
ಬೆಂಗಳೂರು (ಜ.30): ನನಗೆ ಹದಿನೆಂಟನೇ ವಯಸ್ಸಿಗೇ, ಮೊದಲ ಸಿನಿಮಾದಲ್ಲೇ ಕೊಡಬಾರದ ಕಾಟ ಕೊಟ್ಟರು!
ಹಾಗಂತ ಮೊನ್ನೆ ಮೊನ್ನೆ ಶ್ರುತಿ ಹರಿಹರನ್ ಹೈದರಾಬಾದ್'ನ ಸಮಾವೇಶವೊಂದರಲ್ಲಿ ನಾಯಕಿಯರಿಂದ ಚಿತ್ರರಂಗ ಏನೇನೋ ಬಯಸುವುದರ ಬಗ್ಗೆ ಮಾತಾಡಿದ್ದರು. ಕಾಸ್ಟಿಂಗ್ ಕೌಚ್ ಹೇಗೆ ನಟಿಯರ ಪಾಲಿಗೆ ಶಾಪವಾಗಿದೆ ಅನ್ನುವುದನ್ನು ವಿವರಿಸಿದ್ದರು. ಆ ಕುರಿತು ಪ್ರಶ್ನಿಸಿದಾಗ ಹರಿಪ್ರಿಯಾ ಹೇಳಿದ್ದು ಹೀಗೆ: ನಾನು ಶ್ರುತಿ ಹರಿಹರನ್ ಹೇಳಿಕೆಗೆ ಪ್ರತಿಕ್ರಿಯೆ ನೀಡ್ತಿದ್ದೀನಿ ಅಂದ್ಕೋಬೇಡಿ. ನನ್ನ ಅನುಭವ ಹೇಳುವೆ.
"ನನಗೆ ಚಿತ್ರರಂಗದಲ್ಲಿ ಅಂಥ ಯಾವ ಕೆಟ್ಟ ಅನುಭವವೂ ಆಗಿಲ್ಲ. ಯಾಕಾಗಿಲ್ಲ ಅಂದರೆ ಸಾಮಾನ್ಯವಾಗಿ ನಾವು ಹೇಗೆ ಇರುತ್ತೇವೋ, ಹೇಗೆ ವರ್ತಿಸುತ್ತೇವೋ ಅದಕ್ಕೆ ತಕ್ಕಂತೆ ನಮ್ಮ ಎದುರಿಗೆ ಇರುವವರೂ ವರ್ತಿಸುತ್ತಾರೆ. ನಾನು ಬೆಳೆದು ಬಂದ ಪರಿಸರ, ನನ್ನ ಸಂಸ್ಕೃತಿ ನನಗೆ ಹೇಗೆ ನಡೆದುಕೊಳ್ಳಬೇಕು ಅನ್ನುವುದನ್ನು ಹೇಳಿಕೊಟ್ಟಿದೆ. ಅಷ್ಟಕ್ಕೂ ಇಂಥ ಪ್ರಸಂಗಗಳಲ್ಲಿ ಕೇವಲ ಗಂಡಸರನ್ನು ದೂರಿ ಪ್ರಯೋಜನ ಇಲ್ಲ. ಎಷ್ಟೋ ಸಂದರ್ಭಗಳಲ್ಲಿ ಅದು ಪರಸ್ಪರ ಒಪ್ಪಿಗೆಯಿಂದ ನಡೆದದ್ದೂ ಆಗಿರಬಹುದು. ಕೆಲವರು ಪಾಶ್ಟಾತ್ಯ ಮನೋಭಾವದ ಹುಡುಗಿಯರು ಪಾತ್ರಕ್ಕೋಸ್ಕರ ಅಂಥ ಪ್ರಸಂಗಗಳನ್ನು ಮೈಮೇಲೆ ತಂದುಕೊಂಡಿರಬಹುದು. ಹೀಗಾಗಿ ಈ ಪ್ರಸಂಗವನ್ನು ಜನರಲೈಸ್ ಮಾಡುವುದು ಕಷ್ಟ. ಆದರೆ ಒಂದಂತೂ ನಿಜ. ನಾವು ಹೇಗಿರುತ್ತೇವೆ ಅನ್ನುವುದನ್ನು ಎಲ್ಲವೂ ಅವಲಂಬಿಸಿದೆ. ನಾವು ನಿಷ್ಠುರವಾಗಿ ವರ್ತಿಸಿದರೆ, ನಮಗೆ ಸಿಗಬೇಕಾದ ಗೌರವ ಸಿಕ್ಕಿಯೇ ಸಿಗುತ್ತದೆ. ನಾನಂತೂ ಸಿನಿಮಾ ನಟಿ ಆಗಲೇಬೇಕು ಅಂದುಕೊಂಡು ಬಂದವಳಲ್ಲ. ಕಳ್ಳರ ಸಂತೆ ಸಿನಿಮಾದಲ್ಲಿ ನಟಿಸಿದ ನಂತರ ನನಗೆ ಸಿನಿಮಾ ಬಗ್ಗೆ ನಿಜವಾದ ವ್ಯಾಮೋಹ ಬೆಳೆಯಿತು. ಅಲ್ಲಿಯ ತನಕ ನಟನೆಯ ಬಗ್ಗೆ ಅಂಥ ಪ್ರೀತಿಯೇನೂ ಇರಲಿಲ್ಲ".
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.