
1) ವೇದಿಕಾ ಅವರ ಮೂಲ ನೆಲೆ ಎಲ್ಲಿ?
ವೇ: ನಾನೊಂಥರ ಅಲೆಮಾರಿ. ಹೈದರಾಬಾದ್, ಚೆನ್ನೈ, ಕೊಚ್ಚಿನ್, ಬೆಂಗಳೂರು ಅಂತೆಲ್ಲ ತಿರುಗಾಡುತ್ತಿದ್ದೇನೆ. ಸಿನಿಮಾದ ಆಫರ್ ಬಂದ ಹಾಗೆ, ನನ್ನ ಓಡಾಟ ಫಿಕ್ಸ್ ಆಗುತ್ತೆ.
2) ಹೇಗಿದೆ ನಿಮ್ಮ ಸಿನಿಮಾ ಲೈಫು?
ವೇ: (ಬಾಯ್ತುಂಬ ನಗು) ಸಿನಿಮಾ ಲೈಫ್ ಒಂದೊಳ್ಳೆ ಅನುಭವದ ಮೂಟೆ. ನನ್ನ ಸಿನಿಮಾದ ಕೆರಿಯರ್ ಗ್ರಾಫ್ ತೆರೆದು ನೋಡಿದರೆ, ಪ್ರತಿ ಚಿತ್ರದಲ್ಲಿನ ಪಾತ್ರಕ್ಕೂ ವಿಭಿನ್ನತೆ ಮತ್ತು ವಿಶೇಷತೆ ಇದ್ದೇ ಇದೆ. ಅದು ನನಗೆ ಸಾಕಷ್ಟು ಖುಷಿ ಕೊಟ್ಟಿದೆ. ಬರಿ ಒಂದೇ ಭಾಷೆಗೆ ಅಂಟಿಕೊಳ್ಳದೆ, ಬೇರೆ ಬೇರೆ ಭಾಷೆಗಳಲ್ಲಿ ಅಭಿನಯಿಸುತ್ತಾ ಬಂದಿದ್ದೇನೆ. ಕೈಯಲ್ಲೀಗ ಸಾಕಷ್ಟು ಆಫರ್ ಇವೆ. ಟೋಟಲಿ ಐ ಆ್ಯಮ್ ಹ್ಯಾಪಿ.
3) ಕನ್ನಡಕ್ಕೆ ಯಾಕೆ ನೀವು ಅಪರೂಪದ ಅತಿಥಿ?
ವೇ: ಅಪರೂಪ ಅಂತೇನಿಲ್ಲ, ಅವಕಾಶಗಳು ಸಿಕ್ಕ ಹಾಗೆ ಇಲ್ಲಿಗೂ ಬಂದು ಹೋಗುತ್ತಿದ್ದೇನೆ. 2008ರಲ್ಲಿ ನಾನು ಗಣೇಶ್ ಜತೆಗೆ ‘ಸಂಗಮ’ ಚಿತ್ರದಲ್ಲಿ ಅಭಿನಯಿಸಿದ ನಂತರ ಸಾಕಷ್ಟು ಅವಕಾಶಗಳು ಬಂದವು. ಆದ್ರೆ, ನಾನಾಗ ತಮಿಳು ಮತ್ತು ತೆಲುಗಿನಲ್ಲಿ ಬಿಜಿ ಆಗಿದ್ದೆ. ಆನಂತರ ‘ಶಿವಲಿಂಗ’ ಚಿತ್ರದ ಆಫರ್ ಬಂತು. ಪಾತ್ರವೂ ಚೆನ್ನಾಗಿತ್ತು. ಒಪ್ಪಿಕೊಂಡೆ. ಒಳ್ಳೆಯ ಪ್ರತಿಕ್ರಿಯೆ ಬಂತು. ಖುಷಿಯೂ ಆಯಿತು. ಅಲ್ಲಿಂದ ಮತ್ತೆ ಬರೋದಕ್ಕೆ ಸ್ವಲ್ಪ ದಿನ ಬೇಕಾಯಿತು. ಈಗ ‘ಗೌಡ್ರು ಹೋಟೆಲ್’ ಒಂದೊಳ್ಳೆ ಅವಕಾಶ ಅಂದುಕೊಂಡಿದ್ದೇನೆ.
4) ನಿಮ್ಮ ಪ್ರಕಾರ ‘ಗೌಡ್ರು ಹೋಟೆಲ್’ ವಿಶೇಷತೆ ಏನು?
ವೇ: ಇದೊಂದು ರೀಮೇಕ್ ಚಿತ್ರ. ಮೂಲ ಭಾಷೆಯ ಚಿತ್ರ ನೋಡಿದವರಿಗೆ ಅಲ್ಲಿನ ವಿಶೇಷತೆ ಏನು ಅನ್ನೋದು ಗೊತ್ತಿರುತ್ತೆ. ಆದರೂ, ಕನ್ನಡದ ನೇಟಿವಿಟಿಗೆ ತಕ್ಕಂತೆ ಸಿನಿಮಾ ಮಾಡುವಾಗ ಒಂದಷ್ಟು ಚೇಂಜಸ್ ಇದ್ದೇ ಇರುತ್ತೆ. ಆ ಬದಲಾವಣೆಯೇ ಇಲ್ಲಿ ವಿಶೇಷ.
5) ಪ್ರಕಾಶ್ ರೈ, ಅನಂತ ನಾಗ್ ಅವರಂತಹ ಹಿರಿಯ ನಟರ ಜತೆಗಿನ ಅಭಿನಯದ ಅನುಭವ ಹೇಗಿತ್ತು?
ವೇ: ಪ್ರಕಾಶ್ ರೈ ಅವರ ಜತೆಗೆ ಇದು ನನ್ನ ಎರಡನೇ ಸಿನಿಮಾ. ಹಿಂದೆ ತಮಿಳಿನಲ್ಲಿ ಬಂದ ‘ಮಲೈ ಮಲೈ’ ಚಿತ್ರದಲ್ಲಿ ಅವರೊಂದಿಗೆ ಅಭಿನಯಿಸಿದ್ದೆ. ಆನಂತರ ಈಗ ‘ಗೌಡ್ರು ಹೋಟೆಲ್’ನಲ್ಲಿ ಭೇಟಿ.ನಟನೆಯಲ್ಲಿ ಅವರು ರಾಕ್ಷಸರು. ಸೆಟ್‌ನಲ್ಲಿದ್ದರೆ ಅವರಿಂದ ಕಲಿಯೋದು ಸಾಕಷ್ಟಿರುತ್ತೆ. ಅವರ ಹಾಗೆಯೇ ಅನಂತನಾಗ್ ಸರ್. ಮೃದು ಸ್ವಭಾವದ ವ್ಯಕ್ತಿ. ಅವರ ಸರಳತೆ, ವಿನಯತೆ ತುಂಬಾ ಸ್ಫೂರ್ತಿ ನೀಡುತ್ತೆ.
6) ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ.
ವೇ: ನಾರ್ಮಲ್ ಹುಡುಗಿ. ನಾಯಕನಿಗೆ ಇರುವಷ್ಟೇ ಪ್ರಾಮುಖ್ಯತೆ ನಾಯಕಿ ಪಾತ್ರಕ್ಕೂ ಇದೆ. ನಟನೆಗೆ ಹೆಚ್ಚು ಅವಕಾಶ ಸಿಕ್ಕಿದೆ. ಪಾತ್ರಗಳಲ್ಲಿ ತಮ್ಮ ಪ್ರತಿಭೆ ತೋರಿಸಬೇಕೆನ್ನುವವರಿಗೆ ಈ ರೀತಿಯ ಪಾತ್ರಗಳು ಸಿಗಬೇಕು. ಆ ಮಟ್ಟಿಗೆ ನನಗೆ ಇದೊಂದು ಅದೃಷ್ಟದ ಅವಕಾಶ. ಪಾತ್ರಕ್ಕೆ ತಕ್ಕಂತೆ ಡ್ರೆಸ್ ಕೂಡ ವಿಭಿನ್ನವಾಗಿದೆ.
7) ರೀಮೇಕ್ ಚಿತ್ರದಲ್ಲಿ ಅಭಿನಯಿಸುವಾಗ ನಟ-ನಟಿಯರಿಗಿರುವ ಸವಾಲು ಏನು?
ವೇ: ನಮ್ಮದೇ ಪ್ಲ್ಯಾನ್ ಪ್ರಕಾರ ಮಾಡುವ ಅಡುಗೆಗೂ, ಸಿದ್ಧ ಮಾದರಿಯಲ್ಲಿ ಮಾಡುವ ಅಡುಗೆಗೂ ಸಾಕಷ್ಟು ವ್ಯತ್ಯಾಸ ಇರುತ್ತೆ. ಇದು ಕೂಡ ಹಾಗೆಯೇ. ಮೂಲ ಭಾಷೆಯ ಪಾತ್ರಗಳಿಗೆ ಸಿಕ್ಕ ಇಮೇಜ್ ಮತ್ತು ವರ್ಚಸ್ಸಿಗೆ ಧಕ್ಕೆಯಾಗದಂತೆ ರೀಮೇಕ್ ಚಿತ್ರದಲ್ಲಿ ಅಭಿನಯಿಸಬೇಕಾಗುತ್ತದೆ. ಹಾಗಂತ, ಮೂಲ ಭಾಷೆಯ ಸಿನಿಮಾದಲ್ಲಿ ಅಭಿನಯಿಸಿದವರಿಗೆ ಸರಿ ಸಮನಾಗಿ ನಾವೆಲ್ಲ ಅಭಿನಯಿಸಿ ತೋರಿಸುತ್ತೇವೆ ಅನ್ನೋದ್ದಕ್ಕಿಂತ ಅವರ ನಟನೆಯಲ್ಲಿ ಕನಿಷ್ಟ 80 ಭಾಗದಷ್ಟಾದರೂ ನ್ಯಾಯ ಒದಗಿಸಬೇಕು.
8) ವೇದಿಕಾ ಅವರಿಗೂ ಕನ್ನಡಕ್ಕೂ ಇರುವ ನಂಟು ಏನು?
ವೇ: ಅದು ಕೇವಲ ಸಿನಿಮಾ ನಂಟು. ಬೆಂಗಳೂರಿಗೆ ಅನೇಕ ಸಲ ಬಂದು ಹೋಗಿದ್ದೇನೆ. ಆದ್ರೆ ಸಿನಿಮಾದೊಂದಿಗೆ ನನಗಿಲ್ಲಿ ಅನೇಕ ಮಂದಿ ಪರಿಚಿತರಾದರು. ಒಳ್ಳೆಯ ಒಡನಾಟ ಬೆಳೆಯಿತು. 2008ರಿಂದ ಇಲ್ಲಿ ತನಕ ನಾನು ಅಭಿನಯಿಸಿದ ಸಿನಿಮಾ ಕೇವಲ ಎರಡು. ‘ಗೌಡ್ರು ಹೋಟೆಲ್’ ತೆರೆ ಕಂಡರೆ ಆ ಸಿನಿಮಾಗಳ ಸಂಖ್ಯೆ ಮೂರು. ಅಷ್ಟಾಗಿಯೂ ನಾನಿಲ್ಲಿ ಒಂದಷ್ಟು ಒಡನಾಟ ಸಂಪಾದಿಸಿ ಕೊಂಡಿದ್ದೇನೆಂದರೆ ಅದಕ್ಕೆ ನಟನೆಯೊಂದೇ ಶಕ್ತಿ. ಅದು ಕನ್ನಡ ಆದರೇನು, ಬೇರೆ ಭಾಷೆಯಾದರೇನು. ಒಳ್ಳೆಯ ಅವಕಾಶ ಸಿಕ್ಕಲ್ಲಿ, ನಮ್ಮ ನಟನೆ ತೋರಿಸಬೇಕಾಗಿರುವುದು ನಟರ ಕರ್ತವ್ಯ. ಅದೇ ರೀತಿ ಕನ್ನಡಿಗರು ನಟನೆಯಿಂದಲೇ ಗುರುತಿಸುತ್ತಿರುವುದು ಸಂತಸದ ವಿಷಯ.
9) ಕನ್ನಡದ ‘ಹೋಮ್ ಮಿನಿಸ್ಟರ್’ ಚಿತ್ರದಲ್ಲೂ ಅಭಿನಯಿಸುತ್ತಿದ್ದೀರಿ, ಆಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ?
ವೇ: ಉಪೇಂದ್ರ ಅವರ ಶಿಷ್ಯ ಶ್ರೀಹರಿ ಈ ಚಿತ್ರದ ನಿರ್ದೇಶಕರು. ಒಂದೊಳ್ಳೆ ಕತೆ. ಚಿತ್ರದಲ್ಲಿ ಉಪೇಂದ್ರ ಅವರೂ ಇದ್ದಾರೆ. ಅವರೊಂದಿಗೆ ಅಭಿನಯಿಸುವ ಅವಕಾಶ ಈ ಚಿತ್ರದ ಮೂಲಕ ಸಿಕ್ಕಿದೆ. ಸದ್ಯಕ್ಕೆ ಪಾತ್ರ ಏನು ಅನ್ನೋದನ್ನು ರಿವೀಲ್ ಮಾಡುವಂತಿಲ್ಲ. ಆದ್ರೆ ಇದೊಂದು ವಿಭಿನ್ನ ರೀತಿಯ ಪಾತ್ರ.
10) ಬೆಳ್ಳಿತೆರೆಗೆ ಕಾಲಿಟ್ಟು ಹತ್ತು ವರ್ಷ ಆಗಿದೆ, ಈ ಜರ್ನಿಯಲ್ಲಿ ನೀವು ಕಲಿತಿದ್ದೇನು?
ವೇ: ಸಿನಿಮಾ ಜಗತ್ತು ಸಾಕಷ್ಟು ಕಲಿಸಿದೆ. ಹೇಳುವುದಕ್ಕೆ ಸಾಕಷ್ಟಿದೆ. ಅದರಲ್ಲಿ ಮುಖ್ಯವಾಗಿ ಹೇಳೋದಾದ್ರೆ ತಾಳ್ಮೆ ಬಂದಿದೆ. ಏನೇ ಕಷ್ಟ- ಸುಖ ಬಂದರೂ ಸಮಾನವಾಗಿ ಸ್ವೀಕರಿಸಬೇಕು ಅನ್ನೋದು ಗೊತ್ತಾಗಿದೆ. ವಿಶೇಷವಾಗಿ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುವಾಗ ಬದುಕಿನ ಪಾಠ ಕಲಿತಿದ್ದೇನೆ. ‘ಶಿವಲಿಂಗ’ ಚಿತ್ರದ ಶೂಟಿಂಗ್ ವೇಳೆ ಶಿವರಾಜ್‌ಕುಮಾರ್ ಅವರ ಸರಳತೆ ನನಗೆ ಇಷ್ಟವಾಯಿತು. ‘ಹೋಮ್ ಮಿನಿಸ್ಟರ್’ ಚಿತ್ರದ ವೇಳೆ ಉಪೇಂದ್ರ ಹಂಬಲ್‌ನೆಸ್ ನನ್ನನ್ನು ಸಾಕಷ್ಟು ಇಂಪ್ರೆಸ್ ಮಾಡಿತು. ಆ ಗುಣಗಳನ್ನು ನಾನು ಕೂಡ ಅಳವಡಿಸಿಕೊಂಡಿದ್ದೇನೆ. ಬೇರೆ ಭಾಷೆಯಲ್ಲಿಯೂ ಕನ್ನಡದಲ್ಲಿ ಸಿಕ್ಕಷ್ಟೆ ಪ್ರೀತಿ ಸಿಕ್ಕಿದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.