ್ದೀನಿ ಕ್ಷಮಿಸಿ ಅಂತ ಕೇಳಿಕೊಂಡಿದ್ರು.
ಹೌದು, ರಣವೀರ್ ಭಕ್ತರ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಅಭಿನಯ ಮಾಡಿದ್ದಾರೆ ಅಂತ 1ನೇ ಎಸಿಜೆಎಂ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಲಾಗಿತ್ತು. ವಕೀಲ ಪ್ರಶಾಂತ್ ಮೇಥಲ್ ಈ ಖಾಸಗಿ ದೂರು ಸಲ್ಲಿಸಿದ್ರು. ಸದ್ಯ ನ್ಯಾಯಾಲಯದ ಆದೇಶದ ಅನ್ವಯ ಬೆಂಗಳೂರು ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ. ಕರಾವಳಿ ಭಾಗದಲ್ಲಿ ಆರಾಧಿಸುವ ಚಾವುಂಡಿ, ಗುಳಿಗ, ಪಂಜುರ್ಲಿ ದೈವಗಳನ್ನು ಅವಮಾನಿಸುವ ಉದ್ದೇಶದಿಂದ ಈ ಕೃತ್ಯ ಮಾಡಲಾಗಿದೆ ಅಂತ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಬಿಎನ್ಎಸ್ ಕಾಯ್ದೆ 196, 302, 299 ಅಡಿಯಲ್ಲಿ ಕೇಸ್ ದಾಖಲಾಗಿದೆ.
ರಣವೀರ್ ಸಿಕ್ಕಾಪಟ್ಟೆ ಹೈಪರ್ ಆ್ಯಕ್ಟಿವ್ ಅನ್ನೋದು ಗೊತ್ತೇ ಇದೆ. ಆದರೆ ಅವರ ಅತಿ ಉತ್ಸಾಹವೇ ಅವರನ್ನ ಅನೇಕ ಬಾರಿ ಸಮಸ್ಯೆಗೆ ಸಿಲುಕಿಸಿದೆ. ಸದ್ಯ ಕಾಂತಾರಕ್ಕೂ, ದೈವಕ್ಕೂ ಸಂಬಂಧವೇ ಇರದ ರಣವೀರ್ ವಿನಾಕಾರಣ ಈ ವಿಚಾರದಲ್ಲಿ ಕೇಸ್ ಜಡಿಸಿಕೊಂಡಿದ್ದಾರೆ. ದೈವವನ್ನ ದೆವ್ವ ಅಂದವರಿಗೆ ಈಗ ದೆವ್ವದ ಕಾಟವೇ ಶುರುವಾಗಿಬಿಟ್ಟಿದೆ..!
ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.