
-ದೇಶಾದ್ರಿ ಹೊಸಮನೆ
ಬೆಂಗಳೂರು(ನ.16): ಥಂಡ ಥಂಡ ಕೂಲ್ ಕೂಲ್! ಸಿನಿಮಾ ವಹಿವಾಟಿನ ಕೇಂದ್ರ ಸ್ಥಾನ ಗಾಂಧಿನಗರದ ಸದ್ಯದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಇಷ್ಟಕ್ಕೂ ಕಾರಣ ನೋಟಿನ ಎಫೆಕ್ಟ್. ನೋಟಿನ ಬಿಸಿ ಚಿತ್ರೋದ್ಯಮಕ್ಕೂ ತಟ್ಟಿದೆ. ಚಿತ್ರರಂಗದ ಎಲ್ಲ ರೀತಿಯ ವಹಿವಾಟುಗಳು ಏರುಪೇರಾಗಿವೆ. ಮುಂದಿನ ದಿನಗಳಲ್ಲಿ ಉದ್ಯಮದ ಚಟುವಟಿಕೆಗಳು ಎಷ್ಟರ ಮಟ್ಟಿಗೆ ಕ್ರಿಯಾಶೀಲಗೊಳ್ಳಲಿವೆ ಎನ್ನುವುದು ಕುತೂಹಲ ಕೆರಳಿಸಿದೆ.
ದಿಢೀರನೆ 500 ಹಾಗೂ 1000 ನೋಟುಗಳನ್ನು ಅಮಾನ್ಯಗೊಳಿಸಿ ಹೊಸ ನೋಟಿನ ಚಲಾವಣೆಯ ಆದೇಶ ಹೊರಬಿದ್ದು ವಾರ ಕಳೆದಿದೆ. ಜನ ಸಾಮಾನ್ಯರು ಹಳೇ ನೋಟುಗಳನ್ನು ಬದಲಾಯಿಸಿ, ಹೊಸ ನೋಟುಗಳನ್ನು ಪಡೆಯಲು ಹರಸಾಹಸ ನಡೆಸುತ್ತಿದ್ದಾರೆ. ಬ್ಯಾಂಕ್‌ಗಳ ಮುಂದೆ ಸರತಿ ಸಾಲು ದಿನ ಕಳೆದಂತೆ ಉದ್ದವಾಗುತ್ತಲೇ ಇದೆ. ಅಂಥದ್ದೇ ಪರಿಸ್ಥಿತಿಗೆ ಚಿತ್ರೋದ್ಯಮವೂ ಸಿಲುಕಿದೆ.
ಹಳೇ ನೋಟುಗಳ ಚಲಾವಣೆಯೇ ಇಲ್ಲದ ಕಾರಣ ಚಿತ್ರೋದ್ಯಮದ ಚಟುವಟಿಕೆಗಳೂ ಅಕ್ಷರಶಃ ಸ್ತಬ್ಧಗೊಂಡಿವೆ. ಉದ್ಯಮದ ಮೂಲಗಳ ಪ್ರಕಾರ ಈ ಐದಾರು ದಿನಗಳಲ್ಲಿ ಒಟ್ಟು 11 ಚಿತ್ರಗಳ ಮುಹೂರ್ತಗಳು ಏಕಾಏಕಿ ಸ್ಥಗಿತಗೊಂಡಿವೆ. ಶುರುವಾಗಲಿದ್ದ ಹೊಸ ಪ್ರಾಜೆಕ್ಟ್ಗಳನ್ನು ಅದೆಷ್ಟೋ ಮಂದಿ ಅರ್ಧದಲ್ಲಿಯೇ ಕೈ ಬಿಟ್ಟಿದ್ದಾರೆನ್ನುವ ಮಾಹಿತಿಯಿದೆ. ಇನ್ನು ಚಿತ್ರಗಳ ಪ್ರದರ್ಶನದಿಂದ ಬರಬೇಕಿದ್ದ ಕಲೆಕ್ಷನ್‌ಗೆ ಭಾರಿ ಹೊಡೆತ ಬಿದ್ದಿದ್ದು, ಸದ್ಯ ತೆರೆ ಕಂಡಿರುವ ಚಿತ್ರಗಳ ನಿರ್ಮಾಪಕರು ಮತ್ತು ಆ ಚಿತ್ರಗಳ ಪ್ರದರ್ಶನಕ್ಕೆ ವಿತರಣೆಯ ಹಕ್ಕು ಪಡೆದವರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ ಎನ್ನುತ್ತಿವೆ ಮೂಲಗಳು.
ಹೊಸ ಸಿನಿಮಾಗಳ ಮುಹೂರ್ತ ಮತ್ತು ಹೊಸ ಪ್ರಾಜೆಕ್ಟ್ಗಳ ಕತೆ ಇದಾದರೆ, ನೋಟಿನ ಬಿಸಿ ಹೆಚ್ಚಾಗಿ ತಟ್ಟಿದ್ದು ಚಿತ್ರಮಂದಿಗಳ ಕಲೆಕ್ಷನ್ ಮೇಲೆ. ಹಳೇ ನೋಟಿನ ಚಲಾವಣೆಯಲ್ಲಿ ಉಂಟಾದ ಗೊಂದಲದಿಂದ ಆರಂಭದ ಮೂರ್ನಾಲ್ಕು ದಿನಗಳಲ್ಲಿ ಚಿತ್ರಮಂದಿರಗಳಿಗೆ ಪ್ರೇಕ್ಷಕರೇ ಬಂದಿಲ್ಲ. ರಾಜ್ಯಾದ್ಯಂತ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಪ್ರೇಕ್ಷಕರಿಲ್ಲದೆ ಖಾಲಿ ಹೊಡೆಯುತ್ತಿವೆ.
ಅಚ್ಚರಿ ಎಂದರೆ, ಸದ್ಯಕ್ಕೀಗ ಪ್ರದರ್ಶನದಲ್ಲಿರುವ ಯಶ್ ಅಭಿನಯದ ‘ ಸಂತು ಸ್ಟ್ರೈಟ್ ಫಾರ್ವರ್ಡ್' ಮತ್ತು ಸುದೀಪ್, ಉಪೇಂದ್ರ ಅಭಿನಯದ ‘ ಮುಕುಂದ ಮುರಾರಿ' ಚಿತ್ರಗಳ ಕಲೆಕ್ಷನ್‌ಗೆ ಈ ವಾರ ಭಾರಿ ಹೊಡೆತ ಬಿದ್ದಿದೆ. ಆರಂಭದ ಮೂರು ದಿನಗಳಲ್ಲಿ ಶೇ.50ರಷ್ಟುಕಲೆಕ್ಷನ್‌ಗೆ ಹೊಡೆತ ಆಗಿದೆ ಮೂಲಗಳು ತಿಳಿಸಿವೆ.
ಗ್ರಾಮೀಣ ಪ್ರದೇಶದ ಚಿತ್ರಮಂದಿರಗಳಲ್ಲಿ ಆರಂಭದ ಮೂರು ದಿನಗಳಲ್ಲಿ ಪ್ರತಿ ಪ್ರದರ್ಶನಕ್ಕೆ ಆಗಿದ್ದು ಕೇವಲ .1000ದಷ್ಟುಕಲೆಕ್ಷನ್. ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿರುವ ತಮ್ಮ ಚಿತ್ರಮಂದಿರದಲ್ಲಿ ಒಟ್ಟು ಮೂರು ದಿನಗಳ ಕಾಲ ಆದ ಒಟ್ಟು ಕಲೆಕ್ಷನ್ ಮೂರು ಸಾವಿರ ಮಾತ್ರ ಎನ್ನುತ್ತಾರೆ ಚಿತ್ರಮಂದಿರದ ಮಾಲೀಕ ಹಾಗೂ ನಿರ್ಮಾಪಕ ಉಮೇಶ್ ಬಣಕಾರ್. ಅದೇ ಪರಿಸ್ಥಿತಿ ರೆಟ್ಟಿಹಳ್ಳಿಯಂತಹ ಹೋಬಳಿ ಕೇಂದ್ರದ ಒಂದು ಚಿತ್ರಮಂದಿರದಲ್ಲೂ ಇದೆ ಎನ್ನುವುದು ಅವರ ಅಳಲು.
ಇದು ಅವರೊಬ್ಬದ್ದೇ ಅನುಭವ ಅಲ್ಲ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿನ ಸಿಂಗಲ್‌ಸ್ಕ್ರೀನ್ ಚಿತ್ರಮಂದಿರಗಳಲ್ಲೂ ಅದೇ ರೀತಿ ಆಗಿದೆ. ಪ್ರತಿ ದಿನ ಸ್ಟಾರ್ ಸಿನಿಮಾಗಳಿಗೆ . 50 ಸಾವಿರದಿಂದ . 1 ಲಕ್ಷದ ತನಕ ಕಲೆಕ್ಷನ್ ಆಗುತ್ತಿದ್ದ ಚಿತ್ರಮಂದಿರಗಳಲ್ಲೂ ಕಲೆಕ್ಷನ್ ಸಂಪೂರ್ಣ ಕುಸಿದಿದೆ. ಸೋಮವಾರದಿಂದ ಮಾತ್ರಕಲೆಕ್ಷನ್‌ನಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಿದೆ ಎನ್ನುವ ಮಾತುಗಳು ಇವೆ.
ಹಾಗೆ ನೋಡಿದರೆ, ಆನ್‌ಲೈನ್ ಮೂಲಕ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವ ಅವಕಾಶ ಇರುವುದರಿಂದ ಮಲ್ಟಿಪ್ಲೆಕ್ಸ್‌ಗಳು ನೋಟಿನ ಸಮಸ್ಯೆಯಿಂದ ತುಸು ಬಚಾವ್ ಆಗಿವೆ. ಆರಂಭಿಕ ದಿನಗಳಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಶೇ. 30ರಷ್ಟಿದ್ದ ಕಲೆಕ್ಷನ್ ಈಗ ಚೇತರಿಸಿಕೊಂಡಿದೆಯಂತೆ. ಮುಂದಿನ ನಾಲ್ಕೈದು ದಿನಗಳಲ್ಲಿ ಅದು ಸಹಜ ಸ್ಥಿತಿಗೆ ಬರಲಿದೆ ಎನ್ನುತ್ತಿವೆ ಮೂಲಗಳು. ಇನ್ನು ಸಿನಿಮಾದ ಚಿತ್ರೀಕರಣಗಳೂ ನಿಂತಿವೆ.
ಕಾರ್ಮಿಕರಿಗೆ ನಿತ್ಯ ಪೇಮೆಂಟ್ ಕೊಡುವಲ್ಲಿ ನೋಟಿನ ಸಮಸ್ಯೆ ಉಂಟಾಗಿದ್ದರಿಂದ ಎಷ್ಟೋ ನಿರ್ಮಾಪಕರು, ಚಿತ್ರೀಕರಣ ನಿಲ್ಲಿಸುವುದೇ ಸೂಕ್ತವೆಂಬ ನಿರ್ಧಾರಕ್ಕೆ ಬಂದಿದ್ದಾರಂತೆ. ಒಟ್ಟಾರೆ ನೋಟಿನ ಬಿಸಿ, ಚಿತ್ರೋದ್ಯಮದ ಎಲ್ಲಾ ವಲಯಗಳಿಗೂ ತಾಗಿದೆ. ಮುಂದೆ ಅದು, ನಟ-ನಟಿಯರ ಸಂಭಾವನೆಗೂ ತಟ್ಟಲಿದ್ದು, ಸಹಜವಾಗಿಯೇ ಆ ವಿದ್ಯಮಾನಗಳು ಕುತೂಹಲ ಹುಟ್ಟಿಸಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.