Gandhadagudi: ಗಂಧದ ಗುಡಿಯಲ್ಲಿ ಹೈಲೈಟ್‌ ಆದ ಗುಡೇಕೋಟೆಯ ವಿಸ್ಮಯ ಶಿಲೆಗಳು

By Kannadaprabha News  |  First Published Oct 28, 2022, 8:57 AM IST
  • ಗಂಧದ ಗುಡಿಯಲ್ಲಿ ಹೈಲೈಟ್‌ ಆದ ಗುಡೇಕೋಟೆಯ ವಿಸ್ಮಯ ಶಿಲೆಗಳ
  • ಗುಡೇಕೋಟೆಯ ವಿಸ್ಮಯ ಶಿಲೆಗಳನ್ನು ಹೊರಜಗತ್ತಿಗೆ ಪರಿಚಯಿಸಿದ್ದ ಕನ್ನಡಪ್ರಭ
  • ಅಪ್ಪು ಈ ಶಿಲೆಗಳನ್ನು ಗಂಧದಗುಡಿ ಚಿತ್ರದಲ್ಲಿ ಬಳಸಿಕೊಂಡಿದ್ದರಿಂದ ಈಗ ಪ್ರವಾಸಿತಾಣ

ಭೀಮಣ್ಣ ಗಜಾಪುರ, ಕನ್ನಡಪ್ರಭ ವಾರ್ತೆ, ಕೂಡ್ಲಿಗಿ

ಕೂಡ್ಲಿಗಿ (ಅ. 28): ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ (Puneeth Rajkumar) ಅವರ ಅಭಿನಯದ ಕೊನೆಯ ಚಿತ್ರ, ಪರಿಸರ ಕುರಿತು ಮಾಹಿತಿ ಇರುವ ಸಾಕಷ್ಟುಕುತೂಹಲ ಕೆರಳಿಸಿ ನಾಳೆ, ಶುಕ್ರವಾರ ಬಿಡುಗಡೆಯಾಗಲಿರುವ ಗಂಧದಗುಡಿ ಚಿತ್ರದಲ್ಲಿ ತಾಲೂಕಿನ ಗುಡೇಕೋಟೆಯ ಕರಡಿಧಾಮ ಅರಣ್ಯ ಪ್ರದೇಶದಲ್ಲಿರುವ ವಿಸ್ಮಯ ಶಿಲೆಗಳು ಕಾಣಿಸಿಕೊಂಡಿದ್ದು ಅಪ್ಪು ಈ ಶಿಲೆಗಳನ್ನು ನೋಡಿ ವಾಹ್‌ ಎಂದು ಬಣ್ಣಿಸಿದ್ದಲ್ಲದೇ ಅದರ ಬಗ್ಗೆ ಆಸಕ್ತಿ ಕೂಡ ತೋರಿದ್ದರು. ಇದೀಗ ಈ ವಿಸ್ಮಯ ಕಲ್ಲುಗಳ ತಾಣ ಪ್ರವಾಸಿ ಕೇಂದ್ರವಾಗುತ್ತಿದೆ.

Tap to resize

Latest Videos

undefined

ಈ ವಿಸ್ಮಯ ಕಲ್ಲುಗಳು ಕಾಡಿನ ಮಧ್ಯ ಇರುವುದರಿಂದ 2020ಕ್ಕೆ ಮುಂಚೆ ಸ್ಥಳೀಯರಿಗೆ ಅಪರಿಚಿತವಾಗಿದ್ದವು. ಜು, 18, 2020ರಲ್ಲಿ ಗುಡೇಕೋಟೆ (Gudekote) ಕರಡಿ ಧಾಮದಲ್ಲಿ ಶಿಲೆಗಳ ಚಿತ್ತಾರ ಎನ್ನುವ ಶೀರ್ಷಿಕೆಯಡಿ ಕನ್ನಡಪ್ರಭದಲ್ಲಿ (Kannada Prabha) ವಿಶೇಷ ವರದಿ ಪ್ರಕಟವಾಗುವ ಮೂಲಕ ಈ ಶಿಲೆಗಳು ಹೊರಜಗತ್ತಿಗೆ ಪರಿಚಯವಾದವು. ನಂತರ ಪುನೀತ್‌ ರಾಜ್‌ಕುಮಾರ್‌ ಅವರು ಗಂಧದಗುಡಿ (Gandhadagudi) ಎನ್ನುವ ಪರಿಸರ ವನ್ಯಜೀವಿಗಳ ಬಗ್ಗೆ ಸಾಕ್ಷ್ಯಚಿತ್ರ ಚಿತ್ರೀಕರಣ ಮಾಡಲು ಕೂಡ್ಲಿಗಿ ತಾಲೂಕಿನ ಗುಡೇಕೋಟೆಗೆ ಸೆ.4,2021ಕ್ಕೆ ಬಂದಿದ್ದರು. ಈ ವಿಸ್ಮಯ ಶಿಲೆಗಳ ಬಗ್ಗೆ ಅರಣ್ಯಾಧಿಕಾರಿ ಎ. ರೇಣುಕಾ ಅವರು ವಿವರಿಸಿ ಆ ಸ್ಥಳ ಪರಿಚಯಿಸಿದ್ದಾರೆ. ಆ ವಿಸ್ಮಯ ಕಲ್ಲುಗಳನ್ನು ನೋಡಿ ವಾವ್‌..ಎಂದ ಪುನೀತ್‌, ಕಲ್ಲುಗಳ ಮುಂದೆ ನಿಂತು ಕ್ಯಾಮೆರಾಗೆ ಪೋಜ್‌ ಕೊಟ್ಟಿರುವುದಲ್ಲದೇ ಆ ಕಲ್ಲುಗಳನ್ನು ತನ್ನ ಗಂಧದಗುಡಿ ಸಾಕ್ಷ್ಯಚಿತ್ರದಲ್ಲಿ ಬಳಸಿಕೊಂಡಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಈ ವಿಸ್ಮಯ ಕಲ್ಲುಗಳಿಗೆ ಬಂದು ಭೇಟಿ ನೀಡಿದ ತಕ್ಷಣ ಮತ್ತಷ್ಟುಪ್ರವಾಸಿಗರು ಈ ವಿಸ್ಮಯ ಶಿಲೆಗಳನ್ನು ನೋಡಲು ಬರುತ್ತಿದ್ದಾರೆ.ಬೆರಗುಗೊಳಿಸುವ ಈ ಕಲ್ಲುಗಳು 25 ಅಡಿಗಳಿಗಿಂತಲೂ ಎತ್ತರ, 5 ಅಡಿಗಿಂತಲೂ ಅಗಲ ಇವೆ.

ಈ ವಿಸ್ಮಯ ಶಿಲೆಗಳನ್ನು ನೋಡಬೇಕೆಂದರೆ ಗುಡೇಕೋಟೆಯಿಂದ 5 ಕಿಮೀ ದೂರ ಸಂಚರಿಸಬೇಕು, ಗುಡೇಕೋಟೆಯಿಂದ ಸರ್ವೋದಯ ಗ್ರಾಮಕ್ಕೆ ಬಂದು ಅಲ್ಲಿಂದ 3 ಕಿಮೀ ಕರಡಿಧಾಮ ಪ್ರದೇಶದ ವೀಕ್ಷಣಾ ಗೋಪುರದ ಹತ್ತಿರ ಹೋಗಬೇಕು. ಅಲ್ಲಿಂದ 500 ಮೀಟರ್‌ ದೂರ ಬೆಟ್ಟಹತ್ತಿ ಇಳಿದರೆ ಈ ಡೊಕ್ಕಲು ಗುಂಡು ಎಂಬ ವಿಸ್ಮಯ ಕಲ್ಲುಗಳು ನೋಡಲು ಸಿಗುತ್ತದೆ. ಇಲ್ಲಿಗೆ ಹೋಗಲು ಅರಣ್ಯ ಇಲಾಖೆಯ ಅನುಮತಿ ಕಡ್ಡಾಯವಾಗಿ ಬೇಕಾಗುತ್ತದೆ.

ಗುಡೇಕೋಟೆಯ ಅರಣ್ಯಕ್ಕೆ ಸಾಕ್ಷ್ಯಚಿತ್ರ ಚಿತ್ರೀಕರಣಕ್ಕೆ ಬಂದು 55ದಿನಗಳಲ್ಲಿಯೇ ಅಪ್ಪು ಸಾವನ್ನಪ್ಪಿದ್ದರು. ಇಲ್ಲಿಯ ವಿಸ್ಮಯ ಶಿಲೆಗಳನ್ನು ನೋಡಿ ಎಷ್ಟೊಂದು ಸುಂದರವಾಗಿವೆ ಎಂದು ನಮ್ಮ ಸಿಬ್ಬಂದಿ ಜೊತೆ ವಿಸ್ಮಯ ಶಿಲೆಗಳ ಮುಂದೆ ನಿಂತು ಪೋಟೋ ತೆಗೆಸಿಕೊಂಡಿದ್ದರು. ತುಂಬಾ ಇಷ್ಟಪಟ್ಟಿದ್ದರು.

ಎ.ರೇಣುಕಾ, ಕೂಡ್ಲಿಗಿ ತಾಲೂಕು ಗುಡೇಕೋಟೆ ವಲಯ ಅರಣ್ಯಾಧಿಕಾರಿ

 

ಗುಡೇಕೋಟೆಯ ಸುತ್ತಮುತ್ತ ಹಳ್ಳಿಗಳ ಕುರಿಗಾಹಿಗಳು, ದನ ಗಾಹಿಗಳು ಮಾತ್ರ ಈ ವಿಸ್ಮಯ ಕಲ್ಲು ನೋಡಿದ್ದರು. ಅವರಿಗೆ ಈ ಕಲ್ಲುಗಳ ಮಹತ್ವವೇ ಗೊತ್ತಿಲ್ಲ ಹೀಗಾಗಿ ಅವರು ಈ ವಿಸ್ಮಯ ಶಿಲೆಗಳನ್ನು ಡೊಕ್ಕಲು ಗುಂಡುಗಳು ಎಂದು ಕರೆಯುತ್ತಿದ್ದರು. ಕನ್ನಡಪ್ರಭದಲ್ಲಿ 2 ವರ್ಷಗಳ ಹಿಂದೆ ಈ ವರದಿ ಬಂದ ನಂತರವೇ ಹೊರ ಜಗತ್ತಿಗೆ ಗೊತ್ತಾಗಿದ್ದು, ನಂತರ ಅಪ್ಪು ಅವರು ಗಂಧದಗುಡಿ ಸಾಕ್ಷ್ಯಚಿತ್ರದಲ್ಲಿ ಈ ವಿಸ್ಮಯ ಕಲ್ಲುಗಳನ್ನು ಚಿತ್ರೀಕರಿಸಿದ್ದರಿಂದ ಮತ್ತಷ್ಟುಪ್ರಚಲಿತಕ್ಕೆ ಬಂದಿದ್ದು ಈಗ ಪ್ರವಾಸಿ ತಾಣವಾಗುತ್ತಿರುವುದು ನಮಗೆ ಸಂತಸ ತಂದಿದೆ.

ಶ್ರೀನಿವಾಸ್‌, ಗುಡೇಕೋಟೆಯ ನಿವಾಸಿ27

click me!