ಲ್ಯಾವೆಂಡರ್ ಮ್ಯಾರೇಜ್ ಅಂದ್ರೇನು? ಕಿಯಾರಾ-ಸಿದ್ಧಾರ್ಥ್ ಮದುವೆ ಬಗ್ಗೆ ಮತ್ತೆ ಹಬ್ಬಿದ ಹಳೇ ಗಾಸಿಪ್

Published : Nov 16, 2026, 06:13 PM IST
Kiara Advani Sidharth Malhotra

ಸಾರಾಂಶ

ಲ್ಯಾವೆಂಡರ್ ಮ್ಯಾರೇಜ್ ಅಂದ್ರೇನು? ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಚರ್ಚೆಯಾಗುತ್ತಿರುವ ಈ ಪದದ ಅರ್ಥ, ಇತಿಹಾಸ ಮತ್ತು ಬಾಲಿವುಡ್ ಗಾಸಿಪ್ ಹಿಂದಿನ ವಿಚಾರಗಳನ್ನು ತಿಳಿಯಿರಿ.

ಲ್ಯಾವೆಂಡರ್ ಮ್ಯಾರೇಜ್ ಅಂದ್ರೆ ಏನು? ಬಾಲಿವುಡ್ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆ ಈ ಪದವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಕೆಲವರು ಇವರ ಮದುವೆ ಬಗ್ಗೆ ಅನುಮಾನ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಇದೊಂದು ಆಧಾರವಿಲ್ಲದ ಗಾಸಿಪ್ ಎಂದು ತಳ್ಳಿಹಾಕಿದ್ದಾರೆ.

ಲ್ಯಾವೆಂಡರ್ ಮ್ಯಾರೇಜ್ ಅಂದರೆ, ಒಬ್ಬ ಪುರುಷ ಹಾಗೂ ಮಹಿಳೆ ನಡುವಿನ ಮದುವೆ. ಆದರೆ, ಇಲ್ಲಿ ಇಬ್ಬರಲ್ಲಿ ಒಬ್ಬರು ಅಥವಾ ಇಬ್ಬರೂ LGBTQ+ ಸಮುದಾಯಕ್ಕೆ ಸೇರಿರುತ್ತಾರೆ. ಸಮಾಜದ ಕಣ್ಣಲ್ಲಿ ತಾವು ಸಾಮಾನ್ಯ ದಂಪತಿ ಎಂದು ಬಿಂಬಿಸಿಕೊಳ್ಳಲು ಇವರು ಈ ಮದುವೆಯಾಗುತ್ತಾರೆ. ತಾರತಮ್ಯ, ಸಾಮಾಜಿಕ ಬಹಿಷ್ಕಾರ ಹಾಗೂ ವೃತ್ತಿಜೀವನದ ಮೇಲಾಗುವ ಕೆಟ್ಟ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಇತಿಹಾಸದಲ್ಲಿ ಇಂತಹ ಮದುವೆಗಳು ಆಗಾಗ ನಡೆದಿವೆ.

20ನೇ ಶತಮಾನದ ಆರಂಭ ಮತ್ತು ಮಧ್ಯಭಾಗದಲ್ಲಿ ಹಾಲಿವುಡ್‌ನಲ್ಲಿ ಈ ಕಾನ್ಸೆಪ್ಟ್ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಆ ಕಾಲದಲ್ಲಿ ಯಾರಾದರೂ ತಾವು ಗೇ ಎಂದು ಬಹಿರಂಗವಾಗಿ ಹೇಳಿಕೊಂಡರೆ, ಅವರ ವೃತ್ತಿಜೀವನ, ಇಮೇಜ್ ಹಾಗೂ ಗೌರವ ಹಾಳಾಗುತ್ತಿತ್ತು. ಹೀಗಾಗಿ, ಸಮಾಜ ಮತ್ತು ಫಿಲ್ಮ್ ಸ್ಟುಡಿಯೋಗಳ ನಿರೀಕ್ಷೆಗಳನ್ನು ಮೀಟ್ ಮಾಡಲು ಕೆಲವು ಸೆಲೆಬ್ರಿಟಿಗಳು ಇಂಥ ಮದುವೆಯ ಮೊರೆ ಹೋಗುತ್ತಿದ್ದರು.

'ಲ್ಯಾವೆಂಡರ್' ಪದಕ್ಕೂ LGBTQ+ ಐಡೆಂಟಿಟಿಗೂ ಹಳೆಯ ನಂಟಿದೆ. ಈ ಮದುವೆಗಳು ಪ್ರೀತಿ ಅಥವಾ ಆಕರ್ಷಣೆಯಿಂದ ಆಗಿರುವುದಿಲ್ಲ. ಬದಲಾಗಿ, ಸಮಾಜದಲ್ಲಿ ಒಂದು ಉತ್ತಮ ಇಮೇಜ್ ಉಳಿಸಿಕೊಳ್ಳಲು ಮಾಡಿಕೊಳ್ಳುವ ಒಪ್ಪಂದವಾಗಿರುತ್ತಿತ್ತು. ಲ್ಯಾವೆಂಡರ್ ಮ್ಯಾರೇಜ್ ಹಾಗೂ ಕನ್ವೀನಿಯನ್ಸ್ ಮ್ಯಾರೇಜ್ (ಅನುಕೂಲಕ್ಕಾಗಿ ಮಾಡಿಕೊಳ್ಳುವ ಮದುವೆ) ನಡುವೆ ವ್ಯತ್ಯಾಸವಿದೆ. ಒಬ್ಬರ LGBTQ+ ಐಡೆಂಟಿಟಿಯನ್ನು ಮುಚ್ಚಿಡಲು ಲ್ಯಾವೆಂಡರ್ ಮ್ಯಾರೇಜ್ ಆದರೆ, ಹಣಕಾಸು, ಕಾನೂನು ಅಥವಾ ಸಾಮಾಜಿಕ ಲಾಭಗಳಿಗಾಗಿ ಕನ್ವೀನಿಯನ್ಸ್ ಮ್ಯಾರೇಜ್ ಆಗುತ್ತಾರೆ.

ಲ್ಯಾವೆಂಡರ್ ಮ್ಯಾರೇಜ್‌ಗೆ ಲಿಂಕ್ ಮಾಡ್ತಿರೋದು ಯಾಕೆ?

ಆನ್‌ಲೈನ್ ಗಾಸಿಪ್ ಫೋರಮ್‌ಗಳಲ್ಲಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಕೆಲವು ಯೂಸರ್ಸ್ ಈ ಜೋಡಿಯ ಸಂಬಂಧದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, 'ಲ್ಯಾವೆಂಡರ್ ಮ್ಯಾರೇಜ್' ಪದವನ್ನು ತಳಕು ಹಾಕಿದ್ದಾರೆ. ಈ ಗಾಸಿಪ್ ಹೊಸದೇನಲ್ಲ. ಮಾರ್ಚ್ 2024ರಲ್ಲಿ ರೆಡ್ಡಿಟ್‌ನ ಬಾಲಿವುಡ್ ಗಾಸಿಪ್ ಕಮ್ಯುನಿಟಿಯಲ್ಲಿ ಕಿಯಾರಾ ಮದುವೆ ಬಗ್ಗೆ ಚರ್ಚೆ ನಡೆದಿತ್ತು. ಕೆಲವರು ಇದನ್ನು ಲ್ಯಾವೆಂಡರ್ ಅಥವಾ ಪಿಆರ್ (PR) ಮದುವೆ ಎಂದಿದ್ದರು.

ಆದರೆ ಇತರರು ಇದನ್ನು ಬಲವಾಗಿ ವಿರೋಧಿಸಿದ್ದರು. ಇದೊಂದು ಆಧಾರವಿಲ್ಲದ ಗಾಸಿಪ್, ಇವರ ಮದುವೆ ಬಗ್ಗೆ ಯಾಕೆ ಇಷ್ಟೊಂದು ಕೆದಕುತ್ತಿದ್ದೀರಾ ಎಂದು ಪ್ರಶ್ನಿಸಿದ್ದರು. ಇತ್ತೀಚೆಗೆ 'ಕಾಫಿ ವಿತ್ ಕರಣ್ ಸೀಸನ್ 9'ರಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಿರ್ಮಾಪಕ ಕರಣ್ ಜೋಹರ್ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಮತ್ತೆ ಈ ಹಳೇ ಗಾಸಿಪ್‌ಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ನವೆಂಬರ್ 13ರಂದು ರೆಡ್ಡಿಟ್‌ನಲ್ಲಿ ಸಿದ್ಧಾರ್ಥ್ ಮತ್ತು ಕರಣ್ ನಡುವಿನ ಮಾತುಕತೆಗಳನ್ನು ಇಟ್ಟುಕೊಂಡು ಯೂಸರ್ಸ್ ಹಳೇ ರೂಮರ್‌ಗಳನ್ನು ಮತ್ತೆ ಕೆದಕಿದ್ದಾರೆ.

ಆದರೆ, ಇವೆಲ್ಲವೂ ಕೇವಲ ಸೋಷಿಯಲ್ ಮೀಡಿಯಾದ ಊಹಾಪೋಹಗಳಷ್ಟೇ. ಯಾವುದೇ ಅಧಿಕೃತ ಮಾಹಿತಿಯಿಲ್ಲ. ಕಿಯಾರಾ ಆಗಲಿ, ಸಿದ್ಧಾರ್ಥ್ ಆಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇವರದ್ದು ಲ್ಯಾವೆಂಡರ್ ಮ್ಯಾರೇಜ್ ಎನ್ನಲು ಯಾವುದೇ ಸೂಕ್ತ ಆಧಾರಗಳಿಲ್ಲ. ಈ ಜೋಡಿ ಫೆಬ್ರವರಿ 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಇತ್ತೀಚೆಗೆ ಚಾಟ್ ಶೋನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಇವರು, ತಮ್ಮ ರಿಲೇಷನ್‌ಶಿಪ್‌ನ ಏಳು-ಬೀಳುಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು.

ಇಂಟರ್‌ನೆಟ್‌ನಲ್ಲಿ ಪರ-ವಿರೋಧ ಚರ್ಚೆ: ಇದು ಬರೀ ಗಾಸಿಪ್ ಎಂದ ಫ್ಯಾನ್ಸ್

ಲ್ಯಾವೆಂಡರ್ ಮ್ಯಾರೇಜ್ ಬಗ್ಗೆ ಆನ್‌ಲೈನ್‌ನಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಕೆಲವರು ಈ ಜೋಡಿಯ ಬಗ್ಗೆ ಊಹಾಪೋಹಗಳನ್ನು ಮುಂದುವರಿಸಿದರೆ, ಇನ್ನು ಕೆಲವರು ಯಾವುದೇ ಆಧಾರವಿಲ್ಲದೆ ಸೆಲೆಬ್ರಿಟಿಗಳ ಮದುವೆಗೆ ಲೇಬಲ್ ಅಂಟಿಸುವ ಅಭ್ಯಾಸವನ್ನು ಟೀಕಿಸಿದ್ದಾರೆ. ಮಾರ್ಚ್ 2024ರ ರೆಡ್ಡಿಟ್ ಚರ್ಚೆಯಲ್ಲಿ, ಸೆಲೆಬ್ರಿಟಿಗಳ ಬಗ್ಗೆ ಹಬ್ಬುವ ರೂಮರ್‌ಗಳನ್ನು ಸತ್ಯ ಎಂದು ನಂಬಬಾರದು ಎಂದು ಒಬ್ಬ ಯೂಸರ್ ಹೇಳಿದ್ದರು. ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ಇಷ್ಟೊಂದು ತಲೆಕೆಡಿಸಿಕೊಳ್ಳುವುದು ಯಾಕೆ ಎಂದು ಮತ್ತೊಬ್ಬರು ಪ್ರಶ್ನಿಸಿದ್ದರು.

ಇನ್ನು ನಟರು ಒಟ್ಟಿಗೆ ಕಾಣಿಸಿಕೊಂಡಾಗ ಅಥವಾ ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಾಗ ಹಳೇ ಗಾಸಿಪ್‌ಗಳು ಹೇಗೆ ಮತ್ತೆ ಹುಟ್ಟಿಕೊಳ್ಳುತ್ತವೆ ಎಂಬುದಕ್ಕೆ ಸಿದ್ಧಾರ್ಥ್ ಮತ್ತು ಕರಣ್ ನಡುವಿನ ಇತ್ತೀಚಿನ ಚರ್ಚೆಗಳೇ ಸಾಕ್ಷಿ. ಈ ಮಧ್ಯೆ, ಲ್ಯಾವೆಂಡರ್ ಮ್ಯಾರೇಜ್ ಬಗ್ಗೆ ಮತ್ತೆ ಶುರುವಾಗಿರುವ ಚರ್ಚೆಗಳು LGBTQ+ ಪ್ರಾತಿನಿಧ್ಯ, ಸಮಾಜದ ನಿರೀಕ್ಷೆಗಳು ಮತ್ತು ಸಾರ್ವಜನಿಕವಾಗಿ ಇಮೇಜ್ ಉಳಿಸಿಕೊಳ್ಳಲು ಸೆಲೆಬ್ರಿಟಿಗಳು ಎದುರಿಸುತ್ತಿರುವ ಒತ್ತಡದ ಬಗ್ಗೆ ಹೊಸ ಚರ್ಚೆಗೆ ನಾಂದಿ ಹಾಡಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬರ್ತ್‌ಡೇ ಕ್ಯಾಪ್‌ನಲ್ಲಿ ಮಿಂಚಿದ ನಟಿ ತ್ರಿಷಾ ಮುದ್ದಿನ ನಾಯಿ: ಕ್ಯೂಟ್ ಫೋಟೋಗಳು ವೈರಲ್!
'ಮುಂದಿನ ನಿಲ್ದಾಣ ಮದುವೆ' ಎನ್ನುತ್ತಲೇ ಫ್ರೆಂಡ್ಸ್​ ಜೊತೆ Bigg Boss ಸ್ಪಂದನಾ ಸೋಮಣ್ಣ Bride to be ಪಾರ್ಟಿ