ಅರಮನೆ ನಗರಿ ಮೈಸೂರಿನಿಂದ ಬೆಳ್ಳಿತೆರೆಗೆ ಬಂದ ಸುಂದರಾಂಗಿ. ಬಟ್ಟಲು ಗಣ್ಣಿನ ಚೆಲುವೆ. ಹೆಸರು ಅಖಿಲಾ ಪ್ರಕಾಶ್. ಇದೀಗ ಕ್ರೈಮ್ ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಕಥಾ ಹಂದರದ ‘ರತ್ನಮಂಜರಿ’ ಚಿತ್ರದಲ್ಲಿ ಎನ್ ಆರ್‌ಐ ಹುಡುಗಿ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿನ ಪಾತ್ರ ಮತ್ತು ಚಿತ್ರೀಕರಣದ ಅನುಭವ ಕುರಿತು ಅವರೊಂದಿಗೆ ಮಾತುಕತೆ.
ದೇಶಾದ್ರಿ ಹೊಸ್ಮನೆ
ಹೇಗಿದೆ ಸಿನಿಮಾ ಜರ್ನಿ?
ನೈಸ್. ನಂಗಂತೂ ಖುಷಿಯಿದೆ. ಇಲ್ಲಿಗೆ ಬಂದು ಎರಡೂವರೆ ವರ್ಷಗಳಾದವು. ಒಂದಾದ ನಂತರ ಒಂದು ಸಿನಿಮಾಗಳ ಆಫರ್ ಬರುತ್ತಿವೆ. ‘ಸೋಜಿಗ’ ನಂತರ ‘ಓಳ್ ಮುನಿಸ್ವಾಮಿ’ ಚಿತ್ರದಲ್ಲಿ
ಅಭಿನಯಿಸಿದೆ. ಹಾಗೆಯೇ ‘ಗಾಂಚಾಲಿ’ ಚಿತ್ರದಲ್ಲಿ ಕಾಣಿಸಿಕೊಂಡೆ. ಈಗ ರತ್ನಮಂಜರಿ ಹಾಗೂ 18 ಟು 25 ಚಿತ್ರಗಳ ರಿಲೀಸ್‌ಗೆ ರೆಡಿ ಇವೆ. ಸದ್ಯಕ್ಕೆ ಐ ಆ್ಯಮ್ ಹ್ಯಾಪಿ. ಭವಿಷ್ಯ ನಮ್ಮ ಕೈಯಲಿಲ್ಲ. ಮುಂದೆ ಹೇಗೋ ನೋಡೋಣ.
‘ರತ್ನಮಂಜರಿ’ ಚಿತ್ರದಲ್ಲಿನ ನಿಮ್ಮ ಪಾತ್ರ ಬಗ್ಗೆ ಹೇಳಿ?
ನಾನಿಲ್ಲಿ ಎನ್‌ಆರ್‌ಐ ಹುಡುಗಿ. ಅಂದ್ರೆ ಅಮೆರಿಕದಲ್ಲಿರುವ ಕನ್ನಡತಿ. ಅಲ್ಲಿದ್ದರೂ ನನಗೆ ಕನ್ನಡದ ಮೇಲೆ ಅತೀವ ಅಭಿಮಾನ. ಅಮೆರಿಕ ತೊರೆದು ತಾಯ್ನಾಡು ಕರ್ನಾಟಕಕ್ಕೆ ಬಂದ ನಂತರ ಆಕೆ, ಇಲ್ಲಿ ಹೇಗೆ ಸವಾಲು ಎದುರಿಸುತ್ತಾಳೆ ಎನ್ನುವುದೇ ನನ್ನ ಪಾತ್ರ.
ಚಿತ್ರೀಕರಣದ ಅನುಭವ ಹೇಗಿತ್ತು?
ಪಾತ್ರದ ಜತೆಗೆ ಚಿತ್ರೀಕರಣದ ಅನುಭವದಲ್ಲಿ ಈ ಸಿನಿಮಾ ನನಗೆ ತುಂಬಾ ಸ್ಪೆಷಲ್. ಚಿತ್ರದ ಬಹುತೇಕ ಚಿತ್ರೀಕರಣ ಅಮೆರಿಕದಲ್ಲೇ ನಡೆಯಿತು. ಸರಿ ಸುಮಾರು ಒಂದು ತಿಂಗಳ ಕಾಲ ನಾವು ಅಮೆರಿಕದಲ್ಲಿದ್ದೆವು. ಅಷ್ಟು ದಿನ ನಾನು ವಿದೇಶದಲ್ಲಿ ಇದಿದ್ದು ಅದೇ ಮೊದಲು. ನ್ಯೂಯಾರ್ಕ್ ಸಿಟಿ ಸೇರಿದಂತೆ ಅಲ್ಲಿನ ಹಲವು ಕಡೆಗಳಲ್ಲಿ ಚಿತ್ರೀಕರಣ ನಡೆಯಿತು. ಅದ್ಭುತವಾಗಿತ್ತು ಆ ಅನುಭವ.
ಹೌದು, ಮಡಿಕೇರಿ ಮಳೆಯಲ್ಲಿ ನೀವು ತೋಯ್ದಿದ್ದು ಯಾಕೆ?
ಮಡಿಕೇರಿಯಲ್ಲಿ ಒಂದು ಹಾಡಿನ ಶೂಟಿಂಗ್ ನಡೆಯಿತು. ಮಳೆಯಲ್ಲೇ ನಡೆಯುವ ಸಾಂಗ್ ಅದು. ನಾವು ಸಾಂಗ್ ಶೂಟಿಂಗ್‌ಗೆ ಅಂತ ಮಡಿಕೇರಿಗೆ ಹೋದಾಗ ಜೋರು ಮಳೆ. ಅದರಲ್ಲೇ ಶೂಟಿಂಗ್ ನಡೆಯಿತು. ಆ ದೃಶ್ಯಗಳು ಅತ್ಯಂತ ನೈಜವಾಗಿ ಮೂಡಿಬಂದಿವೆ.
ಸಿನಿಮಾದ ಮೇಲಿನ ನಿಮ್ಮ ನಿರೀಕ್ಷೆ ಏನು?
ಪ್ರತಿ ಸಿನಿಮಾವೂ ನನಗೆ ಮುಖ್ಯ. ಆದರೂ ಇದಕ್ಕೆ ತುಸು ಹೆಚ್ಚು ಪ್ರಾಮುಖ್ಯತೆ ಇದೆ. ಅದಕ್ಕೆ ಕಾರಣ ಚಿತ್ರದ ಕತೆ ಮತ್ತು ನನ್ನ ಪಾತ್ರ. ಕ್ರೈಮ್ ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಕತೆಯಿದು. ಅದ್ಭುತವಾಗಿದೆ. ಅದನ್ನು ಅಷ್ಟೇ ರಿಚ್ ಆಗಿ ತೆರೆಗೆ ತರಲಾಗಿದೆ. ಪ್ರೇಕ್ಷಕರಿಗೆ ಅದು ಇಷ್ಟವಾಗುತ್ತೆ ಎನ್ನುವ ಭರವಸೆಯೂ ಇದೆ. ಆ ಮೂಲಕ ನನಗೂ ಒಂದು ಬ್ರೇಕ್ ಸಿಗುವ ನಿರೀಕ್ಷೆಯಿದೆ.