ಚಿತ್ರ ವಿಮರ್ಶೆ: ‘ವಿರಾಜ್’ಒಂದು ಮದುವೆಗೆ 2 ಗಂಟೆ ಹೋರಾಟ

By Kannadaprabha NewsFirst Published Dec 15, 2018, 9:10 AM IST
Highlights

ಚಿತ್ರದ ನಾಯಕ, ನಾಯಕಿಗೆ ಮದುವೆ ಮಾಡಿಸುವುದನ್ನೇ ಒಂದು ಕತೆ ಮಾಡಿಕೊಂಡರೆ ಹೇಗಿರುತ್ತದೆ ಎಂಬುದಕ್ಕೆ ವಿರಾಜ್ ಸಿನಿಮಾ ಅತ್ಯುತ್ತಮ ಉದಾಹರಣೆ.

ಎರಡು ಶ್ರೀಮಂತ ಮನೆತನಗಳು. ಮತ್ತೊಬ್ಬರಿಗೆ ಒಬ್ಬರದ್ದು ಅಮೆರಿಕದಲ್ಲಿ ಬ್ಯುಸಿನೆಸ್. ಮತ್ತೊಬ್ಬರು ದೇಸಿ ರೈತ. ಆದರೆ, ಒಬ್ಬರಿಗೆ ಕೆಲಸಗಾರರು ಅಂದರೆ ಆಗದು ಈ ಅಂತರವೇ ಚಿತ್ರದ ಪಿಲ್ಲರ್.

ಇದೇ ಕುಟುಂಬಗಳಿಗೆ ಸೇರಿದ ನಾಯಕ ಮತ್ತು ನಾಯಕಿಗೆ ನಿಶ್ಚಿತಾರ್ಥದವರೆಗೂ ಬಂದು ಬ್ರೇಕಪ್ ಆಗುತ್ತದೆ. ಮತ್ತೊಮ್ಮೆ ಇನ್ನೇನು ಮದುವೆಯೇ ಆಗುತ್ತಾರೆ ಅಂದಾಗ ಆಗಲೂ ಬ್ರೇಕಪ್ ಆಗುತ್ತದೆ. ಹಾಗಾದರೆ ಇವರಿಬ್ಬರ ಮದುವೆ ಆಗುತ್ತದೆಯೇ ಎಂದು ಚೋಟುದ್ದದ ಪ್ರಶ್ನೆಗೆ ನಿರ್ದೇಶಕ ನಾಗೇಶ್ ನಾರದಾಸಿ ಮಾರುದ್ದದ ಕತೆ ಹೇಳುತ್ತಾರೆ.

ನಿರ್ದೇಶಕರ ಈ ಕಥಾ ಉತ್ಸಾಹಕ್ಕೆ ಒಂದು ಹಂತದಲ್ಲಿ ಪ್ರೇಕ್ಷಕ ತಾಳ್ಮೆ ಕಳೆದುಕೊಂಡು ‘ಬೇಗ ಮದುವೆ ಮಾಡಿ ಮುಗಿಸಿ’ ಎನ್ನುತ್ತಾನೆ. ಪೋಷಕ ಪಾತ್ರಗಳ ಹೊರತಾಗಿ ಬಹುತೇಕರಿಗೆ ಇದು ಮೊದಲ ಸಿನಿಮಾ ಎಂಬುದು ಆಯಾ ಪಾತ್ರಧಾರಿಗಳ ನಟನೆ ನೋಡಿದರೆ ಗೊತ್ತಾಗುತ್ತದೆ.

ನಾಯಕ ವಿದ್ಯಾಭರಣ್ ಫೈಟ್ ಮಾಡುವುದಕ್ಕೆ ಹೆಚ್ಚು ಗಮನ ಕೊಟ್ಟಿದ್ದಾರೆ. ಆದರೆ, ಅವರಿಗೆ ಅಭಿನಯ ತೆಗೆಸುವುದಕ್ಕೆ ನಿರ್ದೇಶಕರು ಗಮನ ಕೊಟ್ಟಿಲ್ಲ. ನಾಯಕಿ ಶಿರಿನ್ ನಟನೆ ಕುರಿತು ಹೇಳುವುದೇ ಬೇಕಿಲ್ಲ. ಜೈ ಜಗದೀಶ್,
ದೇವರಾಜ್, ವಿನಯ ಪ್ರಸಾದ್, ಉಗ್ರಂ ಮಂಜು, ದೀಪಕ್ ಶೆಟ್ಟಿ, ಟೆನ್ನಿಸ್ ಕೃಷ್ಣ ಅವರಂತಹ ದೊಡ್ಡ ಅನುಭವಿ ಕಲಾವಿದರು ಇದ್ದಾಗಲೂ ಎಲ್ಲೋ ಏನೋ ಮಿಸ್ ಲಿಂಕ್ ಆಗಿದೆ ಎನಿಸುವುದಕ್ಕೆ ಕಾರಣಗಳು ಹಲವು.
ಹೇಳಕ್ಕೆ ಹೊರಟಿರುವ ಕತೆಯಲ್ಲಿ ಹೊಸತನವಿಲ್ಲ. ಅದೇ ತಾತ, ಮೊಮ್ಮಗ, ಪ್ರೀತಿ- ಪ್ರೇಮ ಮತ್ತು ಬ್ರೇಕಪ್. ಕೊನೆಯಲ್ಲಿ ಒಂದಾಗುವ ಹಳೆಯ ಥಿಯರಿಗೆ ಜೋತು ಬಿದ್ದು ಇಡೀ ಚಿತ್ರವನ್ನು ರೂಪಿಸಲಾಗಿದೆ.

ಅಲ್ಲದೆ ಸಂಗೀತ, ಎಡಿಟಿಂಗ್ ವಿಚಾರದಲ್ಲಿ ‘ವಿರಾಜ್’ ತೀರಾ ಸಪ್ಪೆ. ಸ್ವಯಂವರ ಚಂದ್ರು ನಗಿಸುವುದಕ್ಕೆ ಪ್ರಯತ್ನ ಹಾಗೂ ಮಲ್ಲಿಕಾರ್ಜುನ್ ಅವರ ಕ್ಯಾಮೆರಾ ಕಣ್ಣೋಟಗಳು ಚಿತ್ರವನ್ನು ಸುಂದರವಾಗಿಸುತ್ತದೆ. 

ಚಿತ್ರ: ವಿರಾಜ್

ತಾರಾಗಣ: ವಿದ್ಯಾಭರಣ್, ಶಿರಿನ್, ಜೈ ಜಗದೀಶ್, ದೇವರಾಜ್, ವಿನಯ ಪ್ರಸಾದ್

ನಿರ್ದೇಶನ: ನಾಗೇಶ್ ನಾರದಾಸಿ

ರೇಟಿಂಗ್: *

 

click me!