
ಚಿತ್ರರಂಗ ಎಂದರೆ ಬಣ್ಣದ ಜಗತ್ತು, ಖ್ಯಾತಿ, ಹಣ ಮತ್ತು ಅಭಿಮಾನಿಗಳ ಪ್ರೀತಿ ಎಂದು ಹಲವರು ಭಾವಿಸುತ್ತಾರೆ. ಆದರೆ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಹಾದಿ ಅಷ್ಟು ಸುಲಭವಲ್ಲ. ಹೊಸ ಅವಕಾಶಗಳನ್ನು ಹುಡುಕುವುದು, ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವುದು ಮತ್ತು ತಮ್ಮದೇ ಆದ ನಿರ್ಧಾರಗಳಿಗೆ ಬದ್ಧರಾಗಿರುವುದು ಕಲಾವಿದರ ಪಾಲಿಗೆ ದೊಡ್ಡ ಸವಾಲು. ಇದೀಗ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಆಯ್ಕೆಗಳ ಮೂಲಕ ಗುರುತಿಸಿಕೊಳ್ಳುತ್ತಿರುವ ನಟಿ ತಪಸ್ವಿನಿ ಪೂಣಚ್ಚ ಅವರ ಸಿನಿಪಯಣ ಗಮನ ಸೆಳೆಯುತ್ತಿದೆ.
ಕೊಡಗಿನ ಮಣ್ಣಿನಿಂದ ಕನ್ನಡ ಚಿತ್ರರಂಗಕ್ಕೆ ಬಂದಿರುವ ತಪಸ್ವಿನಿ, ರಿಷಬ್ ಶೆಟ್ಟಿ ನಿರ್ದೇಶನದ ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರದ ಮೂಲಕ 2022ರಲ್ಲಿ ಸ್ಯಾಂಡಲ್‌ವುಡ್‌ಗೆ ಪರಿಚಯವಾದರು. ಇದೀಗ ‘ಪ್ರೇಮದ ಊರಲಿ’ ಚಿತ್ರದ ಮೂಲಕ ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ಸಿನಿಪಯಣದ ಕುರಿತು ‘HARI Kathe’ ಪಾಡ್‌ಕಾಸ್ಟ್‌ನಲ್ಲಿ ಹಲವು ಆಸಕ್ತಿದಾಯಕ ವಿಚಾರಗಳು ಹಂಚಿಕೊಂಡಿದ್ದಾರೆ.
ಫೇಮ್, ಹಣವೇ ಎಲ್ಲವೂ ಅಲ್ಲ!
ಪಾಡ್‌ಕಾಸ್ಟ್‌ನಲ್ಲಿ ಅವರು ಸಹಿ ಹಾಕುವ ಮೊದಲು, "ನೀವು ನಿಮ್ಮ ಅಸಿಸ್ಟೆಂಟ್, ಪೋಷಕರನ್ನು ಕರೆದುಕೊಂಡು ಬರಬಹುದು, ಯೋಜನೆ ನಿಮ್ಮದೇ" ಎಂದೆಲ್ಲಾ ಸಿಹಿ ಮಾತುಗಳನ್ನು ಆಡುವವರು, ಒಮ್ಮೆ ಅಗ್ರಿಮೆಂಟ್ ಪೇಪರ್ ಮೇಲೆ ಸಹಿ ಬೀಳುತ್ತಿದ್ದಂತೆ ಸಂಪೂರ್ಣ ಬದಲಾಗುತ್ತಾರೆ. "ಒಮ್ಮೆ ನೀವು ಸಹಿ ಹಾಕಿದರೆ, ಅವರ ಎಲ್ಲಾ ಷರತ್ತುಗಳಿಗೂ ಒಪ್ಪಿಕೊಂಡಂತೆಯೇ. ಆ ನಂತರ ನಿಮ್ಮ ಕೈಯಲ್ಲಿ ಏನೂ ಇರುವುದಿಲ್ಲ," ಎಂದು ಚಿತ್ರರಂಗದಲ್ಲಿ ಹೊಸಬರು ಹೇಗೆ ಒಪ್ಪಂದಗಳ ಬಲೆಯಲ್ಲಿ ಸಿಲುಕಿಕೊಳ್ಳುತ್ತಾರೆ ಎಂಬುದನ್ನು ಎಳೆಎಳೆಯಾಗಿ ಹೇಳಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿ ಯಶಸ್ಸು ಗಳಿಸಿದ ಬಳಿಕ ಕಲಾವಿದರಿಗೆ ಹೆಚ್ಚಿನ ಮನ್ನಣೆ ಸಿಗುತ್ತದೆ ಎಂಬ ಅಭಿಪ್ರಾಯ ಹಲವರಲ್ಲಿದೆ. ಆದರೆ ಖ್ಯಾತಿ ಮತ್ತು ಹಣಕ್ಕಿಂತಲೂ ವ್ಯಕ್ತಿತ್ವ, ಸ್ವಾಭಿಮಾನ ಹಾಗೂ ಪರಸ್ಪರ ಗೌರವ ಮುಖ್ಯ ಎಂಬ ವಿಚಾರವೂ ಚಿತ್ರರಂಗದ ಚರ್ಚೆಗಳಲ್ಲಿ ಮಹತ್ವ ಪಡೆಯುತ್ತದೆ. ಹೊಸ ಕಲಾವಿದರು ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನ ಕಂಡುಕೊಳ್ಳುವಾಗ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ತಮ್ಮ ಆಯ್ಕೆಗಳಿಗೆ ಬೆಲೆ ಕೊಡುವುದು ಮತ್ತು ಸ್ವಂತ ವ್ಯಕ್ತಿತ್ವವನ್ನು ಉಳಿಸಿಕೊಳ್ಳುವುದು ಮುಖ್ಯವಾಗುತ್ತದೆ ಎಂದು ತಪಸ್ವಿನಿ ಪೂಣಚ್ಚ ಹೇಳಿದ್ದಾರೆ.
ಹಾಗೇ ಇಂಡಸ್ಟ್ರಿಯ ಹಿರಿಯರು ಅಥವಾ ನಿರ್ಮಾಪಕರು ಮಾಡುವ ಮ್ಯಾನಿಪುಲೇಷನ್ ಬಗ್ಗೆ ಮಾತನಾಡಿದ ಅವರು, "ಅವರು ನಮ್ಮ ಮನಸ್ಸನ್ನು ಬದಲಾಯಿಸಲು ಯತ್ನಿಸುತ್ತಾರೆ. 'ಮೊದಲು ನಕ್ಷತ್ರದಂತೆ ಮೆರೆಯಿರಿ, 35 ಅಥವಾ 40 ವರ್ಷದ ನಂತರ ಸೆಟಲ್ ಆಗಿ, ಅಲ್ಲಿಯವರೆಗೂ ಹಣ ಮಾಡಿ, ಪ್ರಸಿದ್ಧಿ ಪಡೆಯಿರಿ. ಯಾಕಂದ್ರೆ ನಿಮ್ಮ ಬಳಿ ದುಡ್ಡು, ಫೇಮ್ ಇದ್ದರೆ ಮಾತ್ರ ಈ ಜಗತ್ತು ಗೌರವ ಕೊಡುತ್ತೆ' ಎಂದು ನಂಬಿಸಲು ನೋಡುತ್ತಾರೆ, ಆಗ ಅವರು ಸಾರ್... ನಿಮ್ಮ ಫೇಮ್, ನಿಮ್ಮ ಸ್ಟಾರ್ ಸ್ಟೇಟಸ್ ನಿಮಗೇ ಇರಲಿ. ನನಗೆ ಅದು ಯಾವುದೂ ಬೇಡ, ಆ ತರದ ಗೌರವವೂ ನನಗೆ ಸಿಗಬೇಕಿಲ್ಲ" ಎಂದು ನೇರವಾಗಿಯೇ ಹಿರಿಯರಿಗೆ ತಿರುಗೇಟು ನೀಡಿದ್ದಾಗಿ ಹೇಳಿಕೊಂಡಿದ್ದಾರೆ ಈ ಪಾಡ್‌ಕಾಸ್ಟ್‌ನಲ್ಲಿ.
ತಮ್ಮದೇ ಆಯ್ಕೆಗಳ ಮೂಲಕ ಗುರುತಿಸಿಕೊಳ್ಳುತ್ತಿರುವ ತಪಸ್ವಿನಿ
ತಪಸ್ವಿನಿ ಪೂಣಚ್ಚ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ತಮ್ಮ ಸಿನಿಪಯಣವನ್ನು ಮುಂದುವರಿಸುತ್ತಿದ್ದಾರೆ. ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರದ ಮೂಲಕ ಆರಂಭವಾದ ಅವರ ಪಯಣಕ್ಕೆ ‘ಪ್ರೇಮದ ಊರಲಿ’ ಮತ್ತೊಂದು ಗುರುತಾಗಿದೆ. ಚಿತ್ರರಂಗದಲ್ಲಿ ಹೆಸರು ಮಾಡಬೇಕೆಂಬ ಆಸೆಯ ಜೊತೆಗೆ, ತಮ್ಮ ಪ್ರತಿಭೆಗೆ ತಕ್ಕ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದು ಕೂಡ ಕಲಾವಿದರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತಪಸ್ವಿನಿ ಅವರ ಸಿನಿಪಯಣವೂ ಈ ಕಾರಣದಿಂದ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.
'ಪ್ರೇಮದ ಊರಲಿ' ಮೂಲಕ ಪ್ರೇಕ್ಷಕರ ಪ್ರೀತಿ
ತಪಸ್ವಿನಿ ಪೂಣಚ್ಚ ಅವರ ಸಿನಿಪಯಣದಲ್ಲಿ 'ಪ್ರೇಮದ ಊರಲಿ' ಚಿತ್ರವೂ ಗಮನ ಸೆಳೆಯುವ ಹೆಸರಾಗಿದೆ. ಈ ಚಿತ್ರದ ಮೂಲಕ ಅವರು ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ. ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ತಲುಪುತ್ತಿರುವ ನಟಿ, ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಮೂಡಿಸಿದ್ದಾರೆ. ಚಿತ್ರರಂಗದಲ್ಲಿ ಹೊಸಬರಿಗೆ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವುದು ಸುಲಭವಲ್ಲ. ಅಂತಹ ಸಂದರ್ಭದಲ್ಲಿ ಪ್ರೇಕ್ಷಕರ ಗಮನ ಸೆಳೆಯುವ ಪಾತ್ರಗಳು ನಟ-ನಟಿಯರ ಮುಂದಿನ ಪಯಣಕ್ಕೆ ಹೊಸ ಅವಕಾಶಗಳನ್ನು ತೆರೆದಿಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.