
- ಹೀಗೆ ಸಿಟ್ಟಿನಲ್ಲಿ ಮಾತನಾಡಿದ್ದು ನಿರ್ದೇಶಕ ಪ್ರದೀಪ್ ರಾಜ್. ಇವರ ಈ ಸಿಟ್ಟಿನ ಮಾತುಗಳು ಹೊರ ಬಂದಿದ್ದು ‘ಕಿರಾತಕ 2’ ಹೆಸರಿನ ಬಗ್ಗೆ. ಇವರು ಬೇರ‌್ಯಾರೂ ಅಲ್ಲ, ನಟ ಯಶ್ ಅಭಿನಯದ ‘ಕಿರಾತಕ’ ಚಿತ್ರವನ್ನು ನಿರ್ದೇಶಿಸಿದವರು. ಈಗ ಅದೇ ಹೆಸರಿನಲ್ಲಿ ಸೀಕ್ವೆಲ್ ಮಾಡುತ್ತಿದ್ದಾರೆ. ಸದ್ದಿಲ್ಲದೆ ಚಿತ್ರೀಕರಣ ಕೂಡ ಆರಂಭಿಸಿದ್ದಾರೆ. ಆದರೆ, ಇದ್ದಕ್ಕಿದಂತೆ ಇದೇ ‘ಕಿರಾತಕ ೨’ ಹೆಸರಿನಲ್ಲಿ ‘ರಾಂಬೋ 2’ ನಿರ್ದೇಶಕ ಅನಿಲ್ ಸಿನಿಮಾ ಮಾಡಲಿದ್ದಾರೆ. ಇಲ್ಲೂ ಯಶ್ ನಾಯಕನಾಗಿ ನಟಿಸಲಿದ್ದಾರೆ. ಈ ಸಿನಿಮಾ ವರಮಹಾಲಕ್ಷ್ಮೀ ಹಬ್ಬಕ್ಕೆ ಸೆಟ್ಟೇರಲಿದೆಎನ್ನುವ ಸುದ್ದಿ ನೋಡಿಯೇ ಪ್ರದೀಪ್ ರಾಜ್ ಕೆಂಡಾಮಂಡಲರಾಗಿದ್ದಾರೆ. ಹಾಗಾದರೆ ‘ಕಿರಾತಕ 2’ ಚಿತ್ರ ಯಾರ ಮಡಿಲಿಗೆ? ಈಗಾಗಲೇ ಇದೇ ಹೆಸರಿನಲ್ಲಿ ನಿರ್ದೇಶಕ ಅನಿಲ್, ಯಶ್ ಅವರಿಗೆ ಕತೆ ಹೇಳಿ ಒಪ್ಪಿಸಿದ್ದಾರೆ. ತಮಗೆ ಬ್ರೇಕ್ ನೀಡಿದ ಚಿತ್ರದ ಹೆಸರಿನಲ್ಲೇ ಸಿನಿಮಾ ಮಾಡುವುದಕ್ಕೆ ಯಶ್ ಕೂಡ ಮನಸ್ಸು ಮಾಡಿದ್ದಾರೆ. ಆದರೆ, ಸದ್ದಿಲ್ಲದೆ ಇದೇ ಹೆಸರಿನಲ್ಲಿ ಈಗಾಗಲೇ ಚಿತ್ರೀಕರಣ ಆರಂಭಿಸಿರುವ ನಿರ್ದೇಶಕ ಪ್ರದೀಪ್ ರಾಜ್ ವಾಣಿಜ್ಯ ಮಂಡಳಿ ಮೆಟ್ಟಿಲೇರುವ ಮೂಲಕ ‘ಕಿರಾತಕ 2’ ಟೈಟಲ್ ಹೊಸ ವಿವಾದಕ್ಕೆ ಸಿಕ್ಕಿಕೊಂಡಿದೆ. ರಾಕಿಂಗ್ ಸ್ಟಾರ್ ನಟನೆಯ ಚಿತ್ರವೊಂದು ಸೆಟ್ಟೇರುವ ಮುನ್ನವೇ ವಿವಾದಕ್ಕೆ ಒಳಗಾಗಿದೆ. ‘ನಾನು ಕಿರಾತಕ ೨ ಹೆಸರಿಗೆ ತಕ್ಕಂತೆಯೇ ಕತೆ ಮಾಡಿಕೊಂಡಿದ್ದಾರೆ. ನಿಮಗೇ ಗೊತ್ತಿರುವಂತೆ ಕಿರಾತಕ ಸಿನಿಮಾ ಮಾಡಿದ್ದೂ ನಾನೇ. ಪಾರ್ಟ್ ೧ನಲ್ಲಿ ಚಿತ್ರದ ನಾಯಕ ಮಂಡ್ಯ ಬಳಿಯ ಹಳ್ಳಿಯಲ್ಲಿರುತ್ತಾನೆ.
ಅದೇ ಕಿರಾತಕ ನಗರಕ್ಕೆ ಬಂದರೆ ಅಥವಾ ಕಿರಾತಕನಂತಹ ಕ್ಯಾರೆಕ್ಟರ್ ನಗರದಲ್ಲಿದ್ದರೆ ಏನಾಗುತ್ತದೆ ಎಂಬುದನ್ನು ಕಿರಾತಕ 2 ಮೂಲಕ ಹೇಳುವುದಕ್ಕೆ ಹೊರಟಿದ್ದೇನೆ. ಹೀಗಾಗಿ ಇದು ಪಕ್ಕಾ ‘ಕಿರಾತಕ’ ಚಿತ್ರದ ಮುಂದುವರಿದ ಭಾಗ. ಈ ಕಾರಣಕ್ಕೆ ಟೈಟಲ್ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ನಾನು ಈಗಾಗಲೇ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದೇನೆ’ ಎನ್ನುತ್ತಾರೆ ಪ್ರದೀಪ್ ರಾಜ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.