
ಬೆಂಗಳೂರು (ಅ.30): ನಟ ಧನ್ವೀರ್ ಗೌಡ ಹಾಗೂ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ನಡುವೆ 10 ಕೋಟಿ ರೂ. ವ್ಯವಹಾರದ ಮನಸ್ತಾಪ ಹಾಗೂ ಜಟಾಪಟಿ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇಷ್ಟೂ ದಿನ ಕೇವಲ ವೈಯಕ್ತಿಕ ಅಥವಾ ವ್ಯವಹಾರಿಕ ಭಿನ್ನಾಭಿಪ್ರಾಯ ಎನ್ನಲಾಗುತ್ತಿದ್ದ ಈ ಪ್ರಕರಣಕ್ಕೆ ಇದೀಗ ಭೂಗತ ಲೋಕದ (Underworld) ನಂಟು ಅಂಟಿಕೊಂಡಿದೆಯಾ ಎಂಬ ಗಂಭೀರ ಅನುಮಾನಗಳು ಸ್ಯಾಂಡಲ್‌ವುಡ್‌ನಲ್ಲಿ ದಟ್ಟವಾಗಿವೆ.
ನಟ ಧನ್ವೀರ್ ಭೂಗತ ಪಾತಕಿಗಳ ಜೊತೆ ಆಪ್ತತೆ ಹೊಂದಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದು, ಅದಕ್ಕೆ ಪುಷ್ಟಿ ನೀಡುವಂತೆ ವೀಡಿಯೋ ಒಂದೂ ವೈರಲ್ ಆಗಿದೆ.
ಸುದ್ದಿ ಮೂಲಗಳ ಪ್ರಕಾರ, ಚರ್ಚೆಯ ಮುಂಚೂಣಿಯಲ್ಲಿರುವುದು ಭೂಗತ ಪಾತಕಿ ಮನ್ವಿತ್ ರೈ ಹೆಸರು. ನಟ ಧನ್ವೀರ್ ಅವರು ಮನ್ವಿತ್ ರೈ ಜೊತೆಗೆ ಕಾಣಿಸಿಕೊಂಡಿರುವ ಕೆಲವು ವೀಡಿಯೋಗಳು ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಲ್-ಚಲ್ ಎಬ್ಬಿಸಿವೆ. ಇದರಿಂದಾಗಿ ಧನ್ವೀರ್‌ಗೆ ರೌಡಿಶೀಟರ್‌ಗಳು ಮತ್ತು ಭೂಗತ ಲೋಕದ ಜೊತೆ ನಂಟು ಇದೆಯಾ ಎಂಬ ಪ್ರಶ್ನೆಗಳು ಹುಟ್ಟುಕೊಂಡಿವೆ. ಅಷ್ಟೇ ಅಲ್ಲದೆ, ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ನಡುವೆ ಆರಂಭದಲ್ಲಿ ಉತ್ತಮ ಸ್ನೇಹವಿತ್ತು. ಆದರೆ ಧನ್ವೀರ್ ಅವರು ವಿಜಯಲಕ್ಷ್ಮಿ ಅವರಿಂದ ದೂರವಾಗಲು ಮತ್ತು ಇಬ್ಬರ ನಡುವೆ ಬಿರುಕು ಮೂಡಲು ಈ ಮನ್ವಿತ್ ರೈ ಹಾಗೂ ಆತನ ಆಪ್ತರು ಕಾರಣರಾದರಾ ಎಂಬ ಸಂಶಯ ವ್ಯಕ್ತವಾಗಿದೆ.
ಇಡೀ ಪ್ರಕರಣದಲ್ಲಿ ಮತ್ತೋರ್ವ ಪ್ರಮುಖ ವ್ಯಕ್ತಿ ಗೌರವ್ ಶೆಟ್ಟಿ ಹೆಸರು ತೀವ್ರ ಸದ್ದು ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ವಿಜಯಲಕ್ಷ್ಮಿ ಅವರ ಜೊತೆ ಗೌರವ್ ಶೆಟ್ಟಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಈತ ಪಾತಕಿ ಮನ್ವಿತ್ ರೈಗೆ ತೀರಾ ಆಪ್ತ ಅಥವಾ ಬಲಗೈ ಬಂಟ ಎನ್ನಲಾಗಿದೆ. ಗಮನಾರ್ಹ ಸಂಗತಿಯೆಂದರೆ, ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದ ಅಡಿಯಲ್ಲೂ ಇದೇ ಗೌರವ್ ಶೆಟ್ಟಿ ಹೆಸರು ಕೇಳಿಬಂದಿತ್ತು. ಈ ಹಿಂದೆ ನಟ ದರ್ಶನ್ ಅವರಿಗೂ ಮನ್ವಿತ್ ರೈ ಜೊತೆ ಆಪ್ತತೆ ಇತ್ತೇ ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಪ್ರಸ್ತುತ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಜೈಲಿನಲ್ಲಿರುವ ದರ್ಶನ್ ಅವರಿಗೆ ಹಿನ್ನೆಲೆಯಲ್ಲಿ ಸಾಥ್ ನೀಡಲು ಅಥವಾ ವಿಚಾರಗಳನ್ನು ನಿರ್ವಹಿಸಲು ಮನ್ವಿತ್ ರೈ ಮತ್ತು ಪಡೆ ಸಕ್ರಿಯವಾಗಿದೆಯಾ ಎಂಬ ಅನುಮಾನಗಳು ವ್ಯಕ್ತವಾಗಿವೆ.
ಧನ್ವೀರ್ ಹಾಗೂ ವಿಜಯಲಕ್ಷ್ಮಿ ನಡುವಿನ ವೈಮನಸ್ಸು ಬಹಿರಂಗಗೊಳ್ಳುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳು ಮತ್ತು ಪರೋಕ್ಷ ಪೋಸ್ಟ್‌ಗಳ ಯುದ್ಧವೇ ನಡೆದಿತ್ತು. ಇದೀಗ ಭೂಗತ ಲೋಕದ ನಂಟು ಹಾಗೂ ರೇಣುಕಸ್ವಾಮಿ ಪ್ರಕರಣದ ಸಾಕ್ಷಿ ಬೆದರಿಕೆಯ ಆರೋಪಿಗಳ ಹೆಸರುಗಳು ಬಹಿರಂಗವಾಗಿರುವುದರಿಂದ ಪೊಲೀಸ್ ತನಿಖಾ ಸಂಸ್ಥೆಗಳು ಈ ಹೊಸ ವಿದ್ಯಮಾನವನ್ನು ಗಂಭೀರವಾಗಿ ಪರಿಶೀಲಿಸುವ ಸಾಧ್ಯತೆಯಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.