
ಚಿತ್ರರಂಗದಲ್ಲಿ ತಮ್ಮ ಗ್ಲಾಮರ್ ಹಾಗೂ ನೃತ್ಯದ ಮೂಲಕ ಗುರುತಿಸಿಕೊಂಡಿರುವ ನಟಿ ಡಿಂಪಲ್ ಹಯಾತಿ, ಇದೀಗ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಶರ್ವಾನಂದ್ ನಾಯಕನಾಗಿ ನಟಿಸಿರುವ, ಸಂಪತ್ ನಂದಿ ನಿರ್ದೇಶನದ ‘ಭೋಗಿ’ ಸಿನಿಮಾ ನವೆಂಬರ್ 27ರಂದು ಬಿಡುಗಡೆಯಾಗಲಿದೆ.
ಈ ಹಿನ್ನೆಲೆಯಲ್ಲಿ ನಡೆದ ಚಿತ್ರದ ಪ್ರೀ-ರಿಲೀಸ್ ಸಮಾರಂಭದಲ್ಲಿ ಮಾತನಾಡಿದ ಡಿಂಪಲ್, ತಮ್ಮ ಸಿನಿ ಪಯಣದ ಪ್ರಮುಖ ತಿರುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇಲ್ಲಿಯವರೆಗೆ ಪ್ರೇಕ್ಷಕರು ತಮ್ಮನ್ನು ಗ್ಲಾಮರ್ ಡಾಲ್ ಹಾಗೂ ಡ್ಯಾನ್ಸ್ ಮಾಡುವ ನಟಿಯಾಗಿ ಮಾತ್ರ ನೋಡಿದ್ದಾರೆ. ಆದರೆ ‘ಭೋಗಿ’ ಚಿತ್ರದ ಮೂಲಕ ತಮ್ಮಲ್ಲಿರುವ ನಟನಾ ಸಾಮರ್ಥ್ಯದ ಹೊಸ ಮುಖವನ್ನು ನೋಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗ್ಲಾಮರ್ ಇಮೇಜ್ ಅಳಿಸಲಿದೆ ‘ಮಂದಾರಂ’ ಪಾತ್ರ!
ಪ್ರಿ-ರಿಲೀಸ್ ಸಮಾರಂಭದ ವೇದಿಕೆಯಲ್ಲಿ ಮಾತನಾಡಿದ ಡಿಂಪಲ್ ಹಯಾತಿ, ‘ಪ್ರತಿಯೊಬ್ಬ ನಟಿಗೂ ತನ್ನಲ್ಲಿರುವ ನೈಜ ನಟನಾ ಪ್ರತಿಭೆಯನ್ನು ಜಗತ್ತಿಗೆ ತೋರಿಸುವಂತಹ ಒಂದು ಬಲವಾದ ಪಾತ್ರ ಸಿಗಬೇಕು ಎಂಬ ಆಸೆ ಇರುತ್ತದೆ. ಆದರೆ ಚಿತ್ರರಂಗದಲ್ಲಿ ಸಿಗುವ ಅವಕಾಶಗಳಿಗೆ ಅನುಗುಣವಾಗಿ ನಾವು ನಮ್ಮ ಪಯಣ ಮುಂದುವರಿಸಬೇಕಾಗುತ್ತದೆ. ಇಲ್ಲಿಯವರೆಗೆ ಪ್ರೇಕ್ಷಕರು ನನ್ನನ್ನು ಗ್ಲಾಮರ್ ಡಾಲ್ ಆಗಿ, ಸ್ಪೆಷಲ್ ಸಾಂಗ್‌ಗಳು ಹಾಗೂ ಡ್ಯಾನ್ಸ್ ಮಾಡುವ ಹುಡುಗಿಯಾಗಿ ಮಾತ್ರ ನೋಡಿದ್ದಾರೆ.
ಆದರೆ ನನ್ನ ಕಣ್ಣುಗಳಲ್ಲಿರುವ ತೀವ್ರತೆ ಮತ್ತು ನಟನೆಯ ಮೇಲಿನ ಆಸಕ್ತಿಯನ್ನು ಗುರುತಿಸಿ, ಅಭಿನಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುವ ಪಾತ್ರ ನೀಡಿದ ಮೊದಲ ನಿರ್ದೇಶಕ ಸಂಪತ್ ನಂದಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಭೋಗಿ’ ಚಿತ್ರದಲ್ಲಿ ತಾವು ನಿರ್ವಹಿಸಿರುವ ‘ಮಂದಾರಂ’ ಪಾತ್ರ ತಮ್ಮ ಸಿನಿ ಬದುಕಿಗೆ ಹೊಸ ದಾರಿ ತೋರಿಸಲಿದೆ ಎಂಬ ಭರವಸೆಯನ್ನೂ ಡಿಂಪಲ್ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ‘ಈ ಸಿನಿಮಾದಲ್ಲಿ ನನಗೆ ಒಂದೇ ಒಂದು ಡ್ಯಾನ್ಸ್ ಕೂಡ ಇಲ್ಲ. ಈವರೆಗೆ ನೀವು ನೋಡಿರದ ಸಂಪೂರ್ಣ ಹೊಸ ಡಿಂಪಲ್ ಹಯಾತಿಯನ್ನು ಇಲ್ಲಿ ನೋಡಲಿದ್ದೀರಿ’ ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ.
ಬೇರೆ ಕಥೆ ಕೇಳಲು ಹೋಗಿ ಸಿಕ್ಕಿತು ‘ಭೋಗಿ’ ಅವಕಾಶ!
‘ಭೋಗಿ’ ಸಿನಿಮಾದ ಭಾಗವಾಗಿದ್ದು ಹೇಗೆ ಎಂಬುದರ ಬಗ್ಗೆಯೂ ಡಿಂಪಲ್ ಆಸಕ್ತಿದಾಯಕ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ವಾಸ್ತವವಾಗಿ ಅವರು ನಿರ್ಮಾಪಕ ಕೆ.ಕೆ. ರಾಧಾಮೋಹನ್ ಅವರನ್ನು ಬೇರೊಂದು ಸಿನಿಮಾದ ಕಥೆ ಕೇಳಲು ಭೇಟಿಯಾಗಿದ್ದರಂತೆ. ಅದೇ ಸಂದರ್ಭದಲ್ಲಿ ಅಲ್ಲಿ ನಿರ್ದೇಶಕ ಸಂಪತ್ ನಂದಿ ಅವರನ್ನು ಭೇಟಿಯಾಗಿದ್ದು, ಡಿಂಪಲ್ ಅವರನ್ನು ಕಂಡ ಕೂಡಲೇ ತಮಗಾಗಿಯೇ ಕಾಯುತ್ತಿದ್ದುದಾಗಿ ಹೇಳಿ ‘ಭೋಗಿ’ ಚಿತ್ರದ ಕಥೆ ವಿವರಿಸಿದ್ದರಂತೆ.
‘ಮಂದಾರಂ’ ಪಾತ್ರದ ಬಗ್ಗೆ ತಿಳಿದ ತಕ್ಷಣವೇ ಆ ಪಾತ್ರವನ್ನು ತಾವೇ ಮಾಡಬೇಕು ಎಂದು ನಿರ್ಧರಿಸಿದ್ದಾಗಿ ಡಿಂಪಲ್ ಹೇಳಿದ್ದಾರೆ. ಒಂದು ಸಿನಿಮಾದ ಕಥೆ ಕೇಳಲು ಹೋಗಿ ಮತ್ತೊಂದು ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೂ, ತನಗೆ ಯಾವುದು ಇಷ್ಟವೋ ಅದನ್ನೇ ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯವನ್ನು ನಿರ್ಮಾಪಕ ಕೆ.ಕೆ. ರಾಧಾಮೋಹನ್ ನೀಡಿದ್ದರು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
2017ರಲ್ಲಿ ಬಿಡುಗಡೆಯಾದ ‘ಗಲ್ಫ್’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪರಿಚಯವಾದ ಡಿಂಪಲ್ ಹಯಾತಿ, ‘ಗದ್ದಲಕೊಂಡ ಗಣೇಶ್’ ಚಿತ್ರದ ‘ಜರ್ರ ಜರ್ರ’ ಹಾಡಿನ ಮೂಲಕ ಮಾಸ್ ಪ್ರೇಕ್ಷಕರ ಗಮನ ಸೆಳೆದರು. ಬಳಿಕ ರವಿತೇಜ ಅಭಿನಯದ ‘ಖಿಲಾಡಿ’, ವಿಶಾಲ್ ನಟನೆಯ ‘ಸಾಮಾನ್ಯುಡು’, ಗೋಪಿಚಂದ್ ಅಭಿನಯದ ‘ರಾಮಬಾಣಂ’ ಸಿನಿಮಾಗಳಲ್ಲಿ ನಟಿಸಿದರು. 2026ರಲ್ಲಿ ಬಿಡುಗಡೆಯಾದ ‘ಭರ್ತ ಮಹಾಶಯುಲುಕು ವಿಜ್ಞಪ್ತಿ’ ಚಿತ್ರದಲ್ಲಿ ರವಿತೇಜ ಜೊತೆ ಕಾಣಿಸಿಕೊಂಡಿದ್ದ ಅವರು, ತ್ರಿವಿಕ್ರಮ್ ನಿರ್ದೇಶನದ ‘ಆದರ್ಶ ಕುಟುಂಬಂ’ ಚಿತ್ರದಲ್ಲೂ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಇದೀಗ ಶರ್ವಾನಂದ್ ಐವರು ತಂಗಿಯರ ಅಣ್ಣನಾಗಿ ನಟಿಸುತ್ತಿರುವ ‘ಭೋಗಿ’ ಚಿತ್ರದಲ್ಲಿ ಅನುಪಮಾ ಪರಮೇಶ್ವರನ್ ಜೊತೆಗೆ ಡಿಂಪಲ್ ಹಯಾತಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭೀಮ್ಸ್ ಸಿಸಿರೋಲಿಯೋ ಸಂಗೀತ ಸಂಯೋಜಿಸಿರುವ ಈ ಚಿತ್ರದ ಟ್ರೇಲರ್ ಈಗಾಗಲೇ ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಗ್ಲಾಮರ್ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದ ಡಿಂಪಲ್, ‘ಮಂದಾರಂ’ ಪಾತ್ರದ ಮೂಲಕ ತಮ್ಮ ನಟನೆಯ ಮತ್ತೊಂದು ಮುಖವನ್ನು ಹೇಗೆ ಪರಿಚಯಿಸಲಿದ್ದಾರೆ ಎಂಬ ಕುತೂಹಲ ಇದೀಗ ಮೂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.