’ಕನ್ನಡಕ್ಕಾಗಿ ಒಂದನ್ನು ಒತ್ತಿ’ದರೆ ಏನಾಗುತ್ತದೆ? ಹೇಗಿದೆ ಹೊಸ ಸಿನಿಮಾ?

First Published Jul 7, 2018, 3:27 PM IST
Highlights

ಸಿನಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಲು ಎಂಟು ಸಿನಿಮಾಗಳು ಸಿದ್ದವಾಗಿವೆ. ನಿನ್ನೆ ಎಂಟು ಸಿನಿಮಾಗಳು ಬಿಡುಗಡೆಯಾಗಿವೆ. ಅದರಲ್ಲಿ ಕನ್ನಡಕ್ಕಾಗಿ ಒಂದನ್ನು ಒತ್ತಿ ಕೂಡಾ ಒಂದು. ಹೇಗಿದೆ ಈ ಚಿತ್ರ? ಏನೆಲ್ಲಾ ವಿಶೇಷತೆಗಳಿವೆ? ಇಲ್ಲಿವೆ ನೋಡಿ. 

ಒಬ್ಬ ಪುಸ್ತಕ ಪ್ರೇಮಿ ಕಂ ಪತ್ರಕರ್ತ, ಇನ್ನೊಬ್ಬ ಕನ್ನಡ ಪರ ಹೋರಾಟಗಾರ, ಮತ್ತೊಬ್ಬಳು ಸುಂದರವಾದ ಹುಡುಗಿ. ಈ ಮೂವರ ನಡುವಲ್ಲಿ ಸ್ನೇಹ, ಪ್ರೀತಿಯ ಬೆಸುಗೆ. ನಗಲು ಒಂದಷ್ಟು ಕಾಮಿಡಿ, ಕೊನೆಯಲ್ಲಿ ಟ್ರಾಜಿಡಿ, ನಡುವಲ್ಲಿ ಫುಲ್ ಲವ್ ಫ್ಲಾಶ್‌ಬ್ಯಾಕ್ ಇದಿಷ್ಟನ್ನು ಸುಂದರವಾಗಿ ಪೋಣಿಸಿ ಪಕ್ಕಾ ಕಮರ್ಶಿಯಲ್ ಚಿತ್ರ ಮಾಡಿದೆ. 

ಎಡ್ಬಿಡಂಗಿ ತಂಡ. ಇದರ ನಾಯಕ ಕುಶಾಲ್. ಎರಡು ಲವ್ ಫ್ಯಾಶ್‌ಬ್ಯಾಕ್‌ಗಳ ಸಂಕಲನ ಮತ್ತದರ ಸುತ್ತಮುತ್ತ ಸಾಗುವ ಕತೆಯಲ್ಲಿ ಮೊದಲ ಭಾಗದಲ್ಲಿ ಅನಾವರಣಗೊಳ್ಳುವುದು ನಾಯಕ ಅವಿನಾಶ್ ಲವ್ ಸ್ಟೋರಿ. ಹಳ್ಳಿ ಬಿಟ್ಟು ಪಟ್ಟಣ ಸೇರುವ ಯುವಕ ಬರವಣಿಗೆಯ ಮೂಲಕವೇ ಮೇಲೆ ಬಂದು, ಬೆಳದಿಂಗಳ ಬಾಲೆಯಂತಹ ಹುಡುಗಿಯ ಪ್ರೀತಿಯನ್ನೂ ಪಡೆದು ಸುಖವಾಗಿ ಇದ್ದ ದಿನಗಳಲ್ಲಿಯೇ ತಿರುವೊಂದು ಎದುರಾಗಿ ಪ್ರೀತಿ ಮಾಯವಾಗುತ್ತೆ. ಎರಡನೇ ಭಾಗ ಆರಂ
ಭವಾಗುತ್ತಿದ್ದಂತೆಯೇ ನಾಯಕ ಅವಿನಾಶ್ ತೆರೆಗೆ ಸರಿದು ಚಿಕ್ಕಣ್ಣನೇ ಸಂಪೂರ್ಣ ನಾಯಕನಾಗಿ ಬಿಡುತ್ತಾನೆ. ಹೈಸ್ಕೂಲ್ ದಿನದ ಶೆಟ್ರ ಮಗಳೊಂದಿಗಿನ ಲವ್ ಸ್ಟೋರಿ ಜೊತೆಗೆ ಒಂದಷ್ಟು ಕಾಮಿಡಿ ಸೇರಿಕೊಂಡು  ಚಿಕ್ಕಣ್ಣ ಚಿತ್ರವನ್ನು ಆವರಿಸಿಕೊಳ್ಳುತ್ತಾ ಹೋಗುತ್ತಾನೆ.

ಇದೇ ವೇಳೆಗೆ ಮತ್ತೆರಡು ಭಯಂಕರ ಟ್ವಿಸ್ಟ್‌ಗಳು. ಹಾಗೆ ನೋಡಿದರೆ ಈ ಟ್ವಿಸ್ಟ್‌ಗಳೇ ಚಿತ್ರವನ್ನು ಸಾಮಾನ್ಯ ದರ್ಜೆಯಿಂದ ಮಧ್ಯಮ ದರ್ಜೆಗೆ ಏರಿಸಿರುವುದು. ಮತ್ತೊಂದು ಕಡೆ ನಾಯಕಿ ಕೃಷಿ ತಾಪಂಡ ಅವಿನಾಶ್ ಪ್ರೀತಿಯ ಬಲೆಯಲ್ಲಿ ಸಿಲುಕಿ ಬೆಳದಿಂಗಳ ಬಾಲೆಯಾಗಿ ತೇಲಾಡುತ್ತಿರುವಾಗಲೇ ತಂದೆಯ ಪ್ರೀತಿಯ ಬಲವಂತ ದುರಂತವೊಂದಕ್ಕೆ ಮುನ್ನುಡಿ ಬರೆದಾಗಿರುತ್ತದೆ. ಪ್ರೀತಿ ಹೂವು ಬಾಡಿಹೋಯಿತು ಎನ್ನುವಾಗಲೇ ಆ ಮಲೆನಾಡಿನ ಕಾಡಿನ ಮಧ್ಯದ ಮನೆಯಲ್ಲಿ ನಾಯಕ, ನಾಯಕಿಯ ಭೇಟಿ. ಪ್ರೀತಿ ಕಳೆದುಕೊಂಡ ನಾಯಕ, ಮತ್ತೊಬ್ಬನ ತಾಳಿಗೆ ಕೊರಳೊಡ್ಡಿಯಾಗಿರುವ ನಾಯಕಿ. ಏನಾಗುತ್ತಿದೆ ಇಲ್ಲಿ ಎಂದುಕೊಳ್ಳುವಾಗಲೇ ತ್ರಿಕೋನ ಪ್ರೇಮಕತೆಯ ಅನಾವರಣ.

ಮೊದಲೇ ಹೇಳಿದ ಹಾಗೆ ಈ ತ್ರಿಕೋನ ಪ್ರೇಮಕತೆಯೇ ಚಿತ್ರದ ಜೀವಾಳ. ಎಲ್ಲವೂ ನಡೆಯುವುದು ಇದರ ಆಧಾರದ ಮೇಲೆಯೇ. ಕೊನೆಗೂ ನಾಯಕ, ನಾಯಕಿ ಒಂದಾಗುತ್ತಾರೆ. ಇವರಿಬ್ಬರು ಒಂದಾಗುವಲ್ಲಿ ಸುಚೇಂದ್ರ ಪ್ರಸಾದ್ ಕೊಂಡಿಯಾಗಿ ಚೆಂದದ ಕೆಲಸ ಮಾಡುತ್ತಾರೆ. ಅಲ್ಲಿಗೆ ಮೊದಲ ನಾಯಕನ ಪ್ರೀತಿ ಸಕ್ಸಸ್. ಆದರೆ ಬಾಲ್ಯದಿಂದಲೂ ಶೆಟ್ರ ಮಗಳ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡು ಅವಳು ನಡೆದಾಡಿದ ಜಾಗದ ಮಣ್ಣನ್ನು ಜೇಬಲ್ಲಿಟ್ಟುಕೊಂಡಿದ್ದ ಚಿಕ್ಕಣ್ಣ ಕೊನೆಗೆ ಟ್ರಾಜಿಡಿ ನಾಯಕ.

ಏನು ಅವನ ಟ್ರಾಜಿಡಿ? ಬೆಳದಿಂಗಳ ಬಾಲೆ ಗಗನ ಕುಸುಮವಾಗಿ ಮತ್ತೆ ನಾಯಕನ ಜೊತೆಯಾಗಿದ್ದು ಹೇಗೆ? ಎನ್ನುವ ಪ್ರಶ್ನೆಗಳ ಜೊತೆಗೆ ಮುಖ್ಯವಾಗಿ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಎನ್ನುವುದರ ಸೀಕ್ರೆಟ್ ಏನು ಎನ್ನುವುದನ್ನು ತಿಳಿದುಕೊಳ್ಳಲು ಆರಾಮವಾಗಿ ಚಿತ್ರ ನೋಡಬಹುದು. ಎರಡು ಟ್ವಿಸ್ಟ್‌ಗಳಿಂದ ಚಿತ್ರ ಮಧ್ಯಮ ದರ್ಜೆಗೆ ಏರಿತು ಎನ್ನುವುದು ಹೌದಾದರೂ ಒಂದಷ್ಟು ಮಿಸ್ಟೇಕ್ಸ್, ಫಸ್ಟ್‌ಹಾಫ್ ಎಳೆತ, ಪ್ರೀತಿ ಹುಟ್ಟುವ ವೇಳೆಯಲ್ಲಿನ ತೀವ್ರತೆಯ ಕೊರತೆ ಇವೆಲ್ಲವೂ ಮತ್ತೊಂದು ಹಂತಕ್ಕೆ ಏರಬಹುದಾಗಿದ್ದ ಸಾಧ್ಯತೆಯನ್ನು ತಿಂದುಹಾಕಿವೆ. ಕುಶಾಲ್ ಈ ನಿಟ್ಟಿನಲ್ಲಿ ಮತ್ತಷ್ಟು ಕುಶಲತೆ ಮೆರೆದಿದ್ದರೆ ಚೆಂದವಿತ್ತು.

ಬೆಂಗಳೂರು, ಮಲೆನಾಡಿನ ಭಾಗವನ್ನು ಸುಂದರವಾಗಿ ಸೆರೆಹಿಡಿದು ಹೃಷಿಕೇಶ್ ಸೈ ಎನ್ನಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಎಂದಿನಂತೆಯೇ ಸುಂದರ. ರಂಗಾಯಣ ರಘು, ಸುಚೇಂದ್ರ ಪ್ರಸಾದ್, ದತ್ತಣ್ಣ ಆದಿಯಾಗಿ ಎಲ್ಲರೂ
ಪಾತ್ರಗಳಲ್ಲಿ ಜೀವಿಸುತ್ತಾ ಮುದ ನೀಡುತ್ತಾರೆ. 

ಚಿತ್ರ: ಕನ್ನಡಕ್ಕಾಗಿ ಒಂದನ್ನು ಒತ್ತಿ ತಾರಾಗಣ: ಅವಿನಾಶ್ ಎಸ್. ಶತಮರ್ಶಣ, ಚಿಕ್ಕಣ್ಣ. ಕೃಷಿ ತಾಪಂಡ, ರಂಗಾಯಣ ರಘು, ಸುಚೇಂದ್ರ ಕುಮಾರ್, ದತ್ತಣ್ಣ  ನಿರ್ದೇಶನ: ಕುಶಾಲ್ ನಿರ್ಮಾಣ: ಯಡ್ಬಿಡಂಗಿ ಮೂವೀಸ್ ಸಂಗೀತ: ಅರ್ಜುನ್ ಜನ್ಯ ಛಾಯಾಗ್ರಹಣ: ವೃಷಿಕೇಶ್  ರೇಟಿಂಗ್: * ** 

click me!