ಅದಿತಿ ಪ್ರಭುದೇವ್ ಬ್ಯಾಂಕಾಕ್‌ಗೆ ಹೋಗಿದ್ದೇಕೆ ಗೊತ್ತಾ?

By Web DeskFirst Published Sep 3, 2018, 3:49 PM IST
Highlights

ಸಿಂಪಲ್ ಸುನಿ ನಿರ್ದೇಶನದ ’ಬಜಾರ್’ ಚಿತ್ರ ರಿಲೀಸ್‌ಗೆ ರೆಡಿ | ವಿಭಿನ್ನ ಪಾತ್ರದಲ್ಲಿ ಅದಿತಿ ಪ್ರಭುದೇವ್  | ಬ್ಯಾಂಕಾಕ್‌ನಲ್ಲಿ ಶೂಟಿಂಗ್ 

ಬೆಂಗಳೂರು (ಸೆ. 03): ಸಿಂಪಲ್ ಸುನಿ ನಿರ್ದೇಶನದ ‘ಬಜಾರ್’ ರಿಲೀಸ್‌ಗೆ ರೆಡಿ ಆಗಿದೆ. ಅದ್ಧೂರಿ ವೆಚ್ಚದ ‘ಬಜಾರ್’ ಚಿತ್ರದೊಂದಿಗೆ ಆರಡಿ ಎತ್ತರದ ಹ್ಯಾಂಡ್ಸಮ್ ಹುಡುಗ ಧನ್‌ವೀರನನ್ನು ಸುನಿ ಇದೇ ಮೊದಲು ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ.

ಈ ಚಿತ್ರದ ನಾಯಕಿ ಅದಿತಿ ಪ್ರಭುದೇವ್. ಚಿತ್ರದಲ್ಲಿನ ತಮ್ಮ ಪಾತ್ರ, ಚಿತ್ರೀಕರಣ ಅನುಭವ ಇತ್ಯಾದಿ ಕುರಿತ ಅವರ ಮಾತುಗಳು ಇಲ್ಲಿವೆ.

ಇದೊಂದು ಸ್ಪೆಷಲ್ ಕ್ಯಾರೆಕ್ಟರ್. ನಾನೇ ನಿರ್ಮಾಪಕಿ ಆಗಿ ಒಂದು ಸಿನಿಮಾ ನಿರ್ಮಿಸಿದ್ದರೂ ನನಗೆ ಇಂತಹ ಪಾತ್ರ ಸಿಗುತ್ತಿರಲಿಲ್ಲ. ನಿರ್ದೇಶಕರಾದ ಸಿಂಪಲ್ ಸುನಿ ಅಂತಹ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಖುಷಿಯಿದೆ. ಪಾತ್ರದ ಹೆಸರು ಪಾರಿಜಾತ. ಮಧ್ಯಮದ ವರ್ಗದ ಹುಡುಗಿ. ತಂದೆ ಇಲ್ಲ, ಅಮ್ಮನೇ ಎಲ್ಲಾ. ಆದರೂ, ಕಾಲಕ್ಕೆ ತಕ್ಕಂತೆ ಆಕೆಗೂ ಹಲವು ಆಸೆ, ಆಕಾಂಕ್ಷೆ. ಹಾಗಿರಬೇಕು, ಹೀಗಿರಬೇಕು ಎನ್ನುವ ನೂರೆಂಟು ಕನಸು. ಅಂತಹ ಹುಡುಗಿ ಲೈಫ್‌ನಲ್ಲಿ ಒಂದೊಮ್ಮೆ ಪ್ರೀತಿಯ ಸಿಹಿಗಾಳಿ ಬೀಸುತ್ತೆ. 

ನಾಯಕನ ಜತೆಗೆ ಪಾರಿವಾಳ ಹಾಗೂ ಪಾರಿಜಾತ ಎರಡೂ ಈ ಚಿತ್ರದ ಹೈಲೈಟ್. ಸಿಂಪಲ್ ಸುನಿ ನಿರ್ದೇಶನದ ಸಿನಿಮಾಗಳಲ್ಲಿ ನಾಯಕಿ ಅಂದ್ರೆ ಸುಮ್ಮನೇ ಗೊಂಬೆಗಳ ಹಾಗೆ ಬಂದು ಹೋಗುವ ನಟಿಯಲ್ಲ. ನಾಯಕನ ಹಾಗೆಯೇ ನಾಯಕಿ ಪಾತ್ರಕ್ಕೂ ಆದ್ಯತೆ ಇರುತ್ತದೆ. ಹಾಗೆಯೇ ‘ಬಜಾರ್’ ಚಿತ್ರದ ನಾಯಕಿ ಪಾತ್ರವೂ ಕೂಡ. ಈ ಪಾತ್ರ ಒಪ್ಪಿಕೊಳ್ಳಲು ನನಗಿದ್ದ ಆಸಕ್ತಿಯಲ್ಲಿ ಅದು ಕೂಡ ಒಂದು. ಪಾರಿವಾಳ ಮತ್ತು ಪಾರಿಜಾತ ಸಿನಿಮಾದ ಕ್ಲೈಮ್ಯಾಕ್ಸ್ ತನಕ ಇರುತ್ತವೆ. ಹಾಗಾದ್ರೆ ಅಲ್ಲಿ ಅವರೆಡರ ಪ್ರಾಮುಖ್ಯತೆ ಏನು ಅನ್ನೋದೇ ಸಸ್ಪೆನ್ಸ್.

 ಚಿತ್ರೀಕರಣಕ್ಕೆ ನಾವು ಬ್ಯಾಂಕಾಕ್ ಹೋಗಿ ಬಂದಿದ್ದೇವೆ. ವಿದೇಶಕ್ಕೆ ಅಂತ ನಾನು ವಿಮಾನ ಹತ್ತಿದ್ದು, ಮೊದಲ ಬಾರಿಗೆ ಬ್ಯಾಂಕಾಕ್‌ಗೆ ಹೋಗಿದ್ದು ‘ಬಜಾರ್’ ಚಿತ್ರೀಕರಣದ ಕಾರಣಕ್ಕೆ. ನನ್ನ ಸಿನಿಮಾ ಜರ್ನಿಯಲ್ಲಿ ಇದು ಮರೆಯಲಾಗದು. ಒಟ್ಟು ಮೂರು ದಿವಸ ನಾವು ಅಲ್ಲಿದ್ದು ಹಾಡಿನ ಚಿತ್ರೀಕರಣ ಮಾಡಿದೆವು. 

ಹೀರೋ ಧನ್ವೀರ್ ಇಡೀ ಹಾಡಿನ ಉದ್ದಕೂ ಶರ್ಟ್ ಲೆಸ್ ಆಗಿ ಸಿಕ್ಸ್ ಪ್ಯಾಕ್ ತೋರಿಸಿದ್ದಾರೆ. ಅದೊಂದು ರೊಮ್ಯಾಂಟಿಕ್ ಸಾಂಗ್. ಸಿನಿಮಾ ರಿಚ್ ಆಗಿ ಬಂದಿದೆ. ಮೇಕಿಂಗ್ ಎಕ್ಸಲೆಂಟ್. ನಂಗೊಂದು ಒಳ್ಳೆಯ ಟರ್ನ್ ಸಿಕ್ಕುತ್ತೆ ಎನ್ನುವ ನಿರೀಕ್ಷೆಯಂತೂ ಇದೆ. ಚಿತ್ರದ ಬಿಡುಗಡೆಯನ್ನೇ ಎದುರು ನೋಡುತ್ತಿದ್ದೇನೆ. 

 ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾದಿಂದಲೂ ನಾನು ಸುನಿ ಸರ್ ಸಿನಿಮಾಗಳನ್ನು ನೋಡುತ್ತಾ ಬಂದಿದ್ದೇನೆ. ಆ ಹೊತ್ತಿಗೆ ನಾನು ನಿರೂಪಕಿ ಆಗಿದ್ದೆ. ನಟಿಯಾಗಿ ಸಿನಿಮಾ ಜಗತ್ತಿಗೆ ಕಾಲಿಟ್ಟ ದಿನಗಳಿಂದಲೂ ಅವರ ಸಿನಿಮಾಗಳಲ್ಲೂ ಅಭಿನಯಿಸಬೇಕು ಎನ್ನುವ ಆಸೆ ಇತ್ತು. ಅದಕ್ಕೆ ಕಾರಣ ಅವರ ಸಿನಿಮಾಗಳಲ್ಲಿ ನಾಯಕಿ ಪಾತ್ರಗಳಿರುವ ಪ್ರಾಮುಖ್ಯತೆ, ಅವರನ್ನು ತೋರಿಸುವ ವಿಧಾನ ಇತ್ಯಾದಿ. ಹಾಗಂತ ನಾವೇ ಕಾಡಿ, ಬೇಡಿ ಪಡೆಯುವುದಕ್ಕೂ ನಂಗಿಷ್ಟ ಇರಲಿಲ್ಲ. ಅವರೇ ನಮ್ಮನ್ನು ಕರೆದು, ಇಂತಹದೊಂದು ಪಾತ್ರ ಆ್ಯಕ್ಟ್ ಮಾಡ್ತೀರಾ ಅಂತ ಕೇಳುವ ದಿನಕ್ಕೆ ಕಾಯುತ್ತಿದ್ದೆ. ಕೊನೆಗೂ ಆ ಅವಕಾಶ ಸಿಕ್ಕಿದೆ ‘ಬಜಾರ್’ ಮೂಲಕ.

click me!