ಚಿತ್ರರಂಗಕ್ಕೆ ರಾಗಿಣಿ ಎಂಟ್ರಿ ಕೊಟ್ಟು 10 ವರ್ಷ!

By Web DeskFirst Published Apr 5, 2019, 9:05 AM IST
Highlights

ಗ್ಲಾಮರಸ್‌ ನಟಿ ರಾಗಿಣಿ ದ್ವಿವೇದಿ ಸಿನಿ ಜರ್ನಿ ಶುರುವಾಗಿ ಹತ್ತು ವರ್ಷ. ಈ ಹತ್ತು ವರ್ಷದಲ್ಲಿ ರಾಗಿಣಿ ಅಭಿನಯಿಸಿದ ಸಿನಿಮಾಗಳ ಸಂಖ್ಯೆ 30. ‘ವೀರ ಮದಕರಿ’ ಮೂಲಕ ಸಿಕ್ಕ ಬಿಗ್‌ ಎಂಟ್ರಿಯೊಂದಿಗೆ ಒಂದಷ್ಟುವರ್ಷ ಕನ್ನಡದ ಹೈಟ್‌ ನಟರ ಜತೆಗೆ ವ್ಹೈಟ್‌ ಆ್ಯಂಡ್‌ ಕ್ಯೂಟ್‌ ನಟಿಯಾಗಿ ಭರ್ಜರಿಯಾಗಿ ಮಿಂಚಿದ ಖ್ಯಾತಿ ರಾಗಿಣಿ ಅವರದ್ದು

ದೇಶಾದ್ರಿ ಹೊಸ್ಮನೆ

ಆ ಮೂಲಕವೇ ಸೋಲೋ ಹೀರೋಯಿನ್‌ ಆಗಿಯೂ ಅಬ್ಬರಿಸಿದರು. ಅದ್ಯಾಕೋ ಈಗವರು, ಚಿತ್ರರಂಗದಲ್ಲಿ ಸಿನಿಮಾಕ್ಕಿಂತ ವಿವಾದಗಳಲ್ಲಿ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ಹಾಗಂತ ಅವರಿಗೀಗ ಅವಕಾಶ ಇಲ್ಲ ಅಂತಲ್ಲ. ಇದ್ದರೂ ಕಾಂಟ್ರವರ್ಸಿಗಳಲ್ಲಿ ರಾಗಿಣಿ ಹೆಸರು ಹೆಚ್ಚು ಚಾಲ್ತಿಗೆ ಬರುತ್ತಿದೆ. ಇದು ಯಾಕೆ? ಕಾಂಟ್ರವರ್ಸಿ ಅಂದ್ರೆ ರಾಗಿಣಿ ಅವರಿಗೆ ಇಷ್ಟನಾ? ಈ ಹತ್ತು ವರ್ಷದ ಅವರ ಜರ್ನಿ ಹೇಗಿತ್ತು? ಅದೆಲ್ಲದಕ್ಕೂ ಉತ್ತರವಾಗಿದ್ದಾರೆ ರಾಗಿಣಿ.

ಮೊದ್ಲು ಈ ಹತ್ತು ವರ್ಷದ ಸಿನಿ ಪಯಣ ಹೇಗಿತ್ತು ಹೇಳಿ?

ಐ ಆ್ಯಮ್‌ ಹ್ಯಾಪಿ. ಹತ್ತು ವರ್ಷ ಹೇಗೆ ಕಳೆಯಿತು ಅನ್ನೋದೇ ಗೊತ್ತಾಗ್ತಿಲ್ಲ. ನಿನ್ನೆ -ಮೊನ್ನೆ ಕಳೆದು ಹೋದ ಹಾಗಿದೆ ಆ ದಿನಗಳು. ಹಾಗೆಯೇ ಎಲ್ಲವೂ ಹೊಸತೆನಿಸುತ್ತಿದೆ. ಕಹಿಗಿಂತ ಖುಷಿಯೇ ಹೆಚ್ಚಿದೆ. ಯಾವತ್ತಿಗೂ ನಾನು ಕಳೆದು ಹೋದ ದಿನಗಳನ್ನು ಹಿಂತಿರುಗಿ ನೋಡುವಾಗ ಕಹಿ ಅನುಭವಗಳಿಗಿಂತ, ಸಿಹಿ ಅನುಭವಗಳನ್ನೆ ಹೆಚ್ಚು ಕೌಂಟ್‌ ಮಾಡುತ್ತೇನೆ. ಅವುಗಳ ನೆನಪಲ್ಲಿ ಮುಂದೆ ಏನ್‌ ಮಾಡ್ಬೇಕು ಎನ್ನುವುದನ್ನು ಡಿಸೈಡ್‌ ಮಾಡುತ್ತೇನೆ. ಈಗಲೂ ಅಷ್ಟೆ.

ಕಹಿ ಅನುಭವಗಳೂ ಮುಂದಿನ ಜೀವನಕ್ಕೆ ಪಾಠ ಅಲ್ವಾ?

ಖಂಡಿತಾ ಹೌದು, ನಾವು ಏನನ್ನಾದ್ರೂ ಸಾಧನೆ ಮಾಡಬೇಕಾದ್ರೆ ಅವೆಲ್ಲವುಗಳ ನೆನಪು ಇರಲೇಬೇಕು. ಸಾಧನೆಗೆ ಮತ್ತೊಬ್ಬರ ಸ್ಪೂರ್ತಿಯ ಜತೆಗೆ, ಛಲವೂ ಮುಖ್ಯ. ಛಲ, ಸಿಟ್ಟು ಇಲ್ಲದಿದ್ದರೆ ಸಾಧನೆ ಮಾಡೋದು ಕಷ್ಟ. ನಾನು ಕೂಡ ಇಲ್ಲಿ ತನಕ ಬಂದಿದ್ದು ಹಾಗೆಯೇ. ಹಿಂದೆ ಯಾರೋ ಏನೋ ಮಾತನಾಡುತ್ತಿದ್ದಾರೆ, ಕಾಲೆಳೆಯುತ್ತಿದ್ದಾರೆ, ಅವಮಾನಿಸುತ್ತಿದ್ದಾರೆ ಅಂತೆಲ್ಲ ಕೊರಗುತ್ತಾ ಕೂತಿದ್ದರೆ, ಇಷ್ಟುವರ್ಷ ನಟಿಯಾಗಿ ಇಂಡಸ್ಟ್ರಿನಲ್ಲಿ ಇರೋದಿಕ್ಕೆ ಆಗ್ತಿರಲಿಲ್ಲ.

ನಟಿಯಾಗಿ ಹತ್ತು ವರ್ಷ ಪೂರೈಸ್ತೀನಿ, ಮುಂದೆಯೂ ಇಲ್ಲೇ ಇರ್ತೀನಿ ಎನ್ನುವ ನಿರೀಕ್ಷೆ ಇತ್ತಾ?

ಹಾಗೆಲ್ಲ ಲೆಕ್ಕಚಾರ ಹಾಕಿಕೊಂಡು ಇಲ್ಲಿಗೆ ಬಂದವಳಲ್ಲ ನಾನು. ನಟನೆಯಾಗಲಿ, ಸ್ಟಾರ್‌ಗಿರಿಯಾಗಲಿ ಶಾಶ್ವತ ಅಲ್ಲ ಅಂತಲೂ ಗೊತ್ತಿತ್ತು. ಆದರೂ ನಟನೆ ಮೇಲೆ ಆಸಕ್ತಿಯಿತ್ತು. ಆದಾಗಲೇ ಮಾಡೆಲಿಂಗ್‌ನಲ್ಲಿದ್ದೆ. ಅದು ಬಿಟ್ಟರೆ ನಂಗೆ ಸೂಕ್ತವಾಗುವ ಫೀಲ್ಡ್‌ ಸಿನಿಮಾ ಅಂತಂದುಕೊಂಡಿದ್ದೆ. ಅವಕಾಶ ಸಿಕ್ಕಷ್ಟುದಿನವಾದರೂ ಇಲ್ಲಿರೋಣ, ಒಳ್ಳೆಯ ನಟಿ ಅಂತ ಗುರುತಿಸಿಕೊಳ್ಳೋಣ ಎನ್ನುವುದಿತ್ತು. ಆ ಪ್ರಕಾರವೇ ಇಲ್ಲಿ ತನಕ ಆಗಿದೆ. ಮುಂದೆ ಕೂಡ ಸಿನಿಮಾ ನನ್ನ ವೃತ್ತಿ. ಅದರ ಜತೆಗೆ ಸಾಮಾಜಿಕ ಕೆಲಸ, ಸ್ಪೋರ್ಟ್‌ ಅಂತೆಲ್ಲ ತಿರುಗಾಟ ಇದ್ದೇ ಇರುತ್ತೆ.

ಈ ಹತ್ತು ವರ್ಷದಲ್ಲಿ ರಾಗಿಣಿ ನಟಿಯಾಗಿ ಪಡೆದಿದ್ದೇನು, ಕಳೆದುಕೊಂಡಿದ್ದೇನು?

ಪಡೆದುಕೊಂಡಿದ್ದು ಸಾಕಷ್ಟಿದೆ. ಜನರ ಪ್ರೀತಿ, ನಂಬಿಕೆ, ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು. ಕರ್ನಾಟಕದ ಯಾವುದೇ ಮೂಲೆಗೆ ಹೋದರೂ ಜನ ನನ್ನನ್ನು ಗುರುತಿಸುತ್ತಾರೆ, ಮಾತನಾಡಿಸುತ್ತಾರೆ. ಅದು ಸಿನಿಮಾವೇ ಕೊಟ್ಟಕೊಡುಗೆ. ಜತೆಗೆ ನಟನೆಯನ್ನೇ ವೃತ್ತಿಯಾಗಿಸಿಕೊಂಡ ಮೇಲೆ ಅಷ್ಟೋ ಇಷ್ಟೋ ಸಂಭಾವನೆ, ಸಂಪಾದನೆ ಸಹಜ. ಅದರಲ್ಲೂ ನನಗೆ ತೃಪ್ತಿಯಿದೆ. ಹಾಗೆ ನೋಡಿದ್ರೆ, ಕಳೆದುಕೊಂಡಿದ್ದು ಕಮ್ಮಿ. ಇನ್ನಷ್ಟುಒಳ್ಳೆಯ ಪಾತ್ರಗಳಲ್ಲಿ ಅಭಿನಯಿಸಬೇಕಿತ್ತು ಎನ್ನುವ ಕೊರಗು ಇದಿದ್ದು ಬಿಟ್ಟರೆ, ವಯಸ್ಸು ಕಳೆದಿರಬೇಕು ಅಷ್ಟೆ.

ರಾಗಿಣಿ ಈಗ ಅಷ್ಟಾಗಿ ಬ್ಯುಸಿ ಇಲ್ಲ, ಅವಕಾಶ ಹೆಚ್ಚು ಸಿಗುತ್ತಿಲ್ಲಾ ಅನ್ನೋದು ನಿಜ ಅಲ್ವಾ?

ಹಾಗಂತ ಯಾರು ಹೇಳಿದ್ದು? ಅವಕಾಶಗಳು ಇಲ್ಲ, ಅದಕ್ಕಾಗಿ ರಾಗಿಣಿ ಮನೆಯಲ್ಲಿದ್ದಾರೆ ಅಂತ ಯಾರಾದ್ರೂ ತಿಳಿದುಕೊಂಡಿದ್ರೆ ಅದು ತಪ್ಪು. ಇಷ್ಟಕ್ಕೂ ಬ್ಯುಸಿ ಅಂದ್ರೇನು? ದಿನ ಸುದ್ದಿಯಲ್ಲಿ ಇರುವುದಾ? ಅವಕಾಶ ಇಲ್ಲ ಅಂತ ಯಾರೋ ಹೇಳ್ತೀರಬಹುದು, ಆದ್ರೆ ಅಂತಹ ಅವಕಾಶಗಳಿಗೆ ನಾನು ಓಕೆ ಹೇಳಿದ್ರೆ, ವರ್ಷವಿಡೀ ಶೂಟಿಂಗ್‌ ಅಂತ ಹೇಳಿಕೊಂಡು ತಿರುಗುವಷ್ಟುಅವಕಾಶ ಪಡೆಯಬಲ್ಲೆ. ನಂಗದು ಇಷ್ಟವಿಲ್ಲ. ಮತ್ತದೇ ಪಾತ್ರ, ಮತ್ತದೇ ಮರ ಸುತ್ತುವ ಕತೆಗಳಲ್ಲಿ ನಾನು ಕಾಣಿಸಿಕೊಳ್ಳುವುದಕ್ಕೆ ಇಷ್ಟಇಲ್ಲ. ಹಾಗಾಗಿ ಹೆಚ್ಚು ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ.

ಹಾಗಾದ್ರೆ, ಈಗ ನಿಮ್ಮ ಕೈಯಲ್ಲಿರೋ ಸಿನಿಮಾಗಳ ಸಂಖ್ಯೆ ಎಷ್ಟು?

ಸಂಖ್ಯೆ ನಂಗೆ ಮುಖ್ಯವಲ್ಲ. ನಂಗೆ ಇಷ್ಟವಾಗುವಂತಹ ಪಾತ್ರಗಳೇ ಮುಖ್ಯ. ಆ ಕಾರಣಕ್ಕಾಗಿಯೇ ಪ್ರೇಮ್‌ ಅವರ ‘ಗಾಂಧಿಗಿರಿ’ ಒಪ್ಪಿಕೊಂಡಿದ್ದೆ. ಅದಕ್ಕೀಗ ಬಹುತೇಕ ಚಿತ್ರೀಕರಣ ಮುಗಿದಿದೆ. ಇನ್ನು ಶರಣ್‌ ಕಾಂಬಿನೇಷನಿನಲ್ಲಿ ‘ಅಧ್ಯಕ್ಷ ಇನ್‌ ಅಮೆರಿಕ’ ದಲ್ಲಿ ಅಭಿನಯಿಸಿದ್ದೇನೆ. ಅದಕ್ಕೂ ಚಿತ್ರೀಕರಣ ಕಂಪ್ಲೀಟ್‌ ಆಗುವ ಹಂತದಲ್ಲಿದೆ. ಮತ್ತೊಂದು ಚಿತ್ರ ಕೂಡ ಶೂಟಿಂಗ್‌ ಹಂತದಲ್ಲಿದೆ. ಅದಕ್ಕೀನ್ನು ಟೈಟಲ್‌ ಫೈನಲ್‌ ಆಗಿಲ್ಲ. ಟೀಮ್‌ ಕೂಡ ಅನೌನ್ಸ್‌ ಆಗಿಲ್ಲ. ಹಾಗಾಗಿ ಸುದ್ದಿ ಆಗಿಲ್ಲ.

ಅದು ಸರಿ, ಕೆಲವು ಸೆಟ್ಟೇರಿದ ಸಿನಿಮಾಗಳೂ ಕೂಡ ನಿಂತಿದ್ದು ಯಾಕೆ?

ಕೆಲವು ಅಲ್ಲ, ಒಂದೆರೆಡು ಸಿನಿಮಾ ಮಾತ್ರ. ಅದಕ್ಕೆಲ್ಲ ನಾವು ಕಾರಣ ಅಲ್ಲ. ನಿರ್ಮಾಪಕರು ಯಾವುದೋ ಲೆಕ್ಕಚಾರದಲ್ಲಿ ಸಿನಿಮಾ ಮಾಡಿರುತ್ತಾರೆ, ಹೇಗಾದ್ರೂ ಬಂಡವಾಳ ಹಾಕಬಹುದು ಅಂತಂದುಕೊಂಡಿರುತ್ತಾರೆ. ಮುಂದೆ ಕಷ್ಟಅಂತ ಎನಿಸಿದಾಗ ಚಿತ್ರೀಕರಣದ ಮುಂಚೆಯೇ ನಿಲ್ಲಿಸಿದ್ರೆ ಸೂಕ್ತ ಎನ್ನುವುದು ಅವರ ಅಭಿಪ್ರಾಯವಾಗಿತ್ತೇನೋ. ನನ್ನ ಪ್ರಕಾರ ಅದು ಸರಿಯೂ ಹೌದು. ಕಷ್ಟಪಟ್ಟು ಸಿನಿಮಾ ಮುಗಿಸಿ, ರಿಲೀಸ್‌ ಹಂತದಲ್ಲಿ ದುಡ್ಡು ಇಲ್ಲದೆ ಒದ್ದಾಡುವುದಕ್ಕಿಂತ ಚಿತ್ರೀಕರಣದ ಹಂತದಲ್ಲೇ ನಿಲ್ಲಿಸಿದ್ರೆ ಒಳ್ಳೆಯದು.

ಸೋಲೋ ಹೀರೋಯಿನ್‌ ಆಗಿದ್ದು, ನಿಮ್ಮ ಕರಿಯರ್‌ಗೆ ಡಿಮ್ಯಾಜ್‌ ಆಯ್ತಾ?

ಹಾಗಂತ ನಾನು ಭಾವಿಸಿಲ್ಲ. ಹಾಗೂ ನಂಗೆ ಅವಕಾಶ ಸಿಕ್ಕಲ್ಲವೇ ಅದಕ್ಕಾಗಿ ಹೆಮ್ಮೆ ಯಿದೆ. ಮೊದಲ ಚಿತ್ರವೇ ಸೂಪರ್‌ ಡೂಪರ್‌ ಹಿಟ್‌ ಆಯ್ತು. ಎರಡನೇ ಸಿನಿಮಾ ಅವರೇಜ್‌ ಸಕ್ಸಸ್‌ ಸಿಗ್ತು. ಆನಂತರ ಬಂದ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಅಷ್ಟಕಷ್ಟೆಎನ್ನುವಂತಾಗಿದ್ದರೂ, ನಿರ್ಮಾಪಕರಿಗೆ ಹಾಕಿದ ಬಂಡವಾಳ ಸಿಕ್ಕಿದೆ. ಮೇಲಾಗಿ ನನ್ನನ್ನು ನಾನು ನಟಿಯಾಗಿ ಇನ್ನೊಂದು ಲೆವೆಲ್‌ನಲ್ಲಿ ತೋರಿಸಿಕೊಳ್ಳುವುದಕ್ಕೆ ಸಾಧ್ಯವಾಯ್ತು. ಕಿಚ್ಚು, ದಿ ಟೆರೆರಿಸ್ಟ್‌ ಅಂತಹ ಪ್ರಯೋಗಾತ್ಮಕ ಸಿನಿಮಾಗಳಲ್ಲಿ ಸವಾಲಿನ ಪಾತ್ರಗಳಿಗೆ ಬಣ್ಣ ಹಚ್ಚುವ ಅವಕಾಶ ಸಿಕ್ಕಿತು. ಇದನ್ನೆಲ್ಲ ಡಿಮ್ಯಾಜ್‌ ಅಂತೆನ್ನುವುದಕ್ಕೆ ಆಗುತ್ತಾ?

ತುಪ್ಪದ ಬೆಡಗಿ ರಾಗಿಣಿ ಮತ್ತೆ ಯಾವಾಗ ಐಟಂ ಸಾಂಗ್ಸ್‌ಗೆ ಹೆಜ್ಜೆ ಹಾಕುವುದು?

ಗೊತ್ತಿಲ್ಲ, ಅಂತಹ ಅವಕಾಶ ಬಂದಿಲ್ಲ. ಬಂದ್ರೆ, ಸ್ಪೆಷಲ್‌ ಸಾಂಗ್ಸ್‌ನಲ್ಲಿ ಕುಣಿಯುವುದಕ್ಕೆ ನಾನು ಈಗಲೂ ರೆಡಿ. ಹಾಗೆ ನೋಡಿದ್ರೆ, ಲೇಡಿಂಗ್‌ನಲ್ಲಿದ್ದ ಒಬ್ಬ ನಟಿ ಚಿತ್ರವೊಂದರ ಸ್ಪೆಷಲ್‌ ಸಾಂಗ್ಸ್‌ನಲ್ಲಿ ಕುಣಿಯಬಹುದು ಅಂತ ತೋರಿಸಿಕೊಟ್ಟಿದ್ದು ನಾನೇ. ಅಲ್ಲಿಂದ ಸಾಕಷ್ಟುಸ್ಟಾರ್‌ ನಟಿಯರು ಸ್ಪೆಷಲ್‌ ಸಾಂಗ್ಸ್‌ನಲ್ಲಿ ಕಾಣಿಸಿಕೊಂಡರು. ಅದು ಈಗಲೂ ಮುಂದುವರೆದಿದೆ. ನನಗೆ ಅಂತಹ ಅವಕಾಶ ಸಿಕ್ಕಿಲ್ಲ. ಬಂದ್ರೆ ಸ್ಪೆಷಲ್‌ ಸಾಂಗ್ಸ್‌ನಲ್ಲಿ ಕಾಣಿಸಿಕೊಳ್ಳುವುದಕ್ಕೆ ನಂಗೇನು ತೊಂದರೆ ಇಲ್ಲ.

ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುವುದೆಂದ್ರೆ ರಾಗಿಣಿ ಅವರಿಗೆ ಅದ್ಯಾಕೆ ಪ್ರೀತಿ?

ಮೊದ್ಲು ಇಲ್ಲಿ ಡಿಸೈಡ್‌ ಆಗ್ಬೇಕಾಗಿರೋದು ಗ್ಲಾಮರಸ್‌ ಅಂದ್ರೇನು ಅನ್ನೋದು. ಯಾಕಂದ್ರೆ, ಕಡಿಮೆ ಬಟ್ಟೆಯಲ್ಲಿ ಕಾಣಿಸಿಕೊಳ್ಳುವುದು, ಮಾದಕವಾಗಿ ಮೈ ತೋರಿಸುವುದು ಎನ್ನುವುದೇ ಆಗಿದೆ. ಆದರಾಚೆ ಯಾಕೆ ಗ್ಲಾಮರಸ್‌ ಅನ್ನು ನೋಡುವುದಕ್ಕೆ ಆಗುತ್ತಿಲ್ಲ. ಬೋಲ್ಡ್‌ ಆಗಿರುವ ಪಾತ್ರದಲ್ಲಿ ಕಂಡ್ರೆ ಗ್ಲಾಮರಸ್‌ ಅಂತಾರೆ, ಸಂದರ್ಭೋಚಿತವಾದ ಸ್ಪೆಷಲ್‌ ಸಾಂಗ್ಸ್‌ನಲ್ಲಿ ಕುಣಿದಿದ್ರೆ ಗ್ಲಾಮರಸ್‌ ನಟಿ ಅಂತಾರೆ. ಇದು ಸರಿಯಲ್ಲ. ನನ್ನ ಮಟ್ಟಿಗೆ ಅದು ನನ್ನ ಸ್ವಭಾವ.

ರಾಗಿಣಿ ಈಗ ಸಿನಿಮಾದಲ್ಲಿ ಸುದ್ದಿ ಆಗುವ ಬದಲಿಗೆ ಕಾಂಟ್ರವರ್ಷಿಗಳಲ್ಲೇ ಹೆಚ್ಚು ಸುದ್ದಿ ಆಗುತ್ತಿರುವುದ್ಯಾಕೆ?

ನಾನ್‌ ಸೆನ್ಸ್‌ ಸುದ್ದಿಗಳ ಬಗ್ಗೆ ನಾನು ಹೆಚ್ಚು ಮಾತನಾಡೋದಿಲ್ಲ. ನನಗೂ ಖಾಸಗಿ ಲೈಫ್‌ ಅನ್ನೋದಿದೆ. ಯಾರೋ ಡುಬಾಕ್‌ ವ್ಯಕ್ತಿಗಳು ನನ್ನ ಹೆಸರು ಬಳಸಿಕೊಂಡು ಗಲಾಟೆ ಮಾಡಿಕೊಂಡರೆ, ಅದು ಇನ್ನೇನೋ ಸುದ್ದಿಯಾದ್ರೆ ಅದಕ್ಕೆ ನಾನು ಯಾಕೆ ಸ್ಪಷ್ಟನೆ ನೀಡಬೇಕು? ಅದು ನನಗೆ ಬೇಡವಾದ ಕೆಲಸ. ಅದಕ್ಕಾಗಿಯೇ ಆ ದಿನ ನಾನು ಎಲ್ಲೂ ಮಾತನಾಡಿರಲಿಲ್ಲ. ಆದ್ರೂ ಕೆಲವರು ಉದ್ದೇಶಪೂರ್ವಕವಾಗಿ ನನ್ನ ಹೆಸರು ಚಾಲ್ತಿಗೆ ತಂದಾಗ ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಅಂತ ಹೇಳಿದ್ದೆ. ಈಗಲೂ ನನ್ನ ವಾದ ಅದೇ ಆಗಿದೆ.

ಅಂದ್ರೆ, ಈ ಕಾಂಟ್ರವರ್ಷಿಗಳು ದುರುದ್ದೇಶ ಪೂರ್ವಕನಾ?

ಗೊತ್ತಿಲ್ಲ, ಕೆಲವರು ಇರೋದೇ ಹಾಗೆ. ಕೆಲವರ ಏಳಿಗೆಗಳನ್ನು ಅವರು ಸಹಿಸುವುದಿಲ್ಲ. ಮತ್ತೊಬ್ಬರಿಗೆ ಮಸಿ ಬಳೀಬೇಕು ಅಂತಲೇ ಕಾಯುತ್ತಿರುತ್ತಾರೆ. ಅಂತಹ ವ್ಯಕ್ತಿಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನೇನು ಅನ್ನೋದು ಚಿತ್ರೋದ್ಯಮಕ್ಕೆ ಗೊತ್ತಿದೆ. ಮೇಲಾಗಿ ಕನ್ನಡಿಗರಿಗೂ ಗೊತ್ತಿದೆ. ಸ್ನೇಹದಿಂದ ಇರುವುದನ್ನು, ಆಪ್ತವಾಗಿ ಬೆರೆಯುವುದನ್ನು ಅಪಾರ್ಥ ಮಾಡಿಕೊಂಡು ಕಟ್ಟು ಕತೆ ಸೃಷ್ಟಿಸಿದರೆ, ಅದೆಲ್ಲ ಹಾಗಲ್ಲ, ಹೀಗೆ ಅಂತ ಹೇಗೆ ಪ್ರೂ ಮಾಡ್ಲಿಕ್ಕೆ ಆಗುತ್ತೆ? ಪ್ರತಿಯೊಬ್ಬರಿಗೂ ಅವರೇನು ಅನ್ನೋದು ಅವರ ಆತ್ಮಸಾಕ್ಷಿಗೆ ಗೊತ್ತಿರುತ್ತದೆ. ನಾನು ಕೂಡ ಆತ್ಮಸಾಕ್ಷಿಗೆ ಭಾದ್ಯಸ್ಥಳು ಮಾತ್ರ.

ಹೋಗ್ಲಿ ಮದುವೆ ಯಾವಾಗ, ಆಗಾದ್ರೂ ಈ ಕಾಂಟವರ್ಷಿ ನಿಲ್ಲಬಹುದು ಅಲ್ವಾ?

ಮದುವೆಗೂ ಕಾಂಟ್ರವರ್ಷಿಗೂ ಸಂಬಂಧವಿಲ್ಲ. ಸುಮ್ನೆ ಅದನ್ನು ಇನ್ನಾವುದಕ್ಕೋ ತಳುಕು ಹಾಕುವುದು ಸರಿಯಲ್ಲ. ಮದುವೆ ಅನ್ನೋದು ನನ್ನ ಮುಂದಿನ ಜೀವನದ ಪ್ರಶ್ನೆ. ಹಾಗೆಯೇ ಅದು ನನ್ನೊಬ್ಬಳ ನಿರ್ಧಾರ ಅಲ್ಲ. ಅಪ್ಪ-ಅಮ್ಮ ಇದ್ದಾರೆ. ಅವರಿಗೂ ಇಷ್ಟವಾಗುವಂತಹ ಹುಡುಗಬೇಕು. ಅಂತಹ ಹುಡುಗ ಸಿಕ್ಕರೆ ಮದುವೆ ಆಗ್ತೀನಿ. ಸದ್ಯಕ್ಕೆ ಮದುವೆ ಇಲ್ಲ.

ರಾಗಿಣಿಗೆ ಸಾಕಷ್ಟುಜನ ಬಾಯ್‌ ಫ್ರೆಂಡ್ಸ್‌ ಇದ್ದಾರೆ ಅನ್ನೋ ಸುದ್ದಿಯಿದೆ?

ಬಾಯ್‌ ಫ್ರೆಂಡ್ಸ್‌ ಅಂದ್ರೆ ಯಾರು? ಮದುವೆ ಆಗುವವರಾ? ಅವರೆಲ್ಲ ಬೆಸ್ಟ್‌ ಫ್ರೆಂಡ್ಸ್‌ ಕೂಡ ಆಗಿರಬಹುದು ಅಲ್ವಾ? ಹಾಗಿರುವವರನ್ನೆಲ್ಲ ಇನ್ನಾವುದೋ ಅರ್ಥದಲ್ಲಿ ‘ಬಾಯ್‌ ಫ್ರೆಂಡ್‌’ ಅಂದ್ರೆ ನಾನೇನು ಹೇಳಲಿ?

click me!