ಕನ್ನಡ ಚಿತ್ರರಂಗದ ಹೊಸ ಫಸಲು: ಪಂಜಾಬ್‌ನ ವೈಷ್ಣವಿ ಕನ್ನಡಕ್ಕೆ ಮೀಸಲು!

By Web DeskFirst Published Nov 8, 2018, 4:29 PM IST
Highlights

ಮಾಡೆಲಿಂಗ್ ಮೂಲಕ ಸಿನಿಜಗತ್ತಿಗೆ ಪರಿಚಯವಾದ ಹುಡುಗಿ. ಮೊದಲು ನಟಿ ಆಗಿ ಒಪ್ಪಿಕೊಂಡಿದ್ದು 'ಪಾದರಸ' ಚಿತ್ರ. ಆದರೆ  ತೆರೆ ಕಂಡಿದ್ದು ಮಾತ್ರ  'ದ್ರೇವಂಥ ಮನುಷ್ಯ'. ಎಂಟ್ರಿಯಲ್ಲೇ ಹೀಗೊಂದು ವಿಶೇಷತೆ ಮೂಲಕ ಸಿನಿಮಾ  ಜಗತ್ತಿಕ್ಕೆ ಕಾಲಿಟ್ಟ ಚೆಲುವೆ ವೈಷ್ಣವಿ ಮೆನನ್. ಆ ಸಿನಿಮಾ ಬಂದು ಹೋದ ನಂತರ 'ನಾಗವಲ್ಲಿ ವರ್ಸಸ್ ಆಪ್ತಮಿತ್ರರು' ಚಿತ್ರ ತೆರೆ ಕಂಡಿತು. ಆದಾದ ನಂತರದ ಸರದಿ 'ಪಾದರಸ' ಚಿತ್ರದ್ದು. ಇವೆಲ್ಲ ಹಾಗೆ ಬಂದು ಹೀಗೆ ಹೋಗಿದ್ದು ಬಿಟ್ಟರೆ ಗಳಿಕೆಯೂ ಕಾಣಲಿಲ್ಲ,  ಸದ್ದೂ ಮಾಡಲಿಲ್ಲ. ಆದರೂ, ವೈಷ್ಣವಿ ಮೆನನ್ ಬ್ಯುಸಿ ಆದರು. ಇನ್ನೇನು 'ಪುಟ 109’ ಕೂಡ ಇದೇ ತಿಂಗಳು ರಿಲೀಸ್ ಆಗುತ್ತಿದೆ. ಮುಂದೆ 'ಅರಬೀ ಸಮುದ್ರದ ಕಡಲ ತೀರದಲ್ಲಿ', 'ಅಭಿರಾಮಿ' ಹಾಗೂ 'ಶ್ರೀಮಂತ' ಚಿತ್ರಗಳಲ್ಲಿ ನಾಯಕಿ ಆಗಿದ್ದಾರೆ. ಕಿಶೋರ್ ಹಾಗೂ ಪ್ರಿಯಾಮಣಿ ಅಭಿನಯದ 'ನನ್ನ ಪ್ರಕಾರ' ಚಿತ್ರದಲ್ಲೂ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ವೈಷ್ಣವಿ.

1. ಹುಟ್ಟಿದ್ದು ಪಂಜಾಬ್, ಬೆಳೆದಿದ್ದು ಬೆಂಗಳೂರು. ಅಪ್ಪ ಏರ್‌ಪೋರ್ಸ್‌ನಲ್ಲಿದ್ದರು. ಹಾಗಾಗಿ ದೇಶದ ವಿವಿಧೆಡೆ ಸುತ್ತಾಡಿ ಬಂದ ಅನುಭವ ನನ್ನದು. ಕೊನೆಗೆ ಅಲ್ಲಿಂದ ಬಂದು ನೆಲೆ ನಿಂತಿದ್ದು ಬೆಂಗಳೂರು. ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪಿಯು ಮುಗಿದಿದೆ. ಈ ನಡುವೆ ಸಿನಿಮಾ ಪಯಣ ಶುರುವಾಗಿದೆ.

2. ನಟಿ ಅಂತ ಆಗಿದ್ದು ತುಂಬಾನೆ ಆಕಸ್ಮಿಕ. ಯಾಕಂದ್ರೆ, ಅಪ್ಪ-ಅಮ್ಮ ಇಬ್ಬರಿಗೂ ಸಿನಿಮಾದ ಯಾವುದೇ ಟಚ್ ಇಲ್ಲ. ಆದ್ರೆ, ಅಮ್ಮನಿಗೆ ಬಾಲ್ಯದಲ್ಲೇ ನಟಿ ಆಗ್ಬೇಕು ಎನ್ನುವ ಆಸೆ ಇತ್ತಂತೆ. ಕೊನೆಗದು ಅಂದುಕೊಂಡಂತಾಗಲಿಲ್ಲ ಅಂತ ಹೇಳ್ತಿದ್ರು. ಅದು ನನಗೆ ಮನಸ್ಸಿನಲ್ಲೇ ಹಾಗೆ ಉಳಿದುಕೊಂಡಿತ್ತು. ಕಾಲೇಜಿನಲ್ಲಿದ್ದಾಗ ನಾನು ಮಾಡೆಲಿಂಗ್ ಶುರುಮಾಡಿದ್ದೆ. ಆಗ ಅಮ್ಮ, ನೀನು ನಟಿ ಆದ್ರೆ ಚೆನ್ನಾಗಿರುತ್ತೆ ಅಂತ ಹೇಳುತ್ತಿದ್ದ ಹೊಗಳಿಕೆಯ ಮಾತುಗಳು ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿವೆ.

3.  ಫಸ್ಟ್ ಟೈಮ್ ನಾನು ನಟಿ ಅಂತ ಆಯ್ಕೆ ಆಗಿದ್ದು ಪಾದರಸ ಚಿತ್ರಕ್ಕೆ. ಫೋಟೋ ನೋಡಿ, ನಿರ್ದೇಶಕರು ನನಗೆ ಸಂಪರ್ಕ ಮಾಡಲು ಹೇಳಿದ್ದರು. ಕತೆ ಕೇಳಿದೆ, ಚೆನ್ನಾಗಿದೆ ಅಂತೆನಿಸಿತು. ಹಾಗಾಗಿ ಒಪ್ಪಿಕೊಂಡೆ. ಆದ್ರೆ ಆಗ ನನಗೆ ನಟನೆ ಅನ್ನೋದೇ ಗೊತ್ತಿರಲಿಲ್ಲ. ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಬಿಟ್ಟರೆ, ನಟನೆ ತುಂಬಾ ಹೊಸದು. ಆಗ, ಧೈರ್ಯ ತುಂಬಿ, ಒಂದಷ್ಟು ನಟನೆಯ ಬಗ್ಗೆ ಹೇಳಿಕೊಟ್ಟಿದ್ದು ನಟ ಸಂಚಾರಿ ವಿಜಯ್. ಒಂದು ರೀತಿಯಲ್ಲಿ ಅವರು ನನಗೆ ಮೆಂಟರ್.

4  ಪ್ರಯೋಗತ್ಮಾಕ ಪಾತ್ರಗಳೇ ನನ್ನ ಆದ್ಯತೆ. ಇಂಥದ್ದೇ ಪಾತ್ರ ಬೇಕು ಅಂತ ಡಿಮ್ಯಾಂಡ್ ಮಾಡದಿದ್ದರೂ, ಯಾವ್ಯಾವುದೋ ಪಾತ್ರಗಳನ್ನು ಒಪ್ಪಿಕೊಳ್ಳಲು ನಾನ್ ರೆಡಿಯಿಲ್ಲ. ಇಲ್ಲಿ ತನಕ ಒಂದಷ್ಟು ಗುರುತಿಸಿಕೊಳ್ಳಲು ಸಾಧ್ಯವಾಗುವಂತಹ ಪಾತ್ರಗಳೇ ಸಿಕ್ಕಿವೆ. ಆ ಮಟ್ಟಿಗೆ ನಾನು ಲಕ್ಕಿ. ಮುಂದೆಯೂ ಹಾಗೆಯೇ ಆದರೆ ಇನ್ನು ಒಳ್ಳೆಯದು.

5. ನಾನು ಶ್ರೀದೇವಿ ಫ್ಯಾನ್. ಆರಂಭಿಕ ನಾನು ನೋಡಿದ್ದು ಹಿಂದಿ ಸಿನಿಮಾ. ಅದರ ಪ್ರಭಾವದಿಂದಲೋ ಏನೋ ಶ್ರೀದೇವಿ ಅಂದ್ರೆ ತುಂಬಾ ಇಷ್ಟ. ನಟಿ ಆಗಿ ಅವರಂತೆ ಅಭಿನಯಿಸಬೇಕು ಅನ್ನೋ ಆಸೆ ಇದ್ದೇ ಇದೆ.

-ದೇಶಾದ್ರಿ ಹೊಸ್ಮನೆ

click me!