
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಹುಟ್ಟುಹಬ್ಬದ ಸಂಭ್ರಮ ಜೋರಾಗಿದೆ. ಈ ವಿಶೇಷ ದಿನದಂದು ನಿರ್ದೇಶಕ ಪ್ರಶಾಂತ್ ನೀಲ್ ಅವರ ಪತ್ನಿ ಲಿಖಿತಾ ರೆಡ್ಡಿ ಕೂಡ ಪ್ರಭಾಸ್‌ಗೆ ಸ್ಪೆಷಲ್ ಬರ್ತ್‌ಡೇ ವಿಶಸ್ ತಿಳಿಸಿದ್ದಾರೆ. ಪ್ರಭಾಸ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿರುವ ಅವರು, 'ನನ್ನ ಫೌಜಿ ಹುಟ್ಟುಹಬ್ಬದ ಶುಭಾಶಯಗಳು' ಎಂದು ಬರೆದಿರುವ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದರ ಜೊತೆಗೆ ಪ್ರಭಾಸ್-ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಬಹುನಿರೀಕ್ಷಿತ ‘ಸಲಾರ್ 2’ ಸೀಕ್ವೆಲ್ ಬಗ್ಗೆಯೂ ಮತ್ತೊಂದು ಅಪ್‌ಡೇಟ್ ಸಿಕ್ಕಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಎಕ್ಸ್‌ನಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡು ‘ಸಲಾರ್’ ಗ್ಯಾಂಗ್ ರೀಯೂನಿಯನ್ ಫೋಟೋವನ್ನು ಶೇರ್ ಮಾಡಿದೆ.
ಪ್ರಭಾಸ್‌ಗೆ ಲಿಖಿತಾ ರೆಡ್ಡಿ ಸ್ಪೆಷಲ್ ವಿಶಸ್!
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಬರ್ತ್‌ಡೇ ವಿಶಸ್ ತಿಳಿಸುತ್ತಿದ್ದಾರೆ. ಈ ನಡುವೆ ನಿರ್ದೇಶಕ ಪ್ರಶಾಂತ್ ನೀಲ್ ಅವರ ಪತ್ನಿ ಲಿಖಿತಾ ರೆಡ್ಡಿ ಕೂಡ ಇನ್‌ಸ್ಟಾಗ್ರಾಂ ಮೂಲಕ ಪ್ರಭಾಸ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
'ನನ್ನ ಫೌಜಿಗೆ ಜನ್ಮದಿನದ ಶುಭಾಶಯಗಳು' ಎಂದು ಲಿಖಿತಾ ರೆಡ್ಡಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ‘ಅಣ್ಣಯ್ಯ’ ಎಂಬ ಹ್ಯಾಶ್‌ಟ್ಯಾಗ್ ಹಾಕಿ ಹಾರ್ಟ್ ಸಿಂಬಲ್ ಕೂಡ ಸೇರಿಸಿದ್ದಾರೆ. ಪ್ರಭಾಸ್ ಜೊತೆಗಿನ ಆತ್ಮೀಯ ಫೋಟೋವನ್ನು ಅವರು ಹಂಚಿಕೊಂಡಿದ್ದು, ಅದರಲ್ಲಿ ಪ್ರಭಾಸ್ ಲಿಖಿತಾ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡು ಮುದ್ದು ಮಾಡುತ್ತಿರುವುದು ಕಂಡುಬರುತ್ತದೆ.
ಇವರಿಬ್ಬರ ನಡುವಿನ ಅಣ್ಣ-ತಂಗಿ ಬಾಂಧವ್ಯ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇದೇ ವೇಳೆ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಜೊತೆಗಿರುವ ಮತ್ತೊಂದು ಫೋಟೋವನ್ನು ಲಿಖಿತಾ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡು ‘ಹ್ಯಾಪಿ ಬರ್ತ್‌ಡೇ’ ಎಂದು ಬರೆದಿದ್ದಾರೆ.
‘ಸಲಾರ್ 2’ ಅಪ್‌ಡೇಟ್ ಕೊಟ್ಟ ಹೊಂಬಾಳೆ ಫಿಲ್ಮ್ಸ್!
ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಮೂಡಿಬಂದ ‘ಸಲಾರ್: ಪಾರ್ಟ್ 1 - ಸೀಸ್‌ಫೈರ್’ ಸಿನಿಮಾ ಬ್ಲಾಕ್‌ಬಸ್ಟರ್ ಯಶಸ್ಸು ಕಂಡಿದ್ದು ಗೊತ್ತೇ ಇದೆ. 2023ರಲ್ಲಿ ಬಿಡುಗಡೆಯಾದ ಈ ಹೈ-ವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಇದೀಗ ಈ ಕ್ರೇಜಿ ಕಾಂಬಿನೇಷನ್ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದೆ. ಪ್ರಭಾಸ್ ಹುಟ್ಟುಹಬ್ಬದ ವಿಶೇಷವಾಗಿ ‘ಸಲಾರ್ 2’ ಸೀಕ್ವೆಲ್ ಬಗ್ಗೆ ಮೇಕರ್ಸ್ ಅಧಿಕೃತವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.
'ಸ್ಪೆಷಲ್ ಡೇ.. ಸ್ಪೆಷಲ್ ರೀಯೂನಿಯನ್.. ನಮ್ಮ ಒನ್ ಅಂಡ್ ಓನ್ಲಿ ವೈಲೆಂಟ್ ಮ್ಯಾನ್ ಪ್ರಭಾಸ್‌ಗೆ ಹುಟ್ಟುಹಬ್ಬದ ಶುಭಾಶಯಗಳು. ‘ಸಲಾರ್ 2’ ಮೂಲಕ ಈ ಡೈನಮೈಟ್ ಜೋಡಿಯನ್ನು ಮತ್ತೊಮ್ಮೆ ಆ್ಯಕ್ಷನ್‌ನಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದೇವೆ' ಎಂದು ‘ಸಲಾರ್’ ತಂಡ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಜೊತೆಗೆ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋವನ್ನೂ ಹಂಚಿಕೊಂಡಿದೆ. ಆದರೆ ‘ಸಲಾರ್ 2’ ಶೂಟಿಂಗ್ ಯಾವಾಗ ಆರಂಭವಾಗಲಿದೆ ಎಂಬುದರ ಬಗ್ಗೆ ಮಾತ್ರ ಮೇಕರ್ಸ್ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ.
‘ಡ್ರ್ಯಾಗನ್’ ನಂತರ ‘ಸಲಾರ್ 2’ ಮೇಲೆ ಫೋಕಸ್..?
ಪ್ರಶಾಂತ್ ನೀಲ್ ಸದ್ಯ ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್ ನಾಯಕನಾಗಿ ನಟಿಸುತ್ತಿರುವ ‘ಡ್ರ್ಯಾಗನ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಪ್ರೇಕ್ಷಕರ ಮುಂದೆ ಬರುವ ನಿರೀಕ್ಷೆಯಿದೆ. ‘ಡ್ರ್ಯಾಗನ್’ ಪ್ರಾಜೆಕ್ಟ್ ಪೂರ್ಣಗೊಂಡ ಬಳಿಕ ಪ್ರಶಾಂತ್ ನೀಲ್ ‘ಸಲಾರ್ 2’ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಸಿನಿಮಾ ಶೂಟಿಂಗ್ ಯಾವಾಗ ಶುರುವಾಗಲಿದೆ? ಚಿತ್ರ ಯಾವಾಗ ಬಿಡುಗಡೆಯಾಗಲಿದೆ? ಎಂಬ ಪ್ರಶ್ನೆಗಳಿಗೆ ಇನ್ನೂ ಅಧಿಕೃತ ಉತ್ತರ ಸಿಕ್ಕಿಲ್ಲ. ವಾಸ್ತವವಾಗಿ ‘ಸಲಾರ್’ ಪಾರ್ಟ್-1 ಬಿಡುಗಡೆಯಾದ ತಕ್ಷಣವೇ ‘ಸಲಾರ್ 2: ಶೌರ್ಯಾಂಗಪರ್ವಂ’ ಸಿನಿಮಾವನ್ನು ಸೆಟ್ಟೇರಿಸಲಾಗುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು.
ಆದರೆ ಪ್ರಭಾಸ್ ಈಗಾಗಲೇ ಹಲವು ಸಿನಿಮಾಗಳಿಗೆ ಕಮಿಟ್ ಆಗಿದ್ದರು. ಮತ್ತೊಂದೆಡೆ ಪ್ರಶಾಂತ್ ನೀಲ್ ಕೂಡ ‘ಡ್ರ್ಯಾಗನ್’ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾದರು. ಅಂದಿನಿಂದ ಪ್ರತೀ ವರ್ಷ ಪ್ರಭಾಸ್ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಸಲಾರ್ 2’ ಬಗ್ಗೆ ಮೇಕರ್ಸ್ ಯಾವುದಾದರೂ ಪೋಸ್ಟ್ ಹಂಚಿಕೊಳ್ಳುವುದು ಒಂದು ರೀತಿಯ ಟ್ರೆಂಡ್ ಆಗಿಬಿಟ್ಟಿದೆ. ಆದರೆ ಸಿನಿಮಾ ಯಾವಾಗ ಸೆಟ್ಟೇರಲಿದೆ ಎಂಬುದು ಮಾತ್ರ ಇನ್ನೂ ಸಸ್ಪೆನ್ಸ್ ಆಗಿಯೇ ಉಳಿದಿದೆ. ಸಿನಿಮಾ ಯಾವಾಗ ಬಂದರೂ ಈ ಬಾರಿ ಪ್ರಭಾಸ್-ನೀಲ್ ಕಾಂಬಿನೇಷನ್ ಸೃಷ್ಟಿಸಲಿರುವ ‘ವಿಧ್ವಂಸ’ ಸಾಮಾನ್ಯವಾಗಿರುವುದಿಲ್ಲ ಎಂಬ ವಿಶ್ವಾಸದಲ್ಲಿದ್ದಾರೆ ಅಭಿಮಾನಿಗಳು.
‘ಸಲಾರ್’ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದರು. ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು, ಬಾಬಿ ಸಿಂಹ ಹಾಗೂ ಶ್ರಿಯಾ ರೆಡ್ಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಪ್ರಭಾಸ್ ಅವರನ್ನು ಪವರ್‌ಫುಲ್ ಆ್ಯಕ್ಷನ್ ಅವತಾರದಲ್ಲಿ ತೋರಿಸಿದ್ದ ಪ್ರಶಾಂತ್ ನೀಲ್, ತಮ್ಮದೇ ಶೈಲಿಯ ಮೇಕಿಂಗ್, ಅದ್ಧೂರಿ ಆ್ಯಕ್ಷನ್ ಸೀಕ್ವೆನ್ಸ್‌ಗಳು ಹಾಗೂ ಮಾಸ್ ಎಲಿಮೆಂಟ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಇನ್ನು ‘ಸಲಾರ್’ ಸಿನಿಮಾ ಸಾಧಿಸಿದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ‘ಸಲಾರ್ 2’ ಮೇಲೆ ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗಿವೆ. ಪ್ರಭಾಸ್-ಪ್ರಶಾಂತ್ ನೀಲ್ ಜೋಡಿ ಮತ್ತೆ ಒಂದಾಗುತ್ತಿರುವುದರಿಂದ, ಈ ಸೀಕ್ವೆಲ್ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.