ಮತ್ತೆ ಕನ್ನಡಕ್ಕೆ ಬಂದ ಬಾಲಿವುಡ್ ಸಂಗೀತ ನಿರ್ದೇಶಕ!

By Web DeskFirst Published Apr 25, 2019, 10:23 AM IST
Highlights

ಕನ್ನಡದ ಪ್ರತಿಭಾವಂತ ಸಂಗೀತ ನಿರ್ದೇಶಕ ಧರ್ಮವಿಶ್‌, ಮೊದ ಮೊದಲು ತಮ್ಮ ರಾಗಗಳನ್ನು ಅನಾವರಣ ಮಾಡಿದ್ದು ಬಾಲಿವುಡ್‌ನಲ್ಲಿ. ರಾಗ್‌ ದೇಶ್‌, ಗ್ಯಾಂಗ್‌ಸ್ಟರ್‌ 3, ಮಿಡ್‌ನೈಟ್‌ ಡೆಲ್ಲಿ, 22 ಯಾರ್ಡ್ಸ್ ಸೇರಿದಂತೆ ಅನೇಕ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಹಿನ್ನೆಲೆ ಸಂಗೀತವನ್ನೂ ನೀಡಿದ್ದಾರೆ. ‘ರಥಾವರ’ ಚಿತ್ರದ ಮೂಲಕ ಕನ್ನಡಕ್ಕೆ ಮರಳಿದವರು ಈಗ ‘ಸಿಂಗ’ ಚಿತ್ರದಿಂದ ಮತ್ತೆ ಸದ್ದು ಮಾಡುತ್ತಿದ್ದಾರೆ

ಚಿರಂಜೀವಿ ಸರ್ಜಾ ಹಾಗೂ ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ಈ ಚಿತ್ರದ ಹಾಡುಗಳು ಸಾಕಷ್ಟುಗಮನ ಸೆಳೆಯುತ್ತಿವೆ. ಎರಡು ವಾರಗಳ ಹಿಂದೆಯಷ್ಟೆಚಿತ್ರದ ಮೊದಲ ಹಾಡು ಅನಾವರಣಗೊಂಡಿತು. ಈ ಹಾಡಿಗೆ ಯೂಟ್ಯೂಬ್‌ನಲ್ಲೇ ಎರಡು ಮಿಲಿಯನ್‌ ಹಿಟ್ಸ್‌ ಸಿಕ್ಕಿದೆ.

ಚೇತನ್‌ ಕುಮಾರ್‌ ಸಾಹಿತ್ಯ ಇರುವ ‘ಶಾನೆ ಟಾಪ್‌ ಆಗವ್ಳೆ’ ಎಂಬ ಹಾಡು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟುಸದ್ದು ಮಾಡಿದೆ. ಈವರೆಗೂ ಯೂ ಟ್ಯೂಬ್‌ನಲ್ಲಿ ಟ್ರೆಂಡಿಂಗ್‌, ಲೈಕ್ಸ್‌, ಹಿಟ್ಸ್‌ ದಾಖಲಾಗುತ್ತಿತ್ತು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ‘ಶಾನೆ ಟಾಪ್‌ ಆಗವ್ಳೆ’ ಹಾಡು ವಾಟ್ಸಾಪ್‌ ಸ್ಟೇಟಸ್‌ ಹಾಗೂ ಟಿಕ್‌ ಟಾಕ್‌ ಮ್ಯೂಸಿಕ್‌ ಆ್ಯಪ್‌ಗೂ ಕಾಲಿಟ್ಟಿದೆ. ಅಲ್ಲದೆ ಯೂಟ್ಯೂಬ್‌ನಲ್ಲಿ ಎರಡು ಮಿಲಿಯನ್‌ ಗಡಿ ದಾಟಿದೆ. ವಿಜಯಪ್ರಕಾಶ್‌ ಕಂಠಸಿರಿಯಲ್ಲಿ ಮೂಡಿಬಂದಿರುವ ಹಾಡಿದು. ವಿಶೇಷ ಅಂದರೆ ಟಿಕ್‌ ಟಾಕ್‌ನಲ್ಲಿ ಸುಮಾರು ಒಂದೂ ಕಾಲು ಲಕ್ಷಕ್ಕೂ ಅಧಿಕ ಮಂದಿ ಈ ಹಾಡನ್ನು ಡೌನ್‌ಲೋಡ್‌ ಮಾಡಿಕೊಂಡು ತಮ್ಮದೇ ಶೈಲಿಯಲ್ಲಿ ಪ್ರಸ್ತುತಪಡಿಸಿದ್ದಾರೆ. ‘ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದವನಿಗೆ ರಥಾವರ ದೊಡ್ಡ ಅವಕಾಶ ಕೊಟ್ಟಿತು. ಆ ನಂತರ ಬಾಲಿವುಡ್‌ಗೆ ಹೋದೆ. ಮತ್ತೆ ಬಂದಿದ್ದು ತಾರಕಾಸುರ ಚಿತ್ರಕ್ಕೆ. ಆದರೂ ಬಾಲಿವುಡ್‌ ಕಡೆಯೇ ನನ್ನ ಗಮನ ಇತ್ತು. ಹೀಗಾಗಿ ಹಿನ್ನೆಲೆ ಸಂಗೀತ ಮಾಡಿಕೊಂಡು ಹಿಂದಿ ಚಿತ್ರರಂಗದಲ್ಲಿದ್ದವನಿಗೆ ದೊಡ್ಡ ಭರವಸೆಯಾಗಿ ಕಂಡಿದ್ದು ಸಿಂಗ ಚಿತ್ರದ ಹಾಡುಗಳ ಯಶಸ್ಸು. ಒಳ್ಳೆಯ ಸಂಗೀತ, ಸಾಹಿತ್ಯ ಇದ್ದರೆ ಕನ್ನಡದಲ್ಲಿ ಹಾಡುಗಳನ್ನು ಕೇಳುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತಾಗಿದೆ’ ಎನ್ನುತ್ತಾರೆ ಧರ್ಮ ವಿಶ್‌.

ಮದುವೆ ಬಗ್ಗೆ ಕೇಳಿದ್ರೆ ಬಹುದ್ದೂರ್ ಹೀಗ್ಯಾಕೆ ಹೇಳಿದ್ರು!?

ಸದ್ಯ ಮೊದಲ ಹಾಡಿನ ಯಶಸ್ಸಿನಲ್ಲಿರುವ ಧರ್ಮವಿಶ್‌ ಎರಡನೇ ಹಾಡಿನ ಬಿಡುಗಡೆ ಮಾಡಿದ್ದಾರೆ. ಕವಿರಾಜ್‌ ಸಾಹಿತ್ಯದಲ್ಲಿ ಮೂಡಿಬಂದಿರುವ ‘ವಾಟ್‌ ಎ ಬ್ಯೂಟಿಫುಲ್‌ ಹುಡುಗಿ’ ಎಂಬ ಹಾಡಿಗೆ ನವೀನ್‌ ಸಜ್ಜು ಹಾಗೂ ನಟಿ ಮೇಘನಾ ರಾಜ್‌ ಧ್ವನಿಗೂಡಿಸಿದ್ದಾರೆ. ಈ ಚಿತ್ರ ಬಿಡುಗಡೆಯಾದ ಮೇಲೆ ಕನ್ನಡದಲ್ಲಿ ಮತ್ತಷ್ಟುಅವಕಾಶಗಳು ಸಿಗುವ ಭರವಸೆಯಲ್ಲಿದ್ದಾರೆ ಧರ್ಮ ವಿಶ್‌. ಅಂದಹಾಗೆ ‘ಸಿಂಗ’ ಚಿತ್ರದ ಹಾಡುಗಳನ್ನು ನೋಡಿಯೇ ನೀನಾಸಂ ಸತೀಶ್‌ ನಟನೆಯ ‘ಬ್ರಹ್ಮಚಾರಿ’ ಚಿತ್ರಕ್ಕೆ ಸಂಗೀತ ನೀಡುವ ಅವಕಾಶ ಸಿಕ್ಕಿದೆ.

 

click me!