
ಬೆಂಗಳೂರು(ಡಿ.03): ನಟಿ ತೇಜಸ್ವಿನಿ ಕಿರುತೆರೆಗೆ ಕಾಲಿಟ್ಟಿದ್ದಾರೆ. ವಿನು ಬಳಂಜ ನಿರ್ದೇಶನದ ‘ನಿಹಾರಿಕಾ ’ಧಾರಾವಾಹಿಗೆ ಅವರೇ ನಾಯಕಿ . ಕಿರುತೆರೆಯ ಅನೇಕ ನಟಿಯರು ಅಲ್ಲಿನ ಜನಪ್ರಿಯತೆಯೊಂದಿಗೆ ಹಿರಿತೆರೆಗೆ ಕಾಲಿಡುತ್ತಿರುವಾಗ, ಸುಮಾರು ಒಂಭತ್ತು ವರ್ಷಗಳ ಸಿನಿಜರ್ನಿಯಲ್ಲಿ ವಿವಿಧ ರೀತಿಯ ಪಾತ್ರಗಳಿಗೆ ಬಣ್ಣ ಹಚ್ಚಿ ಸೈ ಎನಿಸಿಕೊಂಡ ಬೆಡಗಿ, ಈಗ ಕಿರುತೆರೆಯತ್ತ ಮುಖ ಹಾಕಿದ್ದು ನಿಜಕ್ಕೂ ವಿಶೇಷವೇ ಹೌದು.
‘ಮಸಣದ ಮಕ್ಕಳು’ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿಯಾದ ತೇಜಸ್ವಿನಿ, ಈ ಹೊತ್ತಿಗೆ ಹಲವು ರೀತಿಯ ಪಾತ್ರಗಳಲ್ಲಿ ಮಿಂಚಿದ್ದಾರೆ. ಆರಂಭಿಕ ದಿನಗಳಲ್ಲಿ ತಂಗಿ ಪಾತ್ರಗಳಿಗೆ ಫಿಕ್ಸ್ ಆಗಿದ್ದರಾದರೂ, 2008ರಲ್ಲಿ ತೆರೆ ಕಂಡ ‘ಅರಮನೆ’ ಚಿತ್ರದ ಮೂಲಕ ತಮ್ಮ ಇಮೇಜ್‌ನ್ನು ಮತ್ತೊಂದು ಮಗ್ಗಲಿಗೆ ತಿರುಗಿಸಿಕೊಂಡರು. ‘ಗಜ’,‘ಗೂಳಿಹಟ್ಟಿ ’ಸೇರಿದಂತೆ ಹಲವು ಚಿತ್ರಗಳಲ್ಲಿ ಲಂಗ-ಧಾವಣೆ ತೊಟ್ಟು ಪಕ್ಕಾ ಗೌರಮ್ಮನ ಪಾತ್ರ ನಿರ್ವಹಿಸಿದ್ದ ನಟಿ, ಇತ್ತೀಚೆಗಷ್ಟೇ ‘ನಿತ್ಯ ಜತೆ ಸತ್ಯ’ಚಿತ್ರದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆ್ಯಂಡ್ ಬ್ಯುಟಿುಲ್ ಆಗಿ ಕಾಣಿಸಿಕೊಂಡು ಪಡ್ಡೆ ಹುಡುಗರ ಎದೆ ಝಲ್ ಅನ್ನುವಂತೆ ಮಾಡಿದ್ದರು.
ಆ ಚಿತ್ರದ ನಂತರ ಏಲ್ಲಿದ್ದಾರೆ ತೇಜಸ್ವಿನಿ ಎನ್ನುವ ಹೊತ್ತಿಗೀಗ ಕಿರುತೆರೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಮತ್ತದೇ ಬೋಲ್ಡ್ ಆ್ಯಂಡ್ ಬ್ಯುಟಿುಲ್ ಲುಕ್ ಪ್ರದರ್ಶಿಸಲು ರೆಡಿ ಆಗಿ ನಿಂತಿದ್ದಾರೆ. ಯಾಕಂದ್ರೆ, ವಿನು ಬಳಂಜ ನಿರ್ದೇಶನದ ‘ನಿಹಾರಿಕಾ’ ಧಾರಾವಾಹಿಯಲ್ಲಿನ ಅವರ ಪಾತ್ರ ಇರುವುದೇ ಹಾಗಂತೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಆ ಧಾರಾವಾಹಿಯ ವಿಡಿಯೋ ತುಣುಕುಗಳೇ ಅದಕ್ಕೆ ಸಾಕ್ಷಿ. ಕೆಂಪು ಉಡುಗೆಯ ಚೆಲುವೆ, ಮಾದಕ ನೋಟದ ಬೆಡಗಿ ನಿಹಾರಿಕಾಳ ಒಳಗೆ ನಟಿ ತೇಜಸ್ವಿನಿ ಕಾಣುತ್ತಿದ್ದಾರೆ. ಅವರ ಲುಕ್‌ಗೆ ಎಂಥವರನ್ನು ಸೆಳೆಯುವ ನೋಟವಿದೆ. ಅದೇ ಪಾತ್ರದ ವಿಶೇಷ ಎನ್ನುತ್ತಿದೆ ಧಾರಾವಾಹಿ ತಂಡ.
ಡಿಸೆಂಬರ್ 12 ರಿಂದ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿರುವ ಈ ಧಾರಾವಾಹಿಗೆ ವಿನು ಬಳಂಜ ನಿರ್ದೇಶಕ ಕಂ ನಿರ್ಮಾಪಕ. ಪ್ರಮುಖ ಪಾತ್ರಗಳಲ್ಲಿ ವಿರಾಟ್ ಹಾಗೂ ತೇಜಸ್ವಿನಿ ಇದ್ದಾರೆ.ಉಳಿದಂತೆ ಪೋಷಕ ಪಾತ್ರಗಳಿಗೆ ಹಲವು ಜನಪ್ರಿಯ ನಟ-ನಟಿಯರು ಬಣ್ಣ ಹಚ್ಚಿದ್ದಾರಂತೆ. ನಿರ್ಮಾಣದ ಜತೆಗೆ ಈ ಧಾರಾವಾಹಿಯನ್ನು ತಾವೇ ನಿರ್ದೇಶಿಸಿ, ವೀಕ್ಷಕರ ಮುಂದೆ ತರುತ್ತಿರುವ ವಿನು ಬಳಂಜ, ಸದ್ಯದ ಪೈಪೋಟಿಗೆ ಹೊಸ ರೀತಿಯ ಕತೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರಂತೆ. ಕತೆಯ ಪಾತ್ರಗಳ ಪೈಕಿ ಇಲ್ಲಿ ನಿಹಾರಿಕಾ ಪಾತ್ರವೇ ಹೈಲೆಟ್ ಎನ್ನಲಾಗಿದೆ. ಮೊಟ್ಟ ಮೊದಲ ಬಾರಿಗೆ ನಾಯಕಿಯಾಗಿ ಕಿರುತೆರೆಗೆ ಕಾಲಿಟ್ಟಿರುವ ತೇಜಸ್ವಿನಿಗೆ ಆರಂಭದಲ್ಲಿಯೇ ಇಂಥದೊಂದು ಪಾತ್ರ ಸಿಕ್ಕಿದ್ದು ಸಾಕಷ್ಟು ಖುಷಿ ಕೊಟ್ಟಿದೆಯಂತೆ.
‘ ಈ ಧಾರಾವಾಹಿಯಲ್ಲಿ ನಾನು ನಿರ್ವಹಿಸುತ್ತಿರುವ ಪಾತ್ರದ ಹೆಸರೇ ನಿಹಾರಿಕಾ. ತುಂಬಾ ಬೋಲ್ಡ್ ಆದ ಹುಡುಗಿ. ಹಾಗೆನೇ ಜವಾಬ್ದಾರಿ ಹೊತ್ತವಳು. ಅವಳ ಬದುಕಿನ ಸುತ್ತ ಸಾಗುವ ಕತೆ. ಹಾಗಂತ ಇದು ಮಹಿಳಾ ಪ್ರಧಾನ ಕತೆ ಎನ್ನುವುದಕ್ಕೂ ಅಸಾಧ್ಯ. ಒಂದು ರೀತಿ ವಿಭಿನ್ನ ರೀತಿಯಲ್ಲಿ ವೀಕ್ಷಕರಿಗೆ ಹೊಸದೊಂದು ಅನುಭವ ನೀಡಲಿದೆ. ಈ ರೀತಿಯ ಪಾತ್ರ ಸಿಕ್ಕಿದ್ದು ನಿಜಕ್ಕೂ ಖುಷಿ ತಂದಿದೆ’ಎಂದು ನಗು ತೋರುತ್ತಾರೆ ನಟಿ ತೇಜಸ್ವಿನಿ. ಕನ್ನಡದ ಜತೆಗೆ ತೆಲುಗು ಸಿನಿಮಾಗಳಲ್ಲೂ ಅಭಿನಯಿಸುತ್ತಿರುವುದರ ನಡುವೆಯೇ ಅವರು, ಸಿರಿಯಲ್ ಕಡೆ ಮುಖ ಹಾಕಿದ್ದು ಅಷ್ಟೇ ಕುತೂಹಲ ಹುಟ್ಟಿಸಿದೆ. ತೇಜಸ್ವಿನಿಗೆ ಸಿನಿಮಾದಲ್ಲಿ ಅವಕಾಶ ಕಡಿಮೆ ಆದವೇ? ಎನ್ನುವ ಅನುಮಾನಗಳೂ ಇವೆ. ಆದರೆ, ತಾವು ಕಿರುತೆರೆಗೆ ಕಾಲಿಟ್ಟಿದ್ದಕ್ಕೆ ಧಾರಾವಾಹಿಯಲ್ಲಿನ ಪಾತ್ರವೇ ಪ್ರಮುಖ ಕಾರಣ ಎಂಬ ಸ್ಪಷ್ಟನೆ ಅವರಿಂದ ಕೇಳಿಬರುತ್ತದೆ.
‘ಅವಕಾಶಗಳು ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ನಾನಿಲ್ಲಿಗೆ ಬಂದಿಲ್ಲ. ಕಲಾವಿದರಿಗೆ ಹಿರಿತೆರೆಯಾದರೇನು, ಕಿರುತೆರೆಯಾದರೇನು ಎರಡು ಒಂದೇ. ಇಷ್ಟಕ್ಕೂ ಇವತ್ತು ಕಿರುತೆರೆ ಎನ್ನುವುದು ಕಡಿಮೆ ಇಲ್ಲ. ಪಾತ್ರಗಳು ಚೆನ್ನಾಗಿದ್ದರೆ ಜನ ಮೆಚ್ಚಿಕೊಳ್ಳುತ್ತಾರೆ. ಜನ ಮೆಚ್ಚಿಕೊಳ್ಳುವ ಪಾತ್ರಗಳು ಎಲ್ಲಾದರೂ ಸರಿ ’ಎನ್ನುವುದು ತೇಜಸ್ವಿನಿ ಸಿದ್ಧಾಂತ. ಕನ್ನಡದಲ್ಲೀಗ ತೇಜಸ್ವಿನಿ ನಾಯಕಿ ಆಗಿ ಅಭಿನಯಿಸಿದ ‘ಡೈ( ಇಂಗ್ಲಿಷ್) ಯಾನ್ ಹೌಸ್ ’ತೆರೆ ಕಾಣಬೇಕಿದೆ. ಅತ್ತ ತೆಲುಗಿನಲ್ಲಿ ‘ಕಣ್ಣಲೋ ನೀ ರೂಪಮೇ’ಚಿತ್ರದ ಚಿತ್ರೀಕರಣ ಮುಗಿದಿದೆ. ಶಂಕರ್ ನಿರ್ದೇಶನದ ಮತ್ತೊಂದು ತೆಲುಗು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.