ಚಿತ್ರ ವಿಮರ್ಶೆ: ಭೈರವಗೀತ

By Kannadaprabha NewsFirst Published Dec 8, 2018, 8:42 AM IST
Highlights

ಎರಡು ಗಂಟೆ ಒಂಭತ್ತು ನಿಮಿಷ ಕಣ್ಣುಗಳಲ್ಲೇ ಬೆಂಕಿಯುಗುಳುವ ಭೈರವ ಪಾತ್ರಧಾರಿ ಧನಂಜಯ್ ಈ ಚಿತ್ರದ ಹೆಗ್ಗಳಿಕೆ ಮತ್ತು ಶಕ್ತಿ. 

ಜಗತ್ತಿನ ಎಲ್ಲಾ ಕ್ರೋಧವನ್ನೂ ತನ್ನೊಳಗೆ ಆವಾಹಿಸಿಕೊಂಡಂತೆ ಕಾಣಿಸುತ್ತಾರೆ ಧನಂಜಯ್. ನಿರೀಕ್ಷೆಯೇ ಮಾಡದಿದ್ದ ಗಳಿಗೆಯಲ್ಲಿ ಪ್ರೇಯಸಿಯಿಂದ ಮುತ್ತು ಪಡೆದ ಆತಂಕಿತ ಹುಡುಗನಾಗಿ, ಬದುಕಿನಲ್ಲಿ ಎಲ್ಲಾ ಮುಗಿಯಿತು ಎಂಬಂತೆ ಅಮ್ಮನನ್ನು ತಬ್ಬಿಕೊಂಡ ನತದೃಷ್ಟನಾಗಿ ಬಾಲಕನಾಗಿ ಅವರ ನಟನೆ ಅದ್ಭುತ. ಈ ಕಾರಣದಿಂದ ಆಕ್ರೋಶದ ಧನಂಜಯ್ ಕಣ್ಣಲ್ಲಿ ಹಾಗೇ ಉಳಿದುಹೋಗುತ್ತಾರೆ. 

ವರ್ಗ ಸಂಘರ್ಷದ ಕತೆ ನಮಗೆ ಹೊಸದಲ್ಲ. ಆಳುವವರ ವಿರುದ್ಧ ದಂಗೆ ಏಳುವ ಕೆಲಸಗಾರ ವರ್ಗದ ಕತೆಯನ್ನು ಅರೆದು ಕುಡಿದಿರುವವರ ಸಂಖ್ಯೆ ಜಾಸ್ತಿ ಇದೆ. ಹಾಗಾಗಿ ಈ ಥರದ ಕತೆಗಳಲ್ಲಿ ಯಾವಾಗ, ಎಲ್ಲೆಲ್ಲಿ, ಏನೇನು ಆಗುತ್ತದೆ ಅನ್ನುವುದು ಕತೆ ಶುರುವಾದಾಗಲೇ ಗೊತ್ತಾಗುತ್ತದೆ. ಅಂಥದ್ದೇ ಕತೆ ಭೈರವಗೀತ. ಟಿಪಿಕಲ್ ತೆಲುಗು ಶೈಲಿಯ ಕತೆ, ಚಿತ್ರಕತೆ, ಹಾರಾಟ, ಹೋರಾಟ, ಒದ್ದಾಟ. ಈ ಚಿತ್ರದ ಕತೆ- ಚಿತ್ರಕತೆ ಸರಳರೇಖೆಯಂತೆ ನೇರ ಮತ್ತು ಸ್ಪಷ್ಟ. ನಾಯಕನ ವೀರಾವೇಶದ ಕೆಲವು ದೃಶ್ಯಗಳಂತೂ ರೋಮಾಂಚನವನ್ನುಂಟು ಮಾಡುತ್ತದೆ. ಅದರ ಹೊರತಾಗಿಯೂ ಹೊಸದೇನನ್ನೋ ಹೇಳಲು ನಿರ್ದೇಶಕ ಸಿದ್ದಾರ್ಥ ಸಫಲರಾಗಿಲ್ಲ. ನಿರ್ದೇಶಕರಿಗೆ ಸಿನಿಮಾ ಕಟ್ಟುವ ಕಲೆ ಗೊತ್ತಿದೆ. ಆದರೆ ಕತೆ ಕಟ್ಟುವ ಬಗೆಯಲ್ಲಿ ಹೊಸತು ಕಾಣಿಸಲ್ಲ. 

ನಾಯಕಿ ಇರಾ ಮೋರ್‌ಗೆ ಜಾಸ್ತಿ ಕೆಲಸವಿಲ್ಲ. ಧನಂಜಯ್‌ರನ್ನು ಹುರಿದುಂಬಿಸುವುದು ಮತ್ತು ರೊಮ್ಯಾಂಟಿಕ್ ಆಗಿ ಒಡನಾಡಿರುವುದೇ ಅವರ ಪಾತ್ರದ ಸಾರ್ಥಕತೆ. ನಿರ್ದೇಶಕರು ಇಲ್ಲಿ ಮಾಡಿರುವ ಬಹುದೊಡ್ಡ ಕೆಲಸವೆಂದರೆ ನಾಯಕನಿಗೆ ಕೈ ತುಂಬಾ ಕೆಲಸ ಕೊಟ್ಟಿರುವುದು. ಬಹುತೇಕ ಕಡೆಗಳಲ್ಲಿ ನಾಯಕನ ಕೈಯಲ್ಲಿ ಒಂದೋ ಕೊಡಲಿ ಇರುತ್ತದೆ, ಇಲ್ಲವೇ ನಾಯಕಿಯ ಸೊಂಟ ಇರುತ್ತದೆ. ಅಷ್ಟರ ಮಟ್ಟಿಗೆ ನಾಯಕನನ್ನು ನಿರ್ದೇಶಕರು ದುಡಿಸಿಕೊಂಡಿದ್ದಾರೆ.

ಮೂವರನ್ನು ಇಲ್ಲಿ ನೆನೆಯಬೇಕು. ಒಬ್ಬರು ಸಂಗೀತ ನಿರ್ದೇಶಕ ರವಿಶಂಕರ್. ರಾಮ್‌ಗೋಪಾಲ್ ವರ್ಮಾ ಚಿತ್ರಗಳ ಥರದ ಹಿನ್ನೆಲೆ ಸಂಗೀತ ಇಲ್ಲಿದೆ. ಭಾವ ಇಷ್ಟಿದ್ದರೆ ಸೌಂಡು ಅಷ್ಟಿದೆ. ಆದಾಗ್ಯೂ ದೃಶ್ಯವನ್ನು ಸಂಗೀತದಲ್ಲೇ ತೀವ್ರವಾಗಿ ಕಟ್ಟಿಕೊಟ್ಟಿರುವುದು ಸಂಗೀತದ ಪ್ಲಸ್ಸು. ಇನ್ನೊಬ್ಬರು ಛಾಯಾಗ್ರಾಹಕ ಜಗದೀಶ್ ಚೀಕಟಿ. ಮತ್ತೊಬ್ಬರು ಸಂಭಾಷಣಕಾರ ಮಾಸ್ತಿ ಮಂಜು. ದ್ವೇಷಕ್ಕೆ ವಯಸ್ಸಾಗುತ್ತದೆ, ಕಾಡ್ಗಿಚ್ಚಿಗೆ ಕರುಣೆಯಿಲ್ಲ ಇಂತಹ ಆಕರ್ಷಕ ಸಾಲುಗಳು ಚಿತ್ರ ಆಪ್ತಗೊಳಿಸುತ್ತವೆ.

ಜಗತ್ತಿನಲ್ಲಿ ಎಲ್ಲರೂ ಒಂದೇ ಥರ ಇರುವುದಿಲ್ಲ. ಆದರೆ ಈ ಚಿತ್ರದಲ್ಲಿ ಮಾತ್ರ ಎಲ್ಲರೂ ಕ್ರೋಧದಿಂದ ಉರಿಯುವವರೇ. ಒಂದೇ ಥರ ಕೋಪದಿಂದ ಮಾತನಾಡುವವರೇ ಇದ್ದಾರೆ. ಆತಂಕ, ಕೋಪ, ದ್ವೇಷವೇ ಎಲ್ಲರನ್ನೂ ಆಳುತ್ತಿದೆ. ದ್ವೇಷಕ್ಕೆ ವಯಸ್ಸಾಗುತ್ತದೆ. ಹಾಗೆಯೇ ಭೈರವಗೀತ ಚಿತ್ರದ ಕತೆ, ಚಿತ್ರಕತೆ ಶೈಲಿಗೂ ತುಂಬಾ ವಯಸ್ಸಾಗಿದೆ.

ಚಿತ್ರ: ಭೈರವಗೀತ

ನಿರ್ದೇಶನ: ಸಿದ್ದಾರ್ಥ

ತಾರಾಗಣ: ಧನಂಜಯ, ಇರಾ ಮೋರ್, ರಾಜ ಬಾಲವಾಡಿ, ರಾಮ್ ವಂಶಿ ಕೃಷ್ಣ

ರೇಟಿಂಗ್: ***

 

 

click me!