
Divya Bhaarti Tragic Death and Last Dialogue Secret to know here: ದಿವ್ಯಾ ಭಾರತಿ ಸಾವಿನ ಹಿಂದಿನ ಆ ಭಯಾನಕ ಸತ್ಯ! "ನನ್ನನ್ನು ಉಳಿಸಿ" ಎಂದಿದ್ದೇ ಕೊನೆ.. ಬಿಟೌನ್ ಕಂಡ ಅತಿದೊಡ್ಡ ದುರಂತದ ಕಥೆ ಬಿಚ್ಚಿಟ್ಟ ಅನೀಸ್ ಬಜ್ಮಿ
ಬಾಲಿವುಡ್ ಇತಿಹಾಸದಲ್ಲಿ ದಿವ್ಯಾ ಭಾರತಿ (Divya Bharati) ಎಂಬ ಹೆಸರು ಒಂದು ಮಿಂಚಿನಂತೆ ಬಂದು ಮಾಯವಾದ ಸುಂದರ ಪಯಣ. ಕೇವಲ 19ನೇ ವಯಸ್ಸಿಗೆ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ಈ ನಟಿ, ಅಷ್ಟೇ ವೇಗವಾಗಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದು ಇಂದಿಗೂ ಒಂದು ಬಗೆಹರಿಯದ ರಹಸ್ಯವೇ ಸರಿ.
ಇತ್ತೀಚೆಗೆ ಖ್ಯಾತ ನಿರ್ದೇಶಕ ಅನೀಸ್ ಬಜ್ಮಿ ಅವರು ದಿವ್ಯಾ ಭಾರತಿ ಅವರ ಸಾವಿಗೂ ಒಂದು ದಿನ ಮೊದಲು ನಡೆದ ಕೆಲವು ಕಹಿ ಘಟನೆಗಳನ್ನು ನೆನಪಿಸಿಕೊಂಡಿದ್ದು, ಚಿತ್ರಪ್ರೇಮಿಗಳ ಕಣ್ಣಾಲಿಗಳು ತೇವವಾಗುವಂತೆ ಮಾಡಿದ್ದಾರೆ.
ಅನೀಸ್ ಬಜ್ಮಿ ಅವರ ಪ್ರಕಾರ, 1994ರ ಸೂಪರ್ ಹಿಟ್ ಸಿನಿಮಾ 'ಲಾಡ್ಲಾ' (Laadla) ಮೊದಲು ಚಿತ್ರೀಕರಣಗೊಂಡಿದ್ದು ದಿವ್ಯಾ ಭಾರತಿ ಅವರೊಂದಿಗೆ. ಚೆನ್ನೈನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದಾಗ ದಿವ್ಯಾ ಅವರ ಒಂದು ದೃಶ್ಯವನ್ನು ಚಿತ್ರೀಕರಿಸಲಾಗಿತ್ತು.
ಆ ದೃಶ್ಯದಲ್ಲಿ ಮುಖವಾಡ ಧರಿಸಿದ ವ್ಯಕ್ತಿಗಳು ದಿವ್ಯಾ ಅವರನ್ನು ಎಳೆದುಕೊಂಡು ಹೋಗುತ್ತಿರುತ್ತಾರೆ. ಕ್ಯಾಮೆರಾದಿಂದ ದೂರ ಹೋಗುತ್ತಿದ್ದ ದಿವ್ಯಾ ಭಾರತಿ ಅಂದು ಹೇಳಿದ ಕೊನೆಯ ಸಂಭಾಷಣೆ (Dialogue) "ಮುಜೆ ಬಚಾವೋ" (ನನ್ನನ್ನು ಉಳಿಸಿ!).
ವಿಧಿಯಾಟ ನೋಡಿ, ಈ ದೃಶ್ಯ ಚಿತ್ರೀಕರಣಗೊಂಡ ಮರುದಿನವೇ ದಿವ್ಯಾ ಭಾರತಿ ಅವರು ಮುಂಬೈನ ತಮ್ಮ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದರು. ಅವರು ಸಿನಿಮಾದಲ್ಲಿ ಅರಚಿದ ಆ ಕೊನೆಯ ಮಾತು ನಿಜಜೀವನದಲ್ಲೂ ಅವರ ಕೊನೆಯ ಕ್ಷಣಗಳ ಅಳಲಾಗಿತ್ತೇ ಎಂಬುದು ಇಂದಿಗೂ ಚಿತ್ರತಂಡವನ್ನು ಕಾಡುವ ಭಯಾನಕ ಕಾಕತಾಳೀಯ.
ಕನ್ನಡದ 'ಅನುರಾಗ ಅರಳಿತು' ಮತ್ತು ಶ್ರೀದೇವಿ ಎಂಟ್ರಿ:
ವಿಶೇಷವೆಂದರೆ, ಈ 'ಲಾಡ್ಲಾ' ಸಿನಿಮಾ ನಮ್ಮ ಹೆಮ್ಮೆಯ ವರನಟ ಡಾ. ರಾಜ್‌ಕುಮಾರ್ ಅಭಿನಯದ 'ಅನುರಾಗ ಅರಳಿತು' ಚಿತ್ರದ ಅಧಿಕೃತ ರಿಮೇಕ್ ಆಗಿತ್ತು. ದಿವ್ಯಾ ಭಾರತಿ ಮರಣದ ಹೊತ್ತಿಗೆ ಈ ಚಿತ್ರ ಶೇ. 95ರಷ್ಟು ಪೂರ್ಣಗೊಂಡಿತ್ತು. ಆದರೆ ಅವರ ಸಾವಿನಿಂದಾಗಿ ಇಡೀ ಸಿನಿಮಾವನ್ನು ಮತ್ತೊಮ್ಮೆ ಚಿತ್ರೀಕರಿಸಬೇಕಾದ ಅನಿವಾರ್ಯತೆ ಎದುರಾಯಿತು.
ಆಗ ಚಿತ್ರತಂಡಕ್ಕೆ ನೆನಪಾಗಿದ್ದೇ 'ಅತಿಲೋಕ ಸುಂದರಿ' ಶ್ರೀದೇವಿ. ಆದರೆ ಶ್ರೀದೇವಿ (Sridevi) ಈ ಕಥೆಯ ತಮಿಳು ಆವೃತ್ತಿ (ರಜನಿಕಾಂತ್ ಜೊತೆಗಿನ 'ಮನ್ನನ್') ಮತ್ತು ತೆಲುಗು ಆವೃತ್ತಿಯನ್ನು (ಚಿರಂಜೀವಿ ಜೊತೆಗಿನ 'ಘರಾನಾ ಮೊಗುಡು') ಈಗಾಗಲೇ ತಿರಸ್ಕರಿಸಿದ್ದರು. ಹೀಗಾಗಿ ಅವರು ಹಿಂದಿ ರಿಮೇಕ್ ಮಾಡುವುದು ಅನುಮಾನವಾಗಿತ್ತು. ಆದರೆ ಅನೀಸ್ ಬಜ್ಮಿ ಅವರು ಶ್ರೀದೇವಿಯವರ ಮನವೊಲಿಸಲು ಚಿತ್ರಕಥೆಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿ, ಅಂತಿಮವಾಗಿ ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾದರು.
ದಿವ್ಯಾ ಭಾರತಿ ಸಾವಿನ ನಂತರ ಇಡೀ ಚಿತ್ರತಂಡ ಆಘಾತಕ್ಕೊಳಗಾಗಿತ್ತು. ಸುಮಾರು ಎರಡು ತಿಂಗಳ ಕಾಲ ಯಾವುದೇ ಕೆಲಸಗಳು ನಡೆಯಲಿಲ್ಲ. ನಿರ್ಮಾಪಕರಿಗೆ ಹಣದ ನಷ್ಟಕ್ಕಿಂತಲೂ ಒಬ್ಬ ಅದ್ಭುತ ನಟಿಯನ್ನು ಕಳೆದುಕೊಂಡ ನೋವು ಹೆಚ್ಚಾಗಿತ್ತು. ದಿವ್ಯಾ ಬದುಕಿದ್ದರೆ 'ಲಾಡ್ಲಾ' ಜೊತೆಗೆ 'ಅಂಗರಕ್ಷಕ್' ಸಿನಿಮಾವನ್ನೂ ಅವರೇ ಮಾಡಬೇಕಿತ್ತು.
ಅಂತಿಮವಾಗಿ ಶ್ರೀದೇವಿ ಅವರು ದಿವ್ಯಾ ಅವರ ಸ್ಥಾನವನ್ನು ತುಂಬಿದರು ಮತ್ತು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತು. ಆದರೂ, ಶೂಟಿಂಗ್ ಸೆಟ್‌ನಲ್ಲಿ ದಿವ್ಯಾ ಭಾರತಿ ಅವರ ನೆನಪುಗಳು ಚಿತ್ರತಂಡವನ್ನು ಸದಾ ಕಾಡುತ್ತಿದ್ದವು ಎನ್ನುತ್ತಾರೆ ಅನೀಸ್ ಬಜ್ಮಿ. 1993 ಏಪ್ರಿಲ್ 5ರಂದು ದಿವ್ಯಾ ಭಾರತಿ ನಮ್ಮನ್ನು ಅಗಲಿದರು, ಆದರೆ ಅವರು ಬಿಟ್ಟು ಹೋದ ಆ 'ನನ್ನನ್ನು ಉಳಿಸಿ' ಎಂಬ ಕೊನೆಯ ಮಾತು ಮಾತ್ರ ಇಂದಿಗೂ ಬಾಲಿವುಡ್‌ನ ಅತ್ಯಂತ ನೋವಿನ ನೆನಪಾಗಿ ಉಳಿದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.