
ಬೆಂಗಳೂರು (ಸೆ.26): ಚಿತ್ರನಟ ದರ್ಶನ್ ತೂಗುದೀಪ ಹಾಗೂ ಪವಿತ್ರಾ ಗೌಡ ಸುತ್ತಲಿನ ಪ್ರಕರಣಗಳು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು, ದರ್ಶನ್ ಅವರ ಸಂಕಷ್ಟಗಳು ಒಂದಾದ ಮೇಲೊಂದರಂತೆ ಹೆಚ್ಚಾಗುತ್ತಿವೆ. ಇದೀಗ ಪವಿತ್ರಾ ಗೌಡ ಅವರ ಆರ್‌ಆರ್ ನಗರದ ಮನೆ ಗೃಹಪ್ರವೇಶದ ವೇಳೆ ದರ್ಶನ್ ಮತ್ತು ಪವಿತ್ರಾ ಗೌಡ ಪರಸ್ಪರ ಹಾರ ಬದಲಾಯಿಸಿಕೊಂಡಿರುವ ಅಚ್ಚರಿಯ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗುತ್ತಿವೆ. ಇದಕ್ಕೂ ಮುನ್ನ ಇವರಿಬ್ಬರು ಹಾರ ಬದಲಾಯಿಸಿಕೊಂಡಿದ್ದ ಫೋಟೋಗಳು ವೈರಲ್ ಆಗಿದ್ದವು. ಈಗ ಇಡೀ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗಿದೆ.
ಲಭ್ಯವಾಗಿರುವ ಮಾಹಿತಿಯ ಪ್ರಕಾರ, 2018ರಲ್ಲಿ ರಾಜರಾಜೇಶ್ವರಿ ನಗರದಲ್ಲಿ (RR Nagar) ನಡೆದ ಪವಿತ್ರಾ ಗೌಡ ಅವರ ನೂತನ ಮನೆ ಗೃಹಪ್ರವೇಶ ಕಾರ್ಯಕ್ರಮದಲ್ಲಿ ದರ್ಶನ್ ಭಾಗಿಯಾಗಿದ್ದರು. ಈ ಸಮಾರಂಭದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ದಂಪತಿಗಳಂತೆ ಪರಸ್ಪರ ಹಾರ ಬದಲಾಯಿಸಿಕೊಂಡಿರುವುದು ವೀಡಿಯೋದಲ್ಲಿದೆ. ವಿಶೇಷವೆಂದರೆ, ಈ ದೃಶ್ಯಕ್ಕೆ ದರ್ಶನ್ ಅವರ ತಾಯಿ ಮೀನಾ ತೂಗುದೀಪ ಅವರೇ ಪ್ರತ್ಯಕ್ಷ ಸಾಕ್ಷಿಯಾಗಿದ್ದು, ಗೃಹಪ್ರವೇಶದ ಪೂಜಾ ವಿಧಿವಿಧಾನಗಳಲ್ಲಿ ಅವರೂ ಉಪಸ್ಥಿತರಿರುವುದು ವೀಡಿಯೋದಲ್ಲಿ ಕಂಡುಬಂದಿದೆ.
ಪವಿತ್ರಾ ಗೌಡ ಅವರಿಗೆ ದರ್ಶನ್ ಅವರೇ ಸುಮಾರು 2 ಕೋಟಿ ರೂಪಾಯಿ ಮೌಲ್ಯದ ಈ ಮನೆಯನ್ನು ಕೊಡಿಸಿದ್ದರು ಎಂದು ಹೇಳಲಾಗುತ್ತಿದ್ದು, 2018ರಲ್ಲಿಯೇ ಈ ಗೃಹಪ್ರವೇಶ ನಡೆದಿದೆ ಎನ್ನಲಾಗಿದೆ. ಈ ಹಿಂದೆ ಪವಿತ್ರಾ ಗೌಡ ಹಾಗೂ ದರ್ಶನ್ ದಂಪತಿಗಳಂತೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದ ಕೆಲವು ಖಾಸಗಿ ಫೋಟೋಗಳು ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದ್ದವು. ಇದೀಗ ಗೃಹಪ್ರವೇಶದಲ್ಲಿ ಹಾರ ಬದಲಾಯಿಸಿಕೊಂಡ ಹೊಸ ವೀಡಿಯೋ ಮತ್ತು ಫೋಟೋಗಳು ಹೊರಬಂದಿದ್ದು, ದರ್ಶನ್ ಅಭಿಮಾನಿಗಳಿಗೆ ಹಾಗೂ ಕಾನೂನು ಸಂಕಷ್ಟದಲ್ಲಿರುವ ದರ್ಶನ್‌ಗೆ ಮತ್ತಷ್ಟು ನುಂಗಲಾರದ ತುತ್ತಾಗಿ ಪರಿಣಮಿಸಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.