
ಬಾಲಿವುಡ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮಗಳಿಗೆ 'ದೇವಿ ಪಡುಕೋಣೆ ಸಿಂಗ್' ಎಂದು ಹೆಸರಿಡುವ ನಿರ್ಧಾರವು ಸೆಲೆಬ್ರಿಟಿ ಹೆಸರುಗಳ ಗಡಿ ದಾಟಿ ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ. ಮಗುವಿಗೆ ತಂದೆ ಮತ್ತು ತಾಯಿ ಇಬ್ಬರ ಉಪನಾಮಗಳನ್ನು (ಸೇರ್‌ನೇಮ್) ನೀಡುವುದು ನಿಜವಾದ ಸ್ತ್ರೀವಾದದ ಸಂಕೇತವೇ ಅಥವಾ ಕೇವಲ ಸಾಮಾಜಿಕ ಮಾಧ್ಯಮದಲ್ಲಿ ಸಬಲೀಕರಣಗೊಂಡಂತೆ ಕಾಣಿಸಿಕೊಳ್ಳುವ ಪ್ರದರ್ಶನವೇ ಎಂಬ ಪ್ರಮುಖ ಪ್ರಶ್ನೆ ಎದ್ದಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಖ್ಯಾತ ಇನ್ಫ್ಲುಯೆನ್ಸರ್ ಸಿಮ್ರಿಧಿ ಮಖಿಜಾ ಅವರು ವೀಡಿಯೊ ಒಂದನ್ನು ಹಂಚಿಕೊಳ್ಳುವ ಮೂಲಕ ಈ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ. ಅದೇನೆಂದರೆ, ಎರಡು ಉಪನಾಮಗಳನ್ನು ಹೊಂದಿರುವ ವ್ಯಕ್ತಿ ಬೆಳೆದು ಮತ್ತೊಬ್ಬ ಎರಡು ಉಪನಾಮಗಳನ್ನು ಹೊಂದಿರುವ ವ್ಯಕ್ತಿಯನ್ನು ವಿವಾಹವಾದಾಗ, ಅವರ ಮಗುವಿಗೆ ನಾಲ್ಕು, ಮುಂದಿನ ಪೀಳಿಗೆಯಲ್ಲಿ ಎಂಟು ಉಪನಾಮಗಳು ಸಿಗುತ್ತವೆಯೇ? ಎಂದು ಅವರು ತಾರ್ಕಿಕವಾಗಿ ಪ್ರಶ್ನಿಸಿದ್ದಾರೆ.
ಮಗುವಿನ ಹೆಸರಿನಲ್ಲಿರುವ ಉಪನಾಮಗಳ ಸಂಖ್ಯೆಯು ಪುರುಷ ಮತ್ತು ಮಹಿಳೆಯರ ನಡುವಿನ ನಿಜವಾದ ಸಮಾನತೆಯನ್ನು ಪ್ರತಿನಿಧಿಸುವುದಿಲ್ಲ. ಇಂದಿನ ಸ್ತ್ರೀವಾದವು ನಿಜ ಜೀವನದ ಬದಲಾವಣೆಗಿಂತ ಸಾಮಾಜಿಕ ಮಾಧ್ಯಮಗಳಲ್ಲಿ ಸಬಲೀಕರಣಗೊಂಡಂತೆ ಕಾಣಿಸಿಕೊಳ್ಳುವುದಕ್ಕೇ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಅನುವಂಶಿಕ ಕಾನೂನುಗಳು, ಪಿತೃತ್ವ ರಜೆ ಮತ್ತು ಕಡ್ಡಾಯ ಪ್ರಸವಾನಂತರದ ಆರೈಕೆಯಂತಹ ರಚನಾತ್ಮಕ ಹಾಗೂ ಕಾನೂನಾತ್ಮಕ ಹೋರಾಟಗಳ ಬದಲು, ಹೆಸರಿನಂತಹ ಸಾಂಕೇತಿಕ ವಿಷಯಗಳ ಮೇಲೆ ಹೆಚ್ಚು ಗಮನ ಹರಿಸುವುದರಿಂದ ನೈಜ ಸಮಸ್ಯೆಗಳು ಮರೆಮಾಚುವ ಅಪಾಯವಿದೆ ಎಂದು ಮಖಿಜಾ ಪ್ರತಿಪಾದಿಸಿದ್ದಾರೆ.
ಈ ವೀಡಿಯೊ ಪ್ರಕಟವಾದ ಬೆನ್ನಲ್ಲೇ ನೆಟ್ಟಿಗರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಂಕೇತಿಕ ಪ್ರದರ್ಶನ ಮತ್ತು ನಿಜವಾದ ಸಬಲೀಕರಣದ ನಡುವಿನ ವ್ಯತ್ಯಾಸವನ್ನು ಬೆಟ್ಟು ಮಾಡಿದ ಮಖಿಜಾ ಅವರ ಆಲೋಚನೆ ಮತ್ತು ಪ್ರಬುದ್ಧತೆ ಶ್ಲಾಘಿಸಿದ್ದಾರೆ. ಮಗುವಿಗೆ ಹೆಸರಿಡುವುದು ಸಂಪೂರ್ಣವಾಗಿ ದಂಪತಿಗಳ ವೈಯಕ್ತಿಕ ನಿರ್ಧಾರ. ಪ್ರತಿಯೊಂದರಲ್ಲೂ ಅಭಿಪ್ರಾಯ ವ್ಯಕ್ತಪಡಿಸುವುದು ಸೂಕ್ತವಲ್ಲ ಹಾಗೂ ಇತರರ ನಿರ್ಧಾರ ಮತ್ತು ದೃಷ್ಟಿಕೋನಗಳನ್ನು ಗೌರವಿಸುವುದು ಸಹ ಸ್ತ್ರೀವಾದದ ಪ್ರಮುಖ ಭಾಗ ಎಂದು ಕೆಲವರು ವಾದಿಸಿದ್ದಾರೆ.
ಇನ್ನು ಹುಟ್ಟದೇ ಇರುವ ಮುಂದಿನ ಪೀಳಿಗೆಯ ಮಕ್ಕಳ ಹೆಸರುಗಳ ಬಗ್ಗೆ ಈಗಲೇ ಊಹೆ ಮಾಡುವುದು ತರ್ಕರಹಿತ. ಬೆಳೆದ ನಂತರ ಮಕ್ಕಳು ತಮ್ಮ ಹೆಸರನ್ನು 'ದೇವಿ ಪಿಎಸ್' ಅಥವಾ 'ದುವಾ ಪಿಎಸ್' ಎಂದು ಕರೆಯಿಸಿಕೊಳ್ಳಲು ತಾವೇ ನಿರ್ಧರಿಸಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.