ಮದುವೆ ನಂತರ ಭಾವನ ಮೊದಲ ಸಂದರ್ಶನ; ಸಿನಿ ಜರ್ನಿಯ ಬಗ್ಗೆ ಹೇಳೋದೇನು?

By Suvarna Web DeskFirst Published Mar 7, 2018, 1:21 PM IST
Highlights

ಕನ್ನಡದಲ್ಲಿ ಜಾಕಿ ಭಾವನಾ ಅಂತಲೇ ಹೆಸರಾದ  ಮಲಯಾಳಂ ನಟಿ ಭಾವನಾ ಹೀಗೆ ಹೇಳುತ್ತಾ ಮನದುಂಬಿ ನಕ್ಕರು. ಅವರ ಆ ಮಾತಿಗೆ ಎರಡು ಕಾರಣಗಳಿದ್ದವು. ಒಂದು ಮದುವೆ. ಮತ್ತೊಂದು ‘ಟಗರು’
ಚಿತ್ರದ ಸಕ್ಸಸ್. ತಮ್ಮ ಬದುಕು ಮತ್ತು ಸಿನಿಜರ್ನಿಯ ಕುರಿತ ಅವರ ಮನದಾಳದ ಮಾತು ಇಲ್ಲಿವೆ.

ಬೆಂಗಳೂರು (ಮಾ. 07):  ಕನ್ನಡದಲ್ಲಿ ಜಾಕಿ ಭಾವನಾ ಅಂತಲೇ ಹೆಸರಾದ  ಮಲಯಾಳಂ ನಟಿ ಭಾವನಾ ಹೀಗೆ ಹೇಳುತ್ತಾ ಮನದುಂಬಿ ನಕ್ಕರು. ಅವರ ಆ ಮಾತಿಗೆ ಎರಡು ಕಾರಣಗಳಿದ್ದವು. ಒಂದು ಮದುವೆ. ಮತ್ತೊಂದು ‘ಟಗರು’
ಚಿತ್ರದ ಸಕ್ಸಸ್. ತಮ್ಮ ಬದುಕು ಮತ್ತು ಸಿನಿಜರ್ನಿಯ ಕುರಿತ ಅವರ ಮನದಾಳದ ಮಾತು ಇಲ್ಲಿವೆ.

ಕನ್ನಡಕ್ಕೆ ನಟಿಯಾಗಿ ಬಂದ್ರಿ, ಈಗ ಸೊಸೆಯಾಗಿ ಇಲ್ಲಿಯವರೇ ಆಗಿದ್ದೀರಿ..
ಎಲ್ಲವೂ ಕಾಲದ ಸಂದರ್ಭ. ಅದೆಲ್ಲ ಹೇಗೆ ಸಾಧ್ಯ ಅಂತ ಅಂದಾಜಿಸಿಕೊಳ್ಳುವುದಕ್ಕೆ ಆಗೋದಿಲ್ಲ. ಬೆಂಗಳೂರು ನನ್ನ ನೆಚ್ಚಿನ ಊರು. ನಟಿಯಾಗಿ ಬಂದ ನಂತರ ಅಂಟಿಕೊಂಡ ನಂಟು ಅದು. ಮದುವೆಯ ಮೂಲಕ ಆ ನಂಟು ಮತ್ತಷ್ಟು ಗಟ್ಟಿಯಾಗಿದೆ. ಖುಷಿ ಆಗುತ್ತಿದೆ.

ಮ್ಯಾರೇಜ್ ಲೈಫ್ ಹೇಗಿದೆ?
(ನಗು) ಚೆನ್ನಾಗಿದೆ. ಹಾಗಂತ ಎಲ್ಲವೂ ಬದಲಾಗಿದೆ ಅಂತ ಎನಿಸಿಲ್ಲ. ನಾನೀಗ ವಿವಾಹಿತೆ ಅನ್ನೋದಷ್ಟೇ ಬದಲಾದ ಸ್ಟೇಟಸ್. ಉಳಿದಂತೆ ನಾವಿಬ್ಬರು ಒಳ್ಳೆಯ ಸ್ನೇಹಿತರು. ಸಿನಿಮಾ ಜಗತ್ತೇ ನನ್ನ ಕರ್ಮಭೂಮಿ. ನಟನೆ ಮದುವೆ ನಂತರವೂ ಇದ್ದೇ ಇರುತ್ತೆ.
 

ನವೀನ್ ಮತ್ತು ನೀವು ಪರಿಚಯ ಆಗಿದ್ದು ಹೇಗೆ?
ನಾವಿಬ್ಬರು ಆರು ವರ್ಷದ ಫ್ರೆಂಡ್ಸ್. ಅವರು ಒಂದು ತೆಲುಗು ಸಿನಿಮಾ ನಿರ್ಮಾಣ ಮಾಡಿದ್ದರು. ಆಗ ನಾವಿಬ್ಬರು ಪರಿಚಯವಾಗಿದ್ದು. ಆ ಪರಿಚಯವೇ ಮದುವೆಗೂ ಕಾರಣವಾಯಿತು.
 

ನವೀನ್ ಫ್ಯಾಮಿಲಿ ಬಗ್ಗೆ ಹೇಳಿ...
ತುಂಬಾ ಒಳ್ಳೆಯ ಕುಟುಂಬ. ನಾನಂದ್ರೆ ನವೀನ್ ತಂದೆಗೆ ತುಂಬಾ ಇಷ್ಟ. ನನಗೂ ಅವರಂದ್ರೆ ತುಂಬಾ ಪ್ರೀತಿ. ನವೀನ್ ಅವರ ತಾಯಿ ಇಲ್ಲ. ಆ ನೋವಿದ್ದರೂ ಇಡೀ ಫ್ಯಾಮಿಲಿಯಲ್ಲಿ ಸಂತೋಷವಿದೆ. ನನ್ನನ್ನು ಅಷ್ಟೇ  ಪ್ರೀತಿ ಮಾಡುತ್ತೆ.
 

‘ಟಗರು’ಸಕ್ಸಸ್ ಬಗ್ಗೆ ಹೇಳೋದಾದ್ರೆ...
ಸಿನಿಮಾ ರಿಲೀಸ್ ಆದ ನಂತರ ನನಗೆ ಸಾಕಷ್ಟು ಫೋನ್ ಕಾಲ್ ಬಂದಿದ್ದವು. ಸಿನಿಮಾ ಚೆನ್ನಾಗಿದೆ, ನಿಮ್ಮ ಅಭಿನಯವೂ ಚೆನ್ನಾಗಿದೆ ಅಂತೆಲ್ಲ ಮಾತನಾಡಿದ್ದರು. ನಿರೀಕ್ಷೆ ಇತ್ತು, ಈಗದು ನಿಜವಾಗಿದೆ. ಆ ಗೆಲುವು  ಯಾರೋ ಒಬ್ಬರದ್ದಲ್ಲ, ಇಡೀ ತಂಡದ್ದು. ಮುಖ್ಯವಾಗಿ ಶಿವರಾಜ್ ಕುಮಾರ್ ಸರ್ ಮತ್ತು ಸೂರಿ ಸರ್ ಅದರ ರೂವಾರಿಗಳು.
 

ಈ ಚಿತ್ರಕ್ಕೆ ನೀವು ಬಂದಿದ್ದು ಹೇಗೆ?
ಸೂರಿ ಸರ್ ಜತೆಗೆ ಇದು ಎರಡನೇ ಸಿನಿಮಾ. ಅವರು  ಫೋನ್ ಮಾಡಿ ಈ ಸಿನಿಮಾದ ಬಗ್ಗೆ ಹೇಳಿದ್ರು. ವಿಶೇಷವಾಗಿ ಇದು ಶಿವರಾಜ್ ಕುಮಾರ್ ಸಿನಿಮಾ  ಅನ್ನೋದನ್ನು ಪ್ರಸ್ತಾಪ ಮಾಡಿದ್ದರು. ಮೊದಲು ನಾನು ಅಭಿನಯಿಸಬೇಕಾಗಿದ್ದ ಪಾತ್ರದ ಬಗ್ಗೆ ಕೇಳಿದೆ. ಸ್ಪೆಷಲ್  ಅಪೀರಿಯೆನ್ಸ್ ಆದ್ರೂ ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ  ಇದೆ ಅಂತ ಎನಿಸಿತು. ಮೊದಲು 8 ದಿನಗಳ ಚಿತ್ರೀಕರಣ  ಅಂತ ಹೇಳಲಾಗಿತ್ತು. ಅಲ್ಲಿಂದ ಅದು ಹತ್ತು ದಿನಕ್ಕೆ  ಮುಂದಕ್ಕೆ ಹೋಯಿತು. ಅಲ್ಲಿಂದ 18 ದಿನಗಳವರೆಗೂ
ಮುಂದುವರೆಯಿತು. ಅಷ್ಟು ದಿನವೂ ಎಂಜಾಯ್  ಮಾಡುತ್ತಾ ಶೂಟಿಂಗ್ ಮುಗಿಸಿದೆವು.

ಇನ್ಸ್‌ಸ್ಪೆಕ್ಟರ್ ವಿಕ್ರಮ್’ ಬಿಟ್ಟರೆ ಕನ್ನಡದಲ್ಲಿ ನೀವು  ಒಪ್ಪಿಕೊಂಡ ಹೊಸ ಪ್ರಾಜೆಕ್ಟ್ ಯಾವುವು?
ಸದ್ಯಕ್ಕೆ ಅದೊಂದು ಮಾತ್ರ. ಬೇರಾವ ಸಿನಿಮಾ  ಒಪ್ಪಿಕೊಂಡಿಲ್ಲ. ಮದುವೆ ಆದ್ರೆ ಸಾಕು ನಟಿಯರು ಪಾತ್ರಗಳಲ್ಲಿ  ಚ್ಯೂಸಿ ಆಗ್ತಾರೆ, ಇಲ್ಲವೇ ಮಹಿಳಾ ಪ್ರಧಾನ  ಚಿತ್ರಗಳೇ ಬೇಕು ಅನ್ನೋದು ಯಾಕೆ? ಹಾಗೇನು ಇಲ್ಲ, ಚಿತ್ರೋದ್ಯಮ ಬಹು ಕಾಲದಿಂದಲೂ  ಪುರುಷ ಪ್ರಧಾನವಾದದ್ದು. ಇಂತಹ ವ್ಯವಸ್ಥೆಯಲ್ಲಿ  ಪಾತ್ರಗಳಲ್ಲಿ ಚ್ಯೂಸಿ ಆಗೋದು ಓಕೆ, ಆದ್ರೆ ಮಹಿಳಾ  ಪ್ರಧಾನ ಚಿತ್ರಗಳೇ ಬೇಕು ಅನ್ನೋದು ಅಷ್ಟಾಗಿ ಸರಿಯಲ್ಲ. ಯಾಕಂದ್ರೆ ಇಲ್ಲಿ ಅಂತಹ ಎಷ್ಟು ಸಿನಿಮಾಗಳು ಬರಲು ಸಾಧ್ಯ?
 

ಈ ಹೊತ್ತಿಗೆ ನೀವು ಅಭಿನಯಿಸಿದ ಸಿನಿಮಾಗಳ  ಸಂಖ್ಯೆ 77. ಈ ಜರ್ನಿ ಹೇಗಿತ್ತು?
ಒಂದೇ ಮಾತಿನಲ್ಲಿ ಹೇಳೋದಾದ್ರೆ ಅದು ರೋಲರ್  ಕೋಸ್ಟರ್ ಜರ್ನಿ. ಅನೇಕ ಏರಿಳಿತ ನೋಡಿದ್ದೇನೆ. ಸೋಲು-ಗೆಲುವು ಕಂಡಿದ್ದೇನೆ. ನಾಯಕಿಯಾಗಿದ್ದಲ್ಲದೆ  ಕ್ಯಾಮಿಯೋ ರೋಲ್‌ಗಳಲ್ಲಿ, ವಿಶೇಷ ಪಾತ್ರಗಳಿಗೂ ಬಣ್ಣ ಹಚ್ಚಿದ್ದೇನೆ. 14 ವರ್ಷದಲ್ಲಿದ್ದಾಗಲೇ ನಾನು ಬಣ್ಣ ಹಚ್ಚಿದವಳು.ಅಲ್ಲಿಂದ ಇಲ್ಲಿ ತನಕ ಎಲ್ಲವೂ ತಾನಾಗಿಯೇ  ಆಗಿದೆ. ಜಸ್ಟ್ ಹ್ಯಾಪನಿಂಗ್. ಹೀಗೆ ಇರಬೇಕು, ಇಂತಿಷ್ಟೇ  ಸಿನಿಮಾ ಮಾಡ್ಬೇಕು ಅಂತ ಕಲಾವಿದೆ ಆದವಳಲ್ಲ. ನನ್ನ 77 ಸಿನಿಮಾದ ಒಟ್ಟು ಜರ್ನಿ ಖುಷಿ ಕೊಟ್ಟಿದೆ.
 

ಟಾರ್ಗೆಟ್ ಅಂತ ಏನಾದ್ರೂ....
ಅಯ್ಯೋ... ಅಂಥದ್ದೇನೂ ಇಲ್ಲ. ನಾನೊಬ್ಬಳು  ಕಲಾವಿದೆ. ಪ್ರೇಕ್ಷಕರಿಂದಲೇ ಈ ಮಟ್ಟಕ್ಕೆ ಬೆಳೆದವಳು. ಅದು ಜನರ ಆಶೀರ್ವಾದ. ಅವಕಾಶ ಇರೋ ತನಕ  ಅಭಿನಯಿಸುತ್ತೇನೆ. ಪ್ರೇಕ್ಷಕರು ತಿರಸ್ಕರಿಸಿದಾಗ ಸಾಕು ಈ ನಟನೆ ಅಂತ ಸುಮ್ಮನೆ ಮನೆಯಲ್ಲಿರುತ್ತೇನೆ.   

-ದೇಶಾದ್ರಿ ಹೊಸ್ಮನೆ 

click me!