
ಬೆಂಗಳೂರು (ಸೆ. 22): ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಈ ಬಾರಿ ಲಂಡನ್ ಕತೆ ಹೇಳಲಿದ್ದಾರೆ. ದೇಶ ಸುತ್ತು ಕೋಶ ಓದು ಅನ್ನುವ ಮಾತನ್ನು ಬೇರೆ ಯಾರು ಪಾಲಿಸಿದರೋ ಇಲ್ಲವೋ. ಆ ಗಾದೆಯನ್ನು ಅಕ್ಷರಶಃ ಪಾಲಿಸಿದ್ದು ನಾಗತಿಹಳ್ಳಿ ಮೇಷ್ಟ್ರು.
ಅದಕ್ಕೆ ತಕ್ಕಂತೆ ಅವರು ತಮ್ಮ ಸಿನಿಮಾಗಳನ್ನೂ ಬೇರೆ ಬೇರೆ ದೇಶದಲ್ಲಿ ಚಿತ್ರೀಕರಣ ನಡೆಸಿದರು. ಅಷ್ಟೇ ಅಲ್ಲ, ತಮ್ಮ ಚಿತ್ರದ ಹೆಸರುಗಳನ್ನೂ ಆಯಾ ಚಿತ್ರದ ಕತೆಗೆ ತಕ್ಕಂತೆ ಆ ದೇಶದ ಹೆಸರೂ ಬರುವಂತೆ ಇಟ್ಟರು. ಅದಕ್ಕೆ ಉದಾಹರಣೆ ಅಮೆರಿಕಾ ಅಮೆರಿಕಾ, ಪ್ಯಾರಿಸ್ ಪ್ರಣಯ. ಇದೀಗ ಅವರು ಮತ್ತೊಂದು ದೇಶದ ಮೇಲೆ ಪ್ರೀತಿ ತೋರಿಸಿದ್ದಾರೆ. ಅದು ಲಂಡನ್.
ಈಗಾಗಲೇ ಲಂಡನ್‌ನಲ್ಲಿ ಒಂದು ಹಂತದ ಚಿತ್ರೀಕರಣ ಮುಗಿಸಿಕೊಂಡಿರುವ ಅವರು ತಮ್ಮ ಚಿತ್ರಕ್ಕೆ ಲವ್ ಇನ್ ಲಂಡನ್ ಎಂಬ ಟೈಟಲ್ ಫಿಕ್ಸ್ ಮಾಡಿದ್ದಾರೆ. ಮಾನ್ವಿತಾ ಹರೀಶ್ ಮತ್ತು ವಶಿಷ್ಟ ಸಿಂಹ ಈ ಚಿತ್ರದ ನಾಯಕ, ನಾಯಕಿ. ತನ್ನ ದನಿಯಿಂದಲೇ ಖ್ಯಾತಿ ಗಳಿಸಿದ ವಶಿಷ್ಟ ಸಿಂಹರನ್ನು ಈ ಚಿತ್ರದಲ್ಲಿ ನಾಯಕನ ಸ್ಥಾನ ನೀಡಿಗೆ ನಾಗತಿಹಳ್ಳಿಯವರಿಗೆ ಸಲ್ಲುತ್ತದೆ.
ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿದಿದ್ದು, ಇನ್ನು ಎರಡು ಹಂತದ ಚಿತ್ರೀಕರಣ ಬಾಕಿ ಇದೆ. ಬೆಂಗಳೂರಿನ ಹಳೆಯ ಬ್ರಿಟಿಷ್ ಕಾಲನಿಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.