ಕ್ರೈಮ್, ಸಸ್ಪೆನ್ಸ್, ಥ್ರಿಲ್ಲರ್, ಕುತೂಹಲ ಎಲ್ಲವೂ ಬೇಕಾ? ಹಾಗಾದ್ರೆ ನೀವು 6 ನೇ ಮೈಲಿಗೆ ಹೋಗಬೇಕು. ಈ ವಾರ ಬಿಡುಗಡೆಯಾದ 6 ನೇ ಮೈಲಿ ಚಿತ್ರ ಹೇಗಿದೆ? ಚಿತ್ರ ನೋಡಿ ಬಂದ ಪ್ರೇಕ್ಷಕ ಏನಂತಾನೆ? ಇಲ್ಲಿದೆ ನೋಡಿ.
ಅದು ಸಾಹಸಿಗಳ, ಚಾರಣ ಪ್ರಿಯರ ಅಚ್ಚುಮೆಚ್ಚಿನ ತಾಣ. ಅಲ್ಲಿಗೆ ಹೋಗುವವರ ಸಂಖ್ಯೆ ಕಡಿಮೆ. ಆದರೆ, ಹೋದವರು ಮತ್ತೆ ವಾಪಸ್ಸು ಬಂದ ಉದಾಹರಣೆಗಳಿಲ್ಲ. ಹಾಗಾದರೆ ಅವರೆಲ್ಲ ಏನಾಗುತ್ತಿದ್ದಾರೆ? ಅತ್ತ ಚಾರಣ ಜಾಗವನ್ನೂ ತಲುಪಿಲ್ಲ, ಇತ್ತ ಮನೆಗೂ ಬಂದಿಲ್ಲ. ಎಲ್ಲರು ಒಂದೇ ಜಾಗ, ಒಂದೇ ಟೈಮ್‌ನಲ್ಲಿ ಮಿಸ್ ಆಗುತ್ತಿದ್ದಾರೆ. ಅದು ಹೇಗೆ? ಇಂಥದ್ದೊಂದು ಕುತೂಹಲವನ್ನು ಮುಂದಿಟ್ಟುಕೊಂಡು ಅದಕ್ಕೊಂದು ಉತ್ತರ ಕಂಡುಕೊಳ್ಳುತ್ತ ಆ ಉತ್ತರವನ್ನು ಬೇರೆಯವರಿಗೂ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತ ಹೋಗುತ್ತಾರೆ ನಿರ್ದೇಶಕ ಸೀನಿ.
ಅವರ ಈ ಕುತೂಹಲದ ಪಯಣ ‘6 ನೇ ಮೈಲಿ’ ಬಳಿ ಬಂದು ನಿಲ್ಲುತ್ತದೆ. ಹಾಗಂತ ಇದು ಯಾವುದ್ಯಾವುದೋ ಊರಿನ ಮೈಲಿ ಕಲ್ಲು ಅಲ್ಲ. ದಕ್ಷಿಣ ಕನ್ನಡದ ಉಪ್ಪಿನಂಗಡಿಗೆ ಹೋಗುವ ದಾರಿಯಲ್ಲಿರುವ ಮೈಲಿ. ದಟ್ಟ ಕಾಡು. ಮೊಬೈಲ್ ನೆಟ್ ವರ್ಕ್‌ಗಳಿಲ್ಲ. ಪ್ರಯಾಣಿಸುವಾಗ ಕಾರಿನಿಂದ ಇಳಿದರೆ ಯಾವುದೋ ಪ್ರಾಣಿ ಬಂದು ತಿಂದು ಬಿಡುವಷ್ಟು ಭಯಾನಕ ಮೌನ. ಈ ಮೌನವನ್ನು ಸೀಳುತ್ತ ಬರುವ ಕ್ರಿಮಿನಲ್‌ಗಳ ಸುತ್ತ ಸಾಗುತ್ತದೆ ‘6 ನೇ ಮೈಲಿ’. ಕ್ರೈಮು, ಸಸ್ಪೆನ್ಸ್ ಈ ಚಿತ್ರದ ಮುಖ್ಯ ಆಧಾರಸ್ತಂಭಗಳಾದರೆ, ಕಾಡಿನಲ್ಲಿ ತಣ್ಣಗೆ ಸಾಗುತ್ತಿರುವ ನಕ್ಸಲೈಟ್'ಗಳ ಹೋರಾಟ ಇದರ ಹಿನ್ನೆಲೆಯಾಗುತ್ತದೆ.
ಒಂದು ಕತೆಯಾಗಿ ‘6 ನೇ ಮೈಲಿ’ ಇಷ್ಟವಾದರೆ, ಇಂಥದ್ದೊಂದು ಕ್ರೈಮ್ ಸ್ಟೋರಿಯನ್ನು ಯಾವುದೇ ರೀತಿಯ ವಲ್ಗಾರಟಿ ಇಲ್ಲದೆ ತೋರಿಸಿರುವುದು ನಿರ್ದೇಶಕ ಸೀನಿ ಅವರ ಅಭಿರುಚಿಗೆ ಹಿಡಿದ ಕನ್ನಡಿ. ಆದರೆ, ಒಂದೇ ಘಟನೆಯನ್ನಿಟ್ಟು ಒಂದು ಸಿನಿಮಾ ಮಾಡುವ ಕಷ್ಟ ನಿರ್ದೇಶಕನಿಗೆ ಮಾತ್ರವಲ್ಲ ಚಿತ್ರ ನೋಡುವಾಗ ಪ್ರೇಕ್ಷಕನಿಗೂ ಗೊತ್ತಾಗುತ್ತದೆ. ಚಿತ್ರಕಥೆ ಅಂತ ಬಂದಾಗ ಮತ್ತೆ ಮತ್ತೆ ಮರುಕಳಿಸುವ ದೃಶ್ಯಗಳು. ಪೇಲವ ಎನಿಸುವ ಸಂಭಾಷಣೆಗಳು, ಒಂದೇ ಕಡೆ ಸಿನಿಮಾ ನಿಂತಂತೆ ಅನಿಸುತ್ತದೆ. ಆದರೂ ಈ ಕೊರತೆಗಳನ್ನು ನೀಗಿಸುವುದು ಕತೆಯನ್ನು ಆವರಿಸಿಕೊಳ್ಳುವ ಸಸ್ಪೆನ್ಸ್. ಸಂಚಾರಿ ವಿಜಯ್ ಅವರ ವಿಶೇಷವಾದ ಗೆಟಪ್ ಹಾಗೂ ಪಾತ್ರ. ಜತೆಗೆ ದಕ್ಷಿಣ ಕನ್ನಡದ ದಟ್ಟ ಕಾಡುಗಳು
ಭಯಾನಕ ಕತ್ತಲು. ಇವು ಸಿನಿಮಾ ನೋಡುವ ಉತ್ಸಾಹವನ್ನು ಪ್ರೇಕ್ಷಕನಲ್ಲಿ ತುಂಬಿಸುತ್ತವೆ. ಅಲ್ಲದೆ ಚಿತ್ರದಲ್ಲಿ ನಿರ್ದೇಶಕರು ತರುವ ತಿರುವುಗಳು ಕೂಡ ಚಿತ್ರವನ್ನು ಸಾಧ್ಯವಾದಷ್ಟು ನಿಲ್ಲಿಸುತ್ತದೆ. ಇವುಗಳೊಂದಿಗೆ ಹಿನ್ನೆಲೆ ಸಂಗೀತವೂ ಚಿತ್ರಕ್ಕೆ ಪೂರಕವಾಗಿದೆ.
ಈ ಎಲ್ಲ ಕಾರಣಗಳಿಗೆ ರೆಗ್ಯೂಲರ್ ಲವ್ ಕಂ ಆ್ಯಕ್ಷನ್ ಸಿನಿಮಾಗಳನ್ನೇ ನೋಡಿಕೊಂಡಿದ್ದವರಿಗೆ ‘6 ನೇ ಮೈಲಿ’ ಪ್ರಯಾಣ ಪ್ರಯಾಸವಾಗಲ್ಲ. ಉಪ್ಪಿನಂಗಡಿ ಬಳಿ ಇರುವ ಧವಳಗಿರಿ ಎನ್ನುವ ಚಾರಣ ತಾಣಕ್ಕೆ ಬೆಂಗಳೂರಿಂದ ಹೊರಡುವ ಮತ್ತು ಬೇರೆ ರಾಜ್ಯಗಳಿಂದಲ್ಲೂ ಬರುವವರು ದಾರಿ ಮಧ್ಯೆ ಕಾಣುವ ೬ನೇ ಮೈಲಿಯಲ್ಲಿ ಕಾಣೆಯಾಗುತ್ತಿರುತ್ತಾರೆ. ಇದು ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸುವ ಹೊತ್ತಿಗೆ ಒಬ್ಬ ಖಡಕ್ ಪೊಲೀಸ್ ಅಧಿಕಾರಿ ತನ್ನ ತಂಡದೊಂದಿಗೆ ಎಂಟ್ರಿಯಾಗುತ್ತಾರೆ. ಇದಿಷ್ಟು ಫ್ಲ್ಯಾಷ್ ಬ್ಯಾಕ್‌ನ ಕತೆಯೊಂದಿಗೆ ಪ್ರಸ್ತುತ ಕತೆ ಸಾಗುತ್ತದೆ. ಸಂಕಲನ ಮತ್ತು ನಿರೂಪಣೆ ಹಾಗೂ ಚುರುಕಾದ ಸಂಭಾಷಣೆಗಳತ್ತ ಗಮನ ಕೊಟ್ಟಿದ್ದರೆ ಈ ಚಿತ್ರಕ್ಕೆ ಮತ್ತಷ್ಟು ರೋಚಕತೆ ದಕ್ಕುತ್ತಿತ್ತು.
ಇದರ ಹೊರತಾಗಿ ಎರಡು ರೀತಿಯ ಪಾತ್ರಗಳಲ್ಲಿ ವಿಜಯ್ ಅವರ ನಟನೆ ಮೆಚ್ಚಿಕೊಳ್ಳುವಂತಿ ದೆ. ತನಿಖಾ ತಂಡದ ಸದಸ್ಯರಾಗಿ ಆರ್‌ಜೆ ನೇತ್ರಾ, ಶಾಂತಲಾ ಭಂಡಿ ಅವರ ಪಾತ್ರಗಳು ಕತೆಗೆ ಪೂರಕವಾಗಿವೆ. ತಾಂತ್ರಿಕವಾಗಿ ಹಿನ್ನೆಲೆ ಸಂಗೀತ ಹೆಚ್ಚು ಗಮನ ಸೆಳೆದರೆ, ಸಾಯಿಕಿರಣ್ ಸಂಗೀತ ಹಾಗೂ ಪರಮೇಶ್ ಕ್ಯಾಮೆರಾ ಮತ್ತಷ್ಟು ಶ್ರಮ ಹಾಕಬೇಕೆಂಬ ಅಭಿಪ್ರಾಯ ಮೂಡಿಸುತ್ತದೆ. ಒಂದು ಥ್ರಿಲ್ಲಿಂಗ್ ಅನುಭವಕ್ಕಾಗಿ ‘6 ನೇ ಮೈಲಿ’ ಚಿತ್ರ ನೋಡಬಹುದು.
ಚಿತ್ರ: 6 ನೇ ಮೈಲಿ ತಾರಾಗಣ: ಸಂಚಾರಿ ವಿಜಯ್, ಆರ್‌ಜೆ ನೇತ್ರಾ, ಶಾಂತಲಾ ಭಂಡಿ, ರಘು ಪಾಂಡೇಶ್ವರ್, ಕೃಷ್ಣ ಹೆಬ್ಬಾಳೆ, ಡಾ ಜಾನ್ವಿ, ಆರ್‌ಜೆ ಸುದ್ದೇಶ್, ಹೇಮಂತ್ ಸುಶೀಲ್, ಮೈತ್ರಿ ಜಗ್ಗಿ ನಿರ್ದೇಶನ: ಸೀನಿ ನಿರ್ಮಾಣ: ಡಾ ಬಿ ಎಸ್ ಶೈಲೇಶ್ ಕುಮಾರ್ ಸಂಗೀತ: ಸಾಯಿ ಕಿರಣ್ ಛಾಯಾಗ್ರಾಹಣ: ಪರಮೇsಶ್ ಪಿ ಎಂ ರೇಟಿಂಗ್: ***
-ವಿಮರ್ಶೆ: ಆರ್. ಕೇಶವಮೂರ್ತಿ