
ಅಭಿಮಾನ್ ಸ್ಟೂಡಿಯೋ ಜಾಗದಲ್ಲಿ ಇದ್ದ ಕನ್ನಡದ ಮೇರುನಟ ವಿಷ್ಣುವರ್ಧನ್ (Vishnuvardhan) ಅವರ ಸಮಾಧಿಯನ್ನು ನೆಲಸಮ ಮಾಡಿದ್ದು ಬಹುತೇಕರಿಗೆ ಗೊತ್ತಿದೆ. ಈ ಬಗ್ಗೆ ಕಿಚ್ಚ ಸುದೀಪ್, ವಿಜಯರಾಘವೇಂದ್ರ, ವಸಿಷ್ಠ ಸಿಂಹ ಸೇರಿದಂತೆ ಕೆಲವು ನಟರು ಹಾಗೂ ನಟಿಯರಾದ ಸುಧಾರಾಣಿ, ಶ್ರುತಿ ಬೇಸರ ವ್ಯಕ್ತಪಡಿಸಿದ್ದಾರೆ. ನಟ ವಿಷ್ಣು ಅಭಿಮಾನಿಗಳಂತೂ ಈ ಬಗ್ಗೆ ಸಂಕಟ ಅನುಭವಿಸಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದೀಗ ನಟ, ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಕೂಡ ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಹಾಗಿದ್ರೆ ಅವರೇನು ಹೇಳಿದ್ದಾರೆ?
ಈ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಅವರು, ಸಾಮಾಜಿಕ ಜಾಲತಾಣದಲ್ಲಿ ಬಸವಣ್ಣವರ ವಚನದ ಸಾಲಿನ ಮೂಲಕ 'ವಿಷ್ಣು ಅಮರರು' ಎಂದಿದ್ದಾರೆ. "ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ". 'ಕೋಟಿಗೊಬ್ಬ ಸಾಹಸಸಿಂಹ ಡಾ.ವಿಷ್ಣು ಸರ್ ನನ್ನಂತ ಕೋಟಿ ಕೋಟಿ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಶಾಶ್ವತ' ಎಂದು ನಟ ಉಪೇಂದ್ರ ಬರೆದು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ನಟ ವಿಷ್ಣುವರ್ಧನ್ ಸಮಾಧಿ ತೆರವಿಗೆ ಬೇಸರವನ್ನು ಹೊರಹಾಕಿದ್ದಾರೆ.
ಮೊನ್ನೆ (08 August 2025) ಬೆಳಗಿನ ಜಾವ ಮೂರು ಗಂಟೆಗೆ ಬಾಲಣ್ಣ ಕುಟುಂಬ ಸಮಾಧಿ ತೆರವು ಕಾರ್ಯಾಚರಣೆ ಮಾಡಿದೆ. ಇದನ್ನು ಯಾರಿಗೂ ತಿಳಿಯದ ಹಾಗೆ ಮಾಡಲಾಗಿದೆ. ಕಾರಣ, ವಿಷ್ಣುವರ್ಧನ್ ಅಭಿಮಾನಿಗಳಿಗೆ ಗೊತ್ತಾದರೆ ದೊಡ್ಡ ಸಮಸ್ಯೆ ಆಗುತ್ತೆ ಎಂದು ರಾತ್ರೋ ರಾತ್ರಿ ಸಮಾಧಿ ತೆರವು ಮಾಡಲಾಗಿದೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ನಟ ವಸಿಷ್ಠ ಸಿಂಹ ಅವರು 'ಇದು ಅತ್ಯಂತ ಹೀನಾಯವಾದ, ಘೋರವಾದ ಒಂದು ಕೃತ್ಯ, ಅಸಹ್ಯ ಹುಟ್ಟಿಸತಕ್ಕಂತ ವಿಷ್ಯ ನಡೆದಿದೆ ನಮ್ಮಲ್ಲಿ. ಇದಕ್ಕಾಗಿ ಬಹಳ ವರ್ಷಗಳ ಹೋರಾಟ ನಮ್ಮಲ್ಲಿ ನಡೆದಿದೆ. ಬಹಳ ವರ್ಷಗಳಿಂದ ಹಲವಾರು ಜನ ಬಹಳಷ್ಟು ರೀತಿಯಲ್ಲಿ ಪ್ರಯತ್ನಪಟ್ಟು ಕೂಡ, ಅದಕ್ಕೊಂದು ತಾರ್ಕಿಕ ಅಂತ್ಯ ಸಿಗದೇ ಉಳಿದಿರುವಂಥ ಪುಣ್ಯ ಸ್ಥಳ. ಅಭಿಮಾನ್ ಸ್ಟೂಡಿಯೋ, ಅದು ವಿಷ್ಣು ಸರ್‌ನ ಅಂತ್ಯಕ್ರಿಯೆ ಮಾಡಿದಂತ, ಸಮಾಧಿ ಮಾಡಿದಂತ ಜಾಗ.
ಇಂದಲ್ಲ ನಾಳೆ ಅಲ್ಲಿ ಒಂದು ಲಾಜಿಕಲ್ ಎಂಡ್ ಬರುತ್ತೆ, ಅಲ್ಲಿ ವಿಷ್ಣು ಸರ್‌ನ ನೆನಪಿಗೆ ಒಂದು ಸ್ಮಾರಕ, ಅಥವಾ ಅವ್ರನ್ನ ಅವ್ರ ಅಭಿಮಾನಿಗಳು ಪೂಜೆ ಮಾಡೋದಕ್ಕೆ, ಅವ್ರ ನೆನಪಿಗಾಗಿ ಹೋಗೋದಕ್ಕೆ ಇರೋ ಒಂದು ಜಾಗ ಅದು. ಅಲ್ಲಿ ಅದಕ್ಕೊಂದು ರೂಪ, ಆಕಾರ ಸಿಗುತ್ತೆ ಅಂತ ಎದುರು ನೋಡಿದ್ವಿ. ಆದರೆ, ಬೇರೆ ಬೇರೆ ಕಾರಣಕ್ಕೋ ಏನೋ, ಇದು ಆಗಲೇ ಇಲ್ಲ. ಮೊನ್ನೆ ಬೆಳಗಿನ ಜಾವ, ಯಾರಿಗೂ ಗೊತ್ತಾಗದಂತೆ, ಅಲ್ಲೊಂದು ಅಂತಹ ಜಾಗ ಇತ್ತು ಅನ್ನೋ ಕುರುಹೂ ಸಹ ಸಿಗದಂತೆ, ಅಲ್ಲಿನ ಸಮಾಧಿಯನ್ನು ನೆಲಸಮ ಮಾಡಲಾಗಿದೆ. ಈ ಹೀನ ಕೃತ್ಯವನ್ನು ಒಳ್ಳೇ ಮಾತುಗಳಲ್ಲಂತೂ ಹೇಳೋದಕ್ಕೆ ಸಾಧ್ಯನೇ ಇಲ್ಲ.
ಅಂತಹ ಮೇರು ನಟನಿಗೆ ಈ ರೀತಿ ಅವಮಾನ ಮಾಡ್ಬೇಕಿತ್ತಾ ಅನ್ನೋದು ಒಂದು ವಿಷ್ಯ ಆದ್ರೆ, ಇನ್ನೊಂದು ಅಂದ್ರೆ, ಅಂತಹ ಸಾಧಕನಿಗೆ ಒಂದು ಜಾಗವನ್ನು ಮಾಡಿಕೊಡುವಲ್ಲಿ ಸಂಬಂಧಪಟ್ಟವರು ಸೋತುಹೋಗ್ಬಿಟ್ರಾ? ಇಷ್ಟು ಸಲಭವಾಗಿ ಕೈಬಿಟ್ಬಿಟ್ರಾ? ಇಲ್ಲಿ ಸಾಧನೆಗೆ ಬೆಲೆ ಇಲ್ವಾ? ವ್ಯಕ್ತಿತ್ವಕ್ಕೆ ಬೆಲೆ ಇಲ್ವಾ, ಅಥವಾ ಮೇರನಟ ಅನ್ನೋ ಸ್ಥಾನಕ್ಕೂ ಬೆಲೆ ಇಲ್ವಾ? ಆದರ್ಶಕ್ಕೆ ಬೆಲೆ ಇಲ್ವಾ? ಇಂತಹ ಹಲವಾರು ಪ್ರಶ್ನೆಗಳು ಬರುತ್ವೆ.. ತುಂಬಾ ದುಃಖ ಆಗುತ್ತೆ..ಎಂದಿದ್ದಾರೆ.
ಇಷ್ಟು ಕಳಪೆ ಆಗಿ, ಯಾರೂ ಮಾಡಬಾರದ ರೀತಿಯಲ್ಲಿ ಇಂತಹ ಕೆಲಸ ಮಾಡಿದಾರಲ್ಲ, ಅಂಥವರಿಗೆ ನನ್ನ ಛೀಮಾರಿ ಇರ್ಲಿ.. ನಾನು ಘಟನೆ ನಡೆದಾಗ ಊರಲ್ಲಿ ಇರ್ಲಿಲ್ಲ, ಅನಾರೋಗ್ಯದ ನಿಮಿತ್ತ ಸ್ವಲ್ಪ ರೆಸ್ಟ್‌ನಲ್ಲಿ ಇದ್ದೆ. ಆದ್ರೂ ಕೂಡ ಈ ವಿಷ್ಯ ಗೊತ್ತಾದಾಗ ನಂಗೆ ತುಂಬಾ ನೋವಾಯ್ತು. ಅಂಥವ್ರಿಗೇ ಹೀಗೆ ಮಾಡಿದಾರೆ ಅಂದ್ರೆ ಇನ್ನು ಬೇರೆಯವ್ರು ಯಾವ ಲೆಕ್ಕ? ಈ ಘಟನೆ ತೆರೆಯ ಹಿಂದೆ ಯಾರೇ ಇರ್ಲಿ, ಅವ್ರಿಗೆ ದೇವ್ರು ತುಂಬಾ ಒಳ್ಳೇದು ಮಾಡ್ಲಿ, ಇಂಥ ಕೆಲಸ ಮಾಡಿದವ್ರಿಗೆ ನನ್ನ ಧಿಕ್ಕಾರ..' ಎಂದಿದ್ದಾರೆ ವಿಶಿಷ್ಠ ಸ್ಥಾನ ಪಡೆದಿರುವ ನಟ ವಸಿಷ್ಠ ಸಿಂಹ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.