
ಬೆಂಗಳೂರು(ಜ.06): ಅಂತೂ ಅಂಬರೀಶ್ ಪುತ್ರ ಅಭಿಷೇಕ್ ಅವರಿಗೆ ಕತೆ ಓಕೆ ಆಗಿದೆ. ಹೀಗಾಗಿ ಅಂಬಿ ಪುತ್ರನ ಚಿತ್ರಕ್ಕೆ ಯಾರು ಆ್ಯಕ್ಷನ್ ಕಟ್ ಹೇಳುತ್ತಾರೆಂಬ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಪವನ್ ಒಡೆಯರ್ ಅವರೇ ಅಭಿಷೇಕ್ ಅವರ ಮೊದಲ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಆ ಮೂಲಕ ರೆಬೆಲ್ ಸ್ಟಾರ್ ಕುಟುಂಬದ ಕುಡಿಯನ್ನು ಚಿತ್ರರಂಗಕ್ಕೆ ಲಾಂಚ್ ಮಾಡುವ ಅವಕಾಶಕ್ಕೆ ಪವನ್ ಒಡೆಯರ್ ಪಾತ್ರರಾಗಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆದರೆ, ಫೆಬ್ರವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚಿತ್ರಕ್ಕೆ ಅದ್ದೂರಿಯಾಗಿ ಮುಹೂರ್ತ ನಡೆಯಲಿದೆ. ನಿರ್ಮಾಪಕ ಸಂದೇಶ್ ನಾಗರಾಜ್ ಹಾಗೂ ಸ್ವತಃ ಅಂಬರೀಶ್ ಅವರೇ ಕತೆ ಓಕೆ ಮಾಡಿದ್ದಾರೆ. ವಿಶೇಷ ಅಂದರೆ ಒಂದೇ ಚಿತ್ರದಲ್ಲಿ ಬೇರೆ ಬೇರೆ ನಿರ್ದೇಶಕರು ಕೆಲಸ ಮಾಡಲಿದ್ದಾರೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ಪ್ರತಿ ಹಾಡಿಗೂ ಬೇರೆ ಬೇರೆ ಸಂಗೀತ ನಿರ್ದೇಶಕರು ಕೆಲಸ ಮಾಡಲಿದ್ದಾರೆ. ಜತೆಗೆ ಕತೆ ಹಾಗೂ ನಿರ್ದೇಶನ ಪವನ್ ಒಡೆಯರ್ ಅವರದ್ದಾದರೆ ಚಿತ್ರಕತೆಯನ್ನು ಮತ್ತೊಬ್ಬ ನಿರ್ದೇಶಕರಿಂದ ಮಾಡಿಸುವ ಯೋಚನೆ ನಿರ್ಮಾಪಕ ಸಂದೇಶ್ ನಾಗರಾಜ್ ಅವರದ್ದು.
ಸಂಗೀತ ವಿಭಾಗದಲ್ಲಿ ಆರು ಮಂದಿ ಸಂಗೀತ ನಿರ್ದೇಶಕರು ಕೆಲಸ ಮಾಡಿದರೆ, ನಿರ್ದೇಶನ ವಿಭಾಗದಲ್ಲಿ 3 ಮಂದಿ ನಿರ್ದೇಶಕರು ತೊಡಗಿಸಿಕೊಳ್ಳುವ ಸಾಧ್ಯತೆಗಳಿವೆ. ಅಂದಹಾಗೆ ಚಿತ್ರದ ಕೆಲ ದೃಶ್ಯ ಹಾಗೂ ಸಂಭಾಷಣೆಗಳನ್ನು ಸಾರ್ವಜನಿಕ ಅಭಿಪ್ರಾಯದ ಮೇರೆಗೆ ಆಯ್ಕೆ ಮಾಡಿಕೊಂಡು ಯಾವ ದೃಶ್ಯ ಹಾಗೂ ಸಂಭಾಷಣೆಗಳಿಗೆ ಹೆಚ್ಚಿನ ಬೆಂಬಲ ಸಿಗುತ್ತದೋ ಅದನ್ನೇ ಚಿತ್ರದಲ್ಲಿ ಬಳಸಿಕೊಳ್ಳುವ ಪ್ಲಾನ್ ಕೂಡ ನಿರ್ಮಾಪಕರ ಮುಂದಿದೆ. ಅಭಿಷೇಕ್ ಅವರ ಮೊದಲ ಚಿತ್ರವನ್ನು ಹೀಗೆ ಬೇರೆ ಬೇರೆ ಐಡಿಯಾಗಳ ಮೂಲಕ ಲಾಂಚ್ ಮಾಡುವುದಕ್ಕೆ ನಿರ್ಮಾಪಕರು ತಯಾರಿ ನಡೆಸಿಕೊಂಡಿದ್ದಾರೆ.
ಚಿತ್ರಕ್ಕೆ ‘ಜಲೀಲ’ ಅಥವಾ ‘ಕನ್ವರ್ ಲಾಲ್’ ಈ ಎರಡರಲ್ಲಿ ಯಾವ ಹೆಸರು ಎಂಬುದು ಸದ್ಯಕ್ಕೆ ಅಂತಿಮವಾಗಿಲ್ಲ. ಚಿತ್ರದ ನಾಯಕಿ ಸೇರಿದಂತೆ ಚಿತ್ರದ ಹೆಸರು ಕೂಡ ಸದ್ಯದಲ್ಲೇ ಅಂತಿಮಗೊಳ್ಳಲಿದೆ. ಒಂದು ದೊಡ್ಡ ಸಂಭ್ರಮದ ಮೂಲಕ ಅಭಿಷೇಕ್ ಅವರ ಸಿನಿಮಾ ಸೆಟ್ಟೇರುತ್ತಿದೆ. ಅಂಬರೀಶ್ ಕುಟುಂಬದ ಗೆಳೆಯರಾದ ಸಂದೇಶ್ ನಾಗರಾಜ್ ಭರ್ಜರಿಯಾಗಿ ಅಭಿಷೇಕ್ ಅವರನ್ನು ಲಾಂಚ್ ಮಾಡಿಸುವ ಯೋಚನೆಯಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.