
‘ನಾನು ಮತ್ತು ಅವನು (ಭಾರತಿರಾಜ) ಜೊತೆಯಾಗಿ ನೂರಾರು ಸಂಗೀತ ಕಾರ್ಯಕ್ರಮಗಳಿಗೆ, ಲೆಕ್ಕವಿಲ್ಲದಷ್ಟು ನಾಟಕ ಶೋಗಳಿಗೆ ಹೋಗಿದ್ದೇವೆ. ಆಗೆಲ್ಲಾ ಅವನು ಹೇಳುತ್ತಿದ್ದ ಬೇರು ಮೂಲದ ಕತೆಗಳನ್ನು ಕೇಳಿ ಇಂಥ ಕತೆಗಳನ್ನು ಈಗ ಯಾರು ಸಿನಿಮಾ ಮಾಡುತ್ತಾರೆ, ಯಾರು ನೋಡುತ್ತಾರೆ ಎನ್ನುತ್ತಿದ್ದೆ. ಆದರೆ, ನಾನು ಏನೇ ಹೇಳಿದರೂ ಆತ ತಾನು ನಂಬಿದ ದಾರಿಯಿಂದ ಆಚೆ ಬರಲಿಲ್ಲ. ಅದೇ ದಾರಿಯಲ್ಲಿ ಪಯಣಿಸಿ ಗೆದ್ದ. ನೆಲಮೂಲದ ಪ್ರತಿಭೆ ನನ್ನ ಗೆಳೆಯ.’
ಹೀಗೆ ಒಂದು ಸಂಗೀತ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದು ಎಸ್.ಬಿ.ಬಾಲಸುಬ್ರಮಣ್ಯಂ. ಅಂಥಾ ಒಂದು ಅದ್ಭುತ ಪ್ರತಿಭೆ ಭಾರತಿರಾಜ. ಜೂ.1ರಂದು ಇಹಲೋಕ ತ್ಯಜಿಸಿದ 86 ವರ್ಷದ ನಿರ್ದೇಶಕ ಭಾರತಿರಾಜ ಅವರು ಚಿತ್ರರಂಗಕ್ಕೆ ನಿರ್ದೇಶಕರಾಗಿ ಪರಿಚಯವಾಗಿದ್ದು 1977ರಲ್ಲಿ ತೆರೆಗೆ ಬಂದ ‘16 ವಯತಿನಿಲೆ’ ಮೂಲಕ. ಆ ಮೊದಲ ಚಿತ್ರವೇ ಸೂಪರ್ ಹಿಟ್. ಆನಂತರ ಸುಮಾರು 4 ದಶಕಗಳ ಕಾಲ ಮನಸ್ಸಲ್ಲಿ ಉಳಿಯುವ 40ಕ್ಕೂ ಹೆಚ್ಚು ಚಿತ್ರ ನಿರ್ದೇಶಿಸಿದ್ದಾರೆ.
2020ರಲ್ಲಿ ತೆರೆಕಂಡ ‘ಮೀಂದುಮ್ ಒರು ಮರಿಯಾದೈ’ ಅವರ ನಿರ್ದೇಶನದ ಕೊನೆಯ ಚಿತ್ರ. ನಿರ್ದೇಶನದ ಜೊತೆಗೆ ನಟನೆಯ ಮೂಲಕವೂ ಮನ ಗೆದ್ದಿದ್ದವರು ಅವರು. ಭಾರತಿರಾಜ ಅವರದ್ದು ಸಿನಿಮಾ ಕುಟುಂಬ. ಹುಟ್ಟಿದ್ದು ತಮಿಳುನಾಡಿನ ಥೇಣಿಯಲ್ಲಿ. ಇಸವಿ 1941 ಆಗಸ್ಟ್ 23. 1974ರಲ್ಲಿ ಚಂದ್ರಲೀಲರನ್ನು ಮದುವೆಯಾದ ಇವರಿಗೆ ಮನೋಜ್ ಭಾರತಿರಾಜ, ಜನನಿ ಇಬ್ಬರು ಮಕ್ಕಳಿದ್ದು, ಈ ಪೈಕಿ ಮನೋಜ್ ಭಾರತಿರಾಜ 2025ರಲ್ಲಿ ಹೃದಯಾಘಾತದಿಂದ ನಿಧನರಾದರು.
ಪುಟ್ಟಣ್ಣ ಕಣಗಾಲ್ ಶಿಷ್ಯ
ಭಾರತಿರಾಜ ಅವರು ಪುಟ್ಟಣ್ಣ ಕಣಗಾಲ್ ಅವರ ‘ರಂಗನಾಯಕಿ’ ಚಿತ್ರದ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿದವರು. ಹೀಗಾಗಿಯೇ ಭಾರತಿರಾಜ ಅವರನ್ನು ಪುಟ್ಟಣ್ಣ ಕಣಗಾಲ್ ಶಿಷ್ಯ ಅಂತಲೇ ಗುರುತಿಸುತ್ತಾರೆ. ಅಲ್ಲದೆ ಭಾರತಿರಾಜ ಅವರ ಬಹಳಷ್ಟು ಚಿತ್ರಗಳಿಗೆ ಚಿತ್ರೀಕರಣ ನಡೆದಿರುವುದು ಮೈಸೂರು ಸುತ್ತಮುತ್ತ ಎಂಬುದು ವಿಶೇಷ.
ಎಸ್‌ಪಿಬಿ ಸ್ನೇಹ, ಚಿತ್ರರಂಗಕ್ಕೆ ಪ್ರವೇಶ
ಭಾರತಿರಾಜ ಚಿತ್ರರಂಗಕ್ಕೆ ಬರುವ ಮುನ್ನ ಪೆಂಟ್ರೋಲ್ ಬಂಕ್ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಬರುತ್ತಿದ್ದ ಎಸ್.ಪಿ.ಬಾಲಸುಬ್ರಮಣ್ಯಂ ಪರಿಚಯ ಆಗುತ್ತದೆ. ಆಗ ಎಸ್‌ಪಿಬಿ ಸಿನಿಮಾಗಳಲ್ಲಿ ಹಾಡುವ ಅವಕಾಶ ಸಿಗದೆ, ಸಂಗೀತ ಕಚೇರಿಗಳನ್ನು ಮಾಡುತ್ತಿದ್ದರು. ಈ ಪರಿಚಯವೇ ಭಾರತಿರಾಜ ಮುಂದೆ ಇಳಯರಾಜ ಅವರನ್ನು ಎಸ್‌ಪಿಬಿ ಸಂಗೀತ ತಂಡಕ್ಕೆ ಸೇರಿಸಲು ಕಾರಣವಾಯಿತು.
ನಿರ್ದೇಶಕರಾಗಿ ಭಾರತಿರಾಜ ಚಿತ್ರರಂಗಕ್ಕೆ ಬರುವ ಹೊತ್ತಿಗೆ ಬಾಲಚಂದರ್, ಸಿ.ವಿ.ಶ್ರೀಧರ್, ಎ.ಪಿ. ನಾಗರಾಜನ್, ಬಾಲು ಮಹೇಂದರ್ ಅವರಂತಹ ದಿಗ್ಗಜ ನಿರ್ದೇಶಕರಿದ್ದರು. ಅವರ ಜೊತೆ ತಮ್ಮ ಛಾಪು ಮೂಡಿಸಿದ ಅದ್ಭುತ ಪ್ರತಿಭೆ ಭಾರತಿರಾಜ ಗ್ರಾಮೀಣ ಭಾಗದ ಕತೆಗಳನ್ನು ತೆರೆ ಮೇಲೆ ತಂದವರು. ಸ್ಟುಡಿಯೋಗಳಿಗೆ ಸೀಮಿತವಾಗಿದ್ದ ಸಿನಿಮಾಗಳ ಚಿತ್ರೀಕರಣವನ್ನು ಹಳ್ಳಿಗಾಡಿನ ಹಿನ್ನೆಲೆಯಲ್ಲಿ ಲೈವ್ ಲೊಕೇಷನ್‌ಗಳಲ್ಲಿ ಚಿತ್ರೀಕರಣ ಮಾಡಿದ ಕೀರ್ತಿ ಭಾರತಿರಾಜ ಅವರಿಗೆ ಸೇರಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.