
ನಾನು ಓದುತ್ತಿದ್ದ ಹಾಸ್ಟೆಲ್ ಅಂಬರೀಶ್ ಮನೆ ಪಕ್ಕದಲ್ಲೇ ಇತ್ತು. ಅಲ್ಲಿಂದ ಪರಿಚಯವಾಗಿದ್ದು. ಅಂದಿನಿಂದ ಇಂದಿನ ತನಕ ಅಂದರೆ ಮೊನ್ನೆ ರಾತ್ರಿ ಅಸ್ಪತ್ರೆಗೆ ಹೋಗುವ ಮುನ್ನ ನನ್ನ ಕರೆಸಿಕೊಂಡು ಮಗನ ಸಿನಿಮಾ ಬಗ್ಗೆ ಮಾತನಾಡಿದ್ದರು.
ಬಾಲ್ಯದ ಗೆಳೆಯನಾದ ನನ್ನ ಚಿತ್ರರಂಗಕ್ಕೆ ಕರೆದುಕೊಂಡು ಬಂದು ಸಿನಿಮಾ ನಿರ್ಮಾಪಕನ್ನಾಗಿಸಿದ ವ್ಯಕ್ತಿ ಅಂಬಿ. 1965ರಲ್ಲಿ ನಾನು ನಿರ್ಮಿಸಿದ ‘ಮಣ್ಣಿನ ದೋಣಿ’ ಚಿತ್ರಕ್ಕೆ ಅಂಬರೀಷ್ ನಾಯಕ. ನನಗೆ ದೊಡ್ಡ ಮಟ್ಟದಲ್ಲಿ ಹೆಸರು ಕೊಟ್ಟ ಸಿನಿಮಾ. ಆ ಚಿತ್ರದ ಗೆಲುವು ನಾನು ಚಿತ್ರರಂಗದಲ್ಲಿ ನಿರ್ಮಾಪಕನಾಗಿ ಮುಂದುವರಿಯುವಂತೆ ಮಾಡಿತು.
1965ರಲ್ಲಿ ಅಂಬಿ ನನ್ನ ಸಿನಿಮಾ ನಿರ್ಮಾಪಕನನ್ನಾಗಿಸಿದರೆ 2018ರಲ್ಲಿ ಅವರ ಮಗ ಅಭಿಷೇಕ್‌ನನ್ನು ‘ಅಮರ್’ ಚಿತ್ರದ ಮೂಲಕ ನಾನು ಹೀರೋ ಆಗಿ ಲಾಂಚ್ ಮಾಡಿಸುತ್ತಿದ್ದೇನೆ. ಇದು ನನ್ನ ಆತ್ಮೀಯ ಗೆಳೆಯನಿಗೆ ನಾನು ಕೊಡುತ್ತಿರುವ ಮಹತ್ತರವಾದ ನೆನಪಿನ ಕಾಣಿಕೆ ಎಂದು ಭಾವಿಸುವೆ. ತುಂಬಾ ಜಾಲಿ ಮನುಷ್ಯ, ಸ್ನೇಹಜೀವಿ, ಯಾವುದಕ್ಕೂ ಕೇರ್ ಮಾಡದವ, ಒಳಗೊಂದು ಹೊರಗೊಂದು ಇಟ್ಟುಕೊಂಡವನಲ್ಲ. ಎಲ್ಲರನ್ನು ಪ್ರೀತಿಯಿಂದ ಕಾಣುತ್ತಿದ್ದವ. ವೈಯಕ್ತಿಕವಾಗಿ ಯಾರಿಗೂ ನೋವುಂಟು ಮಾಡದವ. ಯಾಕೆಂದರೆ ನಾನು ಮತ್ತು ಅವನು ರಾಜಕೀಯವಾಗಿ ಬೇರೆ ಬೇರೆ ಪಕ್ಷಗಳಲ್ಲಿದ್ದವರು. ಆತ ಕಾಂಗ್ರೆಸ್, ನಾನು ಜೆಡಿಎಸ್. ಚುನಾವಣೆ ಸಮಯದಲ್ಲಿ ಮೈಸೂರಿನಲ್ಲಿ ಪ್ರಚಾರ ಮಾಡುವಾಗ ನನ್ನದೇ ಹೋಟೆಲ್ನಲ್ಲಿ ಮೊದಲ ಮಹಡಿಯಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರು ಉಳಿದುಕೊಂಡರೆ, ನಾಲ್ಕನೇ ಮಹಡಿಯಲ್ಲಿ ಅಂಬಿಗಾಗಿಯೇ ಖಾಯಂ ಆಗಿ ಕಾಯ್ದಿರಿಸಿದ್ದ ರೂಮಿನಲ್ಲಿರುತ್ತಿದ್ದರು. ಚುನಾವಣೆ ಮುಗಿಯುವ ತನಕ ನಾನು ಅಂಬಿ ರೂಮ್‌ಗೆ ಹೋಗುತ್ತಿರಲಿಲ್ಲ. ಅವನು ನನ್ನ ರೂಮ್‌ಗೆ ಬರುತ್ತಿರಲಿಲ್ಲ. ಎರಡು ಪಕ್ಷಗಳ ನಾಯಕರು ಒಂದೇ ಹೋಟೆಲ್‌ನಲ್ಲಿ ಚುನಾವಣೆಯ ಸಮಯದಲ್ಲಿ ಇರಕ್ಕೆ ಸಾಧ್ಯನಾ ಎಂದರೆ ಸಾಧ್ಯ ಎನ್ನುವಂತಾಗಿದ್ದು ಅಂಬಿಯ ಸ್ನೇಹದ ಮನಸ್ಸಿನಿಂದ. ಹೀಗಾಗಿ ಎಂದೂ ರಾಜಕೀಯದ ಮೋಡ ನಮ್ಮಿಬ್ಬರ ನಡುವೆ ಬರಲಿಲ್ಲ.
ನನಗೆ ಗೊತ್ತಿರುವ ಅಂಬರೀಷ್ ತಮ್ಮ ರೆಗ್ಯುಲರ್ ಜೀವನ ಬದಲಾಯಿಸಿಕೊಂಡು ಗಂಭೀರ ವ್ಯಕ್ತಿ ಆಗಿದ್ದಿದ್ದರೆ ಕರ್ನಾಟಕದ ಮುಖ್ಯಮಂತ್ರಿ ಆಗುತ್ತಿದ್ದರು. ಅಂಥ ಅವಕಾಶ ಅವನಿಗೆ ಬಂದಾಗಲೆಲ್ಲ ದೂರ ತಳ್ಳಿದ್ದಾನೆ. ಅಯ್ಯೋ ಹೋಗಯ್ಯ ಸಿಎಂ ಕುರ್ಚಿ ನನಗೆ ಯಾಕೆ ಎಂದು ಅವನದ್ದೇ ಸ್ಟೈಲಿನಲ್ಲಿ ನನಗೆ ಪ್ರತ್ಯುತ್ತರ ಕೊಡುತ್ತಿದ್ದವ. ಯಾವುದಕ್ಕೂ ಆಸೆ ಪಡಲಿಲ್ಲ. ಆದರೆ, ಎಲ್ಲವೂ ಅವನ ಬಳಿಗೆ ಬಂತು.
ಸ್ನೇಹಿತರು, ಕ್ರೀಡಾಕಾರರು, ರಾಜಕಾರಣಿಗಳು, ಉದ್ಯಮಿಗಳು, ಸಾಮಾನ್ಯ ಜನ ಎಲ್ಲರು ಅಂಬಿ ಹತ್ತಿರ ಬಂದರೇ ಹೊರತು, ಯಾರ ಬಳಿಯೂ ಹೋಗಿ ಅಂಬಿ ಕೈ ಚಾಚಲಿಲ್ಲ. ಅದು ಅಂಬರೀಷ್ ಅಂದರೆ. ಕರ್ನಾಟಕಕ್ಕೆ, ಕನ್ನಡ ಚಿತ್ರರಂಗಕ್ಕೆ ಒಬ್ಬರೇ ಅಂಬರೀಷ್ ಅಂದರೆ ಅದು ನನ್ನ ಪ್ರೀತಿಯ ಗೆಳೆಯ ರೆಬೆಲ್ ಸ್ಟಾರ್. ನೋಡಿ, ಅವನಿಗೆ ಏನನಿಸಿತೋ ಗೊತ್ತಿಲ್ಲ, ಧಿಡೀರ್ ಅಂತ ಎರಡ್ಮೂರು ದಿನಗಳ ಹಿಂದೆಯಷ್ಟೇ ನನ್ನ ಕರೆದು ‘ಅಮರ್’ ಚಿತ್ರಕ್ಕೆ ಈಗೆಷ್ಟು ಶೂಟಿಂಗ್ ಆಗಿದೆಯೋ ಅಷ್ಟನ್ನು ನಾನು ನೋಡಬೇಕು ಅಂತ ಹಠ ಮಾಡಿದ. ಅಯ್ಯೋ ಬೇಡಪ್ಪ. ಎಲ್ಲ ಮುಗಿಯಲಿ ಫೈನಲ್ ನೋಡೋಣ ಅಂದೆ. ಕೇಳಲಿಲ್ಲ. ಹೀಗಾಗಿ ಅರ್ಧ ಚಿತ್ರವನ್ನು ಎಡಿಟಿಂಗ್ ಮಾಡಿ, ಡಬ್ಬಿಂಗ್ ಕೂಡ ಮುಗಿಸಿ ಅವನಿಗೆ ತೋರಿಸಿದ್ವಿ. ಮಗನನ್ನು ತೆರೆ ಮೇಲೆ ನೋಡಿದ ಆ ಕ್ಷಣ ನನ್ನ ಗೆಳೆಯನಿಗೆ ಆದ ಖುಷಿ ನಾನು ಮಾತ್ರ ಕಂಡಿದ್ದೇನೆ. ಮಗನ ಅರ್ಧ ಚಿತ್ರ ನೋಡಿ ಹೋದ. ಪೂರ್ತಿ ಚಿತ್ರ ನೋಡಲಿಲ್ಲ ಎನ್ನುವ ನೋವು ನನ್ನಲ್ಲಿದೆ.
ಮಗನನ್ನು ತೆರೆ ಮೇಲೆ ನೋಡಿದ ಆ ಕ್ಷಣ ನನ್ನ ಗೆಳೆಯನಿಗೆ ಆದ ಖುಷಿ ನಾನು ಮಾತ್ರ ಕಂಡಿದ್ದೇನೆ. ಮಗನ ಅರ್ಧ ಚಿತ್ರ ನೋಡಿ ಹೋದ. ಪೂರ್ತಿ ಚಿತ್ರ ನೋಡಲಿಲ್ಲ ಎನ್ನುವ ನೋವು ನನ್ನಲ್ಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.