
ವಾರಾಣಸಿ(ಏ.13): ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೆಸರಿನ ಇತರ ಮೂವರು ಅಭ್ಯರ್ಥಿಗಳಿರುವಂತೆಯೇ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತದ್ರೂಪಿಯೋರ್ವರು ವಾರಾಣಸಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದಾರೆ.
2014ರ ಲೋಕಸಭೆ ಚುನಾವಣೆ ಮತ್ತು ಆ ನಂತರ ದೇಶದ ವಿವಿಧೆಡೆ ನಡೆದ ಚುನಾವಣೆಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರಂತೆ ಕಾಣುವ ಅಭಿನಂದನ್ ಪಾಠಕ್ ಬಿಜೆಪಿ ಪರ ಪ್ರಚಾರ ನಡೆಸಿದ್ದರು.
ಆದರೆ ಇದೀಗ ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರೋಧಿಯಾಗಿರುವ ಅಭಿನಂದನ್ ಪಾಠಕ್, ಪ್ರಧಾನಿ ಮೋದಿ ಪ್ರತಿನಿಧಿಸುವ ಉತ್ತರ ಪ್ರದೇಶದ ವಾರಾಣಸಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಉತ್ತರ ಪ್ರದೇಶದ ಲಕ್ನೋ ಲೋಕಸಭಾ ಕ್ಷೇತ್ರದಿಂದ ಗೃಹ ಸಚಿವ ರಾಜನಾಥ್ ಸಿಂಗ್ ವಿರುದ್ಧ ಸ್ಪರ್ಧಿಸಿರುವ ಅಭಿನಂದನ್ ಪಾಠಕ್, ಇದೀಗ ವಾರಾಣಸಿಯಿಂದಲೂ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅಭಿನಂದನ್ ಪಾಠಕ್, ತಾವು ಈ ಮೊದಲು ಪ್ರಧಾನಿ ಮೋದಿ ಅವರ ಬೆಂಬಲಿಗರಾಗಿದ್ದು ನಿಜ ಹೌದಾದರೂ ನೋಟು ಅಮಾನ್ಯೀಕರಣ, ಜಿಎಸ್ ಟಿ ಮತ್ತು ಇತರ ಕೆಲವು ತಪ್ಪು ನಿರ್ಧಾರಗಳ ಪರಿಣಾಮವಾಗಿ ಅವರ ವಿರೋಧಿಯಾಗಿ ಬದಲಾಗಿರುವುದಾಗಿ ತಿಳಿಸಿದ್ದಾರೆ.