'ಈ ಪಾತ್ರ ನನ್ನನ್ನು ಬದಲಿಸಿದೆ': ‘ಮಹಾಕಾಳಿ’ಗಾಗಿ ಇಷ್ಟು ತಯಾರಿ ನಡೆಸಿದ್ರಾ ಬಿಗ್‌ಬಾಸ್‌ ಖ್ಯಾತಿಯ ಭೂಮಿ ಶೆಟ್ಟಿ

Published : Aug 22, 2026, 05:23 PM IST
Bhoomi Shetty

ಸಾರಾಂಶ

Mahakali The End Begins: ನಟಿ ಭೂಮಿ ಶೆಟ್ಟಿ ಸದ್ಯ ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನ ಬಹುನಿರೀಕ್ಷಿತ ಸಿನಿಮಾ ‘ಮಹಾಕಾಳಿ-ದಿ ಎಂಡ್ ಬಿಗಿನ್ಸ್’ನಲ್ಲಿ ಟೈಟಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ನಟಿ ಭೂಮಿ ಶೆಟ್ಟಿ ಸದ್ಯ ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನ ಬಹುನಿರೀಕ್ಷಿತ ಸಿನಿಮಾ ‘ಮಹಾಕಾಳಿ-ದಿ ಎಂಡ್ ಬಿಗಿನ್ಸ್’ನಲ್ಲಿ ಟೈಟಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ತಮ್ಮ ಪಾಲಿಗೆ ಕೇವಲ ಮತ್ತೊಂದು ಪ್ರಾಜೆಕ್ಟ್ ಅಲ್ಲ. ಸುಮಾರು ಎರಡು ವರ್ಷಗಳಿಂದ ಈ ಸಿನಿಮಾದೊಂದಿಗೆ ಪಯಣಿಸುತ್ತಿರುವ ಭೂಮಿ ಶೆಟ್ಟಿ, ‘ಮಹಾಕಾಳಿ’ ಪಾತ್ರ ತಮ್ಮ ವೃತ್ತಿಜೀವನದ ಮಹತ್ವದ ಘಟ್ಟದಲ್ಲಿ ಸಿಕ್ಕ ಅವಕಾಶ ಎಂದು ಹೇಳಿಕೊಂಡಿದ್ದಾರೆ.

“ನಾನು ಚಿತ್ರರಂಗದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಇದ್ದೇನೆ. ಸುಮಾರು 18ನೇ ವಯಸ್ಸಿನಲ್ಲಿ ನನ್ನ ಪ್ರಯಾಣ ಆರಂಭಿಸಿದೆ. ಈಗ ನಾನು ಸರಿಯಾದ ಜಾಗದಲ್ಲಿ, ಸರಿಯಾದ ಸಮಯದಲ್ಲಿದ್ದೇನೆ ಎಂದು ಅನಿಸುತ್ತಿದೆ. ಇಂತಹ ಪಾತ್ರವನ್ನು ನಿರ್ವಹಿಸಲು ನಾನು ಸಿದ್ಧವಾಗಿದ್ದ ಸಮಯದಲ್ಲೇ ‘ಮಹಾಕಾಳಿ’ ನನ್ನನ್ನು ಹುಡುಕಿಕೊಂಡು ಬಂತು,” ಎಂದು ಭೂಮಿ ಶೆಟ್ಟಿ ಹೇಳಿದ್ದಾರೆ.

ಆಡಿಷನ್‌ನಿಂದ ಮಹಾಕಾಳಿವರೆಗೆ...

ಭೂಮಿಗೆ ಈ ಪಾತ್ರ ಸುಲಭವಾಗಿ ಸಿಕ್ಕಿದ್ದಲ್ಲ. ಆಡಿಷನ್, ಲುಕ್ ಟೆಸ್ಟ್ ಬಳಿಕ ಸಿನಿಮಾದ ಪಾತ್ರಕ್ಕೆ ಬೇಕಾದ ನೋಟವನ್ನು ಪಡೆಯಲು ಸುಮಾರು ಒಂದು ತಿಂಗಳ ಕಾಲ ವಿಶೇಷ ತಯಾರಿ ನಡೆಸಬೇಕಾಯಿತು. ‘ಬಿಗ್ ಬಾಸ್ ಕನ್ನಡ ಸೀಸನ್ 7’ರ ಸ್ಪರ್ಧಿಯಾಗಿ ಗಮನ ಸೆಳೆದಿದ್ದ ಭೂಮಿ, ಬಳಿಕ ‘ಇಕ್ಕಟ್’ ಸಿನಿಮಾದ ಮೂಲಕ ಗುರುತಿಸಿಕೊಂಡರು. ನಂತರ ಸಾಂಪ್ರದಾಯಿಕ ಹಾದಿಯಿಂದ ಹೊರಬಂದು ತೆಲುಗು ಚಿತ್ರರಂಗಕ್ಕೂ ಕಾಲಿಟ್ಟರು.

ಇದೀಗ ಇಷ್ಟು ದೊಡ್ಡ ಬಜೆಟ್‌ನ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವುದು ಅವರ ವೃತ್ತಿಜೀವನದ ದೊಡ್ಡ ಹೆಜ್ಜೆಯಾಗಿದೆ. “ದೊಡ್ಡ ಬಜೆಟ್ ಹಾಗೂ ದೊಡ್ಡ ನಿರ್ಮಾಣ ಸಂಸ್ಥೆಯ ಸಿನಿಮಾದಲ್ಲಿ ಇಂತಹ ಪಾತ್ರ ಸಿಗುವುದು ಸುಲಭವಲ್ಲ. ಆಯ್ಕೆ ಪ್ರಕ್ರಿಯೆಯೇ ಸಾಕಷ್ಟು ದೊಡ್ಡದಾಗಿತ್ತು. ಆಡಿಷನ್, ಲುಕ್ ಟೆಸ್ಟ್ ಮತ್ತು ತಯಾರಿ ಹೀಗೆ ಹಲವು ಹಂತಗಳನ್ನು ದಾಟಬೇಕಾಯಿತು. ಇದು ಸುಲಭವಾದ ಪ್ರಕ್ರಿಯೆಯಾಗಿರಲಿಲ್ಲ,” ಎಂದು ಭೂಮಿ ಹೇಳಿದ್ದಾರೆ.

‘ಮಹಾಕಾಳಿ’ ಪಾತ್ರದಿಂದ ಭೂಮಿಯಲ್ಲಿ ಬದಲಾವಣೆ

ಈ ಸಿನಿಮಾದ ವಿಶೇಷತೆ ಕೇವಲ ದೊಡ್ಡ ಮಟ್ಟದ ನಿರ್ಮಾಣದಲ್ಲಷ್ಟೇ ಅಲ್ಲ. ‘ಮಹಾಕಾಳಿ’ ಪಾತ್ರ ಭೂಮಿ ಶೆಟ್ಟಿಯವರಲ್ಲೂ ವೈಯಕ್ತಿಕವಾಗಿ ಸಾಕಷ್ಟು ಬದಲಾವಣೆ ತಂದಿದೆಯಂತೆ. ತಮ್ಮೊಳಗಿನ ಶಕ್ತಿಯನ್ನು ಈ ಪಾತ್ರದ ಮೂಲಕ ಹೊಸದಾಗಿ ಕಂಡುಕೊಂಡಿರುವುದಾಗಿ ಅವರು ಹೇಳುತ್ತಾರೆ.

“ನಾನು ತುಂಬಾ ಟಾಮ್‌ಬಾಯ್ ರೀತಿಯ ಹುಡುಗಿಯಾಗಿದ್ದೆ. ನನ್ನೊಳಗಿನ ಸ್ತ್ರೀತ್ವವನ್ನು ಹೊರತರುವ ಬಗ್ಗೆ ಎಂದಿಗೂ ಹೆಚ್ಚು ಯೋಚಿಸಿರಲಿಲ್ಲ. ಆದರೆ ಈ ಪಾತ್ರ ನನ್ನೊಳಗಿನ ಶಕ್ತಿಯನ್ನು ಎಚ್ಚರಿಸಿತು. ಮಹಾಕಾಳಿಯೊಂದಿಗೆ, ದೈವಿಕ ಶಕ್ತಿಯೊಂದಿಗೆ ಕನೆಕ್ಟ್ ಆಗಬೇಕಾದರೆ ಮೊದಲು ನನ್ನನ್ನೇ ನಾನು ಅರ್ಥಮಾಡಿಕೊಳ್ಳಬೇಕಾಯಿತು. ನಮ್ಮೆಲ್ಲರಲ್ಲೂ ಶಕ್ತಿ ಇದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು,” ಎಂದು ಭೂಮಿ ಹೇಳಿದ್ದಾರೆ.

‘ಮಹಾಕಾಳಿ’ ನನ್ನ ಸೀಮೆಯಿಂದ ಹೊರಬರಲು ಸಹಾಯ ಮಾಡಿದೆ!

ಸದ್ಯ ಸಿನಿಮಾದ ಚಿತ್ರೀಕರಣ ಅಂತಿಮ ಹಂತದಲ್ಲಿದ್ದು, ಕೆಲವು ಪ್ಯಾಚ್‌ವರ್ಕ್ ಕೆಲಸಗಳು ಮಾತ್ರ ಬಾಕಿ ಉಳಿದಿವೆ. ಈ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಹಾಗೂ ಖುಷ್ಬೂ ಸುಂದರ್ ಸೇರಿದಂತೆ ಹಲವು ಹಿರಿಯ ನಟರೊಂದಿಗೆ ತೆರೆ ಹಂಚಿಕೊಂಡಿರುವ ಅನುಭವವೂ ಭೂಮಿಗೆ ವಿಶೇಷವಾಗಿದೆ.

“ಖುಷ್ಬೂ ಅವರನ್ನು ನಾನು ಚಿಕ್ಕಂದಿನಿಂದ ನೋಡುತ್ತಾ ಬೆಳೆದಿದ್ದೇನೆ. ಅವರ ಪಕ್ಕದಲ್ಲಿ ಕುಳಿತುಕೊಂಡು ಅವರ ಕಥೆಗಳನ್ನು ಕೇಳುವುದು, ಅವರ ಸಲಹೆಗಳನ್ನು ಪಡೆಯುವುದು ನಿಜಕ್ಕೂ ಅದ್ಭುತ ಅನುಭವ. ಈ ಪ್ರಾಜೆಕ್ಟ್ ನನ್ನ ಪಾಲಿಗೆ ಸಿಕ್ಕಿದ್ದಕ್ಕೆ ನಾನು ನಿಜವಾಗಿಯೂ ಕೃತಜ್ಞಳಾಗಿದ್ದೇನೆ,” ಎಂದು ಅವರು ಹೇಳಿದ್ದಾರೆ.

‘ಮಹಾಕಾಳಿ’ ತಮ್ಮ ಕಂಫರ್ಟ್ ಝೋನ್‌ನಿಂದ ಹೊರಬರಲು ಕೂಡ ಸಹಾಯ ಮಾಡಿದೆ ಎನ್ನುವ ಭೂಮಿ, “ಮಹಾಕಾಳಿ ನನ್ನ ಸಣ್ಣ ವಲಯದಿಂದ ಹೊರಬರಲು ಸಹಾಯ ಮಾಡಿದೆ. ನಾನು ಎಲ್ಲವನ್ನೂ ಒಪ್ಪಿಕೊಂಡು ಶರಣಾಗುವುದನ್ನೂ ಕಲಿತೆ,” ಎಂದು ಹೇಳಿದ್ದಾರೆ.

ಮತ್ತೊಂದು ಸಿನಿಮಾ ಒಪ್ಪಿಕೊಳ್ಳದೇ ‘ಮಹಾಕಾಳಿ’ಗೆ ಸಂಪೂರ್ಣ ಸಮಯ

ಈ ಸಿನಿಮಾದಲ್ಲಿ ಪಾತ್ರಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸಬೇಕು ಎಂಬ ಕಾರಣಕ್ಕೆ ಭೂಮಿ ಶೆಟ್ಟಿ, ಚಿತ್ರೀಕರಣದ ಅವಧಿಯಲ್ಲಿ ಮತ್ತೊಂದು ಪ್ರಾಜೆಕ್ಟ್ ಕೈಗೆತ್ತಿಕೊಳ್ಳದಿರಲು ನಿರ್ಧರಿಸಿದ್ದರು. “ಈ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವಾಗ ಮತ್ತೊಂದು ಪ್ರಾಜೆಕ್ಟ್ ತೆಗೆದುಕೊಳ್ಳದೆ, ಸಂಪೂರ್ಣ ಗಮನವನ್ನು ‘ಮಹಾಕಾಳಿ’ ಪಾತ್ರದ ಮೇಲೆ ಇಟ್ಟಿದ್ದೇನೆ,” ಎಂದು ಅವರು ಹೇಳಿದ್ದಾರೆ. ಶೂಟಿಂಗ್ ಹೊರತಾಗಿ ತಮ್ಮ ಜೀವನದ ಬಗ್ಗೆ ಮಾತನಾಡಿರುವ ಭೂಮಿ, “ನಾನು ಟ್ರಾವೆಲ್ ಮಾಡುತ್ತಿರುತ್ತೇನೆ ಅಥವಾ ಶೂಟಿಂಗ್‌ನಲ್ಲಿರುತ್ತೇನೆ. ಅದರ ಮಧ್ಯೆ ಮತ್ತೇನೂ ಇಲ್ಲ,” ಎಂದು ನಗುತ್ತಾ ಹೇಳಿದ್ದಾರೆ.

ತೆಲುಗು, ಹಿಂದಿ ಜೊತೆಗೆ ಕನ್ನಡದಲ್ಲೂ ‘ಮಹಾಕಾಳಿ’?

ಪೂಜಾ ಅಪರ್ಣಾ ಕೊಲ್ಲೂರು ನಿರ್ದೇಶನದ ಈ ಸಿನಿಮಾವನ್ನು ಪ್ರಶಾಂತ್ ವರ್ಮಾ ಕ್ರಿಯೇಟ್ ಮಾಡಿದ್ದು, RKD Studios ಬ್ಯಾನರ್ ಅಡಿಯಲ್ಲಿ ರಿವಾಜ್ ದುಗ್ಗಲ್ ನಿರ್ಮಿಸುತ್ತಿದ್ದಾರೆ. ಸಿನಿಮಾದಲ್ಲಿ ಶ್ರೀಯಾ ರೆಡ್ಡಿ, ರೋಹಿತ್ ಸರಾಫ್, ರಾಕೇಶ್ ಬೇಡಿ, ಸಮುದ್ರಖನಿ, ಜಿತಿನ್ ಗುಲಾಟಿ, ರಜತ್ ಕಪೂರ್, ಮುರಳಿ ಶರ್ಮಾ, ನಾಸರ್ ಹಾಗೂ ಬಾಬ್ಲೂ ಪೃಥ್ವೀರಾಜ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ.

‘ಮಹಾಕಾಳಿ-ದಿ ಎಂಡ್ ಬಿಗಿನ್ಸ್’ ಸಿನಿಮಾ ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಕನ್ನಡದಲ್ಲೂ ಚಿತ್ರವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಸದ್ಯ ಭೂಮಿ ಶೆಟ್ಟಿ ತಮ್ಮ ಪಾತ್ರ ಪ್ರೇಕ್ಷಕರಿಗೆ ಹೇಗೆ ಇಷ್ಟವಾಗಲಿದೆ ಎಂಬುದನ್ನು ಎದುರು ನೋಡುತ್ತಿದ್ದಾರೆ. “ನಟಿಯಾಗಿ ನಾನು ಹುಡುಕುತ್ತಿದ್ದ ಎಲ್ಲವನ್ನೂ ಈ ಪಾತ್ರ ಹೊಂದಿದೆ,” ಎಂದು ಹೇಳುವ ಮೂಲಕ ‘ಮಹಾಕಾಳಿ’ ತಮ್ಮ ವೃತ್ತಿಜೀವನದಲ್ಲಿ ಎಷ್ಟು ವಿಶೇಷವಾದ ಸಿನಿಮಾ ಎಂಬುದನ್ನು ಭೂಮಿ ಶೆಟ್ಟಿ ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗುರುವಾರ-ಶುಕ್ರವಾರದ ಬದಲು 'ಬುಧವಾರ' ರಿಲೀಸ್ ಆಗ್ತಿರೋದ್ಯಾಕೆ? ಯಶ್‌ 'ಟಾಕ್ಸಿಕ್' ಸೀಕ್ರೆಟ್ ಇರೋದೇ ಇದ್ರಲ್ಲಿ!
ಟಿವಿ ನೋಡುವವರಿಗೆ ಕೇಂದ್ರದ ಬಿಗ್ ಶಾಕ್! 20 ವರ್ಷಗಳ ಬಳಿಕ ರೂಲ್ಸ್ ಬದಲಾವಣೆ