
ತುಮಕೂರು[ಮೇ.02]: ‘ಸಿಎಂ ಆಗಲು ಕುಮಾರಸ್ವಾಮಿ ಅಯೋಗ್ಯ’ ಎಂಬ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರು ಯೋಗ್ಯರು, ಯಾರು ಅಯೋಗ್ಯರು ಎಂಬುದು ಜನರಿಗೆ ಗೊತ್ತಿದೆ. ನಮ್ಮ ಮನೆಯಲ್ಲೇನೂ ಯಾರಿಗೂ ನೋಟು ಎಣಿಕೆ ಯಂತ್ರ ಸಿಕ್ಕಿಲ್ಲ. ಆದರೆ ಈಶ್ವರಪ್ಪ ಮನೆಯಲ್ಲಿ ಎರಡು ನೋಟು ಎಣಿಕೆ ಯಂತ್ರ ಸಿಕ್ಕಿವೆ ಎಂದು ತಿರುಗೇಟು ನೀಡಿದ್ದಾರೆ.
ಶಿರಾದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಯೋಗ್ಯತೆ ಕುರಿತು ಈಶ್ವರಪ್ಪ ಅವರಿಂದ ಸರ್ಟಿಫಿಕೇಟ್ ಬೇಕಿಲ್ಲ. ಯಾರು ಯೋಗ್ಯರು ಎನ್ನುವುದಕ್ಕೆ ಜನರೇ ಸರ್ಟಿಫಿಕೇಟ್ ಕೊಡುತ್ತಾರೆ ಎಂದು ಟಾಂಗ್ ನೀಡಿದರು.
ಇದೇ ವೇಳೆ ಹೇಮಾವತಿ ನೀರಿನ ವಿಚಾರ ಹಂಚಿಕೆಯಲ್ಲಿ ದೇವೇಗೌಡರು ತುಮಕೂರಿಗೆ ತಾರತಮ್ಯ ಮಾಡಿದ್ದಾರೆ ಎಂದು ಹರಿಹಾಯ್ದಿರುವ ತುಮಕೂರು ಬಿಜೆಪಿ ಮುಖಂಡರ ವಿರುದ್ಧವೂ ಸಿಎಂ ಕಿಡಿಕಾರಿದರು. ಹೇಮಾವತಿ ವಿಚಾರದಲ್ಲಿ ಬಿಜೆಪಿ ಕೊಡುಗೆ ಶೂನ್ಯ. ಹೇಮಾವತಿ ಡ್ಯಾಂ ಕಟ್ಟುವಾಗ ಸುರೇಶಗೌಡರು ಹುಟ್ಟಿದ್ರಾ ಎಂದು ಖಾರವಾಗಿ ಪ್ರಶ್ನಿಸಿದರು. ಜತೆಗೆ, ದೇವೇಗೌಡರ ಕುಟುಂಬ ರಾಜಕಾರಣದ ವಿಚಾರವಾಗಿ ಮಾತನಾಡಿದ್ದ ಮಾಧುಸ್ವಾಮಿ ವಿರುದ್ಧವೂ ಗುಡುಗಿದ ಮುಖ್ಯಮಂತ್ರಿ, ಯಾರ್ರಿ ಅವ್ರು ಮಾಧುಸ್ವಾಮಿ. ಜನರಿಗೆ ಅವರ ಕೊಡುಗೆ ಏನು ಅಂತ ಗೊತ್ತು ಎಂದರು.
ಸುಮಾ ವಿರುದ್ಧ ಪರೋಕ್ಷ ಕಿಡಿ:
‘‘ಮಂಡ್ಯ ವಿಚಾರ ಬಿಟ್ಹಾಕಿ, ತಲೆಕಡಿಸಿಕೊಳ್ಳಬೇಡಿ. ಚುನಾವಣೆ ಎದುರಿಸಲು ಶಕ್ತಿ ಇಲ್ಲದಿದ್ದವರು ಕುತಂತ್ರದಿಂದ ಅಧಿಕಾರಿಗಳ ವಿರುದ್ಧ ದಬ್ಬಾಳಿಕೆ ನಡೆಸಿ ಒತ್ತಡ ಹಾಕುವ ಕೆಲಸ ಮಾಡುತ್ತಿದ್ದಾರೆ. ನಾಮಪತ್ರಕ್ಕೆ ಸಂಬಂಧಿಸಿ ವಿವಾದ ಸೃಷ್ಟಿಸುತ್ತಿದ್ದಾರೆ, ಅಧಿಕಾರ ಇಲ್ಲದಿದ್ದರೂ ದಬ್ಬಾಳಿಕೆ ನಡೆಸುತ್ತಿದ್ದಾರೆ’ ಎಂದು ಪರೋಕ್ಷವಾಗಿ ಸುಮಲತಾ ಅಂಬರೀಶ್ ವಿರುದ್ಧ ಅಸಮಾಧಾನ ಹೊರಹಾಕಿದರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...