
ಬೆಂಗಳೂರು (ಜ.08): ಕಿರಿಕ್ ಪಾರ್ಟಿ ಚೆಲುವೆ ರಶ್ಮಿಕಾ ಮಂದಣ್ಣ ಅವರಿಗೆ ಸ್ಟಾರ್ ಸಿನಿಮಾಗಳೇ ಫಿಕ್ಸ್ ಆಗುತ್ತಿವೆ. ‘ಅಂಜನಿಪುತ್ರ’ ಹಾಗೂ ‘ಚಮಕ್’ ಚಿತ್ರಗಳ ಸಕ್ಸಸ್ ಬೆನ್ನಲ್ಲೇ ಈಗ ಮತ್ತೊಬ್ಬ ಸ್ಟಾರ್ ನಟನ ಸಿನಿಮಾಕ್ಕೆ ನಾಯಕಿಯಾಗುತ್ತಿದ್ದಾರೆ. ಸಕ್ಸಸ್ ಮೇಲೆ ಸಕ್ಸಸ್'ಗೆ ಒಡತಿ ಆಗುತ್ತಿರುವ ರಶ್ಮಿಕಾ ಈಗ ಯಾವ ಸ್ಟಾರ್'ಗೆ ಜೋಡಿ ಆಗುತ್ತಿದ್ದಾರೆನ್ನುವ ಸಂಗತಿ ಸದ್ಯಕ್ಕೆ ಗುಟ್ಟಾಗಿಟ್ಟಿದ್ದಾರೆ.
ಸ್ಟಾರ್ ಸಿನಿಮಾದಲ್ಲಿ ನಾನು
ಹೊಸ ಸಿನಿಮಾದ ಬಗ್ಗೆ ಕೇಳಿದರೆ, ‘ಲಕ್ ಎನ್ನುವ ಹಾಗೆ ಮತ್ತೊಬ್ಬರು ಸ್ಟಾರ್ ನಟರ ಸಿನಿಮಾದಲ್ಲಿ ಅಭಿನಯಿಸುವ ಆಫರ್ ಬಂದಿದೆ. ಈಗಾಗಲೇ ಒಂದು ಹಂತದ ಮಾತುಕತೆ ನಡೆದಿದೆ. ಪಾತ್ರವೂ ಚೆನ್ನಾಗಿದೆ. ಆದರೂ ಅವೆಲ್ಲವೂ ಅಧಿಕೃತವಾಗಿ ಫೈನಲ್ ಆಗಬೇಕಿದೆ. ಆನಂತರವೇ ಎಲ್ಲವೂ ಬಹಿರಂಗ ಆಗಲಿದೆ’ಎನ್ನುತ್ತಾರೆ ರಶ್ಮಿಕಾ.
ಅಂದಹಾಗೆ ಇವರದು ಮಾತು ಕಮ್ಮಿ. ತಮ್ಮ ಚಿತ್ರಗಳ ಸುದ್ದಿಗೋಷ್ಠಿಯಲ್ಲಿ ಬೆಳದಿಂಗಳು ಚೆಲ್ಲಿದಂತೆ ಚೆಂದದ ನಗು ತೋರಿ ಸುಮ್ಮನಾಗಿಬಿಡುತ್ತಾರೆ. ಆದರೆ, ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಪ್ರತ್ಯೇಕವಾಗಿ ಮಾತಿಗೆ ಸಿಕ್ಕ ಅವರು, ೨೦೧೭ರ ಸಿನಿ ಜರ್ನಿ ಮತ್ತು ಖಾಸಗಿ ಬದುಕಿನ ಸುಂದರ ಕ್ಷಣಗಳನ್ನು ಮೆಲುಕು ಹಾಕಿದರು. ಹಾಗೆಯೇ ಭವಿಷ್ಯದ ಪ್ರಾಜೆಕ್ಟ್‌ಗಳ ಸಂಗತಿ ತೆರೆದಿಟ್ಟರು.
ಮೊದಲ ಪುಳಕ
‘ಮೊದಲ ಚಿತ್ರದ ನಂತರ ಏನೆಲ್ಲ ನಡೆದು ಹೋದವು. ಆ ಒಂದು ವರ್ಷ ಹಿಂತಿರುಗಿ\\ ನೋಡಿದರೆ ಹೀಗೆಲ್ಲ ಇತ್ತಾ ಅಂತೆನಿಸುತ್ತದೆ. ಒಂದು ಸಕ್ಸಸ್ ಅನೇಕ ಖುಷಿಗಳಿಗೆ ಕಾರಣವಾಯಿತು. ಇವತ್ತು ನಾನೇನಾದ್ರೂ ಇಷ್ಟೆಲ್ಲ ಅಭಿಮಾನ, ಪ್ರೀತಿಗೆ ಕಾರಣವಾಗಿದ್ದರೆ ಅದು ಮೊದಲ ಚಿತ್ರ ಕೊಟ್ಟ ಗಿಫ್ಟ್. ಹಾಗೆಯೇ ಖಾಸಗಿ ಬದುಕಲ್ಲಿ ಮತ್ತೊಂದು ಸಂಭ್ರಮ ಕಾಣವಂತಾಯಿತು. ಎಷ್ಟು ಚೆಂದ ಆ ವರುಷ ಎನ್ನುವ ಹಾಗೆ ೨೦೧೭ ನನ್ನೊಳಗೆ ಪುಳಕ ಹುಟ್ಟಿಸುತ್ತದೆ’. ಹೀಗೆನ್ನುವ ರಶ್ಮಿಕಾ ಯಾವ ಕಾರಣಕ್ಕೂ ತಮ್ಮ ಮುಂದಿನ ಚಿತ್ರದ ನಾಯಕ ಯಾರು, ಯಾರು ನಿರ್ದೇಶಕರು ಎಂಬ ವಿಷಯ ಹೇಳುವುದೇ ಇಲ್ಲ. ‘ಮಫ್ತಿ’ ಸಕ್ಸಸ್ ನಂತರ ಶ್ರೀಮುರುಳಿ ಸ್ಟಾರ್ ವ್ಯಾಲ್ಯೂ ಗಗನಕ್ಕೇರಿದೆ. ಅವರ ಜೊತೆ ಸಿನಿಮಾ ಮಾಡುತ್ತಾರಾ? ಇಲ್ಲಾ, ನರ್ತನ್ ನಿರ್ದೇಶನದ ಯಶ್ ಚಿತ್ರಕ್ಕೆ ನಾಯಕಿಯಾಗುತ್ತಾರಾ? ಇವೆರಡನ್ನೂ ಹೊರತು ಪಡಿಸಿ ಧ್ರುವ ಸರ್ಜಾ ನಟನೆಯ ‘ಪೊಗರು’ ಚಿತ್ರದಲ್ಲಿ ನಟಿಸುತ್ತಾರಾ? ಇವೆಲ್ಲವೂ ಸದ್ಯಕ್ಕೆ ಕುತೂಹಲಗಳಷ್ಟೇ. ಅದರಲ್ಲಿ ಧ್ರುವ ಜೊತೆ ನಟಿಸುವ ಸಾಧ್ಯತೆ ಹೆಚ್ಚಾಗಿದೆ.
ತೆಲುಗು ಸಿನಿಮಾದ ಬಗ್ಗೆ ಮಾಹಿತಿ ಇಲ್ಲ
ರಶ್ಮಿಕಾ ಟಾಲಿವುಡ್‌ನಲ್ಲೂ ದೊಡ್ಡ ಸುದ್ದಿ ಮಾಡುತ್ತಿದ್ದಾರೆ. ನಾಗಶೌರ್ಯ ಜತೆಗೆ ಅಭಿನಯಿಸಿರುವ ‘ಚಲೋ’ ರಿಲೀಸ್‌ಗೆ ರೆಡಿ ಆಗಿದೆ. ವಿಜಯ ದೇವರಕೊಂಡ ಜತೆಯಲ್ಲೂ ನಟಿಸುತ್ತಿದ್ದಾರೆ. ಈ ನಡುವೆ ಮತ್ತೊಂದು ಚಿತ್ರಕ್ಕೆ ರಶ್ಮಿಕಾ ನಾಯಕಿ ಆಗಿದ್ದಾರೆನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಆದರೆ ಆ ಸುದ್ದಿಗಳನ್ನು ರಶ್ಮಿಕಾ ತಳ್ಳಿ ಹಾಕಿದ್ದಾರೆ. ‘ಚಲೋ ನಂತರ ವಿಜಯ ದೇವರಕೊಂಡ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ನಿಜ. ಆದರೆ ಮತ್ತೊಂದು ಸಿನಿಮಾ ಸುದ್ದಿ ನನಗೆ ಗೊತ್ತಿಲ್ಲ’ ಎಂದು ಸ್ಪಷ್ಟನೆ ನೀಡುತ್ತಾರೆ.
ಕತೆ ಬರೆಯಬೇಕು ಅನ್ಕೊಂಡಿದ್ದು ನಿಜ
ಉಳಿದಂತೆ ರಶ್ಮಿಕಾ ತಾವೇ ಒಂದು ಕತೆ ಬರೆಯುತ್ತಿದ್ದಾರೆನ್ನುವ ಸುದ್ದಿಯೂ ಇದೆ. ಇದು ನಿಜವಾ? ‘ಹೌದು ಅದು ನಿಜ, ನನ್ನಲ್ಲಿಯೇ ಒಂದು ಕತೆ ಹೊಳೆದಿತ್ತು. ಅದನ್ನ ರಕ್ಷಿತ್ ಅವರಿಗೆ ಹೇಳಿದ್ದೆ. ಅವರು ಅದಕ್ಕೆ ಬರಹದ ರೂಪ ನೀಡುವ ಹಾದಿಯಲ್ಲಿದ್ದಾರೆ. ಬರವಣಿಗೆ ನನಗಿಷ್ಟ. ಮುಂದಿನ ದಿನಗಳಲ್ಲಿ ನಾನೇ ಒಂದು ಸ್ಕ್ರಿಪ್ಟ್ ಬರೆಯಬೇಕು, ಡೈರೆಕ್ಷನ್ ಮಾಡಬೇಕು ಅನ್ನೋ ಆಸೆಯೂ ಇದೆ. ಅದೆಲ್ಲಕ್ಕೂ ಕಾಲ ಕೂಡಿ ಬರಬೇಕು. ಅಲ್ಲಿ ತನಕ ನಟನೆಯತ್ತ ನನ್ನ ಚಿತ್ತ’ ಎನ್ನುವ ನೇರಮಾತಿನ ಮೂಲಕ ಮುಖದಲ್ಲಿ ನಗು ತೋರಿದರು ರಶ್ಮಿಕಾ.
ವರದಿ: ದೇಶಾದ್ರಿ ಹೊಸ್ಮನೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.