ಮುಂದಿನ ಬಾರಿ ಮೋದಿ ಪ್ರಧಾನಿಯಾಗೋಲ್ಲ: ಕೈ ಸಂಸದ

By Web DeskFirst Published Apr 21, 2019, 1:05 PM IST
Highlights

ಮೋದಿ ಮುಂದಿನ ಬಾರಿ ಪ್ರಧಾನಿಯಾಗೋಲ್ಲ ಎಂದಿರುವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ, ಈ ಬಾರಿ ಮೋದಿಯೇ ಪ್ರಧಾನಿ ಆಗುತ್ತಾರಾ ಎಂಬ ಅನುಮಾನ ಹುಟ್ಟು ಹಾಕಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ಕಡೆಯ ದಿನವಾಗಿದ್ದು, ಅಭ್ಯರ್ಥಿಗಳ ಪರ ಪ್ರಚಾರ ಬಿರುಸಿನಿಂದ ಸಾಗಿದೆ.

ರಾಯಚೂರು: ಚಿಕ್ಕಬಳ್ಳಾಪುರ ಸೇರಿ ದಕ್ಷಿಣ ಕರ್ನಾಟಕದಲ್ಲಿ ಚುನಾವಣಾ ಅಬ್ಬರ ಮುಗಿದಿದ್ದು, ಕಾಂಗ್ರೆಸ್ ಮುಖಂಡರು ಉತ್ತರ ಕರ್ನಾಟಕದತ್ತ ಪ್ರಚಾರಕ್ಕೆ ತೆರಳಿದ್ದಾರೆ. ಇಲ್ಲಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೋಯ್ಲಿ ಪ್ರಚಾರ ನಡೆಸುತ್ತಿದ್ದು, 'ಮುಂದಿನ ಬಾರಿ ಮೋದಿ ಪ್ರಧಾನಿಯಾಗೋಲ್ಲ..' ಎಂದರು. ಹಾಗಾದರೆ ಈ ಬಾರಿ ಮೋದಿ ಪ್ರಧಾನಿ ಆಗುತ್ತಾರೋ, ಮೋಯ್ಲಿ ಹೇಳಿದಂತೆ.

'ದೇಶದ ಎಲ್ಲ ಬಲಿಷ್ಠ 27 ಪಕ್ಷಗಳೂ ಒಂದಾಗಿ, ಕಾಂಗ್ರೆಸ್ ವಿರಾಟ್ ಪಕ್ಷವಾಗಿದೆ. ಈ ಪಕ್ಷಗಳಲ್ಲಿ ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ. ಕಳೆದ ಬಾರಿಯಂತೆ ಈ ವರ್ಷ ಮೋದಿ ಅಲೆ ಇಲ್ಲ. ಆ ಅಲೆ ಈಗ ಎಲೆಯಾಗಿದೆ,' ಎಂದರು.

'ಉದ್ಯೋಗ, ಕಪ್ಪು ಹಣ ತರುವ ವಿಚಾರ, ಆರು ಸಾವಿರ ಸಣ್ಣ ರೈತರಿಗೆ ಹಣ ನೀಡುವ ವಿಚಾರ ಸೇರಿ ಎಲ್ಲವೂ ಮೋದಿ ನೀಡಿರುವ ಭರವಸೆ ಹುಸಿಯಾಗಿವೆ. ಕರ್ನಾಟಕದಲ್ಲಿ ಬಿಜೆಪಿಗೆ 5-6 ಸೀಟುಗಳು ಬಂದರೂ ಆಶ್ಚರ್ಯವಿಲ್ಲ,' ಎಂದು ಭವಿಷ್ಯ ನುಡಿದರು.

'ಕರ್ನಾಟಕದಲ್ಲಿಯೇ ಬಿಜೆಪಿ ನೆಲ ಕಚ್ಚುತ್ತದೆ ಎಂದ ಮೇಲೆ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಹೇಗೂ ಬರೋಲ್ಲ. ಅಪ್ಪ ತಪ್ಪಿ ರಾಜಸ್ಥಾನ, ಮಧ್ಯಪ್ರದೇಶದಲ್ಲಿಯೂ ಕೇಸರಿ ಪಕ್ಷಕ್ಕೆ ಜನರು ಒಲವು ತೋರಿಸುವ ಸಾಧ್ಯತೆ ಕಡಿಮೆ. ಒಟ್ಟಿನಲ್ಲಿ ಕೇಸರಿ  ಪಡೆ ನೆಲ ಕಚ್ಚುತ್ತದೆ,' ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಏ.18ಕ್ಕೆ ಮುಗಿದಿದ್ದು, 2ನೇ ಹಂತದಲ್ಲಿ ಉಳಿದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಒಟ್ಟು ಏಳು ಹಂತಗಳಲ್ಲಿ 543 ಲೋಕಸಭ ಕ್ಷೇತ್ರಗಳಿಗೆ 17ನೇ ಲೋಕಸಭಾ ಚುನಾವಣೆ ನಡೆಯುತ್ತಿದೆ.

click me!