
ಬಿಗ್‌ಬಾಸ್ ಮನೆಗೆ ಹೋಗಿ ಬಂದವರು ಸೆಲೆಬಿಟ್ರಿಗಳಾಗಿ ಸುದ್ದಿಯಾಗುವುದು ಹೊಸದಲ್ಲ. ಲೆಕ್ಕ ಹಾಕಿದರೆ ಹಲವರು ಆ ಸಾಲಿನಲ್ಲಿದ್ದಾರೆ. ನಟಿ ಮಣಿಯರಂತೂ ಅಲ್ಲಿಂದ ಬಂದಿದ್ದೇ ತಡ ಒಂದಷ್ಟು ಸಿನಿಮಾ-ಸೀರಿಯಲ್ ಗಳಿಗೂ ಫಿಕ್ಸ್ ಆಗಿ, ಸಾರ್ವಜನಿಕರ ಗಮನ ಸೆಳೆಯುವುದೂ ಕೂಡ ಅಷ್ಟೇ ಸಹಜ.
ಅದೇನೆ ಇದ್ದರೂ, ಕೆಲವರ ಪಾಲಿಗೆ ಇದೆಲ್ಲ ಘಟಿಸೋದು ‘ಬಿಗ್‌ಬಾಸ್’ ಮನೆಯಲ್ಲಿ ಒಂದಷ್ಟು ಸುದ್ದಿ ಮಾಡಿ ಹೊರಬಂದ ನಂತರ. ಆದರೆ ಈಗ ‘ಬಿಗ್‌ಬಾಸ್’ ಸೀಸನ್ 5 ಕಂಟೆಸ್ಟೆಂಟ್ ಜೆಕೆ ಅಲಿಯಾಸ್ ಜಯರಾಂ ಕಾರ್ತಿಕ್ ಹಾಗೂ ಅನುಪಮಾ ಗೌಡ ಅಲ್ಲಿದ್ದುಕೊಂಡೇ ಒಂದು ಹೊಸ ಸಿನಿಮಾಕ್ಕೆ ಫಿಕ್ಸ್ ಆಗಿದ್ದಾರೆ. ಜನವರಿಯಿಂದ ಆ ಸಿನಿಮಾ ಶುರುವಾಗುತ್ತಿದೆ. ಇದು
ನಂಬುವುದಕ್ಕೆ ಅಸಾಧ್ಯ ಎನಿಸಿದರೂ ಸತ್ಯ. ಯಾಕಂದ್ರೆ, ಅದರ ಕಾರಣಕರ್ತರು ನಿರ್ದೇಶಕ ದಯಾಳ್ ಪದ್ಮನಾಭ್! ಕಿರುತೆರೆ ವೀಕ್ಷಕರಲ್ಲಿ ತೀವ್ರ ಕುತೂಹಲ ಹುಟ್ಟಿಸಿದ್ದ ‘ಬಿಗ್‌ಬಾಸ್’ ಸೀಸನ್ ೫ನ ಒಟ್ಟು 17 ಮಂದಿ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದವರು ನಿರ್ದೇಶಕ ದಯಾಳ್ ಪದ್ಮನಾಭ್. ಅವರದೇ ನಿರ್ದೇಶನದ ‘ಸತ್ಯಹರಿಶ್ಚಂದ್ರ’ ಚಿತ್ರದ ರಿಲೀಸ್‌ಗೆ ಇನ್ನೇನು ನಾಲ್ಕೈದು ದಿನ ಬಾಕಿ ಇದ್ದಾಗಲೇ ಅವರು ಬಿಗ್‌ಬಾಸ್ ಸ್ಪರ್ಧಿಯಾಗಿದ್ದರು.
ಅದು ವಿವಾದಕ್ಕೂ ಕಾರಣವಾಯಿತು. ಚಿತ್ರದ ಪ್ರಮೋಷನ್‌ಗೆ ಬರಬೇಕಾಗಿದ್ದ ಸಂದರ್ಭದಲ್ಲಿ ದಯಾಳ್, ಏಕಾಏಕಿ ಬಿಗ್‌ಬಾಸ್‌ಗೆ ಹೋಗಿದ್ದು ಸರಿಯಿಲ್ಲ. ಅವರ ನಿರ್ಧಾರ ಬೇಸರ ತಂದಿದೆ. ಸಿನಿಮಾ ಮಾಡುವ ನಿರ್ದೇಶಕರಿಗೆ ನಿರ್ಮಾಪಕರ ಕಷ್ಟ ಗೊತ್ತಾಗುವುದಿಲ್ಲ ಅಂತ ನಿರ್ಮಾಪಕ ಕೆ. ಮಂಜು ತಮ್ಮ ಅಳಲು ತೋಡಿಕೊಂಡಿದ್ದರು. ಅದರೇನು, ದಯಾಳ್ ಸಾಕಷ್ಟು ನಿರೀಕ್ಷೆ ಹೊತ್ತು ಬಿಗ್‌ಬಾಸ್ ಮನೆಗೆ ಹೋಗಿದ್ದೇನೋ ನಿಜ, ಆದರೆ ಹೋದಷ್ಟೆ ಬೇಗ ಎಲಿಮಿನೇಷನ್ ಕತ್ತರಿಗೆ ಸಿಲುಕಿದರು. ಅನ್ಯ ದಾರಿ ಇಲ್ಲದೆ ಅಲ್ಲಿಂದ ಹೊರಟು ಬಂದರು.
ಅದೆಲ್ಲ ನಿಮಗೆ ಗೊತ್ತಿರುವ ಹಳೆ ಕತೆ. ಈಗ ದಯಾಳ್ ನಿರ್ದೇಶನದ ಮುಂದಿನ ಸಿನಿಮಾ ಯಾವುದು ಅನ್ನೋದು ಕುತೂಹಲದ ಸಂಗತಿ. ಅಂದ ಹಾಗೆ, ದಯಾಳ್ ಹೊಸ ಸಿನಿಮಾ ಇಷ್ಟರಲ್ಲಿಯೇ ಸೆಟ್ಟೇರುವುದು ಗ್ಯಾರಂಟಿ ಆಗಿದೆ. ಅದಕ್ಕಾಗಿ ಸಾಹಿತಿ ಮೋಹನ್ ಹಬ್ಬು ಅವರ ‘ಕರಾಳ ರಾತ್ರಿ’ ನಾಟಕದ ಹಕ್ಕು ಪಡೆದಿದ್ದಾರಂತೆ. ಮೊನ್ನೆಯಷ್ಟೆ ಉತ್ತರ ಕನ್ನಡ ಜಿಲ್ಲೆ ಅಂಕೋಲಾಕ್ಕೆ ಹೋಗಿ ಬಂದಿದ್ದಾರೆ. ಲೇಖಕ ಮೋಹನ್ ಹಬ್ಬು ಅವರನ್ನು ಅಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದು, ಅವರ ‘ಕರಾಳ ರಾತ್ರಿ’ ನಾಟಕವನ್ನು ಸಿನಿಮಾ ಮಾಡುವುದಕ್ಕೆ ಒಪ್ಪಿಗೆ ಹೇಳಿದ್ದಾರಂತೆ. ಮುಂದಿನದು ಕತೆ, ಚಿತ್ರಕತೆ ಬರೆಯುವ ಕೆಲಸ. ‘ಈ ತಿಂಗಳ ಕೊನೆಯೊಳಗೆ ಅದು ಕಂಪ್ಲಿಟ್ ಆಗುತ್ತೆ. ಜನವರಿ ತಿಂಗಳ ಸಿನಿಮಾ ಶುರುವಾಗುವುದು ಖಚಿತ’ ಅಂತಾರೆ ದಯಾಳ್.
ಉಳಿದಿದ್ದು ಈ ಚಿತ್ರದ ನಾಯಕ-ನಾಯಕಿ ಯಾರು ಅನ್ನೋದು. ‘ಬಿಗ್‌ಬಾಸ್ ಮನೆಯಲ್ಲಿದ್ದಾಗಲೇ ಈ ವಿಚಾರವೂ ಫೈನಲ್ ಆಗಿದೆ. ನಟ ಜಯರಾಂ ಕಾರ್ತಿಕ್ ಹಾಗೂ ನಟಿ ಅನುಪಮಾ ಗೌಡ ಚಿತ್ರಕ್ಕೆ ಸೂಕ್ತ ಎನಿಸಿತ್ತು. ಅವರ ಜತೆಗೆ ಅಲ್ಲಿಯೇ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದೆ. ಜೆಕೆ ಒಂದು ಹಂತದ ಒಪ್ಪಿಗೆ ಕೊಟ್ಟಿದ್ದಾರೆ. ಅನುಪಮಾ ಗೌಡ ಅವರಿಗೂ ಆಸಕ್ತಿ ಇದೆ. ಅಲ್ಲಿಂದ ಅವರು ಬಂದ ನಂತರ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ, ಫೈನಲ್ ಮಾಡಿಕೊಳ್ಳುತ್ತೇನೆ. ಬಹುತೇಕ ಅವರೇ ಫೈನಲ್ ಆಗುತ್ತಾರೆನ್ನುವ ವಿಶ್ವಾಸ ನನಗಿದೆ’ ಎನ್ನುತ್ತಾರೆ ನಿರ್ದೇಶಕ ದಯಾಳ್. ಅಲ್ಲದೇ ಅವರು ಬಿಗ್ ಬಾಸ್ ಮನೆಯಿಂದ ಹೊರಬರುವಾಗಲೇ ಜೆಕೆ ಹಾಗೂ ಅನುಪಮಾ ಗೌಡ ಅವರೊಂದಿಗೆ ಸಿನಿಮಾ ಕಮಿಟ್ ಮೆಂಟ್ ಮಾಡಿಕೊಂಡು ದಿದ್ದಾರೆನ್ನುವುದು ಅವರಿಂದಲೇ ಹೊರಬಿದ್ದ ಸುದ್ದಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.