ರಕ್ಷಿತ್ ಶೆಟ್ಟಿ ಅವರ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಶೂಟಿಂಗ್ ಸೆಟ್‌ನಲ್ಲೇ ದ್ವಿ ಶತಕ ದಾಖಲಿಸುವತ್ತ ಮುಖ ಮಾಡಿದೆ. ಆ ಮೂಲಕ ಕನ್ನಡದ ಸಿನಿಮಾವೊಂದು 200 ದಿನ ಸೆಟ್ನಲ್ಲೇ ಸದ್ದು ಮಾಡಿದ್ದು ಇದೇ ಮೊದಲು ಎಂಬುದು ಚಿತ್ರದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಮಾತು.
ರಕ್ಷಿತ್ ಶೆಟ್ಟಿ ಹಾಗೂ ಶಾನ್ವಿ ಶ್ರೀವಾಸ್ತವ ಜೋಡಿಯಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಈಗಾಗಲೇ 160 ದಿನಗಳ ಚಿತ್ರೀಕರಣ ಮಾಡಲಾಗಿದೆ. ಇನ್ನೂ 40 ದಿನ ಬಾಕಿ ಇದೆ. ಅಲ್ಲಿಗೆ ಈ ಬಾಕಿ ದಿನಗಳ ಶೂಟಿಂಗ್ ಮುಗಿದರೆ ಬರೋಬ್ಬರಿ 200 ದಿನಗಳ ಶೂಟಿಂಗ್ ಮಾಡಿಕೊಂಡ ಹೆಗ್ಗಳಿಕೆಗೆ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಪಾತ್ರವಾಗಲಿದೆ.
ಯಾಕೆ ಇಷ್ಟು ದಿನ ಬೇಕಾಯಿತು?
ಸಚಿನ್ ರವಿ ನಿರ್ದೇಶನದ ಈ ಚಿತ್ರದ ಕತೆ ಸಾಗುವುದು 90ರ ದಶಕದದಿನಗಳ ಹಿನ್ನೆಲೆಯಲ್ಲಿ. ಹೀಗಾಗಿ ಆ ದಿನಗಳನ್ನು ಮರು ಸೃಷ್ಟಿಸುವ ಸೆಟ್‌ಗಳನ್ನು ಹೆಚ್ಚಾಗಿ ಹಾಕಬೇಕಾಯಿತು. ಚಿತ್ರದ ಶೇ.90 ಭಾಗ ಶೂಟಿಂಗ್ ಸೆಟ್‌ಗಳಲ್ಲೇ ಚಿತ್ರೀಕರಣ ಮಾಡಲಾಗಿದೆ. ಆ ದಿನಗಳ ಸೆಟ್‌ಗಳನ್ನು ನಿರ್ಮಿಸುವುದಕ್ಕೂ ಸಾಕಷ್ಟು ಸಮಯ ಹಿಡಿಯುತ್ತಿದೆ. ಮೋಹನ್ ಬಿ ಕೆರೆ ಸ್ಟುಡಿಯೋ, ಕಂಠೀರವ ಸ್ಟುಡಿಯೋ ಸೇರಿದಂತೆ ಬೇರೆ ಬೇರೆ ಸೆಟ್‌ಗಳನ್ನು ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಬೇರೆ ಬೇರೆ ಭಾಷೆಗಳಿಗೂ ಈ ಸಿನಿಮಾ ಹೋಗಲಿದ್ದು, ಮೇಕಿಂಗ್ನಲ್ಲೂ ಅದ್ದೂರಿತನ ಕಾಯ್ದುಕೊಳ್ಳುವ ಕಾರಣಕ್ಕೆ ಶೂಟಿಂಗ್‌ಗೆ ಇಷ್ಟು ದಿನಗಳು ಬೇಕಾಗುತ್ತಿವೆ.
ರಕ್ಷಿತ್ ಚಿತ್ರ ನೋಡುತ್ತೇನೆ ಎಂದು ರಶ್ಮಿಕಾ ಮಂದಣ್ಣ
ಜುಲೈನಲ್ಲಿ ತೆರೆಗೆ
ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಆಗಲೇ ಪಕ್ಕಾ ಮಾಡಿಕೊಂಡಿದೆ. ಮಾರ್ಚ್ ತಿಂಗಳ ಹೊತ್ತಿಗೆ ಚಿತ್ರೀಕರಣ ಮುಗಿಸಿಕೊಳ್ಳಲಿದೆ. ಆ ನಂತರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮಾಡಿಕೊಂಡು ಜುಲೈ 3ನೇ ವಾರದಲ್ಲಿ ಚಿತ್ರವನ್ನು ತೆರೆಗೆ ತರುವ ಯೋಚನೆ ನಿರ್ಮಾಪಕರದ್ದು. ಅಷ್ಟರಲ್ಲಿ ಕ್ರಿಕೆಟ್ ಕೂಡ ಮುಗಿದಿರುತ್ತದೆ. ಹೀಗಾಗಿ ತಮ್ಮ ಚಿತ್ರಕ್ಕೆ ಯಾವುದೇ ಅಡ್ಡಿ ಇರಲ್ಲ ಎಂಬುದು ನಿರ್ಮಾಪಕರ ಲೆಕ್ಕಾಚಾರ. ಜುಲೈ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ನಿಟ್ಟಿನಲ್ಲಿ ಇಡೀ ತಂಡ ಕೆಲಸ ಮಾಡುತ್ತಿದೆ.