
1) ನನ್ನತ್ರ ಏನಿದೆ ಮಾತ್ಲಾಡಿಕ್ಕೆ..?
ಅಂ: ದಿನನಿತ್ಯ ಸಿಕ್ಕರೂ ನೀವು ಮಾತನಾಡಬೇಕು ಅಂತೀರಿ. ನನ್ನತ್ರ ಏನಿದೆ ಮಾತನಾಡೋದಿಕ್ಕೆ? ಹೇಳಿದ್ದೆ ಹೇಳೋ ಅಂತಾರಲ್ಲ ಹಾಗೆ ಹೇಳಿದ್ದೇ ಹೇಳಬೇಕು ಅಷ್ಟೇ. ರಾಜಕಾರಣ ಬಿಟ್ಟು ಏನಾದ್ರೂ ಮಾತನಾಡೋಣ. ನಾನೀಗ ಮಂತ್ರಿ ಅಲ್ಲ. ಜತೆಗೆ ರೂಲಿಂಗ್ ಪಾರ್ಟಿಯಲ್ಲಿದ್ದೇನೆ. ಒಂದಷ್ಟು ರೆಸ್ಟ್ ಬೇಕು, ನೀವೇ ಮಾಡ್ಕೊಳ್ಳಿ ರಾಜಕಾರಣ ಅಂತ ಪಕ್ಷದವರಿಗೆ ಹೇಳಿದ್ದೇನೆ. ರಾಜಕಾರಣ ಬಿಟ್ಟು ಬೇರೆ ಮಾತನಾಡೋಣ. ಇದ್ದೇ ಇದೆ ಸಿನಿಮಾ ಮಾತು. ಆ ಬಗ್ಗೆ ಏನಾದ್ರು ಕೇಳಿ ಹೇಳ್ತೀನಿ.
2) ಭೀಷ್ಮ ನಾನೇ ಆಗ್ಬೇಕಿರಲಿಲ್ಲ.
ಅಂ: ನೋ ಡೌಟ್, ‘ಮುನಿರತ್ನ ಕುರುಕ್ಷೇತ್ರ’ ಕನ್ನಡದ ಒಂದು ಬಿಗ್ ಬಜೆಟ್ ಸಿನಿಮಾ. ಭೀಷ್ಮನ ಪಾತ್ರ ನೀವೇ ಮಾಡ್ಬೇಕು ಅಂತ ಮುನಿರತ್ನ ಹಾಗೂ ನಾಗಣ್ಣ ಕೇಳಿದ್ರು. ಅದಕ್ಕೆ ನಾನೇ ಬೇಕಾ? ಹೀಗಂತ ಇಬ್ಬರಿಗೂ ಕೇಳಿದೆ. ಉದ್ದನೆ ಗಡ್ಡ, ಮೀಸೆ ಎರಡೂ ಹಾಕ್ಕೊಂಡ್ರೆ ನೀವೇ ಭೀಷ್ಮ ಆಗಬಹುದು ಅಂತ ಹೇಳಿದ್ದೆ. ಯಾಕಂದ್ರೆ, ಭೀಷ್ಮನ ಕತೆ ಏನು ಅಂತ ನಿಮ್ಗೂ ಗೊತ್ತಲ್ಲ?
ಏನೋ, ನೀವೇ ಬೇಕೇ ಬೇಕು ಅಂದ್ರು. ಆಯ್ತು ಅಂತ ಒಪ್ಪಿಕೊಂಡೆ. ಶೂಟಿಂಗಿಗೂ ಹೋಗಿ ಬಂದೆ. ಓಡಾಟ ತುಂಬಾ ಕಷ್ಟ. ಒಂದಷ್ಟು ದಿನ ಅಲ್ಲಿದ್ದು ಚಿತ್ರೀಕರಣ ಮುಗಿಸಿಕೊಂಡು ಬಂದೆ. ಚೆನ್ನಾಗಿತ್ತು. ನೈಸ್ ಎಕ್ಸ್‌ಪೀರಿಯನ್ಸ್. ಏನ್ ಮಾಡಿ, ಏನ್ ಪ್ರಯೋಜನ, ಉದ್ದನೆಯ ಗಡ್ಡ, ಮೀಸೆ ನಡುವೆ ತೆರೆ ಮೇಲೆ ನಾನೇ ಗೊತ್ತಾಗದಿದ್ದರೆ! ಆದ್ರೂ ಒಂದೊಳ್ಳೆ ಸಿನಿಮಾ ಅನ್ನೋ ಖುಷಿ ಇದೆ.
3) ದಾಡಿ ಬಿಟ್ಟಿದ್ದು ಅಂಬಿ ಆಗೋದಕ್ಕೆ ?
ಅಂ: ನನ್ನ ದಾಡಿ ಮೇಲೆ ನಿಮಗ್ಯಾಕೆ ಕಣ್ಣು ? ಇದು ಹೊಸ ಸಿನಿಮಾದ ಗೆಟಪ್. ಸುದೀಪ್ ಜತೆಗೆ ಒಂದು ಸಿನಿಮಾ ಮಾಡುತ್ತಿದ್ದೇನೆ.‘ಅಂಬಿ ನಿಂಗೆ ವಯಸ್ಸಾಯಿತೋ’ ಅಂತ ಆ ಸಿನಿಮಾದ ಹೆಸರು. ಅದಕ್ಕಾಗಿಯೇ ಈ ಗೆಟಪ್. ಕತೆ ತುಂಬಾ ಚೆನ್ನಾಗಿದೆ. ಸೆಂಟಿಮೆಂಟ್‌ಗೆ ಹೆಚ್ಚು ಒತ್ತು ನೀಡಿದ್ದೇವೆ. ನಿರ್ದೇಶಕರು ಹೊಸಬರು. ನನ್ನ ನೋಡಿದ್ರೆ ಅವರಿಗೆ ಭಯ. ಎದುರಿಗೆ
ಕುಳಿತುಕೊಳ್ಳುವುದಕ್ಕೂ ಭಯ ಪಡ್ತಾರೆ. ಕಲಾವಿದರ ವಿಚಾರದಲ್ಲಿ ನಿರ್ದೇಶಕರಿಗೆ ಭಯ ಇರಬಾರದು. ನಾನೇ ಆತನಿಗೆ ಕೂರಿಸಿಕೊಂಡು ಹೇಳಿದ್ದೇನೆ. ನೀವು ನಿರ್ದೇಶಕರು, ನಾನು ಒಬ್ಬ ನಟ. ಸೆಟ್‌ನಲ್ಲಿ ನೀವು ಹೇಳಿದಂತೆ ನಾವು ಕೇಳುತ್ತೇವೆ ಅಂತ. ಪಾಪ.. ಆತ ಹುಂ ಅಂತ ಒಪ್ಪಿಕೊಂಡಿದ್ದಾನೆ. ಸೆಟ್‌ಗೆ ಹೋದಾಗಲೇ ಏನು ಅಂತ ಗೊತ್ತಾಗುತ್ತೆ.
4) ಪುಟ್ಟಣ್ಣ ಅಂದ್ರೆ ನಮ್ಗೆ ನಡುಕ ಬರ್ತಾ ಇತ್ತು .
ಅಂ: ಪುಟ್ಟಣ್ಣ ಅಂದ್ರೆ ನಮ್ಗೆಲ್ಲ ಭಯ. ಅವರ ಸಿನಿಮಾಗಳಲ್ಲಿ ಅಭಿನಯಿಸುವಾಗ ಶಿಸ್ತು ಅತೀ ಮುಖ್ಯ. ಗಂಟೆ ಹೊಡೆದಂತೆ ನಿರ್ದಿಷ್ಟ ಸಮಯಕ್ಕೆ ಸೆಟ್‌ನಲ್ಲಿ ಇರಬೇಕಾಗಿತ್ತು. ಆದ್ರೂ ನನಗೆ ಲೇಟಾಗಿ ಹೋಗುವ ಅಭ್ಯಾಸ. ಹೋಗಿ ಏನಾದ್ರೂ ನೆಪ ಹೇಳ್ಬೇಕಿತ್ತು. ಕಾರಿನ ಟೈರ್ ಪಂಕ್ಚರ್ ಆಗಿತ್ತು ಅನ್ನೋದೋ ಅಥವಾ ಇನ್ನೇನೋ ಕಾರಣವೂ ಹೇಳ್ಬೇಕಿತ್ತು. ಆದ್ರೂ, ಅವರು ಬಿಡ್ತಿರಲಿಲ್ಲ. ‘ಏ ಗೌಡ, ಯಾರೋ ನಿನ್ನ ಬೆಳೆಸಿದ್ದು’ ಅಂತ ಗುಡುಗುತ್ತಿದ್ದರು. ನೀವೇ ಅಲ್ವಾ ಸರ್, ಬೆಳೆಸಿದ್ದು ಅಂತ ತಮಾಷೆ ಮಾಡಿದಾಗ, ಆಯ್ತು ಅಂತ ಸುಮ್ಮನಾಗಿ ಕ್ಯಾಮೆರಾ ರೆಡಿನಾ ಅಂತಿಂದ್ರು. ಇವತ್ತು ಹಾಗಿಲ್ಲ. ಕಾಲ ಬದಲಾಗಿದೆ.
5) ಗಡ್ಡ ತೆಗೆಯೋ ತನಕ ಬೇರೆ ಸಿನಿಮಾ ಇಲ್ಲ
ಅಂ: ಸದ್ಯಕ್ಕೆ ರಾಜಕಾರಣ ಇಲ್ಲ. ‘ಅಂಬಿ ನಿಂಗೆ ವಯಸ್ಸಾಯಿತೋ’ ಸಿನಿಮಾಗಾಗಿ ಗಡ್ಡ ಬಿಟ್ಟಿದ್ದೇನೆ. ಮೂರು ಶೇಡ್ ಇರುವಂತಹ ಪಾತ್ರ. ಯಂಗರ್ ಜನರೇಷನ್‌ಲ್ಲಿ ಸುದೀಪ್ ಬರ್ತಾರೆ. ವಯಸ್ಸಾದ ಪಾತ್ರದಲ್ಲಿ ನಾನು. ತುಂಬಾ ಚೆನ್ನಾಗಿದೆ. ಈ ಚಿತ್ರ ಮುಗಿಯೋ ತನಕ ಗಡ್ಡ ತೆಗೆಯೋದಿಲ್ಲ. ಚಿತ್ರದಲ್ಲಿ ನನ್ನ ಜತೆಗೆ ಹೀರೋಯಿನ್ ಯಾರು ಅಂತ ನಿರ್ದೇಶಕರು ಇನ್ನು
ಹೇಳಿಲ್ಲ. ಸುಹಾಸಿನಿ ಬರ್ತಾರೋ, ಅಂಬಿಕಾ ಬರ್ತಾರೋ ಅವರಿಗೇ ಗೊತ್ತು. ಒಂದು ವೇಳೆ ಅಂಬಿಕಾ ಬರೋದಾದ್ರೆ..ನಂಗೇನು ನಷ್ಟವಿಲ್ಲ!!
6) ಮಂಡ್ಯನೋ ಮೇಲುಕೋಟೆನೋ ಹೈಕಮಾಂಡ್‌ಗೆ ಗೊತ್ತು ?
ಅಂ: ಹೌದು, ಎಲೆಕ್ಷನ್ ಬರ್ತಾ ಇದೆ ಅಂತಾರೆ. ನನ್ನ ಪ್ರಕಾರ ಇನ್ನು 9 ತಿಂಗಳು ಇದೆ. ಆಮೇಲೆ ಎಲ್ಲಿಗೆ ಅಂತ ನೋಡೋಣ. ಆದ್ರೆ ಹೈಕಮಾಂಡ್ ಅಷ್ಟು ದಡ್ಡ ಅನ್ಕೊಂಡಿದ್ದೀರಾ? ಅಲ್ಲೇ ಕೂತ್ಕೊಂಡು ಮಾಹಿತಿ ಕಲೆಕ್ಟ್ ಮಾಡುತ್ತೆ. ಅಲ್ಲಿ ಬಟನ್ ಒತ್ತಿದ್ರೆ, ಅಮಿತಾಬ್ ಬಚ್ಚನ್ ಎಲ್ಲಿದ್ದಾರಂತಲೂ ಗೊತ್ತಾಗುತ್ತೆ.ಅವರಿಗೆ ನಾನೇನು ಅಂತ ಗೊತ್ತೇ ಇದೆ. ಕೇಂದ್ರ ಸರ್ಕಾರದಲ್ಲಿ ಮಂತ್ರಿ, ರಾಜ್ಯ ಸರ್ಕಾರದಲ್ಲಿ ಕ್ಯಾಬಿನೆಟ್ ಹುದ್ದೆ. ಇವ್ಯಾವುದೂ ನಾನು ಕೇಳಿ ಪಡೆದುಕೊಂಡಿದ್ದಲ್ಲ. ಮಂಡ್ಯನೋ, ಮೇಲುಕೋಟೆನೋ ಅವರೇ ನಿರ್ಧಾರ ಮಾಡ್ತಾರೆ. ಯಾರು ಏನೇ ಹೇಳ್ಕೊಳ್ಳಿ ಬಿಡಿ. ನಂಗೇನು
- ದೇಶಾದ್ರಿ ಹೊಸ್ಮನೆ, ಕನ್ನಡಪ್ರಭ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.