ಮೇ 23ರ ಮಧ್ಯಾಹ್ನ ಬಳಿಕವೇ ಲೋಕಸಭಾ ಫಲಿತಾಂಶ ಚಿತ್ರಣ

By Web DeskFirst Published May 8, 2019, 7:40 AM IST
Highlights

ಮೇ 23ರ ಮಧ್ಯಾಹ್ನ ಬಳಿಕವೇ ಲೋಕಸಭಾ ಫಲಿತಾಂಶ ಚಿತ್ರಣ| ಶೇ.50 ವಿವಿಪ್ಯಾಟ್‌ ಮತ ಎಣಿಕೆಗೆ ಸುಪ್ರೀಂಕೋರ್ಟ್ ನಕಾರ| ಆದರೆ, 5 ವಿವಿಪ್ಯಾಟ್‌ಗಳ ಮತ ತಾಳೆಗೆ ಈಗಾಗಲೇ ಆದೇಶ| ಹಾಗಾಗಿ, ಬೆಳಗ್ಗೆ 11ರ ಬದಲು ಸಂಜೆ 4ರ ವೇಳೆಗೆ ಚಿತ್ರಣ

ನವದೆಹಲಿ[ಮೇ.08]: ಲೋಕಸಭಾ ಚುನಾವಣೆಯ ಮತ ಎಣಿಕೆ ವೇಳೆ, ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 5 ಮತಗಟ್ಟೆಗಳ ಬದಲು, ಒಟ್ಟಾರೆ ಮತಗಟ್ಟೆಗಳ ಶೇ.50ರಷ್ಟರಲ್ಲಿ ವಿವಿಪ್ಯಾಟ್‌ಗಳ ಮತ ಎಣಿಕೆ ಕೋರಿದ್ದ ವಿಪಕ್ಷಗಳ ಮನವಿಯನ್ನು ಸುಪ್ರೀಂಕೋರ್ಟ್‌ ಮಂಗಳವಾರ ವಜಾಗೊಳಿಸಿದೆ. ಹೀಗಾಗಿ ಮೇ 23ರಂದು ಮಧ್ಯಾಹ್ನದ ವೇಳೆಗೆ ಲೋಕಸಭಾ ಚುನಾವಣೆ ಫಲಿತಾಂಶದ ಸ್ಪಷ್ಟಚಿತ್ರಣ ಹೊರಬೀಳುವುದು ಖಚಿತವಾಗಿದೆ. ಒಂದು ವೇಳೆ ವಿಪಕ್ಷಗಳ ಮನವಿಯನ್ನು ಸುಪ್ರೀಂಕೋರ್ಟ್‌ ಮಾನ್ಯ ಮಾಡಿದ್ದೇ ಆಗಿದ್ದಲ್ಲಿ, ಪೂರ್ಣ ಪ್ರಮಾಣದ ಪಲಿತಾಂಶ ಸಿಗಲು 4-5 ದಿನ ಕಾಯಬೇಕಾದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇತ್ತು.

ಸುಪ್ರೀಂಕೋರ್ಟ್‌ನ ಈ ಸ್ಪಷ್ಟಆದೇಶದ ಹೊರತಾಗಿಯೂ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ 21 ವಿಪಕ್ಷಗಳ ನಾಯಕರು, ಪಾರದರ್ಶಕ ವ್ಯವಸ್ಥೆ ಜಾರಿ ಕುರಿತ ತಮ್ಮ ಹೋರಾಟವನ್ನು ಮುಂದುವರೆಸುವ ಮಾತುಗಳನ್ನು ಆಡಿದ್ದಾರೆ.

ಲೋಕಸಮರ: ಕಾಂಗ್ರೆಸ್ ಸೇರಿದಂತೆ 21 ಪಕ್ಷಗಳಿಗೆ ಭಾರೀ ಹಿನ್ನಡೆ

ಏರಿಕೆ ಇಲ್ಲ:

ಇವಿಎಂಗಳನ್ನು ತಿರುಚಲಾಗುತ್ತಿದೆ ಎಂದು ಆರೋಪಿಸಿದ್ದ ವಿಪಕ್ಷಗಳು ಈ ಹಿಂದೆ ಸುಪ್ರೀಂಕೋರ್ಟ್‌ಗೆ ಅರ್ಜಿಯೊಂದನ್ನು ಸಲ್ಲಿಸಿದ್ದವು. ಅದರಲ್ಲಿ, ಲೋಕಸಭಾ ಚುನಾವಣೆಯ ಮತ ಎಣಿಕೆಯ ವೇಳೆ ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾಡಲಾಗುವ ಯಾವುದಾದರೂ ಒಂದು ಮತಗಟ್ಟೆಯಲ್ಲಿನ ವಿವಿಪ್ಯಾಟ್‌ನ ಮತಚೀಟಿಯನ್ನು ತಾಳೆ ಹಾಕುವುದರ ಬದಲು, ಒಟ್ಟಾರೆ ಮತಗಟ್ಟೆಗಳ ಪೈಕಿ ಶೇ.50ರಷ್ಟರಲ್ಲಿ ವಿವಿಪ್ಯಾಟ್‌ನ ಮತ ಚೀಟಿಗಳನ್ನು ತಾಳೆ ಹಾಕಬೇಕು ಎಂದು ಕೋರಿದ್ದವು. ಆದರೆ ವಿಪಕ್ಷಗಳ ಬೇಡಿಕೆಯನ್ನು ಮಾನ್ಯ ಮಾಡಿದರೆ ಪೂರ್ಣ ಪ್ರಮಾಣದಲ್ಲಿ ಫಲಿತಾಂಶ ನೀಡಲು 4-5 ದಿನ ಬೇಕಾಗಬಹುದು ಎಂದು ಚುನಾವಣಾ ಆಯೋಗ ಹೇಳಿತ್ತು.

ಈ ಅರ್ಜಿಯ ಕುರಿತ ಏ.8ರಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌, ಪ್ರತಿ ವಿಧಾನಸಭಾ ಕ್ಷೇತ್ರದ 1 ಮತಗಟ್ಟೆಬದಲಿಗೆ 5 ಬೂತ್‌ಗಳ ವಿವಿಪ್ಯಾಟ್‌ ಚೀಟಿಗಳನ್ನು ಎಣಿಕೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. ಒಂದರ ಬದಲಿಗೆ 5 ಬೂತ್‌ಗಳಲ್ಲಿ ವಿವಿಪ್ಯಾಟ್‌ಗಳನ್ನು ಪರಿಶೀಲನೆಗೆ ಒಳಪಡಿಸಬೇಕು. ಇದಕ್ಕೆ ಹೆಚ್ಚಿನ ಮಾನವಶಕ್ತಿ ಬೇಕಾಗಿಲ್ಲ. ಹಾಗೆಯೇ ಫಲಿತಾಂಶ ಕೂಡ ಭಾರಿ ಪ್ರಮಾಣದಲ್ಲಿ ವಿಳಂಬವಾಗುವುದಿಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ತೃಪ್ತಿ ಮೂಡಿಸಲು ಈ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರಿದ್ದ ಪೀಠ ಹೇಳಿತ್ತು.

ಆದರೆ ಈ ತೀರ್ಪಿಗೆ ಅತೃಪ್ತಿ ವ್ಯಕ್ತಪಡಿಸಿದ್ದ ವಿಪಕ್ಷಗಳು, ಏ.8ರ ತೀರ್ಪು ಮರುಪರಿಶೀಲನೆ ಕೋರಿ ಮತ್ತೆ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿ ವಿಚಾರಣೆ ವೇಳೆ, ಮತದಾರರ ತೃಪ್ತಿ ಮತ್ತು ವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಸಕ್ತ ಮಾಡಲಾದ ಶೇ.2ರಷ್ಟುಏರಿಕೆ ಬದಲು, ಕನಿಷ್ಠ ಶೇ.25ರಷ್ಟನ್ನಾದರೂ ಏರಿಸಬೇಕು ಎಂದು ಕೋರಿದ್ದವು.

ಆದರೆ ಈ ಅರ್ಜಿಯ ಕುರಿತು ವಿಚಾರಣೆ ನಡೆಸಲು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಅವರನ್ನೊಳಗೊಂಡ ನ್ಯಾಯಪೀಠ ಅರ್ಜಿಯನ್ನು ವಜಾ ಮಾಡಿತು. ಹೀಗಾಗಿ ವಿಚಾರಣೆ ಆಲಿಸಲೆಂದೇ ನ್ಯಾಯಾಲಯದ ಕಲಾಪಕ್ಕೆ ಹಾಜರಾಗಿದ್ದ ಸಿಎಂ ಚಂದ್ರಬಾಬು ನಾಯ್ಡು ಸೇರಿ, ಹಲವು ವಿಪಕ್ಷಗಳ ನಾಯಕರು ತೀವ್ರ ನಿರಾಸೆ ಅನುಭವಿಸುವಂತೆ ಆಯಿತು.

 

click me!