ಮುಸ್ಲಿಮರೇಕೆ ಮೋದಿಗೆ ವೋಟು ಕೊಡಬೇಕು? ಇಲ್ಲಿದೆ ಅಜೀಂ ಉತ್ತರ

By Web DeskFirst Published Apr 21, 2019, 12:39 PM IST
Highlights

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಮುಗಿದಿದ್ದು, ಶಿವಮೊಗ್ಗ, ಕಲಬುರಗಿ ಸೇರಿ ಕೆಲವು ಪ್ರಮುಖ ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 23ಕ್ಕೆ ಮತದಾನ ನಡೆಯಲಿದೆ. ಬಹಿರಂಗ ಪ್ರಚಾರಕ್ಕೆ ಇವತ್ತೇ ಕಡೆಯ ದಿನವಾಗಿದ್ದು, ಶಿವಮೊಗ್ಗದ ಅಲ್ಪ ಸಂಖ್ಯಾತ ಮೋರ್ಚಾದ ಮುಖಂಡ ಮೋದಿ ಬಗ್ಗೆ ಏನು ಹೇಳಿದ್ದಾರೆ ಓದಿ...

ಶಿವಮೊಗ್ಗ: ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಮುಗಿದಿದ್ದು, ಏಪ್ರಿಲ್ 23ಕ್ಕೆ ಉತ್ತರ ಕರ್ನಾಟಕದ ಇನ್ನುಳಿದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಬಹಿರಂಗ ಪ್ರಚಾರಕ್ಕೆ ಇಂದು ಕಡೆಯ ದಿನವಾಗಿದ್ದು, ಮತ ಭೇಟೆ ಬಿರುಸಿನಿಂದ ಸಾಗುತ್ತಿದೆ. 

ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಬ್ಬರ ಕಣವಾಗಿರುವ ಶಿವಮೊಗ್ಗ ಬಿಜೆಪಿ ಭದ್ರಕೋಟೆಯೊಂದಿಗೆ, ಮೋದಿ ಅಲೆ ಇರುವ ಲೋಕಸಭಾ ಕ್ಷೇತ್ರ. ನಿನ್ನೆ ಅಮಿತ್ ಶಾ ರೋಡ್ ಶೋ ಮಾಡಿದ್ದರೆ, ಇಂದು ಅಭ್ಯರ್ಥಿಗಳ ಪರ ಕೆಲವು ನಾಯಕರು ಪ್ರಚಾರ ನಡೆಸುತ್ತಿದ್ದಾರೆ.

ಮುಸ್ಲಿಂ ವಿರೋಧಿ ಪಟ್ಟ ಕಟ್ಟಿಕೊಂಡಿರುವ ಬಿಜೆಪಿ ಬಗ್ಗೆ ಪಕ್ಷದ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಅಜೀಂ, 'ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಯಾವುದೇ ಕೋಮು ಗಲಭೆಗಳು ನಡೆದಿಲ್ಲ. ಕಾಂಗ್ರೆಸ್‌ನಂತೆ ಕೇವಲ ವೋಟ್ ಬ್ಯಾಂಕಿಗಾಗಿ ಮುಸ್ಲಿಮರನ್ನು ಬಳಸಿಕೊಳ್ಳದೇ, ಸ್ವಾಭಿಮಾನದಿಂದ ಬದುಕುವ ಮಾರ್ಗವನ್ನು ಮೋದಿ ಸರಕಾರ ತೋರಿಸಿದ್ದು, ದೇಶದ ಶೇ.30ರಷ್ಟು ಮುಸ್ಲಿಮರು ಬಿಜೆಪಿಗೆ ಮತ ಚಲಾಯಿಸುತ್ತಾರೆ,' ಎಂದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಮಹಾಭಾರತದಲ್ಲಿ ನಡೆಯುತ್ತಿರುವ ಯುದ್ದದಲ್ಲಿ ಮಹಾ ಘಠಬಂಧನ್ ಬೇಕೋ, ರಾಷ್ಟ್ರವಾದಿಗಳು ಬೇಕೋ ಎಂದು ಜನತೆ ತೀರ್ಮಾನಿಸುತ್ತಾರೆ. ದುಡ್ಡಿನ ಆಧಾರದ ಮೇಲೆ ಜೆಡಿಎಸ್ ಚುನಾವಣೆ ಗೆಲ್ಲಲು ಹೊರಟಿದೆ. ಕಾಂಗ್ರೆಸ್ ಮುಸ್ಲಿಮರಲ್ಲಿ ವಿಷ ತುಂಬಿದ್ದಾರೆ. ಮುಸ್ಲಿಂ ಹಿತ ಕಾಪಾಡುವುದು ಕಾಂಗ್ರೆಸ್ ಮಾತ್ರ ಎಂಬುವಂತೆ ಬಿಂಬಿಸುತ್ತಿದ್ದಾರೆ. ಕಳೆದ ಬಾರಿ ಮೋದಿ ಅಧಿಕಾರಕ್ಕೆ ಬಂದರೆ ಮುಸ್ಲಿಮರನ್ನು ಪಾಕಿಸ್ತಾನಕ್ಕೆ  ಓಡಿಸುತ್ತಾರೆ ಎಂದಿದ್ದರು. ಆದರೆ ಮುಸ್ಲಿಮರು ಮೋದಿಯವರ ಎಲ್ಲಾ ಯೋಜನೆಯ ಫಲಾನುಭವಿಗಳಾಗಿದ್ದಾರೆ,' ಎಂದರು.

'ಈ ಚುನಾವಣೆಯ ಫಲಿತಾಂಶ ಬಂದ ಕೂಡಲೇ ಮೋದಿ ಪ್ರಧಾನಿಯಾಗಲು ರಾಷ್ಟಪತಿ ಭವನಕ್ಕೆ ತೆರಳಿದರೆ, ಕರ್ನಾಟಕದಲ್ಲಿ ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ರಾಜಭವನಕ್ಕೆ ತೆರಳುತ್ತಾರೆ.ಮುಂದಿನ 4 ವರ್ಷಗಳಿಗೆ ಯಡಿಯೂರಪ್ಪ ಸಿಎಂ ಆಗಿರುತ್ತಾರೆ. ಮಧು ಬಂಗಾರಪ್ಪ ತಂದೆಯವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ಬಂಗಾರಪ್ಪನವರ ಮುಕ್ಕಾಲು ಪಾಲು ಶಕ್ತಿ ಕುಮಾರ್ ಬಂಗಾರಪ್ಪ ನಮ್ಮ ಜೊತೆಗೆ ಇದ್ದಾರೆ,' ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಏ.18ಕ್ಕೆ ಮುಗಿದಿದ್ದು, 2ನೇ ಹಂತದಲ್ಲಿ ಉಳಿದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಒಟ್ಟು ಏಳು ಹಂತಗಳಲ್ಲಿ 543 ಲೋಕಸಭ ಕ್ಷೇತ್ರಗಳಿಗೆ 17ನೇ ಲೋಕಸಭಾ ಚುನಾವಣೆ ನಡೆಯುತ್ತಿದೆ.

click me!