ಕನ್ನಡ ಚಿತ್ರರಂಗದ ಹೊಸ ಫಸಲು: ಹಾಡಿಗೂ ಮೊದಲೇ ’ಪಲ್ಲವಿ’ ಬರೆದಿದ್ದು ರಂಗಭೂಮಿ!

By nikhil vkFirst Published Nov 8, 2018, 3:58 PM IST
Highlights

ಸಿನಿಮಾ ಅಥವಾ ಸಿರೀಯಲ್‌ಗೆ ರಂಗಭೂಮಿಯೇ ಮೊದಲ ಮೆಟ್ಟಿಲು. ಆ ಮೆಟ್ಟಿಲೇರಿ ಸಿನಿಮಾ ಜಗತ್ತಿಗೆ ಕಾಲಿಟ್ಟವರು ನಟಿ ಪಲ್ಲವಿ ರಾಜು. ನವ ತಾರೆಯರ ಪೈಕಿ ಪಕ್ಕದ್ಮನೆ ಹುಡುಗಿ ಎನ್ನುವಷ್ಟು ಹೋಮ್ಲಿ ಲುಕ್‌ನ ಚೆಲುವೆ ಈಕೆ. 'ಕ' ಹೆಸರಿನ ಚಿತ್ರಕ್ಕೆ ಮೊದಲು ಬಣ್ಣ ಹಚ್ಚಿದ ಈ ಬೆಡಗಿ ನಾಯಕಿ ಆಗಿದ್ದು 'ಮಂತ್ರಂ' ಚಿತ್ರಕ್ಕೆ. ಅಲ್ಲಿಂದ ಬೇಡಿಕೆಯ ನಟಿ ಆಗಿದ್ದು ಪಲ್ಲವಿ ರಾಜು ಸಿನಿ ಪಯಣದ ವಿಶೇಷ. ಹೊಸಬರ ಸಿನಿಮಾಗಳ ಪೈಕಿ ಈ ವರ್ಷ ಸಾಕಷ್ಟು ಸದ್ದು ಮಾಡಿದ್ದ 'ಗುಲ್ಟು' ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ಅಲ್ಲಿಂದೀಗ ಕೈ ತುಂಬಾ ಆರ್‌ಗಳಿವೆ. ಪಲ್ಲವಿ ನಾಯಕಿ ಆಗಿರುವ  'ರವಿ ಹಿಸ್ಟರಿ', 'ಸಾಲಿಗ್ರಾಮ' ರಿಲೀಸ್‌ಗೆ ರೆಡಿ  ಆಗಿವೆ.  'ರತ್ನಮಂಜರಿ', 'ಉತ್ತಮರು' ಹಾಗೂ 'ನಿಕ್ಸನ್' ಚಿತ್ರೀಕರಣದ ಹಂತದಲ್ಲಿವೆ. ಆರಂಭದಲ್ಲೇ ಸಾಕಷ್ಟು ಬ್ಯುಸಿ ಆಗಿ  ಕುತೂಹಲ ಹುಟ್ಟಿಸಿದ್ದಾರೆ ದುಂಡು ಮಲ್ಲಿಗೆ. 

1. ಉದ್ಯಾನ ನಗರಿ ಹುಡುಗಿ. ಹುಟ್ಟಿದ್ದು , ಬೆಳೆದಿದ್ದು, ಓದಿದ್ದೆಲ್ಲವೂ ಬೆಂಗಳೂರು. ಬಿಕಾಂ ಪದವೀಧರೆ. ಓದಿನ ಜತೆಗೀಗ ಸಿನಿಮಾ ನನ್ನ ಪ್ಯಾಷನ್. 

2. ನಟಿ ಆಗುವ ಕನಸು ಕೂಡ ಕಂಡವಳಲ್ಲ. ಯಾಕಂದ್ರೆ, ಸಿನಿಮಾ ಅಥವಾ ಸೀರಿಯಲ್ ಯಾವುದೇ ಹಿನ್ನೆಲೆಯೂ ನನಗಿಲ್ಲ. ಫ್ಯಾಮಿಲಿ ಕಡೆಯಿಂದ ಯಾರು ಇಲ್ಲಿಗೆ ಬಂದಿಲ್ಲ. ಆದ್ರೆ, ನಟನೆ ನನ್ನ ಆರ್ಕಷಣೆಯ ಜಗತ್ತು. ಅದರ ಪ್ರಭಾವೇ ನನ್ನ ಸಿನಿ ಪಯಣಕ್ಕೆ ಕಾರಣ. 

3. 'ಕ' ನನ್ನ ಮೊದಲ ಸಿನಿಮಾ.  ನಟಿ ಆಗಿ ಬಣ್ಣ ಹಚ್ಚಿ ಕ್ಯಾಮರಾ ಎದುರಿಸಿದ್ದೇ ಆಗ. ಅದಕ್ಕೂ ಮುಂಚೆ ರಂಗಭೂಮಿಯಲ್ಲಿದ್ದು ಹಲವು ನಾಟಕಗಳಲ್ಲಿ ಅಭಿನಯಿಸಿದ್ದೆ.ಆದ್ರೆ ಅಲ್ಲಿಗೂ ಇಲ್ಲಿಗೂ ಸಾಕಷ್ಟು ವ್ಯತ್ಯಾಸ ಇದೆ ಅಂತ ಗೊತ್ತಾಗಿದ್ದೇ ಇಲ್ಲಿಗೆ ಬಂದ ನಂತರ. 'ಕ' ಮೊದಲ ಚಿತ್ರವಾದರೂ, ಅಲ್ಲಿ ಇದಿದ್ದು ಸಣ್ಣದೊಂದು ಪಾತ್ರ. ಅಲ್ಲಿಂದ ನನ್ನನ್ನು ಪೂರ್ಣ ಪ್ರಮಾಣದ ನಾಯಕಿ ಅಂತ ಮಾಡಿದ್ದು 'ಮಂತ್ರಂ' ಚಿತ್ರ. ಯಾರಿಗಾದ್ರೂ, ಮೊದಲು ಕ್ಯಾಮರಾ ಎದುರಿಸುವುದೆಂದ್ರೆ ಭಯ ಇದ್ದೇ ಇರುತ್ತೆ. ಅಂಥದ್ದೇ ಅನುಭವ ನನಗೂ ಆಗಿದೆ. ಕ್ರಮೇಣ ಅದು ಮರೆತು ಹೋಗಿದೆ.

4. ಇಂಥದ್ದೇ ಪಾತ್ರಬೇಕು ಅಂತಿಲ್ಲ. ಹೊಸತರಲ್ಲೇ ಹಾಗೆ ಡಿಮ್ಯಾಂಡ್ ಮಾಡುತ್ತಾ ಕುಳಿತರೆ  ಅದೆಷ್ಟು ಅವಕಾಶ ಬರಬಹುದು ಎನ್ನುವ ಸತ್ಯ ನಿಮಗೂ ಗೊತ್ತಿದೆ. ಒಳ್ಳೆಯ ಪಾತ್ರಗಳು ಬೇಕು, ನನ್ನನ್ನು ನಾನು ಗುರುತಿಸಿಕೊಳ್ಳುವುದಕ್ಕೆ ಅವಕಾಶ ಸಿಗುವಂತಾಗಬೇಕು ಎನ್ನುವುದಷ್ಟೇ ನನ್ನ ಬೇಡಿಕೆ.

5. ಇಂತಹವರೇ ನನಗೆ ರೋಲ್ ಮಾಡೆಲ್ ಅಂತ ಇಲ್ಲ. ಕಲ್ಪನಾ, ಲಕ್ಷ್ಮಿ, ಆರತಿ, ಶ್ರೀದೇವಿ ಹೀಗೆ ಹೇಳುತ್ತಾ ಹೋದರೆ, ತುಂಬಾನೆ ನಟಿಯರಿದ್ದಾರೆ. ಪ್ರತಿ ಸಿನಿಮಾ ನೋಡಿದಾಗಲೂ ಒಬ್ಬೊಬ್ಬ ನಟಿ ಒಂದೊಂದು ಕಾರಣಕ್ಕೆ ಇಷ್ಟವಾಗುತ್ತಾರೆ. ಅವರಿಂದ ಕಲಿಯುವುದು ಇರುತ್ತೆ. ಅವರೆಲ್ಲರೂ ನನಗೆ ರೋಲ್ ಮಾಡೆಲ್.

-ದೇಶಾದ್ರಿ ಹೊಸ್ಮನೆ

click me!