
ಶ್ರೀಮುರಳಿ ಮಫ್ತಿ ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ. ಶತಾಯಗತಾಯ ಚಿತ್ರದ ಆಡಿಯೋ ಬಿಡುಗಡೆಗೆ ಬಂದಿದ್ದ ಶ್ರೀಮುರಳಿ ಖುಷಿಯಿಂದ ಹೇಳಿದ 6 ಸಂಗತಿಗಳು ಇಲ್ಲಿವೆ
1 ನರ್ತನ್ ತುಂಬಾ ಇಷ್ಟವಾದ
ನಿರ್ದೇಶಕ ನರ್ತನ್‌ಗೆ ‘ಮಫ್ತಿ’ ಮೊದಲ ಪ್ರಯತ್ನ. ಆದರೂ ಬದ್ಧತೆಯಿಂದ ಒಂದು ಒಳ್ಳೆಯ ಚಿತ್ರ ನಿರ್ದೇಶನ ಮಾಡಿದ್ದಾನೆ. ಉಗ್ರಂ ಚಿತ್ರದಲ್ಲಿ ಅವನು ಮಾಡಿದ ಕೆಲಸದ ಬಗ್ಗೆ ನನಗೆ ಮೆಚ್ಚುಗೆ ಇತ್ತು. ಅದು ರಥಾವರದಲ್ಲಿಯೂ ಮುಂದುವರೆಯಿತು. ಅದನ್ನು ನೋಡಿದ್ದೇ ಇವನ ಜೊತೆ ಕೆಲಸ ಮಾಡಬೇಕು. ಏನಾದರೂ ಹೊಸದನ್ನು ಕಲಿಯಬೇಕು ಎನ್ನಿಸಿತು. ಅದಕ್ಕಾಗಿಯೇ ಅವನೊಂದಿಗೆ ಮಫ್ತಿ ಚಿತ್ರ ಮಾಡಲು ತಕ್ಷಣ ಒಪ್ಪಿದೆ. ಎಲ್ಲವೂ ಸರಿಯಾಗಿ ಕತೆಯೆಲ್ಲಾ ಓಕೆ ಆದ ಮೇಲೆ ಶಿವಣ್ಣ ಅವರನ್ನು ಅಪ್ರೋಚ್ ಮಾಡಿದೆವು. ಒಳ್ಳೆಯ ಕತೆ ಇದೆ. ಮಾಡುತ್ತೇನೆ ಎಂದು ಒಪ್ಪಿ ನಮ್ಮ ಜೊತೆಗೆ ಸೇರಿಕೊಂಡರು.
2 ಹೊರಗಡೆಯೂ ಬೆಳೆಯಬೇಕು
ಕನ್ನಡದ ಪ್ರತಿಯೊಬ್ಬ ನಟನಿಗೂ ಕನ್ನಡಿಗರ ಪ್ರೀತಿ ಇದೆ. ಆದರೆ ನಾವು ಇದನ್ನು ಬಿಟ್ಟು ಹೊರ ಪ್ರಪಂಚದಲ್ಲೂ ಗುರುತಿಸಿಕೊಂಡಾಗ ನಮ್ಮ ಇಂಡಸ್ಟ್ರಿ ಚೆನ್ನಾಗಿ ಬೆಳೆಯುತ್ತದೆ. ನಿರ್ಮಾಪಕನಿಗೆ ಒಳ್ಳೆಯ ಲಾಭ ಸಿಗುತ್ತದೆ. ಒಳ್ಳೆಯ ಲಾಭ ಸಿಕ್ಕರೆ ಮಾತ್ರ ಸಿನಿಮಾ ಕ್ಷೇತ್ರ ಬೆಳೆಯುವುದು. ಇದನ್ನೇ ಇಟ್ಟುಕೊಂಡು ಮಫ್ತಿ ಚಿತ್ರವನ್ನೂ ಎಲ್ಲಾ ಕಡೆಗಳಲ್ಲೂ ಬಿಡುಗಡೆ ಮಾಡಲು ಪ್ರಯತ್ನ ಮಾಡಿದ್ದೇವೆ. ಇದು ಸಾಕಷ್ಟು ಫಲ ಕೊಟ್ಟಿದೆ. ಆದರೆ ನಾವಿನ್ನೂ ಪ್ರಾರಂಭಿಕ ಹಂತದಲ್ಲಿರುವುದರಿಂದ ದೊಡ್ಡ ಮಟ್ಟದ ಫಲ ಸಿಗುವುದಿಲ್ಲ. ಆದರೆ ಎಲ್ಲರೂ ಸೇರಿ ಪ್ರಯತ್ನ ಮಾಡಿದರೆ ಕನ್ನಡ ಚಿತ್ರರಂಗ ದೊಡ್ಡದಾಗಿ ಬೆಳೆಯುವ ಎಲ್ಲಾ ಸಾಧ್ಯತೆಗಳಿವೆ.
3 ಗ್ಲಾಸ್ ಕೊಟ್ಟ ಶಿವಣ್ಣ
ಶಿವಣ್ಣ ಜೊತೆಗೆ ಕೆಲಸ ಮಾಡುವುದೇ ದೊಡ್ಡ ಸುಯೋಗ. ಶೂಟಿಂಗ್ ವೇಳೆ ಅವರು ನನಗೆ ಒಂದು ಕೂಲಿಂಗ್ ಗ್ಲಾಸ್ ಗಿಫ್ಟ್ ಕೊಟ್ಟರು. ಇದು ನನಗೆ ಬಹಳ ಖುಷಿ ಕೊಟ್ಟಿತು.
4 ಕಣ್ಣೀರಿಟ್ಟ ಅಪ್ಪ
ನನ್ನ ಅಪ್ಪ ಈಗಲೂ ನನ್ನನ್ನು ಪುಟ್ಟ ಮಗುವಿನಂತೆ ಕಾಣುತ್ತಾರೆ. ಅವರು ತುಂಬಾ ಎಮೋಷನಲ್. ಈಗಲೂ ಲೇಟಾಗಿ ಮನೆಗೆ ಹೋದರೆ ಬೈಯುತ್ತಾರೆ. ರೇಗುತ್ತಾರೆ. ತಿದ್ದುತ್ತಾರೆ. ಅವರೇ ನನ್ನನ್ನು ದಿನವೂ ಎಬ್ಬಿಸುವುದು. ಯಾವಾಗಲೂ ನೀನು ಬಹಳ ರಫ್ ಆಗಿ ಮಾತನಾಡುತ್ತೀಯ ಎಂದು ಬೈಯುತ್ತಿದ್ದರು. ಆದರೆ ಮಫ್ತಿ ಚಿತ್ರದ ಮೊದಲ ದಿನವೇ ಚಿತ್ರ ನೋಡಿ ಬಹಳ ಚೆನ್ನಾಗಿ ಮಾಡಿದ್ದೀಯ, ನಾನು ಅಂದುಕೊಂಡದ್ದಕ್ಕಿಂತ ಇನ್ನು ದೊಡ್ಡ ಗೆಲುವು ಪಡೆದುಕೊಂಡು ಬಿಟ್ಟೆ ಎಂದು ಕಣ್ಣೀರಿಟ್ಟರು. ಇಷ್ಟೇ ಸಾಕು ನನಗೆ.
5 ವರ್ಷಕ್ಕೆ ಎರಡು ಚಿತ್ರ ಮಾಡುತ್ತೇನೆ
ಮಫ್ತಿ ಚಿತ್ರತಂಡದಿಂದಲೇ ಮುಂದೆ ಚಿತ್ರ ಮಾಡುವ ಆಲೋಚನೆ ಇದೆ. ಸದ್ಯಕ್ಕೆ ಜಯಣ್ಣ ಕಂಬೈನ್ಸ್, ಹೊಂಬಾಳೆ ಬ್ಯಾನರ್‌ಗಳಲ್ಲಿ ಚಿತ್ರ ಮಾಡುವ ಸಿದ್ಧತೆಯಲ್ಲಿದ್ದೇನೆ. ಒಂದು ಚಿತ್ರ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ. ವರ್ಷಕ್ಕೆ ಒಂದೇ ಚಿತ್ರ ಮಾಡಿದರೆ ಚಿತ್ರರಂಗ ಬೆಳೆಯಲು ಸಾಧ್ಯವಿಲ್ಲ. ಹಾಗಾಗಿ ನಾನು ಎರಡು ಚಿತ್ರ ಮಾಡಬೇಕು ಎನ್ನುವ ಬಗ್ಗೆ ಚಿಂತನೆ ಮಾಡುತ್ತಿದ್ದೇನೆ.
6 ರಿಮೇಕ್ ಚಿತ್ರ ಮಾಡಲ್ಲ
ಮುಂದೆ ಯಾವುದೇ ರೀಮೇಕ್ ಚಿತ್ರ ಮಾಡುವುದಿಲ್ಲ. ಅದರಿಂದ ಇಂದು ಯಾವುದೇ ಹೆಚ್ಚು ಪ್ರಯೋಜನ ಇಲ್ಲ. ತಮಿಳು, ತೆಲುಗಿನಲ್ಲಿ ಮಾಡಿದ ಸಿನಿಮಾವನ್ನು ಕನ್ನಡಕ್ಕೆ ತಂದರೆ ನೋಡುಗರ ಸಂಖ್ಯೆ ಹೆಚ್ಚಾಗುವುದಿಲ್ಲ. ಹಾಗಾಗಿ ನಮ್ಮದೇ ಆದ ಸ್ವಂತ ಕತೆಗಳನ್ನು ಇಟ್ಟುಕೊಂಡು ಚಿತ್ರ ಮಾಡುತ್ತೇನೆ. ಮುಂದೆ ನಾನು ವಿಜಯ್ ಒಳ್ಳೆಯ ಕತೆ ಸಿಕ್ಕರೆ ಒಟ್ಟಾಗುತ್ತೇವೆ. ಅವನೊಂದಿಗೆ ಚಿತ್ರ ಮಾಡಬೇಕು ಎನ್ನುವ ಆಸೆ ನನಗಂತೂ ಇದೆ. ಅದು ತಕ್ಷಣಕ್ಕೆ ಆಗದಿದ್ದರೂ ಕೂಡ ಮುಂದೆ ಖಂಡಿತಾ ಆಗೇ ಆಗುತ್ತದೆ ಎನ್ನುವ ನಂಬಿಕೆ ನನಗೆ ಇದೆ.
ವರದಿ: ಜೆಬಿ ಸರಗೂರು ಕೆಂಡಗಣ್ಣ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.