ಬೆನ್ನಿಗೆ ಚೂರಿ ಹಾಕೋರು ಬೇಕಿಲ್ಲ : ಮಂಡ್ಯ ಕಾಂಗ್ರೆಸಿಗರ ವಿರುದ್ಧ ಸಿಎಂ ಅಸಮಾಧಾನ

By Web DeskFirst Published Mar 22, 2019, 4:00 PM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರವೂ ಜೋರಾಗಿದೆ. ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ಸಿಗರ ಅಸಹಕಾರ ಮುಂದುವರೆದಿರುವುದಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಅಸಮಾಧಾನಗೊಂಡಿದ್ದಾರೆ.

ಬೆಂಗಳೂರು :  ಲೋಕಸಭೆ ಚುನಾವಣಾ ಅಖಾಡದಲ್ಲಿ ಮೈತ್ರಿ ಧರ್ಮ ಪಾಲನೆಗೆ ಮಿತ್ರ ಪಕ್ಷಗಳ ಮುಖಂಡರು ನಿರ್ದೇಶನ ನೀಡಿದರೂ ಕಾಂಗ್ರೆಸ್ಸಿಗರ ಅಸಹಕಾರ ಮುಂದುವರೆದಿರುವುದಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಅಸಮಾಧಾನಗೊಂಡಿದ್ದಾರೆ.

‘ಮಂಡ್ಯದಲ್ಲಿ ಕೆಲ ಕಾಂಗ್ರೆಸಿಗರು ತುಂಬಾ ಮುಂದೆ ಹೋಗಿದ್ದು, ಅಂತಹವರ ಮುಂದೆ ಸ್ವಾಭಿಮಾನ ಕಳೆದುಕೊಂಡು ಭಿಕ್ಷೆ ಬೇಡುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪದ್ಮನಾಭ ನಗರದ ನಿವಾಸದಲ್ಲಿ ಗುರುವಾರ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಂಡ್ಯದಲ್ಲಿ ಕೆಲವರು ಹಿಂಬಾಗಿಲಿನಿಂದ ಬಹಳ ಮುಂದೆ ಹೋಗಿದ್ದಾರೆ. ಅಂತಹವರ ಮುಂದೆ ಭಿಕ್ಷೆ ಬೇಡುವುದಿಲ್ಲ. 

ಚುನಾವಣಾ ಪ್ರಚಾರಕ್ಕೆ ನನ್ನ ಕಾರ್ಯಕರ್ತರೇ ಸಾಕಾಗಿದ್ದು, ಅವರೇ ಸಮರ್ಥರಾಗಿದ್ದಾರೆ. ಬೆನ್ನಿಗೆ ಚೂರಿ ಹಾಕುವವರು ಬೇಕಾಗಿಲ್ಲ. ಮೂಲ ಕಾಂಗ್ರೆಸ್ಸಿಗರು ತಮ್ಮ ಪುತ್ರ ಹಾಗೂ ನಟ ನಿಖಿಲ್ ಕುಮಾರಸ್ವಾಮಿಗೆ ಆಶೀರ್ವಾದ ಮಾಡಿದ್ದಾರೆ. ಮೈತ್ರಿ ಒಪ್ಪಂದದಂತೆ ಸಂಪೂರ್ಣ ಬೆಂಬಲ ದೊರಕಿದೆ’ ಎಂದು ವಲಸೆ ಕಾಂಗ್ರೆಸ್ಸಿಗರ ವಿರುದ್ಧ ಕಿಡಿಕಾರಿದರು. 

ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲು ಗುರುವಾರ ಪ್ರಶಸ್ತವಾದ ಸಮಯ ಇದ್ದು, ಒಂದು ಸೆಟ್ ನಾಮಪತ್ರ ಸಲ್ಲಿಸಿ ಎಂದು ಕೆಲವು  ಜ್ಯೋತಿಷಿಗಳು ಸಲಹೆ ನೀಡಿದ್ದರು. ಆದರೆ, ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುವುದು ಬೇಡ ಎನ್ನುವ ಕಾರಣಕ್ಕಾಗಿ ಹಾಗೂ ಎರಡು ಬಾರಿ ನಾಮಪತ್ರ ಸಲ್ಲಿಸುವುದರಿಂದ ಗೊಂದಲ ಉಂಟಾಗಲಿದೆ ಎಂಬ ಕಾರಣಕ್ಕೆ ಗುರುವಾರ ನಾಮಪತ್ರವನ್ನು ಸಲ್ಲಿಸಿಲ್ಲ. ಮಾ.25 ರಂದು ಸೋಮವಾರ ಪ್ರಶಸ್ತ ಸಮಯ ನೋಡಿ ನಾಮಪತ್ರ ಸಲ್ಲಿಸಲು ನಿರ್ಧಾರ ಮಾಡಲಾಗಿದೆ. ನಿಖಿಲ್ ಈಗಾಗಲೇ ಮಂಡ್ಯ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

click me!