
ಬೆಂಗಳೂರು(ಏ.26): ಕಟ್ಟಪ್ಪ (ಸತ್ಯರಾಜ್) ವಿವಾದದಿಂದ ಪಾರಾಗಿರುವ, ರಾಜ ಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಬಾಹುಬಲಿ-2' ಕರ್ನಾಟಕದ ಚಿತ್ರಮಂದಿರಗಳನ್ನು ಪ್ರವೇಶಿಸಲು ಸರ್ವಸನ್ನದ್ಧವಾಗಿದೆ. ಈಗಾಗಲೇ 25ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬುಕ್‌ಮೈಶೋ ಆ್ಯಪ್ ಮುಖಾಂತರ ಟಿಕೆಟ್ ಖರೀದಿ ಆರಂಭವಾಗಿದೆ. ಹಲವಾರು ಪ್ರದರ್ಶನಗಳ ಟಿಕೆಟ್ಟುಗಳು ಆಗಲೇ ಮಾರಾಟವೂ ಆಗಿವೆ.
ಕನ್ನಡದ ಸೂಪರ್‌ಸ್ಟಾರ್‌ಗಳ ಸಿನಿಮಾ ಬಿಡುಗಡೆಯ ಅದ್ಧೂರಿತನ ಮತ್ತು ಸಂಭ್ರಮದಲ್ಲಿ ಬಾಹುಬಲಿ-2 ಬಿಡುಗಡೆ ಆಗುವ ಸಾಧ್ಯತೆಯಿದೆ. ಬೆಂಗಳೂರಿನ ಕೆಲವು ಚಿತ್ರಮಂದಿರಗಳಲ್ಲಿ ಮುಂಜಾನೆ 5 ಗಂಟೆಗೆ ಮೊದಲ ಪ್ರದರ್ಶನ ನಡೆಯಲಿದೆ. ಹಲವಾರು ಚಿತ್ರಮಂದಿರಗಳಲ್ಲಿ ಬೆಳಗ್ಗೆ 6ರಿಂದ 7 ಗಂಟೆಯ ಒಳಗೆ ಮೊದಲ ಪ್ರದರ್ಶನ ಇಟ್ಟುಕೊಳ್ಳಲಾಗಿದೆ. ಈ ಮೊದಲ ಪ್ರದರ್ಶನದ ಟಿಕೆಟ್‌ಗಳ ದರ 300-400 ರು. ನಿಗದಿಯಾಗಿದೆ. ಬಹುತೇಕ ಮೊದಲ ಪ್ರದರ್ಶನದ ಟಿಕೆಟ್‌ಗಳು ಮಾರಾಟವಾಗಿವೆ.
ಗರಿಷ್ಠ ಮಿತಿ .200 ಏಟು
ಈ ಬಾರಿ ಬಾಹುಬಲಿ-2 ಚಿತ್ರವನ್ನು ಕರ್ನಾಟಕದ ಯಾವುದೇ ಹಂಚಿಕೆದಾರರೂ ಖರೀದಿಸಿಲ್ಲ. ಕನ್ನಡಪ್ರಭಕ್ಕೆ ಲಭ್ಯವಾದ ಮೂಲಗಳ ಪ್ರಕಾರ ಬಾಹುಬಲಿ ನಿರ್ಮಾಪಕರಾದ ಅರ್ಕ ಮೀಡಿಯಾ ಸಂಸ್ಥೆ, ಕರ್ನಾಟಕದ ಹಂಚಿಕೆಗಾಗಿ 45 ಕೋಟಿ ರು. ಬೇಡಿಕೆ ಇಟ್ಟಿತ್ತು. ಆದರೆ, ಕರ್ನಾಟಕ ಸರ್ಕಾರ ಈ ಸಲದ ಬಜೆಟ್‌ನಲ್ಲಿ ಟಿಕೆಟ್ ದರವನ್ನು ಗರಿಷ್ಠ 200 ರು.ಗೆ ನಿಗದಿ ಪಡಿಸಿದ್ದರಿಂದ ಅಷ್ಟೊಂದು ದೊಡ್ಡ ಮೊತ್ತ ಸಂಗ್ರಹಿಸುವುದು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಕರ್ನಾಟಕದ ಹಂಚಿಕೆದಾರರು ಸಿನಿಮಾ ಕೊಳ್ಳಲು ಹಿಂಜರಿದಿದ್ದರು.
ಮಾತುಕತೆ ನಡೆದ ನಂತರ ಗರಿಷ್ಠ 36 ಕೋಟಿ ಕೊಡುವುದಾಗಿ ಹಂಚಿಕೆದಾರರು ಹೇಳಿದ್ದರು. ಆ ಮೊತ್ತ ಒಪ್ಪಿಗೆಯಾಗದೇ, ಅರ್ಕ್ ಮೀಡಿಯಾ ಸಂಸ್ಥೆಯೇ ವಸುಪ್ರದ ಹಂಚಿಕೆಯ ಮೂಲಕ ಬಾಹುಬಲಿ ಚಿತ್ರ ವನ್ನು ಬಿಡುಗಡೆ ಮಾಡುತ್ತಿದೆ. ಚಿತ್ರದ ಸರ್ವ ಹಕ್ಕುಗಳೂ ನಿರ್ಮಾಪಕರ ಬಳಿಯಲ್ಲಿವೆ. ಹಂಚಿದಾರರಿಗೆ ಶೇ.2ರ ಕಮಿಷನ್ ಸಿಗಲಿದೆ. ಬೆಂಗಳೂರಿನ 25 ಚಿತ್ರಮಂದಿರಗಳಲ್ಲಿ 116 ಸ್ಕ್ರೀನುಗಳಲ್ಲಿ ಬಾಹುಬಲಿ -2 ತೆಲುಗು ಚಿತ್ರ ಬಿಡುಗಡೆಯಾಗುವುದು ಖಚಿತವಾಗಿದೆ. ಶುಕ್ರವಾರದ ಹೊತ್ತಿಗೆ ಇನ್ನೂ 100 ಸ್ಕ್ರೀನುಗಳು ಇದಕ್ಕೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ. ಇದರ ಜೊತೆಗೇ ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ಕ್ರಮವಾಗಿ 6, 4 ಮತ್ತು 1 ಸ್ಕ್ರೀನ್‌ನಲ್ಲಿ ಬಾಹುಬಲಿ-2 ತೆರೆ ಕಾಣುತ್ತಿದೆ.
ಡಬ್ಬಿಂಗ್ ನಿಲ್ಲಿಸಿದ ಸತ್ಯರಾಜ್
ಬಾಹುಬಲಿ-2 ಚಿತ್ರ ಕರ್ನಾಟಕದಲ್ಲಿ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆ ಕಾಣಲಿದೆ. ನಿರ್ಮಾಪಕರ ಆರಂಭಿಕ ಯೋಜನೆಯ ಪ್ರಕಾರ ಬಾಹುಬಲಿ ಕನ್ನಡದಲ್ಲೇ ಬಿಡುಗಡೆ ಆಗಬೇಕಾಗಿತ್ತು. ಕನ್ನಡಕ್ಕೆ ಡಬ್ ಮಾಡಿ ಬಾಹುಬಲಿ ಚಿತ್ರವನ್ನು ಬಿಡುಗಡೆ ಮಾಡಲು ಅರ್ಕ ಮೀಡಿಯಾ ನಿರ್ಧರಿಸಿತ್ತು. ಬಾಹುಬಲಿ, ಬಾಹುಬಲಿ-2 ಎರಡೂ ಚಿತ್ರವನ್ನೂ ಡಬ್ ಮಾಡುವ ಕಾರ್ಯ ಆಗಲೇ ಆರಂಭವಾಗಿತ್ತು.ಆದರೆ ಸತ್ಯರಾಜ್‌ರಿಂದಾಗಿ ಬಾಹುಬಲಿ-2 ಕನ್ನಡಕ್ಕೆ ಡಬ್ ಆಗಲಿಲ್ಲ.
ಕನ್ನಡ ಸಿನಿಮಾಗಳ ಮೇಲುಗೈ
ಸದ್ಯದ ಪರಿಸ್ಥಿತಿಯಲ್ಲಿ ಕನ್ನಡ ಸಿನಿಮಾಗಳು ಕರ್ನಾಟಕದಲ್ಲಿ ಒಳ್ಳೆಯ ಗಳಿಕೆ ಕಾಣುತ್ತಿವೆ. ಒರಾಯನ್ ಮಾಲ್ ಚಿತ್ರಮಂದಿರಗಳ ವಾರದ ಒಟ್ಟು ಗಳಿಕೆ ಕಳೆದೆರಡು ವಾರದ ಹಿಂದೆ 1.08 ಕೋಟಿ ಇತ್ತು. ಇದರಲ್ಲಿ ಕನ್ನಡ ಚಿತ್ರಗಳ ಪಾಲು 72 ಲಕ್ಷದಷ್ಟಿತ್ತು. ರಾಜಕುಮಾರ ಚಿತ್ರವೊಂದೇ 48 ಲಕ್ಷ ರು. ಗಳಿಸಿತ್ತು. ಮಿಕ್ಕಂತೆ, ಚಕ್ರವರ್ತಿ, ಶುದ್ಧಿ, ಶ್ರೀನಿವಾಸ ಕಲ್ಯಾಣದಂಥ ಚಿತ್ರಗಳು ಕೂಡ ಒಳ್ಳೆಯ ಗಳಿಕೆ ತಂದುಕೊಟ್ಟಿದ್ದವು. ಪರಭಾಷಾ ಚಿತ್ರಗಳ ಗಳಿಕೆ ಕರ್ನಾಟಕದಲ್ಲಿ ಕಳೆದ ನಾಲ್ಕೈದು ತಿಂಗಳುಗಳಿಂದ ಕುಂಠಿತವಾಗುತ್ತಾ ಸಾಗಿದೆ. ಕನ್ನಡ ಸಿನಿಮಾಗಳೇ ಹೆಚ್ಚಿನ ಗಳಿಕೆ ತಂದು ಕೊಡುತ್ತಿವೆ. ಹೆಬ್ಬುಲಿ ಚಿತ್ರ ಕೂಡ ಅಸಾಧಾರಣ ಗಳಿಕೆ ತಂದುಕೊಟ್ಟಚಿತ್ರ ಎನ್ನುವುದು ಹಿರಿಯ ಪ್ರದರ್ಶನ ಕೆ.ವಿ.ಚಂದ್ರಶೇಖರ್ ಅಭಿಪ್ರಾಯ.
ಈಗ ಬಿಡುಗಡೆ ಆಗುತ್ತಿರುವ ಬಾಹುಬಲಿ-2 ಚಿತ್ರವನ್ನು ಕನ್ನಡಿಗರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ಚಿತ್ರರಂಗದಲ್ಲಿ ಮನೆ ಮಾಡಿದೆ. ಬಾಹುಬಲಿ-1 ಬಿಡುಗಡೆ ಆದಾಗ ಕರ್ನಾಟಕದಲ್ಲಿ 33 ಕೋಟಿ ರು. ಸಂಗ್ರಹಿಸಿತ್ತು. ಆಗ ಪ್ರದರ್ಶನ ದರದ ಮೇಲೆ ಕಡಿವಾಣ ಇರಲಿಲ್ಲ. ಟಿಕೆಟ್ ಗರಿಷ್ಠ ಬೆಲೆ 200 ಇರುವ ಈ ಸಂದರ್ಭದಲ್ಲಿ ಬಾಹುಬಲಿ-2 ಹೆಚ್ಚೆಂದರೆ 18-20 ಕೋಟಿ ಗಳಿಸಬಹುದು ಅನ್ನು ವುದು ಗಾಂಧೀನಗರದ ಅನುಭವಿಗಳ ಅಭಿಪ್ರಾಯ.
200ಕ್ಕಿಂತ ಜಾಸ್ತಿ ಕೊಡಬೇಡಿ
ಸೋಮವಾರ ನಡೆದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಇನ್ನೆರಡು ದಿನದಲ್ಲಿ ಚಿತ್ರಗಳ ಟಿಕೆಟ್ ದರಕ್ಕೆ .200 ಗರಿಷ್ಠ ಮಿತಿ ವಿಧಿಸುವ ವಿಧೇಯಕ ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಈಗ ಕೆಲವು ಚಿತ್ರಮಂದಿರಗಳು ಟಿಕೆಟ್ ದರವನ್ನು 300-400 ರು. ನಿಗದಿ ಪಡಿಸಿವೆ. 2 ದಿನದಲ್ಲಿ ಕಾನೂನು ಜಾರಿಯಾಗಲಿದೆ. ಯಾರೂ ಟಿಕೆಟ್‌ಗೆ 200 ರು.ಗಿಂತ ಜಾಸ್ತಿ ಕೊಡಬೇಡಿ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬಾಹುಬಲಿ ಹವಾ ಬೆಂಗಳೂರಿಗೆ ಮಾತ್ರ ಸೀಮೀತ
ಬೆಂಗಳೂರಿಗೆ ಹೋಲಿಸಿದರೆ ಇತರ ಜಿಲ್ಲಾ ಕೇಂದ್ರಗಳಲ್ಲಿ ಬಾಹುಬಲಿ ಹವಾ ಅಷ್ಟೇನೂ ಜೋರಾಗಿಲ್ಲ. ಮೈಸೂರಿನ ಒಂದು ಚಿತ್ರಮಂದಿರದಲ್ಲಿ 12 ಪರದೆಗಳಲ್ಲಿ ಬಾಹು ಬಲಿ ತೆರೆ ಕಾಣುತ್ತಿದೆ. ಮೊದಲ ದಿನದ ಅಷ್ಟೂಟಿಕೆಟ್‌ಗಳು ಮಾರಾಟವಾಗಿವೆ. ಮಂಗಳೂರು ಜ್ಯೋತಿ ಚಿತ್ರಮಂದಿರದ ನಾಲ್ಕೂ ಪ್ರದರ್ಶನಗಳೂ ತುಂಬುತ್ತಿವೆ. ಕಲಬುರಗಿ ಯಲ್ಲಿ 7 ಪರದೆಗಳಲ್ಲಿ ಬಾಹುಬಲಿ ತೆರೆ ಕಾಣುತ್ತಿದ್ದು, ಬುಕ್ಕಿಂಗ್ ಭರಾಟೆ ಶುರುವಾಗಿದೆ. ಹುಬ್ಬಳ್ಳಿ, ಬೆಳಗಾವಿ, ತುಮಕೂರು, ಹಾಸನ ಗಳಲ್ಲಿ ಇನ್ನೂ ಬುಕಿಂಗ್ ಆರಂಭಗೊಂಡಿಲ್ಲ. ಆದರೆ ಶಿವಮೊಗ್ಗೆಯ ಮಂಜುನಾಥ ಚಿತ್ರಮಂದಿರದ ಮೊದಲ ದಿನದ ಅಷ್ಟೂಪ್ರದರ್ಶನಗಳು ಭರ್ತಿಯಾಗಿವೆ. ದಾವಣಗೆರೆ ಯಲ್ಲೂ ಬುಕಿಂಗ್ ಆರಂಭವಾಗಿದ್ದು, ಚಿತ್ರ ರಸಿಕರು ಬುಕಿಂಗ್ ಆರಂಭಿಸಿದ್ದಾರೆ. ದಾವಣ ಗೆರೆಯ ಎರಡು ಚಿತ್ರಮಂದಿರಗಳ ಹತ್ತು ಪರದೆಗಳಲ್ಲಿ ಬಾಹುಬಲಿ-2 ತೆರೆ ಕಾಣಲಿದೆ.
ಕರ್ನಾಟಕದಲ್ಲಿ ‘ಬಾಹುಬಲಿ-2' ಚಿತ್ರವನ್ನು ವಸುಪ್ರದಾ ಕಂಬೈನ್ಸ್ ಮೂಲಕ ವಿತರಣೆ ಮಾಡಲಾಗುತ್ತಿದೆ. ಸಾಕಷ್ಟುವಿವಾದದ ನಡುವೆಯೂ ಚಿತ್ರದ ಪ್ರದರ್ಶನಕ್ಕೆ ಬೇಡಿಕೆ ಬಂದಿದ್ದು, ಸದ್ಯಕ್ಕೆ 200 ಚಿತ್ರಮಂದಿರಗಳು ಬುಕ್ ಆಗಿವೆ. ಅಲ್ಲದೆ ಕನ್ನಡ ಸಿನಿಮಾಗಳು ಪ್ರದರ್ಶನವಾಗುತ್ತಿರುವ ಕಡೆ ‘ಬಾಹುಬಲಿ-2' ಚಿತ್ರವನ್ನು ಪ್ರದರ್ಶನ ಮಾಡದಿರಲು ವಿತರಕರೇ ನಿರ್ಧರಿಸಿದ್ದಾರೆ. ಹೀಗಾಗಿ ‘ಚಕ್ರವರ್ತಿ', ‘ರಾಜಕುಮಾರ' ಸೇರಿದಂತೆ ಕನ್ನಡದ ಯಾವುದೇ ಸಿನಿಮಾಗೆ ತೊಂದರೆಯಾಗದಂತೆ ‘ಬಾಹುಬಲಿ-2' ಚಿತ್ರವನ್ನು ಪ್ರದರ್ಶಿಸುವ ಯೋಚನೆ ವಿತರಕರದ್ದು.
ರಾಜ್ಯದ ಬೇರೆ ಬೇರೆ ಭಾಗಗಳಿಂದ ಸಾಕಷ್ಟುಬೇಡಿಕೆ ಬಂದಿದ್ದು, ಬೆಂಗಳೂರು ಹಾಗೂ ಕೋಲಾರ ಭಾಗದಿಂದ ಮಾತ್ರ ಹೆಚ್ಚಿನ ಬೇಡಿಕೆ ಬಂದಿದೆ. ಇನ್ನೂ ಸಮಯ ಇರುವುದರಿಂದ ಮತ್ತಷ್ಟುಚಿತ್ರಮಂದಿರಗಳಿಗೆ ಬೇಡಿಕೆ ಬರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ‘ಕನ್ನಡ ಸಿನಿಮಾಗಳಿಗೆ ತೊಂದರೆಯಾಗದಂತೆ ಬಾಹುಬಲಿ-2 ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆ ನಮ್ಮದು. ಹೀಗಾಗಿ ಅನಗತ್ಯವಾಗಿ ಬಿಡುಗಡೆ ಮಾಡುವ ಬದಲು ಎಲ್ಲಿ ಕನ್ನಡ ಸಿನಿಮಾಗಳ ಪ್ರದರ್ಶನ ಇಲ್ಲವೋ ಅಲ್ಲಿ ಮಾತ್ರ ಬಾಹುಬಲಿ-2 ಚಿತ್ರವನ್ನು ಪ್ರದರ್ಶಿಸಲಿದ್ದೇವೆ. ಸದ್ಯಕ್ಕೆ 200 ಚಿತ್ರಮಂದಿರಗಳು ಬುಕ್ ಆಗಿವೆ. ಮುಂದೆ ಮತ್ತಷ್ಟುಚಿತ್ರಮಂದಿರಗಳಿಗೆ ಬೇಡಿಕೆ ಬರಬಹುದು' ಎನ್ನುತ್ತಾರೆ ವಸುಪ್ರದಾ ಕಂಬೈನ್ಸ್‌ನ ಸುಧೀರ್ ಅವರು.
(ಕನ್ನಡಪ್ರಭ ವಾರ್ತೆ)
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.